ವೇದರಾಜ ಎನ್ ಕೆ
ಪೆಟ್ರೋಲ್ ನಂತರ ಈಗ ಡೀಸೆಲ್ ಬೆಲೆ ಕೂಡ 100ರೂ. ದಾಟಿದೆ. ಜತೆಗೆ ಈಗ ಪ್ರಕಟವಾಗಿರುವ ಜಾಗತಿಕ ಹಸಿವಿನ ಸೂಚ್ಯಂಕದಲ್ಲೂ ‘ಶ್ರೇಯಾಂಕ’ 100 ದಾಟಿದೆ. ಈ ನಡುವೆ ವೀರ ಸಾವರ್ಕರರ ಕ್ಷಮಾಯಾಚನಾ ಪ್ರಸಂಗದಲ್ಲಿ ಈಗ ಗಾಂಧೀಜಿಯನ್ನು ಸಾಕ್ಷಿಯಾಗಿಸುವ ಸತ್ಯೋತ್ತರ ಕಾಲದ ಸುಳ್ಳುಗಳ ತಿಣುಕಾಟ- ಇವಕ್ಕೆ ವ್ಯಂಗ್ಯಚಿತ್ರಕಾರರ ಸ್ಪಂದನೆಗಳು ಹೀಗಿದ್ದವು:
“ಸಾವರ್ಕರ್ ಬಗ್ಗೆ ಸುಳ್ಳುಗಳನ್ನು ಹರಡಲಾಗಿದೆ. ಬ್ರಿಟಿಶ್ ಸರಕಾರಕ್ಕೆ ಅವರು ಕ್ಷಮಾಯಾಚನೆಯ ಅರ್ಜಿಗಳನ್ನು ಸಲ್ಲಿಸಿದರು ಎಂದು ಮತ್ತೆ-ಮತ್ತೆ ಬರೆದರು. ಆದರೆ ಸತ್ಯವೇನೆಂದರೆ, ಅವರು ತಮ್ಮ ಬಿಡುಗಡೆಗೆ ಕ್ಷಮಾಯಾಚನೆಯ ಅರ್ಜಿಗಳನ್ನು ಸಲ್ಲಿಸಲಿಲ್ಲ. ಒಬ್ಬ ಕೈದಿಗೆ ಕ್ಷಮಾದಾನ ಕೇಳುವ ಅರ್ಜಿಗಳನ್ನು ಸಲ್ಲಿಸುವ ಹಕ್ಕು ಇದೆ. ಅವರಿಗೆ ಕ್ಷಮಾಯಾಚನೆಯ ಅರ್ಜಿಗಳನ್ನು ಸಲ್ಲಿಸಲು ಸಲಹೆ ನೀಡಿದ್ದು ಮಹಾತ್ಮ ಗಾಂಧಿ. ಗಾಂಧಿಯ ಸಲಹೆಯ ನಂತರ ಅವರು ಒಂದು ಕ್ಷಮಾಯಾಚನೆ ಅರ್ಜಿ ಸಲ್ಲಿಸಿದ್ದು. ಸಾವರ್ಕರ್ ಜೀಯವರನ್ನು ಬಿಡುಗಡೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಮನವಿ ಮಾಡಿದ್ದರು” ಎಂದು ದೇಶದ ರಕ್ಷಣಾ ಮಂತ್ರಿಗಳು ಅಕ್ಟೋಬರ್ 12 ರಂದು ಹೇಳಿದ್ದಾರೆ.
ಈ ಮೂಲಕ ಮೊತ್ತಮೊದಲ ಬಾರಿಗೆ, ಒಬ್ಬ ಹಿರಿಯ ಬಿಜೆಪಿ ಮುಖಂಡರು ಸಾವರ್ಕರ್ ಬ್ರಿಟಿಶರಿಂದ ಕ್ಷಮಾಯಾಚನೆ ಮಾಡಿದ್ದರು ಎಂದು ‘”ಮತ್ತೆ-ಮತ್ತೆ” ಹೇಳುತ್ತಿರುವುದರಲ್ಲಿ ಸತ್ತಾಂಶವಿದೆ ಎಂದಾದರೂ ಒಪ್ಪಿಕೊಂಡಂತಾಗಿದೆ-. ಅದು ಗಾಂಧೀಜಿಯ ಸಲಹೆಯ ಮೇರೆಗೋ, ಇನ್ಯಾವುದೇ ಕಾರಣಕ್ಕೋ ಎಂಬುದು ಬೇರೆ ಮಾತು ಎಂದು ರಕ್ಷಣಾ ಮಂತ್ರಿಗಳ ಹೇಳಿಕೆಯ ನಂತರ ಹಲವರು ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ ಇದುವರೆಗೆ ಆರೆಸ್ಸೆಸ್-ಬಿಜೆಪಿ ಮಂದಿ ‘ವೀರ’ ಸಾವರ್ಕರ್ ಎಂದೂ ಬ್ರಿಟಿಶ್ ಸರಕಾರದಿಂದ ಕ್ಷಮಾಯಾಚನೆ ಮಾಡಿರಲಿಲ್ಲ ಎಂದೇ ಹೇಳುತ್ತಿದ್ದರು.
ಆದರೂ ಯಾವ ಗಾಂಧಿ ಎಂದು ಇನ್ನೂ ಹಲವರಿಗೆ ಶಂಕೆ. ಏಕೆಂದರೆ ಈ ಹಿಂದೆ ಅವರ ಪಕ್ಷದ ಸರ್ವೋಚ್ಚ ಮುಖಂಡರು ಮೋಹನದಾಸ ಗಾಂಧಿ ಎನ್ನುವ ಬದಲು ಮೋಹನಲಾಲ್ ಗಾಂಧಿ ಎಂದಿದ್ದರಂತೆ!
ಮೋಹನದಾಸ್ ಅಥವ ಮೋಹನಲಾಲ್?
ಮಂಜುಲ್, ನ್ಯೂಸ್ 9
ಆದರೆ ರಕ್ಷಣಾ ಮಂತ್ರಿಗಳು ಮಹಾತ್ಮ ಗಾಂಧಿ ಎಂದೂ ಹೇಳಿರುವುದರಿಂದ ಈ ಬಗ್ಗೆ ಶಂಕೆ ಕೇವಲ ಕುಚೇಷ್ಟಯಷ್ಟೇ ಎಂದು ತಳ್ಳಿ ಹಾಕಬಹುದು. ಆದರೂ ಮಹಾತ್ಮ ಗಾಂಧಿ ಸಲಹೆ ಮಾಡಿದ ಮೇಲೆಯೇ ಸಾವರ್ಕರ್ ಕ್ಷಮಾಯಾಚನೆಗೆ ಮುಂದಾದ್ದು ಎಂದು ನಂಬಲು ಬಹಳ ಅಡಚಣೆಗಳಿವೆ. ಏಕೆಂದರೆ ಸಾವರ್ಕರ್ ಬಂಧನವಾದದ್ದು 1910ರಲ್ಲಿ. ಅವರಿಗೆ ಕರಿನೀಡಿನ ಶಿಕ್ಷೆ ವಿಧಿಸಿ 1911ರಲ್ಲಿ ಅಂಡಮಾನ್ ಜೈಲಿಗೆ ಕಳಿಸಲಾಯಿತು. ಅಲ್ಲಿಗೆ ಹೋದ ಸ್ವಲ್ಪವೇ ಸಮಯದಲ್ಲಿ ಅವರು ಕ್ಷಮಾಯಾಚನೆ ಅರ್ಜಿ ಸಲ್ಲಿಸಿದರು, 1913ರಲ್ಲಿ ಎರಡನೇ ಅರ್ಜಿ ಸಲ್ಲಿಸಿದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಆಗ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಭಾರತದ ರಾಜಕೀಯದಲ್ಲಿ ಅವರ ಹೆಸರಿನ್ನೂ ಕೇಳಬಂದಿರಲಿಲ್ಲ, ಮಹಾತ್ಮರಂತೂ ಆಗಿರಲೇ ಇಲ್ಲ. ಅವರು ಭಾರತಕ್ಕೆ ಮರಳಿದ್ದು 1915 ಆರಂಭದಲ್ಲೇ, ನಂತರವೇ ಇಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶಿಸಿದ್ದು ಎಂದು ಚರಿತ್ರೆಯ ಪುಸ್ತಕಗಳು ಹೇಳುತ್ತವೆ.
“ಬಹಳ ಕನ್ಫ್ಯೂಸ್ ಆಗ್ತಿದೆ. ಶಾಲೆಗಳಲ್ಲಿ ಚರಿತ್ರೆಯ
ವಿಷಯದೊಂದಿಗೆ ಫ್ಯಾಕ್ಟ್–ಚೆಕ್ ಪುಸ್ತಕಗಳನ್ನೂ ಕಲಿಸಬೇಕು”
(ಕೀರ್ತಿಶ್, ಬಿಬಿಸಿ ನ್ಯೂಸ್ ಹಿಂದಿ)
ಹೌದು, ನೂತನ ಶಿಕ್ಷಣ ನೀತಿಯಲ್ಲಿ ಇದನ್ನು ಸೇರಿಸಬೇಕಾಗಿತ್ತು. ಇದು ಸತ್ಯೋತ್ತರ ಕಾಲದ ಅವಿಭಾಜ್ಯ ಅಂಗ ತಾನೇ?
ರಕ್ಷಣಾ ಮಂತ್ರಿಗಳ ದಾವೆಯನ್ನು ಬೆಂಬಲಿಸುವವರ ಪ್ರಕಾರ ಮಹಾತ್ಮ ಗಾಂಧಿ ಅವರಿಗೆ ಸಲಹೆ ನೀಡಿದ್ದು 1920ರಲ್ಲಿ! ಇಂತವರಲ್ಲಿ ಒಬ್ಬರಾದ ಡಾ.ವಿಕ್ರಮ್ ಸಂಪತ್ ಪ್ರಕಾರ ಬ್ರಿಟಿಶ್ ಸರಕಾರದ ಜನವರಿ 1920ರ ಕ್ಷಮಾದಾನ ಪಟ್ಟಿಯಲ್ಲೂ ಸಾವರ್ಕರ್ ಮತ್ತು ಸೋದರನ ಹೆಸರುಗಳಿಲ್ಲದನ್ನು ಕಂಡು ನಿರಾಶರಾದ ಮತ್ತೊಬ್ಬ ಸೋದರ ನಾರಾಯಣ ಸಾವರ್ಕರ್ ಆಗ ಬ್ರಿಟಿಶ್ ಆಳರಸರಿಗೆ ಮುಖಾಮುಖಿಯಾಗಿ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಗಳಿಸಲಾರಂಭಿಸಿದ್ದ ಗಾಂಧೀಜಿಗೆ ಅವರ ನೆರವು ಕೋರಿ ಪತ್ರ ಬರೆದರು ಎಂದು ಫ್ಯಾಕ್ಟ್ ಚೆಕ್ (ಸುದ್ದಿಗಳಲ್ಲಿ ಸತ್ಯವನ್ನು ಪರೀಕ್ಷಿಸುವ ಕೆಲಸಕ್ಕೆ) ಮೀಸಲಾದ ವೆಬ್‌ತಾಣ ಆಲ್ಟ್ ನ್ಯೂಸ್.ಇನ್ ಕಂಡು ಹಿಡಿದಿದೆ(ಅಕ್ಟೋಬರ್ 14).
ಇದರ ಪ್ರಕಾರ ನಾರಾಯಣ ಸಾವರ್ಕರ್ ಗಾಂಧೀಜಿಗೆ ಆರು ಪತ್ರಗಳನ್ನು ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಗಾಂಧೀಜಿ ಜನವರಿ 25, 1920ರಂದು ನೀಡಿದ ಪ್ರತ್ಯುತ್ತರದಲ್ಲಿ ಸಾವರ್ಕರ್ ಸೋದರರು ಎಸಗಿದ ಅಪರಾಧ ಶುದ್ಧ ರಾಜಕೀಯ ಸ್ವರೂಪದ್ದಾದ್ದರಿಂದ ತಾವು ಕ್ಷಮಾಯಾಚನೆಗೆ ಅರ್ಹರೆಂದು ಪ್ರಸ್ತುತಪಡಿಸುವ ರೀತಿಯಲ್ಲಿ ಒಂದು ಅರ್ಜಿಯನ್ನು ಸಲ್ಲಿಸಲಿ ಎಂದು ಸಲಹೆ ಮಾಡಿದರು, ಮತ್ತು ತಾನೂ ಪ್ರತ್ಯೇಕವಾಗಿ ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರಂತೆ.
“ಯಾರಾದರೂ ಅವರಿಂದ ಸ್ಪಷ್ಟೀಕರಣ ಕೇಳುವ ಮೊದಲು ಸಾಗಿಸಿ ಬಿಡಿ!!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
‘ವೀರ’ ಸಾವರ್ಕರ್ ಮಾರ್ಚ್ 30, 1920ರಂದು ಮತ್ತೊಂದು(ಇದು ನಾಲ್ಕನೆಯದು ಎನ್ನಲಾಗಿದೆ) ಕ್ಷಮಾಯಾಚನೆ ಅರ್ಜಿ ಸಲ್ಲಿಸಿರುವುದಾಗಿ ಸೋದರನಿಗೆ ಜೂನ್1920ರಲ್ಲಿ ಬರೆದ ಪತ್ರದಲ್ಲಿ ತಿಳಿಯುತ್ತದೆ, ಆದರೆ ಅದರಲ್ಲಿ ಗಾಂಧೀಜಿಯ ಸಲಹೆಯ ಪ್ರಸ್ತಾಪವಿರಲಿಲ್ಲ ಎಂದಿರುವ ಆಲ್ಟ್ ನ್ಯೂಸ್ ಗಾಂಧೀಜಿ ಸಲಹೆಯಿಲ್ಲದಿದ್ದರೆ ಸಾವರ್ಕರ್ ಮತ್ತೊಂದು( ಮಾರ್ಚ್ 1920ರ) ಕ್ಷಮಾಯಾಚನೆ ಅರ್ಜಿ ಸಲ್ಲಿಸುತ್ತಿರಲಿಲ್ಲ ಎಂದು ಹೇಳಲು ಯಾವುದೇ ಪುರಾವೆ ಇಲ್ಲ ಎನ್ನುತ್ತ ಈ ಮೂಲಕ ರಕ್ಷಣಾ ಮಂತ್ರಿಗಳ ದಾವೆ ಸುಳ್ಳಾಗುತ್ತದೆ ಎಂದಿದೆ.
ಈ ನಡುವೆ ಗಾಂಧೀಜಿ ಕೂಡ ವೈಸ್‌ರಾಯ್‍ಗೆ ಪತ್ರ ಬರೆದಿದ್ದರು. ಮೇ 1921ರಲ್ಲಿ ಅವರನ್ನು ಅಂಡಮಾನ್ ಜೈಲಿನಿಂದ ರತ್ನಾಗಿರಿ ಜೈಲಿಗೆ ವರ್ಗಾಯಿಸಲಾಯಿತು. ಮಾರ್ಚ್ 1920ರ ಕ್ಷಮಾಯಾಚನೆಯಲ್ಲಿ ಸಾವರ್ಕರ್ ಬ್ರಿಟಿಶ್ ಸರಕಾರವನ್ನು ಹಾಡಿಹೊಗಳಿ ಸರಕಾರ ಬಯಸುವುದಾದರೆ ಅದು ವಿಧಿಸುವ ಸಮಯಮಿತಿಯ ವರೆಗೆ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಕೊಡಲೂ ಸಿದ್ಧ ಎಂದು ಬರೆದಿದ್ದರಂತೆ. (ಪವನ್ ಕುಮಾರ್, ದಿ ವೈರ್, ಮೇ 28, 2017).
ಗಾಂಧೀಜಿ ತಮ್ಮ ಸಲಹೆಯಲ್ಲಿ ರಾಜಕೀಯ ಸ್ವರೂಪದ ಬಗ್ಗೆ ಹೇಳಿದ್ದರು ಎಂಬುದನ್ನು ಗಮನಿಸಬೇಕು. ಅಂತಿಮವಾಗಿ 1924ರಲ್ಲಿ ಸಾವರ್ಕರ್ ತಾವಾಗಿಯೇ ಮೊದಲೇ ಒಪ್ಪಿಕೊಂಡಿದ್ದ ಷರತ್ತಿನ ಮೇಲೆ ಅವರು ಬಿಡುಗಡೆಯಾದರು ಎಂಬದೂ ಗಮನಾರ್ಹ.
ಅದೇನೇ ಇರಲಿ, ರಕ್ಷಣಾ ಮಂತ್ರಿಗಳ ಹೇಳಿಕೆ ಸುಳ್ಳು ಎಂಬ ಆಲ್ಟ್ ನ್ಯೂಸ್ ವಿಶ್ಲೇಷಣೆಯಲ್ಲಿ ನಿಜವಿದೆ ಎನ್ನಬಹುದು.
***
ಇನ್ನೊಂದು ಸಂದೇಹ ಹಲವರಿಗೆ- ರಕ್ಷಣಾ ಮಂತ್ರಿಗಳ ಈ ರಕ್ಷಣಾ ಪ್ರಯತ್ನ ಸಾವರ್ಕರ್ ಶಿಷ್ಯ ನಾಥೂರಾಂ ಗೋಡ್ಸೆಗೂ ಅನ್ವಯಿಸುತ್ತದೆಯೇ, ಅಂದರೆ ಗಾಂಧೀಜಿಯ ಸಲಹೆಯ ಮೇರೆಗೇ ಆತನೂ…..?
“… ಅದೇ ಉಸಿರಿನಲ್ಲಿ ಈ ‘ಪರಿವರ್ಧನೆ’ ಸಾವರ್ಕರ್ ಜೀ ಪರವಾಗಿ ಮಾತ್ರ,
ನಾಥೂರಾಮ್ ಜೀ ಪರವಾಗಿ ಅಲ್ಲ ಎಂದೂ ಸ್ಪಷ್ಟಪಡಿಸಬೇಕಿತ್ತು!”
(ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯ)
***
ರಕ್ಷಣಾ ಮಂತ್ರಿಗಳು ಅವರ ಹಿರಿಯ ಸಹಯೋಗಿಗಳಲ್ಲೇ ಅತ್ಯಂತ ಸಂಯಮದ ವ್ಯಕ್ತಿಯೆನಿಸಿಕೊಂಡಿದ್ದಾರೆ, ಆದರೂ ಅವರ ಬಾಯಿಂದಲೂ ಇಂತಹ ಸುಳ್ಳು ಯಾಕೆ ಎಂದು ಒಬ್ಬ ಸಂಯಮಶೀಲ ಕಾಂಗ್ರೆಸ್ ಮುಖಂಡರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಸಾವರ್ಕರ್ ನನ್ನನ್ನು ಮುಂಬರಬಹುದಾದ ‘ಕರಿನೀರಿ’ನಿಂದ ಉಳಿಸಬಹುದೇ?”
“ಮಾರ್ಗದರ್ಶಕ ಮಂಡಳಕ್ಕೆ ದಾರಿ”
(ರಾಜೇಂದ್ರ ಧೋಪಡ್ಕರ್, ಫೇಸ್‌ಬುಕ್)
***
ರಕ್ಷಣಾ ಮಂತ್ರಿಗಳ ಈ ಹೇಳಿಕೆ ಸಂಪುಟದ ಒಳಗೆ ಮತ್ತು ಹೊರಗೂ ಅವರ ಹಿರಿಯ ಸಹಯೋಗಿಗಳಿಗೊಂದು ಹೊಸ ಮಾದರಿಯಾಗಬಹುದೇ? ಅಥವ ತಮಗೆ ವಿಧಿಸಿರುವ ‘ಶಿಕ್ಷೆ’ಗಳಿಂದ ಬಿಡುಗಡೆಗೆ ಎಲ್ಲ ಜನವಿಭಾಗಗಳಿಗೆ ಹೊಸ ಆಶಾಕಿರಣವಾಗಬಹುದೇ? ಇದು ಮತ್ತೊಂದು ಪ್ರಶ್ನೆ.
“ ಕ್ಷಮಾಯಾಚನೆ ಅರ್ಜಿಗಳನ್ನು ಬರೆದು ನೋಡಿ”
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ) ಪಿ.ಮಹಮ್ಮದ್, ಆಂದೋಲನ
***
ಹೌದು, ಈ ನಡುವೆ ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆ ಕೂಡ ಭಂಡತನದಿಂದ ಸಾಗಿದೆ. ಎಷ್ಟೆಂದರೆ, ಪೆಟ್ರೋಲ್ ಬೆಲೆ ವಿಮಾನಗಳಿಗೆ ಬಳಸುವ ಏವಿಯೇಷನ್ ಇಂಧನಕ್ಕಿಂತಲೂ 33ಶೇ. ಹೆಚ್ಚು!
“ವಿಮಾನದ್ದು 50ರೂಪಾಯಿಗೆ ಹಾಕಪ್ಪಾ…!
(ಮನ್ಸೂರ್ ನಖ್ವಿ, ಫೇಸ್‍ಬುಕ್)
ಬೆಂಗಳೂರು ಸೇರಿದಂತೆ 12 ರಾಜ್ಯಗಳ ರಾಜಧಾನಿಗಳಲ್ಲಿ ಡೀಸೆಲ್ ಬೆಲೆ ಕೂಡ ರೂ.100 ದಾಟಿದೆ, ಸುಮಾರಾಗಿ ಎಲ್ಲ ರಾಜ್ಯಗಳಲ್ಲಿ ಈ ಮೊದಲೇ ಪೆಟ್ರೋಲ್ ಬೆಲೆ ರೂ.100 ದಾಟಿತ್ತು.
ಪಿ.ಮಹಮ್ಮದ್, ವಾರ್ತಾಭಾರತಿ
***
ಹೌದು, ‘ನ್ಯೂಇಂಡಿಯಾ’ ಸರಕಾರ ಈಗ ಮತ್ತೊಂದು ಶತಕವನ್ನೂ ಬಾರಿಸಿದೆ.
ಜಾಗತಿಕ ಹಸಿವು ಸೂಚ್ಯಂಕ 2021 ಪಟ್ಟಿ ಪ್ರಕಟವಾಗಿದ್ದು, ಭಾರತದ ಶ್ರೇಯಾಂಕ 101-116 ರಾಷ್ಟ್ರಗಳ ಪೈಕಿ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮರ್ ಮತ್ತು ನೇಪಾಳಕ್ಕಿಂತ ಕೆಳಸ್ಥಾನದಲ್ಲಿದೆ. ಪಾಕಿಸ್ತಾನ 92ನೇ ಸ್ಥಾನದಲಿದ್ದರೆ, ನೇಪಾಳ 76 ಬಾಂಗ್ಲಾದೇಶ 76 ಮತ್ತು ಮಾನ್ಮಾರ್ 71ನೇ ಸ್ಥಾನದಲಿವೆ.
ಕಳೆದ ವರ್ಷ 107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು.
ನಿಜ, ಸರಕಾರ ಇದಕ್ಕೆ ಹೆಮ್ಮೆ ಪಡುವಂತಿಲ್ಲ. ಆದರೆ ಅದರ ಅಸಮಾಧಾನ ಇಷ್ಟಕ್ಕೇ ನಿಂತಿಲ್ಲ,ಇದಕ್ಕೆ ಬಳಸಿರುವ ವಿಧಾನ ಅವೈಜ್ಞಾನಿಕ ಎಂಬ ಗಂಭೀರ ಆರೋಪವನ್ನು ಅದು ಮಾಡಿದೆ. ನಾಲ್ಕು ಪ್ರಶ್ನೆಯ ಒಪಿನಿಯನ್ ಪೋಲ್ ಮೂಲಕ ಈ ವರದಿ ತಯಾರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆಪಾದಿಸಿದೆ.
“ಅವರದ್ದು ತಪ್ಪು ಲೆಕ್ಕಾಚಾರ! ನಮ್ಮ ವೈಜ್ಞಾನಿಕ
ಅಧ್ಯಯನಗಳ ಪ್ರಕಾರ ನೀನು ಹಸಿದಿಲ್ಲ!”
(ಸತೀಶ ಆಚಾರ್ಯ, ಫೇಸ್‌ಬುಕ್)
ಆದರೆ ಇದು ನಿಜವಲ್ಲ ಎಂದು ಇದನ್ನು ಪ್ರಕಟಿಸಿರುವ ವೆಲ್ಟ್ ಹಂಗರ್‌ಹಿಲ್ಪೆ ಈ ಆರೋಪವನ್ನು ನಿರಾಕರಿಸಿದೆ. ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಪ್ರತಿಯೊಂದು ದೇಶದಿಂದ ಸಂಗ್ರಹಿಸುವ ಆಹಾರ ಭದ್ರತಾ ಸೂಚಕಗಳ ಮಾಲೆಯಿಂದ ಪಡೆದ ಪೌಷ್ಟಿಕತೆಯ ಕೊರತೆಯ ದತ್ತಾಂಶಗಳನ್ನು ಇದರಲ್ಲಿ ಬಳಸಲಾಗಿದೆ ಎಂದು ಅದು ತಿಳಿಸಿದೆ. ನಮ್ಮದೇ ಆದ ಕ್ಯಾಲರಿ ಸೇವನೆ ಕೊರತೆ ಕುರಿತ ರಾಷ್ಟ್ರೀಯ ಮಾದರಿ ಸರ್ವೆ (ಎನ್.ಎಸ್.ಎಸ್.ಒ.)ಯ ದತ್ತಾಂಶಗಳನ್ನು ಬಳಸಿದ್ದರೆ ಶ್ರೇಯಾಂಕ ಇನ್ನೂ ಕೆಟ್ಟದಾಗಿರುತ್ತಿತ್ತು ಎಂದು ಈ ಕ್ಷೇತ್ರದಲ್ಲಿನ ಇಬ್ಬರು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ( ದಿ ಹಿಂದೂ, ಅಕ್ಟೋಬರ್ 18).
***
ನಿಜ, ವಿಶ್ವ ಮುಖಂಡರ ಪೈಕಿ ನಮ್ಮ ಪ್ರಧಾನಿಗಳ ‘ಜನಪ್ರಿಯತೆ’ಯ ಸರ್ವೆಯ ಆಧಾರವನ್ನು ಪ್ರಶ್ನಿಸುವುದಿಲ್ಲ, ಆದರೆ ನಮ್ಮ ಜನರ ಹಸಿವಿನ ಸೂಚ್ಯಂಕದ ಆಧಾರ ಮಾತ್ರವೇ ಪ್ರಶ್ನಾರ್ಹವೇ ಎಂದು ಈ ವ್ಯಂಗ್ಯಚಿತ್ರಕಾರರು ಕೇಳುತ್ತಿದ್ದಾರೆ.
ಮಂಜುಲ್, ವೈಬ್ಸ್ ಆಫ್ ಇಂಡಿಯ
***
ಅದೇನೇ ಇರಲಿ, ಈ ಸೂಚ್ಯಂಕಗಳು ಒಟ್ಟು ಸಮಸ್ಯೆಯ ಬಗ್ಗೆ ಹಲವು ಒಳನೋಟಗಳನ್ನಂತೂ ಕೊಡುತ್ತವೆ, ಆದ್ದರಿಂದ ಇದನ್ನು ಸಾರಾಸಗಟು ತಿರಸ್ಕರಿಸುವ ಬದಲು ಇದನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸೂಕ್ತ ಧೋರಣೆಗಳನ್ನು ರೂಪಿಸಲು ಬಳಸ ಬಾರದೇಕೆ ಎಂದು ಈ ಪರಿಣಿತರು ಅಭಿಪ್ರಾಯ ಪಡುತ್ತಾರೆ .
ಆದರೆ ಅದೇಕೋ ಇಂತಹ ನಿಲುವು ಸರಕಾರಕ್ಕೆ ಪಥ್ಯವಾಗುವಂತೆ ಕಾಣುತ್ತಿಲ್ಲ.
“ಹಸಿವನ್ನು ಪತ್ತೆ ಹಚ್ಚಲು ಪತ್ತೇದಾರರನ್ನು ಬಳಸುವ
‘ಪೌಷ್ಟಿಕತೆ ಪ್ರಚಾರ ಕಚೇರಿ’ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.”
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ)
ಮುಂಬೈಯಲ್ಲಿ ಬಾಲಿವುಡ್‍ನ ತಾರಾ ಮಕ್ಕಳನ್ನು ಹಿಡಿದು ಹಾಕಿದಂತೆ ಹಸಿವನ್ನೂ ಹಿಡಿದು ಹಾಕಬಹುದೇ?
ಅಥವಾ ಇಲ್ಲಿಯೂ ನಕಾರಾತ್ಮಕತೆಯೇ ಸಕಾರಾತ್ಮಕತೆಯಾಗುತ್ತದೆಯೇ?
ಅಂದರೆ ಕಳೆದ ವರ್ಷ ನಮ್ಮ ಕೆಳಗೆ 13 ದೇಶಗಳಿದ್ದವು, ಈ ಬಾರಿ 15 ದೇಶಗಳಿವೆ ಎಂದು ಸಮಾಧಾನ ಪಟ್ಟುಕೊಳ್ಳಬಾರದೇಕೆ?
“ನೀವು ಮಾಧ್ಯಮದವರಿಗೆ ಸಕಾರಾತ್ಮಕವಾಗಿ ಯೋಚಿಸಲು ಸಾಧ್ಯವೇ
ಇಲ್ಲವೇ? ನಮಗಿಂತ ಹಿಂದಿರುವ 15 ದೇಶಗಳ ಹೆಸರನ್ನೇಕೆ ಹೇಳುವುದಿಲ್ಲ?”
(ಕೀರ್ತಿಶ್, ಬಿಬಿಸಿ ನ್ಯೂಸ್ ಹಿಂದಿ)
***
ಕೊನೆಯದಾಗಿ: ನಮ್ಮ ಕರ್ನಾಟಕದಲ್ಲಿ ಈ ವಿಜಯದಶಮಿಯಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಭಜರಂಗ ದಳ ಕಾರ್ಯಕರ್ತರಿಗೆ ‘ತ್ರಿಶೂಲ ದೀಕ್ಷೆ’ ನಡೆದಿರುವ ಸುದ್ದಿ ವೈರಲ್ ಆಗಿದೆಯಂತೆ. ಮರುದಿನ ಮುಖ್ಯಮಂತ್ರಿಗಳು ದಾವಣಗೆರೆ ಜಿಲ್ಲೆಯಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಉದ್ಘಾಟನೆ ನಡೆದಿದೆ. ಈ ಕುರಿತು ದಿನೇಶ್ ಕುಕ್ಕುಜಡ್ಕ ಅವರು ಈ ವಾರ ತಮ್ಮ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಎರಡು ವ್ಯಂಗ್ಯಚಿತ್ರಗಳು-