ವೇದರಾಜ ಎನ್ ಕೆ
ಟೋಕಿಯೋ 2020 ಒಲಿಂಪಿಕ್ ಕ್ರೀಡಾಕೂಟ ಆಗಸ್ಟ್ 8ರಂದು ಮುಕ್ತಾಯಗೊಂಡಿದೆ. ಭಾರತ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಪಡೆದು ಹಿಂದಿನ ಕ್ರೀಡಾಕೂಟಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಹಿಂದಿನ ದಾಖಲೆ, 2012ರಲ್ಲಿ 1 ಬೆಳ್ಳಿ ಹಾಗೂ 5 ಕಂಚು ಪದಕಗಳು. ಆದರೂ, 130 ಕೋಟಿ ಜನಗಳ ದೇಶದ ಪದಕಗಳ ಸಂಖ್ಯೆ ಇನ್ನೂ ಎರಡಂಕಿಯ ಸಮೀಪ ಬಂದಿಲ್ಲದಿದ್ದರೂ, ಈ ಹೊಸ ಸಾಧನೆಯ ಕೀರ್ತಿಗಂತೂ ಎಂದಿನಂತೆ ಇರುವ ಸ್ಪರ್ಧೆ ಇತ್ತೀಚೆಗೆ ಆರಂಭವಾಗಿರುವ “ಥ್ಯಾಂಕ್ಯೂ” ಪರಿಸರದಲ್ಲಿ ಹೊಸ ಮೆರಗು ಪಡೆದಿರುವುದನ್ನು ನಮ್ಮ ವ್ಯಂಗ್ಯಚಿತ್ರಕಾರರು ಹೇಗೆ ಕಂಡರಿಸಿದ್ದಾರೆ ನೋಡೋಣ-
ನೀರಜ್ ಚೋಪ್ರಾರ ಚಿನ್ನದ ಎಸೆತ “ನಡೆ ಮುಂದೆ-ನಡೆ ಮುಂದೆ”(ಫೇಸ್‍ಬುಕ್) ಎನ್ನಲು ಸತೀಶ ಆಚಾರ್ಯರಿಗೆ ಪ್ರೇರಣೆ ನೀಡಿದರೆ, ಪ್ರಧಾನಿಗಳ ‘ಸಕ್ರಿಯತೆ’ಯನ್ನು ಮಂಜುಲ್ ಅವರು ‘ಸಬ್ ಸೆ ಬಡಾ ಖಿಲಾಡಿ’( ಫಸ್ಟ್ ಪೋಸ್ಟ್) ಎಂದು ವರ್ಣಿಸಿದ್ದಾರೆ.
ಓಂದು ಶತಕೋಟಿ ಕನಸುಗಳು! (ಸತೀಶ ಆಚಾರ್ಯ)
ಸತೀಶ ಆಚಾರ್ಯರವರು ಚಿತ್ರಿಸಿದಂತೆ ಮಣಿಪುರದ 27 ವರ್ಷದ ಸೈಖೊಮ್ ಮೀರಾಬಾಯಿ ಚಾನು 49 ಕೆಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು, ಶತಕೋಟಿ ಭಾರತೀಯರ ಕನಸುಗಳನ್ನು ಎತ್ತಿ ಹಿಡಿಯುವುದರೊಂದಿಗೆ ಆರಂಭವಾಗಿ, ರವಿಕುಮಾರ್ ದಾಹಿಯ ಬೆಳ್ಳಿ ಪದಕವನ್ನು, ಪಿವಿ ಸಿಂಧು, ಲವ್ಲಿನಾ ಬೊರ್ಗೊಹೈನ್ ಮತ್ತು ಭಜರಂಗ್ ಪೂನಿಯಾ ಹಾಗೂ. ಪುರುಷರ ಹಾಕಿ ತಂಡ ಕಂಚಿನ ಪದಕಗಳನ್ನು, ಅಂತಿಮವಾಗಿ, ಕೊನೆಯ ದಿನದಂದು ಜಾವಲಿನ್ ಎಸೆತ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ.
***
ರವಿ ದಾಹಿಯ ತನ್ನ ಬೆಳ್ಳಿ ಪದಕವನ್ನು ಕೋವಿಡ್ ವಿರುದ್ಧ ಸಮರದ ಮುಂಚೂಣಿಯಲ್ಲಿದ್ದರೂ, ಹೆಚ್ಚೆಂದರೆ ಕೇವಲ ಬಾಯುಪಚಾರದ ಮಾತುಗಳನ್ನಷ್ಟೇ ಕೇಳುತ್ತಿರುವ ಡಾಕ್ಟರುಗಳಿಗೆ ಸಮರ್ಪಿಸಿರುವುದು ಭಾರತೀಯರ ಹೆಮ್ಮೆಯನ್ನು ಹೆಚ್ಚಿಸಿದರೆ…
(“ನಾನು ಇದನ್ನು ನಿಮಗೆ ಸಮರ್ಪಿಸುತ್ತಿದ್ದೇನೆ, ಡಾಕ್ಟರ್ –
ಸತೀಶ ಆಚಾರ್ಯ)
ಮಹಿಳಾ ಹಾಕಿತಂಡ ಪದಕವನ್ನು ಗೆಲ್ಲಲು ಸಾಧ್ಯವಾಗದಿದ್ದರೂ ತಂಡದ ಸದಸ್ಯರುಗಳು ಪಟ್ಟಿರುವ ಪರಿಶ್ರಮ, ತಂಡ ಸೆಮಿ ಫೈನಲ್‌ವರೆಗೂ ಬಂದಿರುವುದು, ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದಿರುವುದು, ದೇಶಬಾಂಧವರು ನಮ್ಮ ರಾಷ್ಟ್ರೀಯ ಕ್ರೀಡಾ ನೀತಿಯ ಬಗ್ಗೆ ನೆನಪಿಸಿಕೊಳ್ಳುವಂತೆ ಮಾಡಿದೆ… ಇದನ್ನು ಕೂಡ ಸತೀಶ ಆಚಾರ್ಯರವರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
(ಸತೀಶ ಆಚಾರ್ಯ)
***
ಕ್ರೀಡಾ ಪಟುಗಳು ಪಟ್ಟ ಪರಿಶ್ರಮ, ಅನುಭವಿಸಿದ ತೊಂದರೆಗಳೇನೇ ಇದ್ದರೂ ಸಾಧನೆಗಳ ಕೀರ್ತಿ ಬಾಚಿಕೊಳ್ಳುವವರು ಅಧಿಕಾರಸ್ಥರು ಮತ್ತು ಅಧಿಕಾರಿಗಳೇ ಎಂಬುದು ‘ನ್ಯೂ ಇಂಡಿಯಾ’ದಲ್ಲಿಯೂ ಬದಲಾಗಿಲ್ಲ ಎಂದು ಸುಭಾನಿಯವರು(ಡೆಕ್ಕನ್ ಕ್ರಾನಿಕಲ್) ನೆನಪಿಸಿದ್ದಾರೆ.
ಕೀರ್ತಿ ಭಾಜನರು-ಮೊದಲಿಗೆ-ಮಂತ್ರಿ, ಎರಡನೆಯದಾಗಿ ಅಧಿಕಾರಿಗಳು, ನಂತರವಷ್ಟೇ…
(ಸುಭಾನಿ, ಡೆಕ್ಕನ್ ಕ್ರಾನಿಕಲ್)
***
ಕೀರ್ತಿಯ ಪ್ರಶ್ನೆ ಬದಲಾಗಿಲ್ಲ ಮಾತ್ರವಲ್ಲ, ಎನ್.ಡಿ.ಎ.-2ರ ‘ನ್ಯೂ ಇಂಡಿಯಾ’ದಲ್ಲಿ ಹೊಸ ರೂಪ ತಳೆದಿದೆ. ಹೌದು, ಈ ಕೆಳಗಿನವು ವ್ಯಂಗ್ಯಚಿತ್ರಗಳಲ್ಲ, ಆದರೆ ‘ನ್ಯೂ ಇಂಡಿಯಾ’ದ ವ್ಯಂಗ್ಯದ ದ್ಯೋತಕವಂತೂ ಆಗಿವೆ.
ಇವುಗಳಲ್ಲಿ ಎಡಗಡೆಯದ್ದು, ಕ್ರೀಡಾಕೂಟ ಆರಂಭವಾಗುವ ವೇಳೆಗೆ ಅಸ್ಸಾಂನಲ್ಲೆಲ್ಲ ಕಂಡು ಬಂದ “ಅಸ್ಸಾಂನ ಹೆಮ್ಮೆ’ ಲವ್ಲೀನಾ ಬೊರೊಗೊಹೇನ್ ರವರನ್ನು ಟೋಕಿಯೋಗೆ ಹೋಗಲು ಅರ್ಹತೆ ಪಡೆದುದಕ್ಕೆ ಅಭಿನಂದಿಸುವ ಹೋರ್ಡಿಂಗ್. ಆಕೆ ಆ ಅಭಿನಂದನೆಯನ್ನು ಸಾರ್ಥಕಗೊಳಿಸಿ, ಕಂಚಿನ ಪದಕ ಪಡೆದರು. ಆದರೆ ಆಕೆಯನ್ನು ಮೊದಲೇ ಅಭಿನಂದಿಸುವ ಈ ಫಲಕದಲ್ಲಿ ಆಕೆಯ ಫೋಟೋ ಇಲ್ಲವೇ ಇಲ್ಲ, ಬದಲು, ದೊಡ್ಡದಾಗಿ ರಾರಾಜಿಸಿದ್ದು ರಾಜ್ಯದ ಕ್ರೀಡಾ ಮತ್ತು ಪ್ರಚಾರ ಮಂತ್ರಿಯ ಫೋಟೋ ಮಾತ್ರ! (ಇದಕ್ಕೆ ಪ್ರತ್ಯೇಕ ವ್ಯಂಗ್ಯಚಿತ್ರದ ಅಗತ್ಯವಿಲ್ಲವೆಂದೇ ಏನೋ, ವ್ಯಂಗ್ಯಚಿತ್ರಕಾರ ಆರ್.ಪ್ರಸಾದ್ ಇದನ್ನು ರಿಟ್ವೀಟ್ ಮಾಡಿದ್ದಾರೆ)
ಬಲಗಡೆಯದ್ದು, ಇದುವರೆಗೆ ಕ್ರೀಡಾಪಟುಗಳನ್ನು ಸನ್ಮಾನಿಸುವ ಪ್ರಶಸ್ತಿ “ರಾಜೀವ ಗಾಂಧಿ ಖೇಲ್ ರತ್ನ” ಎಂಬುದರ ಹೆಸರನ್ನು ಬದಲಿಸಿ ‘ಮೇಜರ್ ಧ್ಯಾನ್‍ಚಂದ್ ಖೇಲ್ ರತ್ನ” ಎಂದು ಹೆಸರಿಸಿದ್ದಕ್ಕೆ ಪ್ರಧಾನ ಮಂತ್ರಿಗಳಿಗೆ ಇನ್ನೊಂದು “ಥ್ಯಾಂಕ್ಯೂ” ಸಲ್ಲಿಸುವ ಬಿಜೆಪಿಯ ಪೋಸ್ಟರನ್ನು ಅದರ ಪ್ರಮುಖ ವಕ್ತಾರರು “ಥ್ಯಾಂಕ್ಯು ಮೋದೀಜೀ” ಎನ್ನುತ್ತ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಕೊಂಡ ಪೋಸ್ಟ್. ಇದರಲ್ಲಿಯೂ ರಾರಾಜಿಸುತ್ತಿರುವುದು ಪ್ರಧಾನ ಮಂತ್ರಿಗಳ ಫೋಟೋವೇ. ಮೇಜರ್ ಧ್ಯಾನ್‍ಚಂದ್ ಫೋಟೋ ಕೂಡ ತುಂಬಾ ಸಣ್ಣದಾಗಿಯಾದರೂ ಇದೆ ಎಂಬುದು ಸಮಾಧಾನ ಪಡಬೇಕಾದ ಸಂಗತಿ!
ಈ ವಿದ್ಯಮಾನವನ್ನು ಕರ್ನಾಟಕದ ವ್ಯಂಗ್ಯಚಿತ್ರಕಾರರಾದ ಪಿ.ಮಹಮ್ಮದ್ ಮತ್ತು ಸತೀಶ ಆಚಾರ್ಯ ‘ಮನೋಜ್ಞ’ವಾಗಿ ಹೀಗೆ ವ್ಯಂಗ್ಯಿಸಿದ್ದಾರೆ:
(ಪಿ.ಮಹಮ್ಮದ್, ಫೇಸ್‍ಬುಕ್)
ಪ್ರಚಾರಪ್ರಿಯತೆಗೆ ಚಿನ್ನದ ಪದಕ!
(ಸತೀಶ ಆಚಾರ್ಯ, ಫೇಸ್‍ಬುಕ್)
***
ಮೇಜರ್ ಧ್ಯಾನ್‍ಚಂದ್ 1936ರಲ್ಲಿ ಹಿಟ್ಲರನ ಆಳ್ವಿಕೆಯಲ್ಲಿ ಆತ ತನ್ನ “ಆರ್ಯರ ಶ್ರೇಷ್ಠತೆ”ಯ ಕಲ್ಪನೆಯನ್ನು ಮೆರೆಸಲು ಹೆಣಗಿದ ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕ್ರೀಡಾ ತಂಡದ ನೇತೃತ್ವ ವಹಿಸಿದ್ದರು. ಅಲ್ಲಿ ಹಿಟ್ಲರನಿಗೆ ಸೆಲ್ಯೂಟ್ ಹೊಡೆಯದ ಎರಡೇ ತಂಡಗಳಲ್ಲಿ ಭಾರತದ್ದೂ ಒಂದು ಎಂಬುದು ಇಲ್ಲಿ ವಿಶೇಷವಾಗಿ ಗಮನಾರ್ಹ.
ಮತ್ತೊಂದು ಸಂಗತಿಯೆಂದರೆ, ಮೇಜರ್ ಧ್ಯಾನ್‍ಚಂದ್ ಗೌರವಾರ್ಥ ಈಗಾಗಲೇ ಕ್ರೀಡಾರಂಗದಲ್ಲಿ ಜೀವಮಾನದ ಸಾಧನೆಗೆ ಕೊಡುವ ಒಂದು ಪ್ರಶಸ್ತಿ ಇದೆ ಎಂಬುದನ್ನು ಕೆಲವರು ನೆನಪಿಸಿದ್ದಾರೆ.
***
ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ ಸುಮಾರು ನಾಲ್ಕು ದಶಕಗಳ ನಂತರ ಹಾಕಿಯಲ್ಲಿ ಪದಕ ಗಳಿಸಿದ ಪುರುಷರ ಹಾಕಿ ತಂಡ ಮತ್ತು ಮೊದಲ ಬಾರಿಗೆ ಸೆಮಿಫೈನಲ್‌ವರೆಗೂ ಬಂದು, ನಾಲ್ಕನೇ ಸ್ಥಾನ ಪಡೆದಿರುವ ಮಹಿಳಾ ಹಾಕಿತಂಡಕ್ಕೂ 2018ರಿಂದಲೇ ಪೋಷಕರಾಗಿರುವುದು ಮೋದಿಯವರ ಕೇಂದ್ರ ಸರಕಾರವಲ್ಲ, ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ರಾಜ್ಯ ಸರಕಾರ! ಇದನ್ನು ಸಂದೀಪ ಅಧ್ವರ್ಯು ರವರು ಈ ರೀತಿಯಲ್ಲಿ ನೆನಪಿಸಿದ್ದಾರೆ.
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ)
***
ಒಲಿಂಪಿಕ್ ವರ್ಷದಲ್ಲಾದರೂ ಕ್ರೀಡಾರಂಗದಲ್ಲಿ ಸಾಧನೆಗೆ ಕೇಂದ್ರ ಸರಕಾರ ವಹಿಸಿದ ಪಾತ್ರವಾದರೂ ಏನು?
ಈ ವರ್ಷದ ಬಜೆಟಿನಲ್ಲಿ ಕ್ರೀಡೆಗಳಿಗೆ ನೀಡಿದ ಮೊತ್ತದಲ್ಲಿ 230.78 ಕೋಟಿ ರೂ.ಕಡಿತ, ಇದು ‘ಮಾಸ್ಟರ್ ಸ್ಟ್ರೋಕ್’ ಪ್ರವೀಣರ ಇನ್ನೊಂದು ಅಭಿನಂದನಾರ್ಹ ಮಾಸ್ಟರ್ ಸ್ಟ್ರೋಕ್ ಎಂದಿದ್ದಾರೆ ಹಿಂದಿಯ ವ್ಯಂಗ್ಯಚಿತ್ರಕಾರ ಶೇಖರ್ ಗುರೇರ(ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯ ಫೇಸ್‌ಬುಕ್):
125 ವರ್ಷಗಳ ಒಲಿಂಪಿಕ್ ಇತಿಹಾಸದಲ್ಲಿ
ಭಾರತಕ್ಕೆ ಮೊದಲ ಬಾರಿಗೆ 7 ಮೆಡಲ್
“ ..ಈ ವರ್ಷ ಕ್ರೀಡಾ ಬಜೆಟಿನಲ್ಲಿ 230.78 ಕೋಟಿ ಕಡಿತವನ್ನು
‘ಮಾಸ್ಟರ್ ಸ್ಟ್ರೋಕ್’ ಎನ್ನುತ್ತ ‘ಧನ್ಯವಾದ ಉತ್ಸವ’
ಮಾಡಿಸುವುದಕ್ಕೆ ಸರಿಯಾದ ಅವಕಾಶ!”
***
‘ಗೋದಿಮೀಡಿಯ’ವಂತೂ ಇದನ್ನು ಆಗಲೇ ಆಚರಿಸಿ ಬಿಟ್ಟಿದೆ ಎಂದು ನಗೆಯಾಡಿದ್ದಾರೆ ತನ್ನ ‘ಫಸ್ಟ್ ಕಟ್’ ಕಾರ್ಟೂನಿನಲ್ಲಿ ಮಂಜುಲ್ .
“ಇತಿಹಾಸ ಸೃಷ್ಟಿಸುವುದಷ್ಟೇ ಮುಖ್ಯ, ಉಳಿದವೆಲ್ಲ ಲೆಕ್ಕಕ್ಕಿಲ್ಲ”
ಆಹಾ ಎಂತಹಾ ಐತಿಹಾಸಿಕ ಸಲಹೆ…ಮಾಸ್ಟರ್ ಸ್ಟ್ರೋಕ್!!
***
ಬಿಜೆಪಿಯ ಪೋಸ್ಟರ್ ಪ್ರಧಾನಿಗಳಿಗೆ ಥ್ಯಾಂಕ್ಯು ಹೇಳಿರುವುದು ಖೇಲ್‌ರತ್ನ ಹೆಸರನ್ನು ಬದಲಿಸಬೇಕೆಂಬ “ಕೋಟ್ಯಂತರ ಭಾರತೀಯರ ವಿಚಾರಗಳನ್ನು ಬೆಂಬಲಿದ್ದಕ್ಕೆ” ಎಂದು.
ಹಾಗಿದ್ದರೆ ಪ್ರಧಾನಿಗಳು ತನ್ನ ಮನದ ಮಾತಿಗೇ ಸೀಮಿತಗೊಂಡಿದ್ದಾರೆಯೇ ಎಂದು ಸಂದೇಹ ಪಡುತ್ತಿದ್ದ ವ್ಯಂಗ್ಯಚಿತ್ರಕಾರರಿಗೆ ಮತ್ತು ಇತರರರಿಗೂ, ಉದ್ಯೋಗ, ಬೆಲೆಯೇರಿಕೆ ಮುಂತಾದ ಬಗ್ಗೆ ಪ್ರಧಾನಿಗಳನ್ನು ಆಗ್ರಹ ಮಾಡುತ್ತಲೇ ಬಂದಿರುವುರಿಗೆ, ಖಂಡಿತಾ ಆನಂದಾಶ್ಚರ್ಯವಾಗಿದೆ. ಇದನ್ನು ಬಿಬಿಸಿ ನ್ಯೂಸ್ ಹಿಂದಿಯ ಕೀರ್ತಿಶ್ ಚೆನ್ನಾಗಿ ಹೀಗೆ ಚಿತ್ರಿಸಿದ್ದಾರೆ:
“ಇತ್ತೀಚೆಗೆ ದೇಶವಾಸಿಗಳ ಆಗ್ರಹಗಳನ್ನು
ಒಪ್ಪಿಕೊಳ್ಳಲಾಗುತ್ತಿದೆ ಎಂದು ಕೇಳಿದ್ದೇನೆ!”
***
ಖೇಲ್ ರತ್ನ ಹೆಸರು ಬದಲಿಸಿದ ಮರುದಿನವೇ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ ಎಂದು ಪ್ರಚಾರ ನಡೆಯುತ್ತಿದೆಯಂತೆ. ಅದರಿಂದ ಪ್ರೇರಿತವಾದ ಈ ರೆಮಿಕ್ಸ್ ಕಾಮಿಕ್ಸ್ ಇದನ್ನು ಮತ್ತಷ್ಟು ಮುಂದಕ್ಕೆ ಒಯ್ದಿದೆ, ಇನ್ನಷ್ಟು ಚಿನ್ನದ ಪದಕಗಳತ್ತ!
ಮೋದಿ: ನೋಡಿ ಚಾಚಾ, ಖೇಲ್ ರತ್ನದಿಂದ ನಿಮ್ಮ ಮೊಮ್ಮಗನ ಹೆಸರು ತೆಗೆದೆ,
ಮರುದಿನವೇ ನಮಗೆ ಚಿನ್ನ ಸಿಕ್ಕಿತು! ಹಾಹಾಹಾಹಾ!
ನೆಹರೂ: ನೋಡಿ ಮೋದೀಜೀ, ನಿಮ್ಮ ಹೆಸರನ್ನು ಮೊಟೆರಾ ಸ್ಟೇಡಿಯಂ ನಿಂದ
ನೀವು ತೆಗೆದರೆ , ನಾವು ಜೋಳಿಗೆ ತುಂಬ ಮೆಡಲ್ ತರುತ್ತೇವೆ!
***
ಈ ನಡುವೆ ಮಹಿಳಾ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಸೋತಾಗ ಅದರಿಂದ ತಂಡದಲ್ಲಿರುವ ವಂದನಾ ಕತಾರಿಯಾ ಅವರ ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿರುವ ಮನೆಯ ಮುಂದೆ ಕೆಲವರು “ತಂಡದಲ್ಲಿ ದಲಿತ ಆಟಗಾರ್ತಿಯರು ಬಹಳವಿದ್ದುದರಿಂದ ಸೋತರುʼʼ ಎಂದು ಮೂದಲಿಸುತ್ತ ಕೇಕೆ ಹಾಕಿದರು, ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇದುವರೆಗೆ ಖಂಡನೆ ವ್ಯಕ್ತಪಡಿಸಿರುವ ಪ್ರತಿಷ್ಠಿತರೆಂದರೆ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ಮಾತ್ರ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ(ಆಗಸ್ಟ್ 8) . ಅವರು “ಭಾರತ ಒಂದು ಕ್ರೀಡಾ ದೇಶವಾಗಬೇಕಾದರೆ ಇಂತಹ ಮೂದಲಿಕೆಗಳು ನಿಲ್ಲಬೇಕು”ಎಂದು ಬೇಸರದಿಂದ ಹೇಳಿದ್ದಾರೆ.
ಜಾತಿವಾದ ಅಧಿಕಾರಸ್ಥರಿಂದಲೇ ಪ್ರತಿಷ್ಠಿತಗೊಂಡಿರುವಾಗ ಇಂತಹ ಆಚರಣೆಗಳಲ್ಲಿ ಆಶ್ಚರ್ಯವೇನು ಎಂದು ಈ ವ್ಯಂಗ್ಯಚಿತ್ರಕಾರರು ಸೂಚಿಸುತ್ತಾರೆ.
ಜಾತಿವಾದ- ಭಾರತದ ಅತಿ ಕೆಟ್ಟ ಬಹಿರಂಗ ಗುಟ್ಟು ಎನ್ನುವ ಇವರು “ನಮ್ಮಲ್ಲಿ ಪ್ರತಿಭೆಯಿದೆ. ದ್ವೇಷಕೋರರು ಮತ್ತು ಬಡಿದು ಸಾಯಿಸುವವರು ಜಾವಲಿನ್, ಬಾಕ್ಸಿಂಗ್, ಕುಸ್ತಿಗೆ ಹೋಗುವಂತೆ ಮಾರ್ಗದರ್ಶನʼʼ ನೀಡಬಾರದೇಕೆ ಎನ್ನುತ್ತಾರೆ. (ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಈ ಹಿಂಬಾಲಕರು ಹಾಕಿ ಸ್ಟಿಕ್ ಹೊಡೆಯಲು-ಬಡಿಯಲು ಮಾತ್ರ ಎಂದು ಭಾವಿಸಿದ್ದಂತಿದೆ, ಅದರಿಂದ ಆಟವನ್ನೂ ಆಡಬಹುದು, ಪದಕಗಳನ್ನೂ ಪಡೆಯಬಹುದು ಎಂಬುದು ಭಾರತದ ಪುರುಷರ ಮತ್ತು ಮಹಿಳೆಯರ ಹಾಕಿ ತಂಟಗಳ ಉತ್ತಮ ಪ್ರದರ್ಶನದ ನಂತರ ಇವರ ಅರಿವಿಗೆ ಬಂದಿರಬಹುದು ಎಂಬುದು ಈ ವ್ಯಂಗ್ಯಚಿತ್ರಕಾರ ಸುಭಾನಿ ಅವರ ನಿರೀಕ್ಷೆ(ಡೆಕ್ಕನ್ ಕ್ರಾನಿಕಲ್).
“ಈ ಮೆಡಲ್ ನೊಂದಿಗೆ ಬದಲಾವಣೆ ಬರಬಹುದು. ಭಾರತದಲ್ಲಿ ಅಪಾರ ಪ್ರತಿಭೆಗಳಿವೆ, ಅವನ್ನು ಪ್ರೋತ್ಸಾಹಿಸಬೇಕು. ನಾವು ಒಲಿಂಪಿಕ್ಸ್ ನಲ್ಲಿ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿದೆ. ಭಾರತದ ಅಥ್ಲೆಟಿಕ್ ಫೆಡರೇಷನ್ ಹೆಚ್ಚೆಚ್ಚು ಅಥ‍್ಲೆಟ್‍ಗಳನ್ನು ಬೆಂಬಲಿಸಬೇಕು, ಇದು ನನ್ನ ವಿನಂತಿ” -ಇದು ಚಿನ್ನದ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಹೇಳಿರುವ ಮಾತು. ಇದು ಇತರ ಎಲ್ಲ ಕ್ರೀಡಾ ಸಂಸ್ಥೆಗಳ, ಸರಕಾರಗಳ ನೇತೃತ್ವ ವಹಿಸುವವರಿಗೂ ಅನ್ವಯಿಸುತ್ತದೆ.
ನಡೆ ಮುಂದೆ! ನಡೆ ಮುಂದೆ! (ಸತೀಶ್ ಆಚಾರ್ಯ)