ವೇದರಾಜ ಎನ್ ಕೆ
ಕೋವಿಡ್‍ನ ದೀರ್ಘ ಅಂತರಾಳದ ನಂತರ ಭಾರತದ ಪ್ರಧಾನಿಗಳ ಮೊದಲ ‘ಯಶಸ್ವಿ’ ವಿದೇಶ ಪ್ರವಾಸದಲ್ಲಿ ಪ್ರಜಾಪ್ರಭುತ್ವದ ಗುಣಗಾನದ ಒಂದು ವಾರದ ನಂತರ, ಗಾಂಧಿ ಜಯಂತಿಯ ಮರುದಿನ, ಕೇಂದ್ರ ಸಂಪುಟದ ಮಂತ್ರಿಯೊಬ್ಬರ ಕ್ಷೇತ್ರದಲ್ಲಿ ನಾಲ್ಕು ರೈತರ ಸಾವು, ಅದೇ ದಿನ ಕರ್ಯಾಣ ಮುಖ್ಯಮಂತ್ರಿಯ ಲಾಠೀ ಬ್ರಿಗೇಡ್ ಕರೆ, ಇದಕ್ಕೆ ಸ್ವಲ್ಪವೇ ಮೊದಲು ಟೀಕೆ ಮಾಡುವವರಿಲ್ಲ ಎಂದು ಪ್ರಧಾನಿಗಳ ಕೊರಗು ಹಾಗೂ ಮತ್ತೊಂದು ‘ಪಿಎಂ’ ಹೆಸರು ಬದಲಾವಣೆ/ಜೋಡಣೆ- ಈ ವಾರದ ವಿಶೇಷ.
ಪ್ರಧಾನ ಮಂತ್ರಿಗಳು ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡುತ್ತ ಭಾರತ ಎಲ್ಲ ಪ್ರಜಾಪ್ರಭುತ್ವಗಳ ಮಾತೆ ಎನ್ನುತ್ತ, ಒಬ್ಬ ಚಹಾಮಾರುವವನ ಮಗನ ರಾಜಕೀಯ ಪಯಣ ಇದಕ್ಕೆ ಉದಾಹರಣೆ ಎಂದಿರುವುದಾಗಿ ವರದಿಯಾಗಿದೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ, ಅದರಲ್ಲೂ ಪಕ್ಕದ ಪಾಕಿಸ್ತಾನಕ್ಕೆ ಹೋಲಿಸಿದರೆ, ಜಗತ್ತಿನಲ್ಲಿ ಸಂದೇಹಗಳು ಅಪರೂಪವಾದರೂ, ಇತ್ತೀಚಿನ ಬೆಳವಣಿಗೆಗಳ, ಅದರಲ್ಲೂ ಈ ಭಾಷಣದ ಎರಡು ದಿನಗಳ ಮೊದಲು ಅಸ್ಸಾಂನಲ್ಲಿ ಇಬ್ಬರ ಸಾವಿಗೆ ಕಾರಣವಾದ ‘ತೆರವು ಕಾರ್ಯಾಚರಣೆ’ಯ ಹಿನ್ನೆಲೆಯಲ್ಲಿ ರಾಜಕೀಯ ವಿಶ್ಲೇಷಕರಿಗೆ ಇದರಲ್ಲಿ ಸಮರ್ಥನೆಯ ಛಾಯೆಯೇ ಹೆಚ್ಚಾಗಿ ಕಂಡಿದೆ.
ಇದಲ್ಲದೆ ಗುಜರಾತಿನಲ್ಲಿ ಈ ಅಕ್ಟೋಬರಿನಲ್ಲಿ ಒಬ್ಬ ಪ್ರಖ್ಯಾತ ಮುಸ್ಲಿಂ ಕಾಮಿಡಿಯನ್ ನ ಕಾರ್ಯಕ್ರಮಗಳಿಗೆ ಬೆದರಿಕೆ, ಮಧ್ಯಪ್ರದೇಶದ ಇಂದೋರಿನಲ್ಲಿ ಈ ತಿಂಗಳ ರಾಮಲೀಲಾ ಕಾರ್ಯಕ್ರಮದಲ್ಲಿ ರಾಮನ ಪಾತ್ರ ವಹಿಸದಂತೆ ಮುಸ್ಲಿಂ ಕಲಾವಿದನಿಗೆ ಆತನ ಸಹಧರ್ಮೀಯನಿಂದ ಬೆದರಿಕೆ, ಯುಎಪಿಎ ಗದಾಪ್ರಹಾರ, ಹರ್ಯಾಣದಲ್ಲಿ ‘ಮುಯ್ಯಿಗೆ ಮುಯ್ಯಿ’ಕರೆ!-ಇದು ಈ ವೇಳೆಗೆ ಪ್ರಜಾಪ್ರಭುತ್ವದ ಒಟ್ಟು ಚಿತ್ರ (ಶೀರ್ಷಿಕೆಯ ವ್ಯಂಗ್ಯಚಿತ್ರ: ಮಂಜುಲ್, ನ್ಯೂಸ್9)
***
ಈ ನಡುವೆ ಗಾಂಧೀ ಜಯಂತಿ ಬಂದಿದೆ. ಎಂದಿನಂತೆ ರಾಷ್ಟ್ರಪತಿಯಿಂದ ಆರಂಭಿಸಿ ಎಲ್ಲರಿಂದ ಗಾಂಧೀಜಿಯ ಸ್ಮರಣೆ ನಡೆಯಿತು.
“ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮ ಜಯಂತಿ ಸಂದರ್ಭದಲ್ಲಿ ವಿನಮ್ರ ಶ್ರದ್ಧಾಂಜಲಿ. ಪೂಜ್ಯ ಬಾಪುರವರ ಜೀವನ ಮತ್ತು ಆದರ್ಶ ದೇಶದ ಪ್ರತಿಯೊಂದು ಪೀಳಿಗೆಗೆ ಕರ್ತವ್ಯಪಥದಲ್ಲಿ ಸಾಗಲು ಪ್ರೇರಣೆ ಕೊಡುತ್ತಲೇ ಇರುತ್ತದೆ” ಎಂದು ನ್ಯೂಯಾರ್ಕಿನಿಂದ ಮರಳಿದ ಪ್ರಧಾನಿಗಳು ಈ ದಿನ ಟ್ವೀಟ್ ಮಾಡಿದರು.
“ ರಕ್ಕಸನಾದ ಮನುಷ್ಯ ನಡೆಸಿರುವ ಕಗ್ಗೊಲೆಯನ್ನು ಅಸಹಾಯಕನಾಗಿ ನೋಡುವ ಬದಲು, ನನ್ನನ್ನು ಈ ‘ಕಣ್ಣೀರ ಹೊಳೆ’ಯಿಂದ ಒಯ್ದುಬಿಡಲು ಸರ್ವವ್ಯಾಪಿ ಶಕ್ತಿಯ ನೆರವನ್ನು ಕೇಳುತ್ತೇನೆ” -ಇದು ಅಕ್ಟೋಬರ್ 2, 1947ರಂದು (ಅಂದರೆ ಅವರ ಕೊನೆಯ ಜನ್ಮದಿನದಂದು) ಗಾಂಧೀಜಿಯ ಉದ್ಗಾರ ಎಂದು ಚಿಂತಕರೊಬ್ಬರು ನೆನಪಿಸಿದ್ದಾರೆ(ದಿ ವೈರ್, ಅ.3). ಆಗ ದೇಶವಿಭಜನೆಯನ್ನನುಸರಿಸಿ ನಡೆದ ಹತ್ಯಾಕಾಂಡದಿಂದ ತಪ್ಪಿಸಿಕೊಂಡು ದಿಲ್ಲಿಗೆ ಬಂದಿದ್ದ ಹಿಂದೂ, ಸಿಖ್ ನಿರಾಶ್ರಿತರ ಬಾಯಿಗಳಲ್ಲಿ ‘ಮುಯ್ಯಿಗೆ ಮುಯ್ಯಿ’ ಒತ್ತಾಯಗಳಿಂದ ಮನನೊಂದು ಅವರು ಹೀಗೆ ಉದ್ಗರಿಸಿದ್ದರಂತೆ. ‘ಆಗ ‘ಗಾಂಧೀಜಿಗೆ ಜಯವಾಗಲಿ’ ಬದಲು ‘ಗಾಂಧೀಜಿ ಸಾಯಲಿ’ ಎಂಬ ಮಾತೇ ಹೆಚ್ಚಾಗಿ ಕೇಳಬರುತ್ತಿತ್ತಂತೆ. ನಾಲ್ಕು ತಿಂಗಳಲ್ಲಿ ಅದು ಕೊನೆಗೂ, ಜನವರಿ 30, 1948 ರಂದು ಗೋಡ್ಸೆಯಿಂದ ‘ಈಡೇರಿತು’!
ಗಾಂಧೀಜಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದರೋ-ವಿಶೇಷವಾಗಿ ಪ್ರಧಾನಿಗಳು ನ್ಯೂಯಾರ್ಕಿನಲ್ಲಿ ನೆನಪಿಸಿಕೊಂಡ ಪ್ರಜಾಪ್ರಭುತ್ವದ ಬಗ್ಗೆ?
(ಸತೀಶ ಆಚಾರ್ಯ, ಫೇಸ್ ಬುಕ್)
***
ಈ ವರ್ಷ ಗಾಂಧೀ ಜಯಂತಿಯ ದಿನ ಸಾಮಾಜಿಕ ಮಾಧ್ಯಮಗಳಲ್ಲಿ “ನಾಥೂರಾಂ ಗೋಡ್ಸೆ’ ಟ್ರೆಂಡ್ ಆಯಿತಂತೆ!
“ನಮ್ಮ ಮುಖಂಡರು ಗಾಂಧೀ ಸಮರ್ಥಕರು ಮತ್ತು ಕಾರ್ಯಕರ್ತರು ಗೋಡ್ಸೆಯದ್ದು,
ಆದರೇನಂತೆ? ..ಎರಡೂ ರೀತಿಯ ವಿಚಾರಧಾರೆಗಳ ಸಮತೋಲನದಿಂದ
ಪಕ್ಷದೊಳಗಿನ ಪ್ರಜಾಪ್ರಭುತ್ವ ಗಟ್ಟಿಯಾಗುವುದಿಲ್ಲವೇ?”
(ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯ)
***
ಮರುದಿನ, ಅಕ್ಟೋಬರ್ 3ರಂದು ಎರಡು ಸುದ್ದಿಗಳು ಬಂದವು-ಒಂದು, ಚಂಡೀಗಡದಿಂದ ಆರಂಭದಲ್ಲಿ ಹೇಳಿದ ‘ಮುಯ್ಯಿಗೆ ಮುಯ್ಯಿ (ಜೈಸೆ ಕೋ ತೈಸಾ) ಕರೆಯ ಸುದ್ದಿ ಮತ್ತು ಇನ್ನೊಂದು ಉತ್ತರಪ್ರದೇಶದ ಲಖಿಮ್‍ಪುರ್ ಖೀರಿ ಯಲ್ಲಿ ನಾಲ್ವರು ರೈತ ಪ್ರತಿಭಟನಾಕಾರರ ಸಾವಿನ ಸುದ್ದಿ.
(ಪಿ.ಮಹಮ್ಮದ್, ವಾರ್ತಾಭಾರತಿ)
ಕೇಂದ್ರ ಗೃಹ ರಾಜ್ಯಮಂತ್ರಿಯ ರೈತ -ವಿರೋಧಿ ಹೇಳಿಕೆಗಳನ್ನು ಪ್ರತಿಭಟಿಸಿ ಹಿಂದಿರುಗುತ್ತಿದ್ದ ರೈತರ ಮೇಲೆ ಮಂತ್ರಿಮಗನ ನೇತೃತ್ವದಲ್ಲಿ ಕಾರು ಹರಿಸಿದ್ದರಿಂದ ನಾಲ್ಕು ರೈತರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಮಂತ್ರಿ ಮತ್ತು ಆಳುವ ಪಕ್ಷ ನಿರಾಕರಿಸಿದ್ದಾರೆ. ಇದು ‘ಹೊರಗಿನವರ’ ಕೃತ್ಯ ಎಂದಿದ್ದಾರೆ, ರೈತರ ಮೇಲೆ ಹತ್ತಿಸಿದ ಕಾರು ತಮ್ಮದೆಂದು ಒಪ್ಪಿಕೊಳ್ಳುತ್ತಲೇ ಇದು ಖಾಲಿಸ್ತಾನಿಗಳ ಕಾರಸ್ಥಾನ ಎಂದೂ ದೂಷಿಸಿದ್ದಾರೆ! ಆದರೆ ಬಹಳಷ್ಟು ಜನ, ಅದರಲ್ಲೂ ವ್ಯಂಗ್ಯಚಿತ್ರಕಾರರು ಇದನ್ನು ನಂಬುತ್ತಿಲ್ಲ.
ಇದು ಅಧಿಕಾರ ಮದವೇರಿದವರ ಕೃತ್ಯ ಎಂದು ಒಬ್ಬ ವ್ಯಂಗ್ಯಚಿತ್ರಕಾರರು ಚಿತ್ರಿಸಿದ್ದಾರೆ:
ಅಧಿಕಾರ ಮತ್ತರು (ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಸರಕಾರದ ವಿರುದ್ಧ ರೈತರ ಹೋರಾಟದಲ್ಲಿ ಇದುವರೆಗಿನ 600ಕ್ಕೂ ಹೆಚ್ಚು ಹುತಾತ್ಮರ ಸಾಲಿಗೆ ಇನ್ನೂ 4 ಸೇರ್ಪಡೆಗಳು ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬ ವ್ಯಂಗ್ಯಚಿತ್ರಕಾರರು ಕಾರುಗಳ ಟೈರ್ ಬಗ್ಗೆಯೇ ಹೇಳಿದ್ದಾರೆ.
ರೈತರು vs ಸರಕಾರ! (ಸತೀಶ ಆಚಾರ್ಯ,) ಮೋದಿ ಟೈರ್ಸ್ ( ದಿನೇಶ್ ಕುಕ್ಕುಜಡ್ಕ)
***
ಇದು ವಿರೋಧಿಗಳ ಪಿತೂರಿ ಎಂದು ಪ್ರತಿಭಟನಾಕಾರರ ಮೇಲೆಯೇ ಎಫ್.ಐ.ಆರ್ ಹಾಕಲು ಹೊರಟಿದ್ದ ಯುಪಿ ಸರಕಾರ ಈಗ ಮಂತ್ರಿಯ ಮಗ ಮತ್ತು ಆತನ ಸಂಗಡಿಗರ ಮೇಲೆ ಎಫ್.ಐ.ಆರ್. ಹಾಕಿದೆಯಂತೆ, ಇದು ಮಂತ್ರಿ ಮತ್ತು ಆತನ ಮಗನ ಪೂರ್ವಯೋಜಿತ ಪಿತೂರಿ ಎಂದು ರೈತರ ದೂರಿನ ಮೇಲೆ ಹಾಕಿರುವ ಎಫ್.ಐ.ಆರ್.ನಲ್ಲಿ ಹೇಳಲಾಗಿದೆಯಂತೆ. ಮಂತ್ರಿಯ ಮಗ ಮೂರು ಕಾರುಗಳಲ್ಲಿ 15-20 ಶಸ್ತ್ರಧಾರಿಗಳೊಂದಿಗೆ ಬಂದೆರಗಿದರು, ಎಡಬದಿಯಲ್ಲಿ ಕೂತಿದ್ದ ಮಂತ್ರಿಮಗ ಗುಂಡು ಹಾರಿಸಿದ, ವಾಹನ ಜನರ ಮೇಲೆ ಹರಿದುಕೊಂಡು ಎರಡೂ ಕಡೆಗಳಲ್ಲಿ ಜನಗಳನ್ನು ನಜ್ಜುಗುಜ್ಜು ಮಾಡುತ್ತ ಹೋಯಿತು, ಚಾಲಕ ಹತೋಟಿ ಕಳಕೊಂಡಾಗ ಉರುಳಿ ಬಿದ್ದು ಹಲವರಿಗೆ ಗಾಯಗಳಾದವು. ಈ ನಡುವೆ ಮಂತ್ರಿಮಗ ಇಳಿದು ಗುಂಡು ಹಾರಿಸುತ್ತ ಕಬ್ಬು ಗದ್ದೆಗಳ ನಡುವೆ ಪರಾರಿಯಾದ ಎಂದು ಈ ಎಫ್.ಐ.ಆರ್. ನಲ್ಲಿ ಹೇಳಲಾಗಿದೆಯಂತೆ(ಎನ್‍ಡಿಟಿವಿ, ಅ.5)
ಕೊಲೆ ಆರೋಪ ನಿಲ್ಲಲಿಕ್ಕಿಲ್ಲ. ಅದರ ಬದಲಿಗೆ, ‘ಅಧಿಕಾರ ಶಕ್ತಿಯ
ಪ್ರಭಾವದ ಅಡಿಯಲ್ಲಿ ಚಾಲನೆ ಮಾಡುತ್ತಿದ್ದಾಗ
ಸಾವು ಉಂಟುಮಾಡಿದ’ ಎಂದು ಬರೆಯಬಾರದೇಕೆ?
(ಆರ್. ಪ್ರಸಾದ್, ಇಕನಾಮಿಕ್ ಟೈಮ್ಸ್)
***
ಮಂತ್ರಿಗಳ ಕಾರು ಸಾಲಲಿಲ್ಲವೆಂಬಂತೆ, ಒಬ್ಬ ಮುಖ್ಯಮಂತ್ರಿಗಳೇ ಪಟ್ರೋಲ್ ತುಂಬಿಸಿದರು!.
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್‌ಪ್ರೆಸ್)
***
ಈ ಮೇಲೆ ಹೇಳಿದಂತೆ, ಲಖಿಂಪುರದಲ್ಲಿ ಕೇಂದ್ರದ ಜೂನಿಯರ್ ಮಂತ್ರಿಯ ‘ಕಾರು’ಬಾರು ನಡೆಯುತ್ತಿರುವಾಗಲೇ ಚಂಡೀಗಡದಲ್ಲಿ ಬಿಜೆಪಿ ಕಿಸಾನ್ ಮಂಚ್ ನ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತ ಸ್ವತಃ ಹರ್ಯಾಣದ ಮುಖ್ಯಮಂತ್ರಿಗಳು “ಉತ್ತರ ಮತ್ತು ಪಶ್ಚಿಮ ಹರ್ಯಾಣದ ಪ್ರತಿ ಜಿಲ್ಲೆಯಲ್ಲಿ 700-1000 ರೈತರ ಸ್ವಯಂಸೇವಕ ಗುಂಪುಗಳನ್ನು ಸಿದ್ಧಪಡಿಸಬೇಕು, ಅವರ (ಪ್ರತಿಭಟಿಸುತ್ತಿರುವ ರೈತರ) ವಿರುದ್ಧ ಮುಯ್ಯಿಗೆ ಮುಯ್ಯಿ ಕೆಲಸ ಮಾಡಿ. ಲಾಠಿ ಎತ್ತಿಕೊಳ್ಳಿ.. ಮೂರರಿಂದ ಆರು ತಿಂಗಳು ಜೈಲಿಗೆ ಹಾಕಿದರೆ ತಲೆಕೆಡಿಸಿಕೊಳ್ಳಬೇಡಿ, ನೀವು ದೊಡ್ಡ ನೇತಾಗಳಾಗಿ ಹೊರಬರುತ್ತೀರಿ” ಎಂದು ಹೇಳಿರುವುದಾಗಿ ವರದಿಯಾಗಿದೆ. ಅದರ ವೀಡಿಯೋ ನಂತರ ವೈರಲ್ ಆಗಿದೆ.
ಲಾಠಿಗಳು ಸಾಲವು, ಎಸ್.ಯು.ವಿ.ಗಳನ್ನೇ ಒದಗಿಸಿ ಎಂದು ‘ಪ್ರತಿಭಟಿಸುತ್ತಿರುವ ರೈತರನ್ನು ನಿಭಾಯಿಸುವುದು ಹೇಗೆ’ ಎಂಬ ಪಾಟ ಕೇಳಿದ ‘ಸ್ವಯಂಸೇವಕ’ರು ಕೇಳುತ್ತಿದ್ದಾರಂತೆ!
ಲಾಠಿ ಸಾಲದು, ಎಸ್.ಯು.ವಿ. ಕಾರುಗಳನ್ನೇ ಒದಗಿಸಿ, ಸಾರ್!
(ಮಂಜುಲ್, ವೈಬ್ಸ್ ಆಫ್ ಇಂಡಿಯ)
***
ನಿಜ, ಈ ಕುರಿತಂತೆ, ವಿಶ್ವಸಂಸ್ಥೆಯಲ್ಲಿ ಭಾರತ ಪ್ರಜಾಪ್ರಭುತ್ವಗಳ ಮಾತೆ ಎಂದ, ರಾಜಘಾಟಿನಲ್ಲಿ ಹೊಸ ಪೀಳಿಗೆಗೆ ಕರ್ತವ್ಯಪಥದ ಪ್ರೇರಣೆ ಎಂದು ಗಾಂಧೀಜಿಗೆ ‘ವಿನಮ್ರ ಶ್ರದ್ಧಾಂಜಲಿ’ ಅರ್ಪಿಸಿದ ಪ್ರಧಾನಮಂತ್ರಿಗಳ ಮೌನ ಈಗ ಆಶ್ಚರ್ಯ ಉಂಟು ಮಾಡಿಲ್ಲ. ಬದಲಿಗೆ, ಸಾಬರಮತಿ ಆಶ್ರಮದಲ್ಲಿರುವ ಮೂರು ಕೋತಿಗಳ ಪ್ರತಿಮೆಯನ್ನು ನೆನಪಿಸಿದೆ!
(ಅಲೋಕ್ ನಿರಂತರ್, ಸಕಾಳ್ ಮಾಧ್ಯಮ ಗುಂಪು)
ಆದರೆ ಲಖುಂಪುರ್ ಖೀರಿ ಮತ್ತು ಚಂಡೀಗಡದ ಘಟನೆಗಳ ಹಿಂದಿನ ದಿನ ಅವರು ಹೇಳಿದರೆನ್ನಲಾದ ಈ ಮಾತುಗಳು ಕೆಲವರಿಗಾದರೂ ತುಸು ಆಶ್ಚರ್ಯ ಉಂಟು ಮಾಡಬಹುದೇನೋ.
(ಪಿ.ಮಹಮ್ಮದ್, ಆಂದೋಲನ)
ಬಹುಶಃ ಈ ಬಾರಿಯ ಮೌನ ಈ ‘ಗೌರವ’ ದಿಂದಾಗಿ ಎಂದು ‘ಸಕಾರಾತ್ಮಕ’ವಾಗಿ ಯೋಚಿಸಬೇಕೇ?
ಅಥವ… ಆಳುವ ಪಕ್ಷದ ಐಟಿ ಸೆಲ್, ಯುಎಪಿಎ ಯಂತಹ ಕಾಯ್ದೆಗಳು, ಸಿಬಿಐ, ಇ.ಡಿ. ಯಂತಹ ಸಂಸ್ಥೆಗಳು ಮತ್ತು ‘ಗೋದಿ ಮೀಡಿಯ’ಗಳಿರುವಾಗ ಟೀಕೆ-ವಿಮರ್ಶೆಗಳಿಗೆ ಸಲೀಸಾಗಿ ‘ಎಷ್ಟು ಬೇಕಾದರೂ ‘ಗೌರವ’ ಕೊಡಬಹುದೆಂದು ಇರಬಹುದೇ?
(ಸತೀಶ ಆಚಾರ್ಯ)
***
ಹೀಗೆ ಹೇಳುವಾಗ ಪ್ರಧಾನಿಗಳು ಸರಕಾರದ ಕ್ರಮಗಳ ಬಗ್ಗೆ ಮಾಧ್ಯಮಗಳ ‘ಸಕಾರಾತ್ಮಕ ವರದಿ’ಗಳಿಗೆ ಹರ್ಷ ವ್ಯಕ್ತಪಡಿಸಿದರಂತೆ. ಒಂದು ಉದಾಹರಣೆ ಇಲ್ಲಿದೆ:
“ನಾವಿಂದು ಒಬ್ಬ ಶಕ್ತಿಶಾಲಿ ವ್ಯಕ್ತಿಯ ಮಗನ ಹೀನ ಕೃತ್ಯಗಳ ಬಗ್ಗೆ ವರದಿ ಮಾಡುತ್ತಿದ್ದೇವೆ”
“ಒಬ್ಬ ನಾಗರಿಕರಾಗಿ ಮತ್ತು ಮತದಾರರಾಗಿ, ನೀವೇನು ಯೋಚಿಸುತ್ತಿದ್ದೀರಿ?”
“ಬಿಜೆಪಿ ಕೇಂದ್ರ ಮಂತ್ರಿಯ ಮಗ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಂದಿರುವುದು,
ಗಾಯಗೊಳಿಸಿರುವುದು ಒಂದು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಬೇಕು”
“ ಓ, ಹಾಹಾ,…. ನಾವು ಮಾತಾಡುತ್ತಿರುವುದು ಒಬ್ಬ ಬಾಲಿವಡ್ ತಾರೆಯ ಮಗ
ಒಂದು ಪಾರ್ಟಿಯಲ್ಲಿ ಯಾವುದೋ ಡ್ರಗ್ ಸೇವಿಸುತ್ತಿದ್ದ ಬಗ್ಗೆ”
( ಸ್ಯಾನಿಟರಿ ಪ್ಯಾನಲ್ಸ್, ಫೇಸ್ ಬುಕ್)
***
ಇದಕ್ಕೆ ಎರಡು ದಿನಗಳ ಮೊದಲು ಐಸಿಡಿಎಸ್ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ‘ಪಿಎಂ ಪೋಷಣ್’ ಎಂದು ಮರುನಾಮಕರಣಕ್ಕೆ ಕೇಂದ್ರ ಸಂಪುಟ ಮಂಜೂರಾತಿ ನೀಡಿದೆ ಎಂದು ಪ್ರಕಟಿಸಲಾಯಿತು. ಏಕಿರಬಹುದು? ಪಿಎಂಕೇರ್ಸ್ ನೆನಪಿಸಿಕೊಳ್ಳಬೇಕಾದೀತೇ? ಇರಲಿಕ್ಕಿಲ್ಲ…
(ಪಿ.ಮಹಮ್ಮದ್, ವಾರ್ತಾಭಾರತಿ)
***
ಈ ಸುದ್ದಿ ಕೇಳಿದಾಗ ಪ್ರಧಾನ ಮಂತ್ರಿಗಳ ಈ ಬಾರಿಯ ‘ಥ್ಯಾಂಕ್ಯು ಮೋದೀಜಿ’ ಜನ್ಮ ದಿನಾಚಣೆಯ ರೇಶನ್ ಪ್ಯಾಕೇಟ್‍ಗಳ ನೆನಪಾಗಿದೆಯಂತೆ!.
“..ಪೋಟೋ ಇರುವ ರೇಶನ್ ಚೀಲ ಮುದ್ರಿಸಿದ ಕಾಂಟ್ರಾಕ್ಟರ್
ಫೋನ್ ಮಾಡಿದ್ದಾನೆ, ತಟ್ಟೆ-ಲೋಟಾಗಳ ಮೇಲೂ ಫೋಟೋ
ಮುದ್ರಿಸುವ ಯೋಚನೆಯಿದೆಯೇ ಎಂದು ಕೇಳುತ್ತಿದ್ದಾನೆ”
(ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯಾ)