ಜಿಎಸ್‌ಟಿಯೊಂದಿಗೆ ಊಟ, ಡಿ.ಪಿ.ಯಲ್ಲಿ ತಿರಂಗಾ ನಡುವೆ ‘ರೇವ್ಡಿ’ ಉಡುಗೊರೆ ರಾಜಕೀಯ…

ವೇದರಾಜ ಎನ್.ಕೆ.

ಎರಡು ವಾರಗಳ ಹಿಂದೆ ಆರಂಭವಾದ ಆಹಾರ ವಸ್ತುಗಳ ಮೇಲಿನ ಜಿಎಸ್‍ಟಿ ಚರ್ಚೆ ಇನ್ನೂ ಮುಂದುವರೆದಿದೆ. ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಸಮೀಪಿಸುತ್ತಿರುವಂತೆ ‘ಮನೆ-ಮನೆ ತಿರಂಗಾ’ದ ಮೂಲಕ ‘ಮನೆ-ಮನೆ ಜಿಎಸ್‍ಟಿ’  ಚರ್ಚೆಯನ್ನು ಬದಿಗೊತ್ತುವ  ಪ್ರಯತ್ನ ನಡೆಯುತ್ತಿದೆ. ಈ ನಡುವೆ ಒಂದೆಡೆಯಲ್ಲಿ ಒಬ್ಬ ಬುಡಕಟ್ಟು ಮಹಿಳೆ ರಾಷ್ಟಾಧ್ಯಕ್ಷರಾಗಿರುವ ನಿಜವಾದ ಸಿಹಿ ಸುದ್ದಿ ಬಂದಿದ್ದರೆ, ಇನ್ನೊಂದೆಡೆಯಲ್ಲಿ ಜನಗಳ ಸಂವಿಧಾನಬದ್ದ ಹಕ್ಕುಗಳ ಪ್ರಶ್ನೆಗೆ   ಪುಕ್ಕಟೆ ಉಡುಗೊರೆಗಳ  ವೇಷ ತೊಡಿಸಲು ಪುಕ್ಕಟೆ ಸಿಹಿ ಹಂಚಿಕೆಯೆಂದು ‘ರೇವ್ಡಿ’ ಚರ್ಚೆ  ಹರಿಯ ಬಿಡಲಾಗಿದೆ. ಇತ್ತ ಕರ್ನಾಟಕದಲ್ಲಿ ದ್ವೇಷ ಭಾಷಣಗಳ ಪರಿಣಾಮ ಆಳುವವರ ಕೈಮೀರಿ ಹೋಗುತ್ತಿರುವಂತೆ ಕಾಣುತ್ತಿದೆ. ಈ ಬೆಳವಣಿಗೆಗಳನ್ನು ವ್ಯಂಗ್ಯಚಿತ್ರಕಾರರು ಹೇಗೆ ಕಂಡಿದ್ದಾರೆ ನೋಡೋಣ:

ಜುಲೈ 18ರಿಂದ ಬೇಳೆಕಾಳುಗಳು, ಧಾನ್ಯಗಳು, ಹಿಟ್ಟುಗಳು ಮತ್ತು ಮೊಸರು ಮುಂತಾದ ಆಹಾರ ವಸ್ತುಗಳಿಗೂ ಜಿಎಸ್‌ಟಿ ಅನ್ವಯವಾಗುತ್ತಿದೆ. ನಿಜ “ಮುಂಚಿತವಾಗಿ ಪ್ಯಾಕ್ ಮಾಡಿದ ಮತ್ತು ಲೇಬಲ್ ಹಚ್ಚಿದ” ಎಂಬ ವಿಶೇಷಣವನ್ನು ಇದಕ್ಕೆ ಸೇರಿಸಲಾಗಿದೆ.

“ಈಗ ಜಿಎಸ್‍ಟಿ ಅಕ್ಕಿ, ಗೋದಿ, ಮೊಸರಿನ ಮೇಲೆ.. ಲಸ್ಸಿ, ಪನ್ನೀರ್, ಬೆಲ್ಲ, ಜೇನಿನ ಮೇಲೆ…

ಶಾಯಿ, ಚಾಕು, ಎಲ್‍ಇಡಿ ಬಲ್ಬ್, ಬಾರ್ಲಿ ಮೇಲೆ …. ಆಸ್ಪತ್ರೆ ಕೋಣೆಗಳ ಮೇಲೆ.. ಏನಪ್ಪಾ, ಚೆನ್ನಾಗಿದ್ದೀಯಲ್ಲಾ?”

ಹೌದು, ಚೆನ್ನಾಗಿದ್ಧೇನೆ, ಚೆನ್ನಾಗಿಯೇ ಇದ್ದೇನೆ”

(ಸಂದೀಪ್ ಅಧ್ವರ್ಯು, ಟೈಮ್ಸ್ ಆಫ್‍ ಇಂಡಿಯ)

75 ವರ್ಷಗಳ ಹಿಂದೆ ವಸಾಹತುಶಾಹಿ ಆಳ್ವಿಕೆ ಅಂತ್ಯಗೊಂಡ ಮೇಲೆ ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೇರಿದ್ದು ಇದು ಮೊದಲ ಬಾರಿ ಎನ್ನಲಾಗುತ್ತಿದೆ.

ಜಿಎಸ್‍ಟಿ ಆರಂಭಿಸುವಾಗ ಕೂಡ ಆಹಾರ ಧಾನ್ಯಗಳು ಮತ್ತು ನಿತ್ಯ ಬಳಕೆಯ ಹಲವು ಅಗತ್ಯ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿತ್ತು ಎಂಬುದನ್ನೂ ಹಲವರು ನೆನಪಿಸಿಕೊಂಡಿದ್ದಾರೆ.

ಈಗ ಸ್ವಾತಂತ್ರ್ಯದ  ಅಮೃತ ಮಹೋತ್ಸವ ವರ್ಷದಲ್ಲೇ ಆ ವಸಾಹತುಶಾಹೀ ನಡೆ ಮರಳಿ ಬಂದಿದೆ.

“ಇವತ್ತಿನಿಂದ ಇವ (ಜಿಎಸ್‍ಟಿ) ಕೂಡ ನಮ್ಮ ಜೊತೆಗೇ ಊಟ ಮಾಡುತ್ತಾನೆ…”.

(ಅಲಂಕಾರ್ ಗೋಸ್ವಾಮಿ, ಫೇಸ್‍ಬುಕ್)

ತಾನು ಬಳಸುವ ರಬ್ಬರ್, ಪೆನ್ಸಿಲ್, ಅಷ್ಟೇ ಏಕೆ, ತಿನ್ನುವ ಮ್ಯಾಗಿಯೂ ತುಟ್ಟಿಯಾಗಿದೆಯಲ್ಲಾ, ನನ್ನ ತಾಯಿ ಪೆನ್ಸಿಲ್ ಕೇಳಿದ್ದಕ್ಕಾಗಿ ನನ್ನನ್ನು ಹೊಡೆಯುತ್ತಾರೆ. ನಾನೇನು ಮಾಡಲಿ  ಎಂದು 1ನೇ ತರಗತಿಯ ಬಾಲಕಿಯೊಬ್ಬಳು ಪ್ರಧಾನಿಗಳಿಗೆ ಪತ್ರ ಬರೆದಿದ್ದಾಳಂತೆ.

ಅದಕ್ಕೆ ಪ್ರಧಾನಿಗಳ ಉತ್ತರ ಏನಿರಬಹುದು?

“..ಮನಸ್ಸಿಟ್ಟು ಓದು, ‘ಮನ್‍ ಕೀ ಬಾತ್’ ಕೇಳು-ನಿನ್ನ ಡಿ.ಪಿ.ಯಲ್ಲಿ ‘ತ್ರಿರಂಗಾ’ವನ್ನು ಖಂಡಿತಾ ಹಾಕು…”
(ಇರ್ಫಾನ್‍, ನ್ಯೂಸ್‍ ಕ್ಲಿಕ್)

ನಿಜ, ಇದು ವ್ಯಂಗ್ಯಚಿತ್ರಕಾರರ ಕಪೋಲ ಕಲ್ಪನೆ. ಆದರೆ ಹಣಕಾಸು ಮಂತ್ರಿಗಳು ಮತ್ತು ಆಳುವ ಪಕ್ಷದ ಪ್ರತಿನಿಧಿಗಳ ಮಾತುಗಳನ್ನು ಕೇಳಿದರೆ ಈ ಕಲ್ಪನೆ ವಾಸ್ತವಕ್ಕಿಂತ ಬಹಳ ದೂರದಲ್ಲೇನೂ ಇಲ್ಲ ಎಂದನಿಸದಿರದು

ಏಕೆಂದರೆ ಹಣಕಾಸು ಮಂತ್ರಿಗಳು ಇವು ಜನಗಳಿಗೆ ಹೊರೆಯಾಗಿಲ್ಲ, ಹಣದುಬ್ಬರ ಹತೋಟಿಯಲ್ಲಿದೆ,  ಆರ್ಥಿಕ ಹಿಂಜರಿತ ಬರುತ್ತಿಲ್ಲ ಎಂದಿದ್ದಾರೆ.

“ನಾವು ಬೇರೆಲ್ಲ ದೇಶಗಳಿಗಿಂತ ಚೆನ್ನಾಗಿಯೇ ಮಾಡುತ್ತಿದ್ದೇವೆ-ಅಮೆರಿಕ, ಜಪಾನ್‍, ಗ್ರೀಸ್, ಸ್ಪೇನ್, ಫ್ರಾನ್ಸ್, ಕೆನಡ

ನನಗೆ ಆ ದೇಶಗಳ ಜನರ ಬಗ್ಗೆ ಚಿಂತೆಯಾಗುತ್ತಿದೆ…”
(ಅಲೋಕ್‍ ನಿರಂತರ್, ಫೇಸ್‍ಬುಕ್)

ಸ್ಮಶಾನಗಳು, ಶವಸಂಸ್ಕಾರದ ಮೇಲಾಗಲೀ ಅಥವ ಶವಾಗಾರ ಸೇವೆಗಳ ಮೇಲಾಗಲೀ ಜಿಎಸ್‍ಟಿಯಿಲ್ಲ, ಅವು ಜಿಎಸ್‍ಟಿಯಿಂದ ಸಂಪೂರ್ಣ ಮುಕ್ತವಾಗಿವೆ, ಸ್ಮಶಾನದ ನಿರ್ಮಾಣದ ಮೇಲಷ್ಟೇ ಜಿಎಸ್‍ಟಿ ವಿಧಿಸಲಾಗುವುದು ಎಂದೂ ಅವರು ಹೇಳಿರುವುದಾಗಿ ವರದಿಯಾಗಿದೆ!

ಒಬ್ಬ ಆಳುವ ಪಕ್ಷದ ಸಂಸದರು ಇನ್ನೂ ಮುಂದೆ ಹೋಗಿ ವಿಪಕ್ಷಗಳವರು ಬೆಲೆಯೇರಿಕೆಯನ್ನು ಹುಡುಕುತ್ತಿದ್ದಾರೆ, ಅವರಿಗೆ ಸಿಗುತ್ತಿಲ್ಲ, ಏಕೆಂದರೆ ಅದು ಇಲ್ಲವೇ ಇಲ್ಲ ಎಂದು  ಹೇಳಿರುವುದಾಗಿ ವರದಿಯಾಗಿದೆ.

ಈ ನಡುವೆ ತಿರಂಗಾ ಡಿ.ಪಿ.ಯ ಕತೆ ಮುಂದುವರೆದಿದೆ.. ಬಾವುಟಗಳಿಗೆ ಪಾಲಿಯೆಸ್ಟರನ್ನೂ ಬಳಸಬಹುದು ಎಂದೂ ಹೇಳಲಾಗಿದೆ…….

***

ರಾಜಕೀಯ ಪಕ್ಷಗಳು ‘ರೇವ್ಡಿ’(ಪುಕ್ಕಟೆ ಸಿಹಿ ಹಂಚುವ) ಸಂಸ್ಕೃತಿ ಬೆಳೆಸುತ್ತಿವೆ ಎಂದು ಪ್ರಧಾನ ಮಂತ್ರಿಗಳು ಟೀಕಿಸಿದ್ದಾರಂತೆ.

ಹೌದು, ಸ್ವತಃ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ! ರಾಜಕೀಯ ಪಕ್ಷಗಳೆಂದರೆ ಅವರ ಪಕ್ಷವಲ್ಲ, ವಿಪಕ್ಷಗಳು ಎಂಬುದು ಸ್ವಯಂವಿದಿತ

ಚುನಾವಣೆಗಳ ಮೊದಲು ಉದ್ಘಾಟನೆಗಳ ಸರಣಿ, ‘ಜುಮ್ಲಾ’ಗಳ ಘೋಷಣೆ ಇವೆಲ್ಲ ಈ ‘ರೇವ್ಡಿ’ ಲೆಕ್ಕಕ್ಕೆ ಬರುವುದಿಲ್ಲವೇ ಎಂದು ಕೆಲವರು ಕೇಳುತ್ತಾರೆ.

ಬಹುಶಃ ಚುನಾವಣೆ ಯಾರೇ ಗೆಲ್ಲಲಿ, ಸರಕಾರ ಮಾತ್ರ ನಮ್ಮದೇ ಎಂಬ ಚಾಣಕ್ಯ ತಂತ್ರದಲ್ಲಿಯೂ ಈ ರೇವ್ಡಿ ವಾಸನೆ ಇಲ್ಲವೇ ಎಂದು ಇನ್ನು ಕೆಲವರು ಕೇಳುತ್ತಿದ್ದಾರೆ.

‘ರೇವ್ಡಿ ರಾಜಕೀಯ’: ಎಎಪಿ vs ಬಿಜೆಪಿ
ಇತ್ತ ಮತಗಟ್ಟೆಗಳಲ್ಲಿ  –  ಅತ್ತ ರೆಸಾರ್ಟ್‍ಗಳಲ್ಲಿ
‘ರೇವ್ಡಿ’ಯನ್ನು ಎಲ್ಲಿಂದ ಖರೀದಿಸಬೇಕು ಎಂಬುದಷ್ಟೇ ಪ್ರಶ್ನೆ

“…ಇದನ್ನು  ನೇರವಾಗಿ ರೈತನಿಂದ ಖರೀದಿಸಬೇಕೇ ಅಥವ ಮಂಡಿಯಲ್ಲಿ ದಾಸ್ತಾನುಗಾರನಿಂದಲೋ!”
(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

ಸಗಟಾಗಿ ಅಥವ ಚಿಲ್ಲರೆಯಾಗಿ ಶಾಸಕರನ್ನು ಖರೀದಿಸಲು ಮಂತ್ರಿಪಟ್ಟ, ಇಡಿ, ಸಿಬಿಐ, ಐಟಿಯಿಂದ ರಕ್ಷಣೆ, ಕೊನೆಗೆ ನಗದು. ಆದರೆ ಇವೆಲ್ಲ….

‘ರೇವ್ಡಿ’  ಅಲ್ಲ, ಸುಗಮ ವ್ಯವಹಾರದ ವಿಧಗಳಷ್ಟೇ!

(ರಾಜೇಂದ್ರ ಧೋಡಪ್‍ಕರ್, ಫೇಸ್‍ ಬುಕ್)

***

ಕೇಂದ್ರ ಸರಕಾರ 2019ರಿಂದೀಚೆಗೆ ಮಾಧ್ಯಮಗಳಲ್ಲಿ ಜಾಹೀರಾತಿಗೇ 950 ಕೋಟಿ ರೂ. ಖರ್ಚುಮಾಡಿದೆ ಎಂಬ ಸುದ್ದಿ ಬಂದಿದೆ.  ಇದೂ ‘ರೇವ್ಡಿ’  ಎನಿಸುವದಿಲ್ಲ

ಆದರೂ ಈ ವ್ಯಂಗ್ಯಚಿತ್ರಕಾರರು ಹೇಳುವಂತೆ ‘ಮಡಿಲ ಮಾಧ್ಯಮ’ಗಳಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಅಬ್ಬರವೇ ಮುಂದುವರೆದಿದೆ.

ಜಿಎಸ್‍ಟಿ ಹೇರಿಕೆ-ಏರಿಕೆಗಳು ಗೋಣು ಮುರಿಯುತ್ತಿದ್ದರೆ , ಅದರ ಪ್ರಸ್ತಾಪವೇ ಇಲ್ಲ, ಬದಲಿಗೆ ಹಿಂದು-ಮುಸ್ಲಿಂ ಬೊಬ್ಬೆಯೇ ಕೇಳುತ್ತಿದೆ ಎಂಬುದು ಬೇರೇ ಮಾತು! ಕಾರಣಗಳಿಗೂ ಹುಡುಕಾಡಬೇಕಿಲ್ಲ.

 

(ಸತೀಶ ಆಚಾರ್ಯ, ಫೇಸ್‍ಬುಕ್)                                           (ಸಜಿತ್‍ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಕಾರ್ಪೊರೇಟ್‍ ಬಂಟರಿಗೆ 2019ರಲ್ಲಿ 1.45 ಲಕ್ಷ ಕೋಟಿ ರೂ.ಗಳ ಕಾರ್ಪೊರೇಟ್‍ ತೆರಿಗೆ ಕಡಿತ, ಆರು ವರ್ಷಗಳಲ್ಲಿ  6.15ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ರಿಯಾಯ್ತಿಗಳು, ‘ಉತ್ತೇಜನೆ’ಗಳು, ತೆರಿಗೆ ರಜಾಗಳು, 10.72 ಕೋಟಿ ರೂ. ಸಾಲಮನ್ನಾಗಳು- ಇವೆಲ್ಲ ಕೂಡ  ಈ ‘ರೇವ್ಡಿ’ಯಲ್ಲಿ ಸೇರುವುದಿಲ್ಲ!

ಅಷ್ಟೇ ಏಕೆ, ಖಾಸಗಿ ವಲಯಕ್ಕೆ ಸಾರ್ವಜನಿಕ ವಲಯದ ಸೊತ್ತುಗಳ ಮಾರಾಟ ಕೂಡ ಖಂಡಿತಾ ‘ರೇವ್ಡಿ’ ಅಲ್ಲ, ಪುಕ್ಕಟೆ ಉಡುಗೊರೆಗಳಲ್ಲ!

“ಪುಕ್ಕಟೆ ಉಡುಗೊರೆಗಳ ಆಮಿಷಕ್ಕೆ ಒಳಗಾಗಬೇಡಿ!”

ಏರುಬೆಲೆಗಳು, ವೆಚ್ಚದಾಯಕ ಶಿಕ್ಷಣ ಮತ್ತು ಆರೋಗ್ಯ ಸೌಕರ್ಯ, ಜೀವನ ವೆಚ್ಚಗಳ
ಸರಪಳಿಗಳು ಸುತ್ತಿಕೊಂಡಿರುವ ಜನಸಾಮಾನ್ಯರಿಗೆ ಪ್ರಧಾನಿಗಳ ಸಲಹೆ
(ಸತೀಶ ಆಚಾರ್ಯ, ಫೇಸ್‍ಬುಕ್)

***

ಇವೆಲ್ಲ ಹುಸಿ/ಪುಕ್ಕಟೆ  ಉಡುಗೊರೆಗಳ ನಡುವೆ ಅಮೃತ ಮಹೋತ್ಸವ ವರ್ಷದಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ  ಒಂದು  ನೈಜ ಉಡುಗೊರೆ ಸಿಕ್ಕಿದೆ.

ಮೊತ್ತಮೊದಲ ಬಾರಿಗೆ ಒಬ್ಬ ಬುಡಕಟ್ಟು ಮಹಿಳೆ ರಾಷ್ಟ್ರಾಧ್ಯಕ್ಷರ ಹುದ್ದೆಗೆ ಏರಿದ್ದಾರೆ.

(ಮಂಜುಲ್, ನ್ಯೂಸ್‍9ಲೈವ್‍.ಕಾಂ)

ಈ ವ್ಯಂಗ್ಯಚಿತ್ರಕಾರರು ಚಿತ್ರಿಸಿರುವಂತೆ, ಭಾರತೀಯ ಪ್ರಜಾಪ್ರಭುತ್ವದ ಹಲವು ದೌರ್ಬಲ್ಯಗಳ ನಡುವೆಯೂ ಇದು ಹರ್ಷೋಲ್ಲಾಸದ ಸಂಗತಿ– ಸಾಂಕೇತಿಕವಾಗಿಯಾದರೂ ಸಂಭವಿಸಿದೆಯಲ್ಲಾ ಎಂಬುದು.

ಇದು ಸಾಂಕೇತಿಕ ಎಂಬುದನ್ನು ಮರೆಯಬಾರದು ಎಂದೋ ಏನೋ, ಎರಡು ಇತ್ತೀಚಿನ ಸುದ್ದಿಗಳನ್ನು ಈ ಹರ್ಷೋಲ್ಲಾಸದ ನಡುವೆಯೇ ವ್ಯಂಗ್ಯಚಿತ್ರಕಾರರು ಗಮನಿಸಬೇಕಾಗಿ ಬಂದಿದೆ.

ಒಂದು, 2017ರ ಮಾವೋವಾದಿ ದಾಳಿಗಳ ಸಂದರ್ಭದಲ್ಲಿ ಬಂಧಿಸಿದ 121 ಬುಡಕಟ್ಟು ಜನಗಳು 5 ವರ್ಷಗಳ ಜೈಲುವಾಸದ ನಂತರ ನಿರಪರಾಧಿಗಳೆಂದು ಖುಲಾಸೆಯಾಗಿದ್ದಾರೆ

5 ವರ್ಷಗಳು, ಒಂದು ರಾಷ್ಟ್ರಪತಿ  ಅಧಿಕಾರವಧಿ!
(ಆರ್.ಪ್ರಸಾದ್‍, ಇಕನಾಮಿಕ್‍ ಟೈಮ್ಸ್)

ಎರಡು, ಕಾರ್ಪೊರೇಟ್‍ಗಳ ಪ್ರಯೋಜನಕ್ಕಾಗಿ ಅರಣ್ಯ ಸಂರಕ್ಷಣಾ ನಿಬಂಧನೆಗಳಿಗೆ ಬುಡಕಟ್ಟು ಜನಗಳ ಹಕ್ಕುಗಳನ್ನು ಕಸಿಯುವ ತಿದ್ದುಪಡಿಗಳು.

ಇತ್ತ ಕಾರ್ಪೊರೇಟ್‍ ಬಂಟರಿಗೆ ಬುಡಕಟ್ಟು ಭೂಮಿ, ಅತ್ತ ಬುಡಕಟ್ಟು ರಾಷ್ಟಾಧ್ಯಕ್ಷರು!
(ಸಾತ್ವಿಕ್‍ ಗಡೆ, ದಿ ಹಿಂದು)

ಬಹುಶಃ ದಲಿತ ಸಮುದಾಯದಿಂದ ಬಂದ ರಾಷ್ಟ್ರಾಧ್ಯಕ್ಷರ ಕಾಲದಲ್ಲಿ ದಲಿತರ ಸಾಂಕೇತಿಕ ‘ಸಬಲೀಕರಣ’ದ ನಂತರ, ಇನ್ನೈದು ವರ್ಷ ಆದಿವಾಸಿಗಳ ಸಾಂಕೇತಿಕ ‘ಸಬಲೀಕರಣ’?

ಐದು ವರ್ಷಗಳ ಹಿಂದೆ ನಾವು ಪರಿಶಿಷ್ಟ ಜಾತಿಗಳವರು ಸಬಲೀಕರಣಗೊಂಡೆವು”
ಈಗ ಪರಿಶಿಷ್ಟ ಬುಡಕಟ್ಟು ಜನಗಳ ಸರದಿ”
(ಸಂದೀಪ್ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯ)

ಹೊಸ ರಾಷ್ಟ್ರಾಧ್ಯಕ್ಷರು ಅಧಿಕಾರ ವಹಿಸಿಕೊಂಡಾಗ ಬಡವರೂ ಈ ನಮ್ಮ ದೇಶದಲ್ಲಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಎಂಬುದಕ್ಕೆ ತಾನೇ ಸಾಕ್ಷಿ ಎಂದಿದ್ದಾರಂತೆ.  ಅದನ್ನು ಕೇಳಿ, ಬಡವರಿಗೆ ‘ಅಚ್ಛೇದಿನ್‍’ ಕಾಲದ 15ಲಕ್ಷ ರೂ. ಬ್ಯಾಂಕ್‍ ಖಾತೆಗೆ ಜಮಾ ಆಗುವ ಕನಸು ಮತ್ತೆ ಚಿಗುರಬಹುದೇ ಎಂಬುದು ಈ ವ್ಯಂಗ್ಯಚಿತ್ರಕಾರರ ಕಲ್ಪನೆ.

(ಮಿಕ ಅಜೀಜ್‍, ಫೇಸ್‍ಬುಕ್)

ಬಡವರ ಕನಸುಗಳು ಕನಸಾಗಿಯೇ ಉಳಿಯುತ್ತವೆ ತಾನೇ ಎಂಬ ಸಿನಿಕತನ ಬೇಕಿಲ್ಲ ಎಂದು  ಕೆಲವರು ಹೇಳುತ್ತಾರೆ.

ಏಕೆಂದರೆ ಇವರು ಝಾರ್ಖಂಡ್‍ನ ರಾಜ್ಯಪಾಲರಾಗಿದ್ದಾಗ ತಮ್ಮನ್ನು ರಾಜ್ಯಪಾಲರಾಗಿ ನೇಮಿಸಿದ ಪಕ್ಷದ ಸರಕಾರವೇ ಅಲ್ಲಿ ಸಂತಾಲ್‍ ಪರಗಣ ಗೇಣಿ ಕಾಯ್ದೆ ಮತ್ತು ಛೋಟಾ ನಾಗ್ಪುರ್ ಗೇಣಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಉದ್ದೇಶದ ಝಾರ್ಖಂಡ್‍ ಭೂಸ್ವಾಧೀನ ಕಾಯ್ದೆ 2017ನ್ನು ಇವರು ಪ್ರಶ್ನಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆದ್ದರಿಂದ ತಳಸಮುದಾಯದ ಜನ ಸಹಜವಾಗಿಯೇ ತಮ್ಮ ಪ್ರತಿಬಿಂಬವನ್ನು ಇವರಲ್ಲಿ ಕಾಣಬಹುದು. ಆದರೆ ಅವರ ಗ್ರಾಮಕ್ಕೆ ಮೊದಲ ಬಾರಿಗೆ ವಿದ್ಯುತ್‍ ಸಂಪರ್ಕ ಒದಗಿಸಿದ ಕೈಯಲ್ಲೇ ಸ್ವಿಚ್‍ ಇದೆಯಲ್ಲಾ ಎಂಬ ಆತಂಕ ಇದ್ದೇ ಇದೆ.

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

ಬಹುಶಃ ಅರಣ್ಯ ಸಂರಕ್ಷಣಾ ನಿಬಂಧನೆಗಳ ತಿದ್ದುಪಡಿಗಳ ಮೂಲಕ ಅರಣ್ಯವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ವಿಚಾರದಲ್ಲಿ ಮೊದಲ ಸತ್ವಪರೀಕ್ಷೆ ನಡೆಯುತ್ತದೆಯೋ ಕಾದು ನೋಡಬೇಕು. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಈ ಕುರಿತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ತಪ್ಪುದಾರಿಗೆಳೆಯುವ ಉತ್ತರಗಳನ್ನು ಕೊಟ್ಟಿದೆ ಎಂದು ಈಗಾಗಲೇ ಸಿಪಿಐ(ಎಂ) ಸಂಸದ ಎಳಮಾರಂ ಕರೀಂ ರಾಜ್ಯಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

***

ಅದಿರಲಿ, ಅರಣ್ಯ ಭೂಮಿಯನ್ನು ‘ಬೇರೆ ಉದ್ದೇಶ’ಗಳಿಗೆ ಬಳಸುವುದನ್ನು ಸುಗಮಗೊಳಿಸಲು ಕೇಂದ್ರ ಸರಕಾರ ತಿದ್ದುಪಡಿಗಳನ್ನು ತರುತ್ತಿರುವಾಗಲೇ, ಹಿಂದಿನ ರಾಷ್ಟ್ರಾಧ್ಯಕ್ಷರು ತಮ್ಮ ವಿದಾಯ ಭಾಷಣದಲ್ಲಿ ಮುಂದಿನ ಪೀಳಿಗೆಗಳಿಗಾಗಿ ಪರಿಸರವನ್ನು ರಕ್ಷಿಸಿ ಎಂದು ಕರೆ ಕೊಟ್ಟಿದ್ದಾರೆ. ದ್ವೇಷ ಭಾಷಣಗಳಿಂದ ಸಮಾಜದ  ವಾತಾವರಣ ಕಲುಷಿತಗೊಳಿಸುತ್ತಿರುವ ಬಗ್ಗೆ ಅವರ ಖೇದವೂ ಇದರಲ್ಲಿ ಅಡಕವಾಗಿದೆಯೋ ಗೊತ್ತಿಲ್ಲ

(ಮಂಜುಲ್, ನ್ಯೂಸ್9ಲೈವ್‍.ಕಾಂ.)

***

ಈ ದ್ವೇಷ ಭಾಷಣಗಳ ರಾಜಕೀಯದ ಪರಿಣಾಮಗಳನ್ನು ಕರ್ನಾಟಕ ಈಗ ಕಾಣುತ್ತಿರುವಂತಿದೆ. ಎಷ್ಟು ತೀವ್ರವಾಗಿ ಎಂದರೆ ಈ ಬಾರಿಯ  ಬಿಜೆಪಿ ಸರಕಾರದ ಎರಡನೇ ಆವೃತ್ತಿಯ ಮೊದಲ ವಾರ್ಷಿಕೋತ್ಸವದ ‘ಜನೋತ್ಸವ’ ರದ್ದಾಗಿದೆ

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

ಆದರೆ ಅವರ ಸ್ವಪಕ್ಷೀಯರೇ ಅವರನ್ನು ಮಲಗಲು ಬಿಡುತ್ತಿಲ್ಲ, ಆದ್ದರಿಂದಲೇ ಅವರೀಗ ಉತ್ತರ ಪ್ರದೇಶದ ಯೋಗಿ ಮಾದರಿಯ ಬಗ್ಗೆ ಮಾತಾಡುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ. ಉತ್ತರಪ್ರದೇಶ-ಕರ್ನಾಟಕ ಗಂಗಾ-ಕಾವೇರಿ ಜೋಡಣೆ ಅಮಾಯಕ ಬುಲ್‍ ಡೋಜರ್ ಮೂಲಕ ಆಗುತ್ತದೆಯೇ?

                                (ಪಿ.ಮಹಮ್ಮದ್, ವಾರ್ತಾಭಾರತಿ)                               (ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್)

***

Donate Janashakthi Media

Leave a Reply

Your email address will not be published. Required fields are marked *