ವೇದರಾಜ ಎನ್.ಕೆ.
ಅಚ್ಛೇದಿನ್‍ಗಳಲ್ಲಿ ಆರಂಭವಾದ ‘ಅಂತರ್ರಾಷ್ಟ್ರೀಯ ಯೋಗ ದಿನ’ದ ಈ ವರ್ಷದ ಆವೃತ್ತಿ, ಮಹಾರಾಷ್ಟ್ರದಲ್ಲಿ ರೆಸಾರ್ಟ್ ಪಾಲಿಟಿಕ್ಸ್ ನ ಹೊಸ ಆವೃತ್ತಿ, ಅತ್ತ ಜರ್ಮನಿಯಲ್ಲಿ ಭಾರತದ ಪ್ರಧಾನಿಗಳ ಉಪಸ್ಥಿತಿಯಲ್ಲಿ “ಚೈತನ್ಯಶೀಲ ಪ್ರಜಾಪ್ರಭುತ್ವಗಳ ಹೇಳಿಕೆ 2022” ಕ್ಕೆ ಸಹಿ ಹಾಕುತ್ತಿರುವಾಗಲೇ ಇಲ್ಲಿ ದೇಶದೊಳಗೆ ನ್ಯಾಯ-ಸತ್ಯಾನ್ವೇಷಣೆಯಲ್ಲಿ ತೊಡಗಿರುವವರು ಎಂದು ಪ್ರಖ್ಯಾತರಾದ ಸಂವಿಧಾನದ ಕಾಲಾಳುಗಳು ಎನಿಸಿಕೊಂಡವರ ಬಂಧನ, ಜತೆಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಎರಡು ವಿಭಿನ್ನ ತೀರ್ಪುಗಳು ಜೂನ್ ತಿಂಗಳ ಕೊನೆಯ ಹತ್ತು ದಿನಗಳ ವ್ಯಂಗ್ಯಚಿತ್ರಗಳಿಗೆ ವಿಷಯಗಳನ್ನು ಒದಗಿಸಿಕೊಡುವುದಕ್ಕಿಂತ ಹೆಚ್ಚಾಗಿ, ತಮಗೆ ಇನ್ನು ಇಲ್ಲಿ ಕೆಲಸ ಇದೆಯೇ ಎಂದು ವ್ಯಂಗ್ಯಚಿತ್ರಕಾರರನ್ನು ಕಕ್ಕಾಬಿಕ್ಕಿಯಾಗಿಸುತ್ತಿರುವಂತೆ ಕಾಣುತ್ತದೆ. ಈ ಅವಧಿಯ ಕಾರ್ಟೂನ್‍ಗಳತ್ತ ಒಂದು ನೋಟ:
ಶೀರ್ಷಾಸನ. ಇದರಿಂದ ಏರುತ್ತಿರುವ ಪ್ರತಿಯೊಂದೂ ಇಳಿಯುತ್ತಿರುವಂತೆ,
ಮತ್ತು ಇಳಿಯುತ್ತಿರುವ ಪ್ರತಿಯೊಂದೂ ಏರುತ್ತಿರುವಂತೆ ಕಾಣುತ್ತದೆ.
(ಕೀರ್ತಿಶ್, ಬಿಬಿಸಿ ನ್ಯೂಸ್ ಹಿಂದಿ)
ಪ್ರಾಚೀನ ಭಾರತದ ಈ ಪ್ರಾಚೀನ ಜ್ಞಾನ ಬುತ್ತಿ 2022ರ ಆಧುನಿಕ ಭಾರತದ ಸನ್ನಿವೇಶವನ್ನು ಎಷ್ಟು ಚೆನ್ನಾಗಿ ಬಿಂಬಿಸುವ ಸಾಮರ್ಥ್ಯ ಹೊಂದಿದೆ ನೋಡಿ:
ಅಸ್ಸಾಂನಲ್ಲಿ ಪ್ರವಾಹಪೀಡಿತರಿಗೆ ಪರಿಹಾರ ಮತ್ತು ಮಹಾರಾಷ್ಟ್ರದ ಪ್ರಜಾಪ್ರಭುತ್ವದ ರಕ್ಷಣೆಯ ಕತೆ
ಮತ್ತು ನಿಜವಾದ ಕತೆ
“ಚಾರ್ಟರ್ ವಿಮಾನ ಪ್ರವಾಸಕ್ಕೆ, ಪಂಚತಾರಾ ಹೊಟೇಲುಗಳಿಗೆ
ತೆತ್ತವರು ಯಾರು ಎಂಬುದೇ ನಿಜವಾದ ಕತೆ”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಮುಂಬೈ-ಸೂರತ್-ಗುವಾಹಾಟಿ-ಗೋವಾ- ಮುಂಬೈ ಪ್ರವಾಸದ ಕೊನೆಯಲ್ಲಿ….
“ಪೆಟ್ರೋಲ್ ಬಗ್ಗೆ ಯೋಚನೆ ಮಾಡ್ಬೇಡ” (ಸುಭಾನಿ, ಡೆಕ್ಕನ್ ಕ್ರಾನಿಕಲ್)
ಈ ಕತೆ ಮತ್ತು ನೈತಿಕತೆಯ ಬಗ್ಗೆಯೂ…..
ನೈತಿಕತಾ-ಮುಕ್ತ ಭಾರತ”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್ )
***
ಈ ನಡುವೆ ಎರಡು ಬಂಧನಗಳು…
2002ರ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಿರುವ ಸಿ,ಜೆ.ಪಿ.ಯ ತೀಸ್ತಾ ಸೆಟಲ್ವಾಡ್ ರವರನ್ನು ಬಂಧಿಸಲಾಯಿತು.
ಬಂಧಿಸಿದ್ದಕ್ಕೆ ಗುಜರಾತ್ ಆಡಳಿತ ಬೊಟ್ಟು ಮಾಡಿರುವುದು ಇದು ನ್ಯಾಯಕ್ಕಾಗಿ ಹೋರಾಟವಲ್ಲ, ನ್ಯಾಯ ಪ್ರಕ್ರಿಯೆಯ ದುರುಪಯೋಗ, ದುರುದ್ದೇಶದಿಂದ ಮಡಕೆ ಬೇಯುತ್ತಲೇ ಇರು”ವಂತೆ ಮಾಡುವ ಪ್ರಯತ್ನ, ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕಟಕಟೆಯಲ್ಲಿ ನಿಲ್ಲಿಸಬೇಕೆಂಬ ಸುಪ್ರಿಂ ಕೋರ್ಟಿನ ತೀರ್ಪಿನಲ್ಲಿ ಹೇಳಿದ ಅಂಶದತ್ತ.
“ಮಡಕೆ ಬೇಯುತ್ತಲೇ ಇರುವಂತೆ ಮಾಡುತ್ತಿರುವವರು ಯಾರು?”
(ಸತೀಶ ಆಚಾರ್ಯ, ಫೇಸ್ ಬುಕ್)
ಈ ಪ್ರಶ್ನೆಗೆ ಉತ್ತರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಇಲ್ಲ.
ಅಂದ ಹಾಗೆ ಈ ತೀರ್ಪಿಗೆ ಸಹಿ ಇಲ್ಲವಂತೆ…
ಝಕಿಯಾ ಜಾಫ್ರಿ ವರ್ಸಸ್ ಪ್ರಭುತ್ವ ಕೇಸಿನ ತೀರ್ಪಿಗೆ
“ಕರ್ತೃ ಇಲ್ಲ?”
ಹೌದು, “ಅಯೋಧ್ಯಾ ತೀರ್ಪಿನಂತೆ”
(ಎಸ್ ದೇವಿಕ, ದಿ ಲೀಫ್ ಲೆಟ್)
ಇದರ ಬೆನ್ನಿಗೇ, ಮತ್ತೊಂದು ಬಂಧನ- ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಹುಸಿ ಸುದ್ದಿಗಳ ಹಿಂದಿನ ಸತ್ಯದ ಶೋಧನೆ ನಡೆಸುವಲ್ಲಿ, ದ್ವೇಷ ಭಾಷಣಗಳನ್ನು ಬಹಿರಂಗಕ್ಕೆ ತರುವಲ್ಲಿ ತೊಡಗಿರುವ ‘ಆಲ್ಟ್ ನ್ಯೂಸ್’ನ ಸಹಸಂಸ್ಥಾಪಕ ಮುಹಮ್ಮದ್ ಜುಬೇರ್ ಬಂಧನ
(ಪಿ.ಮಹಮ್ಮದ್) ‘ಸತ್ಯಮೇವ ಜಯತೇ’(ಸತೀಶ ಆಚಾರ್ಯ)
ವಿಚಾರ, ಅಂತಸ್ಸಾಕ್ಷಿ, ಧರ್ಮ ಅಥವ ನಂಬಿಕೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ವಿಭಿನ್ನ ನಂಬಿಕೆಗಳ ನಡುವೆ ಸಂವಾದವನ್ನು ಪ್ರೋತ್ಸಾಹಿಸಲು ತಾವು ಬದ್ಧ ಎಂದು ಘೋಷಿಸುವ “ಚೈತನ್ಯಶೀಲ ಪ್ರಜಾಪ್ರಭುತ್ವಗಳ ಹೇಳಿಕೆ”ಗೆ ಜರ್ಮನಿಯಲ್ಲಿ ಜಿ-7 ಮತ್ತು ಇತರ ನಾಲ್ಕು ದೇಶಗಳೊಂದಿಗೆ ಭಾರತವೂ ಸ್ವತಃ ಪ್ರಧಾನ ಮಂತ್ರಿಗಳ ಉಪಸ್ಥಿತಿಯಲ್ಲಿ ಸಹಿ ಹಾಕಿರುವ ದಿನದಂದೇ ದಿಲ್ಲಿ ಪೋಲೀಸ್ ಜುಬೇರ್ ರನ್ನು ಸಮುದಾಯಗಳ ನಡುವೆ ವೈಷಮ್ಯ ಹುಟ್ಟಿಸುತ್ತಿದ್ದಾರೆ, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದು ಬಂಧಿಸಿರುವುದು ಒಂದು ವಿಡಂಬನೆಯೇ ಆಗಿದೆ ಎಂದು ದೇಶದ ಪತ್ರಕರ್ತರ ಪ್ರಮುಖ ಸಂಘಟನೆ ಪ್ರೆಸ್ ಕ್ಲಬ್ ಆಫ್ ಇಂಡಿಯ (ಪಿಸಿಐ) ಹೇಳಿದೆ.
ಅವರಿಗೆ ಜಾಮೀನು ನಿರಾಕರಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಬೇಕು ಎಂಬ ನ್ಯಾಯಾಲಯದ ಆದೇಶ ಬರುವ ಎಷ್ಟೋ ಮೊದಲೇ ದಿಲ್ಲಿ ಪೋಲಿಸಿನವರೇ ಅದನ್ನು ಪ್ರಕಟಿಸಿ ಹೊಸದೊಂದು ದಾಖಲೆಯನ್ನೇ ನಿರ್ಮಿಸಿದ್ದಾರೆ ಎಂದು ಈ ನಡುವೆ ಹೊಸ ವಿವಾದ ಉಂಟಾಗಿದೆ.
“ಭಾರತ ಭಾಗಶ: ಸ್ವಾತಂತ್ರ್ಯವಿರುವ ದೇಶ” ಎಂದು ಅಂತರ್ರಾಷ್ಟ್ರೀಯ ಸಂಘಟನೆಯೊಂದು ಇತ್ತೀಚೆಗೆ ಹೇಳಿತ್ತು.
ಅದರ ಸತ್ಯಾಸತ್ಯತೆಯ ಪರೀಕ್ಷೆ……!
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಉದಯಪುರದಲ್ಲಿ ಇಬ್ಬರು ಧರ್ಮಾಂಧರು ಆಳುವ ಪಕ್ಷದ ಅಮಾನತುಗೊಂಡಿರುವ ವಕ್ತಾರೆಯನ್ನು ಬೆಂಬಲಿಸಿದರೆಂಬ ಕಾರಣಕ್ಕೆ ದರ್ಜಿಯೊಬ್ಬರ ಕುತ್ತಿಗೆ ಕತ್ತರಿಸಿ ಸಾಯಿಸಿದ ಮತ್ತು ಅದರ ಚಿತ್ರವನ್ನು ವೈರಲ್ ಮಾಡಿದ ಭೀಕರ, ಅಮಾನವೀಯ ಘಟನೆ ದೇಶ ತತ್ತರಿಸುವಂತೆ ಮಾಡಿದೆ.
ದೇಶದಲ್ಲಿ ಇಷ್ಟೊಂದು ದ್ವೇಷ ಏಕಿದೆ ಎಂದು ಕೆಲವು ಮುಖ್ಯ ಧಾರೆಯ ಮಾಧ್ಯಮಗಳೂ ಹೌಹಾರಿವೆಯಂತೆ..!
ಹಿಂದು ಮುಸ್ಲಿಂ.. ಹಿಂದು ಮುಸ್ಲಿಂ,, ಹಿಂದು ಮುಸ್ಲಿಂ.. ಹಿಂದು ಮುಸ್ಲಿಂ…
“ಇಷ್ಟೊಂದು ದ್ವೇಷ ಏಕಿದೆ ಎಂದು ದೇಶಕ್ಕೆ ತಿಳಿಯಬೇಕಾಗಿದೆ”
(ಮಂಜುಲ್, ನ್ಯೂಸ್9ಲೈವ್)
ಇದಕ್ಕೆ ಉತ್ತರವೋ ಎಂಬಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ಇನ್ನೊಂದು ನ್ಯಾಯ ಪೀಠದ ನ್ಯಾಯಾಧೀಶರು ಒಂದು ಕಟುವಾದ ಟಿಪ್ಪಣಿ ಮಾಡಿದ್ದಾರೆ.
(ಪಂಜು ಗಂಗೊಳ್ಳಿ, ಕನ್ನಡ ಒನ್ ನ್ಯೂಸ್)
ಆದರೆ ನಿಜವಾಗಿಯೂ ಅವರೊಬ್ಬರೇ ಹೊಣೆಯೇ? ಭಾರತ ಸರಕಾರ ಮಧ್ಯ ಏಷ್ಯಾದ ದೇಶಗಳ ಸರಕಾರಗಳಿಗೆ ಹೇಳಿದ ‘ಫ್ರಿಂಜ್ ಎಲಿಮೆಂಟುಗಳು” ಯಾರು?
ಈ ದ್ವೇಷ ಮೆಷೀನಿನಲ್ಲಿ
“ನಾನಲ್ಲ! ನಾನು ಒಂದು ಗಾಲಿಹಲ್ಲು ಮಾತ್ರ!!”
( ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
ಈ ನಡುವೆ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ….
“ಹಟಮಾರಿ, ಭಂಡ ಸ್ವಭಾವ ಎಂದದ್ದು ನನ್ನ ಬಗ್ಗೆ ಅಂದುಕೊಂಡಿದ್ದೆ!”
“ನಾನೂ ಕೂಡ!” “ನಾನೂ ಕೂಡ!” “ನಾನೂ ಕೂಡ!” “ನಾನೂ ಕೂಡ!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್ )
ನ್ಯಾಯಾಧೀಶರ ಈ ಟಿಪ್ಪಣಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಮುಖ್ಯ ನ್ಯಾಯಾಧೀಶರಿಗೆ ನೂಪುರ್ ಶರ್ಮಾ ಬೆಂಬಲಿಗರು ಒಂದು ಮನವಿಯನ್ನು ಆಗಲೇ ಸಲ್ಲಿಸಿದ್ದಾರಂತೆ.
***
ಇದಕ್ಕೆ ಮೊದಲೇ , ಜಿ-7 ಸಭೆಯಲ್ಲಿ ಅಧಿಕೃತ ವಚನದ ದಿನವೇ ಜುಬೇರ್ ಬಂಧನವಾದಾಗಲೇ ‘ಈ ವ್ಯಂಗ್ಯಚಿತ್ರಗಾರರಿಗೆ ಇನ್ನು ತಮ್ಮ ಪತ್ರಿಕೆಗಳಿಗೆ ತಮ್ಮ ಅಗತ್ಯವಿಲ್ಲ ಎಂದನಿಸಿದಂತಿದೆ..
“ನನ್ನ ಅಗತ್ಯ ಇಲ್ಲ.. ಜೋಕುಗಳು ತಮ್ಮನ್ನು ತಾವೇ ಬರೆದುಕೊಳ್ಳುತ್ತಿವೆ!”
(ಸಾತ್ವಿಕ್ ಗಡೆ, ದಿ ಹಿಂದು)
ಸುಪ್ರಿಂ ಕೋರ್ಟಿನ ನ್ಯಾಯಾಧೀಶರ ಟಿಪ್ಪಣಿ ಮತ್ತು ಅದರ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ಮನವಿಯ ಸುದ್ದಿಯ ನಂತರ ಈ ಕಳವಳ ಇನ್ನೂ ಬಲವಾಗಿರಬೇಕು.
ಆದರೆ ಈ ಅನಿಸಿಕೆ ನಿಜವೇ? ಕಾರ್ಟೂನಿಗರ ಅಗತ್ಯ ಇರುವುದಿಲ್ಲವೇ?
ದುರಿತ ಕಾಲದಲ್ಲಿ ಹಾಡು ಇರುತ್ತದೆಯೇ?
ಇರುತ್ತದೆ, ದುರಿತ ಕಾಲದ ಕುರಿತ ಹಾಡು ಕೂಡ ಇರುತ್ತದೆ
ಎಂದು 1939ರಲ್ಲಿ ಬರ್ಟೊಲ್ಟ್ ಬ್ರೆಕ್ಟ್ ಹೇಳಿರುವುದು ಹಲವರಿಗೆ ನೆನಪಾಗುತ್ತಿದೆ.