75ನೇ ವರ್ಷಕ್ಕೆ ನಡೆ ಮುಂದೆ…… ಅಥವ ನಡೆ ಹಿಂದೆ….?

ವೇದರಾಜ ಎನ್‌ ಕೆ

ಮತ್ತೊಂದು ಕೆಂಪು ಕೋಟೆ ಭಾಷಣ-‘ಅಚ್ಛೇ ದಿನ್’ ಆರಂಭವಾದ ಮೇಲೆ ಏಳನೆಯದ್ದು, ‘ನ್ಯೂ ಇಂಡಿಯಾ’ ದಲ್ಲಿ ನಾಲ್ಕನೇಯದ್ದು. ಘೋಷಣೆಗಳ ಮತ್ತು ಮಹಾಸ್ಕೀಮುಗಳ ಪ್ರಕಟಣೆಯಿಲ್ಲದೆ ಕೆಂಪುಕೋಟೆ ಭಾಷಣ ಸಾಧ್ಯವೇ? ಈ ಬಾರಿಯೂ ಪ್ರಧಾನ ಮಂತ್ರಿಗಳು ‘ಗತಿ ಶಕ್ತಿ’ ಎಂಬೊಂದು ರಾಷ್ಟ್ರೀಯ ಮೂಲರಚನೆಯ ಮಾಸ್ಟರ್ ಪ್ಲಾನನ್ನು ಆರಂಭಿಸುವುದಾಗಿ ಘೋಷಿಸಿದರು. 100 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಈ ಮಹಾಸ್ಕೀಮ್  ಹೊಸ ಉದ್ಯೋಗಾವಕಾಶಗಳನ್ನೂ ನಿರ್ಮಿಸುತ್ತದೆ ಎಂದರು!

ಆದರೆ ಇದು ಹೊಸ ಯೋಜನೆಯೇನೂ ಅಲ್ಲ, ಎರಡು ವರ್ಷ ಹಳೆಯದಾದ ಸ್ಕೀಮ್ ಎಂದು ಬೇಗನೇ ಎಲ್ಲರಿಗೆ ಗೊತ್ತಾಗಿ ಬಿಟ್ಟಿದೆ. 2019ರಲ್ಲಿ ಅದೇ ಕೆಂಪುಕೋಟೆಯಿಂದ ಸುಮಾರಾಗಿ ಅದೇ ಪದಗಳನ್ನು ಬಳಸಿ ‘ಬರಲಿದೆ’ ಎಂದು ಪ್ರಧಾನ ಮಂತ್ರಿಗಳು ಈ ಮಹಾಯೋಜನೆಯ ಬಗ್ಗೆ ಹೇಳಿದ್ದರು.  ಮುಂದಿನ ಸ್ವಾತಂತ್ರ್ಯ ದಿನದ ವರೆಗೆ ಈ ಬಗ್ಗೆ ಕೇಳಬರಲಿಲ್ಲ. ಮತ್ತೆ 2020ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದಲೇ ಅದರ ಪ್ರಸ್ತಾಪವಾದದ್ದು, ಆ ವೇಳೆಗೆ ಅದು 110 ಲಕ್ಷ ಕೋಟಿಗೆ(ಹಣದುಬ್ಬರದಿಂದಾಗಿ?) ಏರಿತ್ತು. ಈಗ ಮತ್ತೆ 2021 ರಲ್ಲಿ ಅದರ ಪ್ರಸ್ತಾಪವಾಗಿದೆ. ಎರಡು ವ್ಯತ್ಯಾಸಗಳೆಂದರೆ ಅದಕ್ಕೊಂದು ಹೆಸರು ಕೊಡಲಾಗಿದೆ  (ಈಗ ಸಾಮಾನ್ಯವಾಗಿರುವ ಹೆಸರು ಬದಲಾವಣೆಯಲ್ಲ-ಯಾಕೆಂದರೆ ಅದಕ್ಕೆ ಈ ಎರಡು ವರ್ಷ ಹೆಸರೇ ಕೊಟ್ಟಿರಲಿಲ್ಲ), ಎರಡನೆಯದಾಗಿ ಅದರ ಮೊತ್ತ ಮತ್ತೆ 100 ಲಕ್ಷ ಕೋಟಿಗೆ ಇಳಿದಿದೆ(ಈ ನಡುವೆ ಏರಿದ ಹಣದುಬ್ಬರದ ಹೊರತಾಗಿಯೂ)!

ಇತ್ತೀಚೆಗಷ್ಟೇ 87.58 ಮೀ. ದೂರ ಜಾವೆಲಿನ್‍ ಎಸೆದು ಚಿನ್ನದ ಪದಕ ಗಳಿಸಿದ ಹೆಮ್ಮೆಯಲ್ಲಿರುವ ದೇಶಕ್ಕೆ ಸತೀಶ ಆಚಾರ್ಯರವರು ಪ್ರಧಾನಿಗಳ ಈ ಮೂರನೇ ಎಸೆತದ  ‘ಮಹತ್ವ’ವನ್ನು ಚೆನ್ನಾಗಿ ಬಿಂಬಿಸಿದ್ದಾರೆ. (ಶೀರ್ಷಿಕೆಯ ವ್ಯಂಗ್ಯಚಿತ್ರ ಕೃಪೆ: ಆಚಾರ್ಯರವರ ಫೇಸ್‍ ಬುಕ್.)

***

ಈಗಾಗಲೇ ಬಹಳಷ್ಟು ವ್ಯಂಗ್ಯಚಿತ್ರಕಾರರ ಚಿತ್ರಗಳಿಗೆ ವಸ್ತುವಾಗಿರುವ `ಸಬ್‍ ಕಾ ಸಾಥ್ ಸಬ್‍ ಕಾ ವಿಕಾಸ್‍’ಗೆ, ನಂತರ ‘ಸಬ್‍ ಕಾ ವಿಶ್ವಾಸ್’ ಸೇರಿತ್ತು (ವಿಕಾಸ್‍ ಹಿನ್ನೆಲೆಗೆ ಸರಿದುದರಿಂದ ಎಂದು ಕೆಲವರು ಕುಹಕವಾಡಿದ್ದರು). ಈ ಬಾರಿ ಇನ್ನೂ ವಿಸ್ತಾರಗೊಂಡು (ವಿಶ್ವಾಸವೂ ಹಿನ್ನೆಲೆಗೆ ಸರಿದುದರಿಂದ ?) ಅದಕ್ಕೆ  ‘ಸಬ್‍ ಕಾ ಪ್ರಯಾಸ್‍’ ‘ ಸೇರಿಕೊಂಡಿದೆ.

ಸಬ್‍ ಕಾ ಸಾಥ್                  ಸಬ್‍ ಕಾ ವಿಕಾಸ್        ಸಬ್‍ ಕಾ ವಿಶ್ವಾಸ್          ಸಬ್‍ ಕಾ ಪ್ರಯಾಸ್

ಇಲ್ಲ,  ಬೆಲೆಯೇರಿಕೆ ನಿಲ್ಲಬೇಕು, ಕೃಷಿ ಕಾಯ್ದೆ ವಾಪಸ್ಸಾಗಬೇಕು,ಉದ್ಯೋಗ ಬೇಕು, ಅರ್ಥವ್ಯವಸ್ಥೆ ಸುಧಾರಿಸಬೇಕು
-ಇದೇ ‘ಸಬ್‍ ಕಾ ಆಸ್‍’ (ಎಲ್ಲರ ನಿರೀಕ್ಷೆ) ಎಂದು ಜನಗಳು, ಪ್ರಯಾಸ’ವನ್ನು ‘ಎಲ್ಲರ’ ಮೇಲೆ ದಾಟಿಸುವ
ಪ್ರಯತ್ನಕ್ಕೆದುರಾಗಿ ತಮ್ಮದೇ ಘೋಷಣೆಯನ್ನು ಸೇರಿಸುತ್ತಿದ್ದಾರೆ!

(ವ್ಯಂಗ್ಯಚಿತ್ರ: ಇರ್ಫಾನ್, ನ್ಯುಸ್ ಕ್ಲಿಕ್)

***

ಇನ್ನು ಮುಂದೆ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ  ದಿನ, ಅಂದರೆ ಆಗಸ್ಟ್ 14ನ್ನು ದೇಶ ವಿಭಜನೆಯ ಭೀಷಣತೆಗಳ ಸ್ಮರಣೆಯ ದಿನವಾಗಿ ಆಚರಿಸಲಾಗುವುದಂತೆ. “ಭಾರತೀಯರು ಈ ಬಗ್ಗೆ ಭಾವಪೂರ್ಣ ನಿರ್ಧಾರ ಕೈಗೊಂಡಿದ್ದಾರೆ” ಎಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿಗಳು ಹೇಳಿದ್ದಾರೆ. ಇದು ಸರಕಾರದ ನಿರ್ಧಾರವಿರಬಹುದು, ಆದರೆ ಸಮಸ್ತ ಭಾರತೀಯರ ನಿರ್ಧಾರವೇ? ಈ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ನಿಜ, 10 ಲಕ್ಷಕ್ಕೂ ಹೆಚ್ಚು ಜನಗಳ ಸಾಮೂಹಿಕ ಹತ್ಯಾಕಾಂಡವನ್ನು ಮರೆಯಲು ಸಾಧ್ಯವಿಲ್ಲ, ಆದರೆ ಜತೆಗೆ ಅದು ಏಕಾಯಿತೆಂದೂ ಮರೆಯಲು ಸಾಧ್ಯವಿಲ್ಲವಲ್ಲ.

ಪ್ರಧಾನಿಗಳು ಯಾವ ವಿಭಜನೆಯ ನೋವಿನ ಬಗ್ಗೆ ಮಾತಾಡುತ್ತಿದ್ದಾರೆ? ಆಗಿ ಹೋಗಿರುವುದರ ಬಗ್ಗೆಯೋ, ಅಥವ ಆಗುತ್ತಿರುವ ಬಗ್ಗೆಯೋ ಎಂಬ ಇರ್ಫಾನ್(ನ್ಯುಸ್ ಕ್ಲಿಕ್) ಜಿಜ್ಞಾಸೆ ಬಹಳಷ್ಟು ಜನಗಳ ಜಿಜ್ಞಾಸೆ ಕೂಡ.

ಆಗುತ್ತಿರುವುದನ್ನು ತಪ್ಪಿಸುವ ಬಗ್ಗೆ ಯೋಚಿಸದೆ ಅಗಿರುವುದನ್ನು ನೆನಪಿಸಿಕೊಳ್ಳುವುರಿಂದ ದೇಶಕ್ಕೆ ಪ್ರಯೋಜನವಾದರೂ ಏನು?

***

ಸಮಯವೇ ಎಲ್ಲ ನೋವುಗಳನ್ನೂ ಗುಣಪಡಿಸುತ್ತದೆ ಎನ್ನುತ್ತಾರೆ, ಆದರೆ ಅದು ನೀವು ಸಮಯದೊಂದಿಗೆ ಮುಂದೆ ಸಾಗಿದಾಗ ಮಾತ್ರ, ಅದಕ್ಕೇ ಆತುಗೊಂಡಿದ್ದಾಗ ಅಲ್ಲ ಎಂದು ನೆನಪಿಸುತ್ತಾರೆ ಮಂಜುಲ್‍ (ಫಸ್ಟ್ ಪೋಸ್ಟ್)

ವಿಭಜನೆಯೊಂದಿಗೆ ಜನ್ಮ ತಳೆದ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 14ರಂದು ನಡೆಸಲಾಗುತ್ತದೆ ಎಂಬುದನ್ನು ಈಗಿನ ಪರಿಸರದಲ್ಲಿ ನೆನಪಿಸಿಕೊಳ್ಳದೆ ಇರಲು ಸಾಧ್ಯವಿಲ್ಲ… ಈ ಸಂದರ್ಭದಲ್ಲಿ “ಭೂತಕಾಲಕ್ಕೆ ನಿಮ್ಮನ್ನು ಮತ್ತೆ-ಮತ್ತೆ ಎಳೆದೊಯ್ಯುವ ಒಬ್ಬ ಮುಖಂಡರು ನಿಮ್ಮನ್ನು ಭವಿಷ್ಯದತ್ತ ಒಯ್ಯಲು ಅಸಮರ್ಥರು ಎಂಬುದು ಸ್ಪಷ್ಟ”  ಎಂದೊಬ್ಬರು ಟಿಪ್ಪಣಿ ಮಾಡಿದ್ದಾರೆ.

ಟೈಮ್ಸ್‌ ಆಫ್ ಇಂಡಿಯಾದ ಮುಖ್ಯ ವ್ಯಂಗ್ಯಚಿತ್ರಕಾರ ಸಂದೀಪ ಅಧ್ವರ್ಯು ರವರ ಈ ವ್ಯಂಗ್ಯಚಿತ್ರ ಸುಮಾರಾಗಿ ಅದನ್ನೇ ಹೇಳುವಂತಿದೆ:

ವಾವ್!! ( ಭವ್ಯ ಭೂತಕಾಲ)           ಧಿಕ್ಕಾರ(ಭೀಕರ ಭೂತಕಾಲಕ್ಕೆ)

ಭವಿಷ್ಯ…?

***

ವಿಭಜನೆಯ ಭೀಕರತೆಯನ್ನು ತೋರಿಸಬೇಕೆಂದಿದ್ದೀರಾ? ಭೂತಕಾಲವನ್ನು ಮರೆತು ಬಿಡಿ ಸಾರ್, ನನಗೆ ಬೇಕಾಗಿರುವುದು ಒಂದು ಭವ್ಯ ಭವಿಷ್ಯ  ಎನ್ನುತ್ತಾರೆ ಸುಭಾನಿ (ಡೆಕ್ಕನ್‍ ಕ್ರಾನಿಕಲ್)ಯವರ ವ್ಯಂಗ್ಯಚಿತ್ರದ ಈ ಜನಸಾಮಾನ್ಯ

***

ಪ್ರಸ್ತುತ ಸಾಕಷ್ಟು ಭೀಕರತೆ ನಮ್ಮೆದುರು ಇರುವಾಗ  ಇದೂ ಬೇಕೇ, ಪ್ರಧಾನ ಮಂತ್ರಿಗಳೇ  ಎಂದು ಸಕಾಳ್ ‍ಮಾಧ್ಯಮ ಗುಂಪಿನ ವ್ಯಂಗ್ಯಚಿತ್ರಕಾರ ಅಲೋಕ್‍ ನಿರಂತರ್ ರವರ ಕಾರ್ಟೂನಿನ ಈ ವ್ಯಕ್ತಿ ಕೂಡ ಕೇಳುತ್ತಾರೆ.

***

ಇಂದಿನ ಸಂದಿಗ್ಧ ಕಾಲಘಟ್ಟದಲ್ಲಿ, ಅದೂ ದಿಲ್ಲಿಯಲ್ಲಿ ಆಗಸ್ಟ್ 8ರಂದು ಮತ್ತು ಕಾನ್ಪುರದಲ್ಲಿ ಆಗಸ್ಟ್ 12ರಂದು ನಡೆದ ತೀರಾ ಇತ್ತಿಚಿನ ಘಟನೆಗಳ ಹಿನ್ನೆಲೆಯಲ್ಲಂತೂ ಈ ಎಲ್ಲ ಪ್ರಶ್ನೆಗಳು  ಖಂಡಿತಾ ಅಪ್ರಸ್ತುತ ಅಲ್ಲ.

***

ಈ ಬಾರಿಯ ‘ಕ್ವಿಟ್‍ ಇಂಡಿಯಾ’ ದಿನಾಚರಣೆಯ ಹಿಂದಿನ ದಿನ, ಆಗಸ್ಟ್ 8ರಂದು ದೇಶದ ರಾಜಧಾನಿಯಲ್ಲಿ “ರಾಷ್ಟ್ರೀಯವಾದಿಗಳು” ಎಂದು ಹೇಳಿಕೊಳ್ಳುವ ಸಂಘಟನೆಗಳು ‘ಬ್ರಿಟಿಶ್‍ ಹಿತಾಸಕ್ತಿಯಿಂದ ತಂದಿರುವ 222 ಕರಾಳ ಶಾಸನಗಳನ್ನು ರದ್ದು ಮಾಡಬೇಕು” ಎಂದು ಆಗ್ರಹಿಸುವ ಹೆಸರಿನಲ್ಲಿ ಜಂತರ್ ಮಂತರ್ ನಲ್ಲಿ ನಡೆದ ಸಭೆಯೊಂದರಲ್ಲಿ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದವರ ಹತ್ಯಾಕಾಂಡ ನಡೆಸಬೇಕು ಎಂಬಿತ್ಯಾದಿ ದ್ವೇಷಕಾರುವ ಕೂಗುಗಳು ಬಹಿರಂಗವಾಗಿಯೇ ಕೇಳಬಂದವು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಜಂತರ್ ಮಂತರ್ ನಲ್ಲಿ ಸಭೆ ನಡೆಸಲು ದಿಲ್ಲಿ ಪೋಲೀಸರ ತೀವ್ರ ನಿರ್ಬಂಧಗಳಿವೆ. ಅಲ್ಲಿ ದೇಶದೆಲ್ಲೆಡೆಗಳಿಂದ ಬಂದ ವಿದ್ಯುತ್‍ ನೌಕರರು ಮತಪ್ರದರ್ಶನ ನಡೆಸಲು ಬಿಟ್ಟಿರಲಿಲ್ಲ, ರೈತರು ‘ಕಿಸಾನ್‍ ಸಂಸದ್‍’ ನಡೆಸಲೂ ತೀವ್ರ ನಿರ್ಬಂಧಗಳನ್ನು ಹಾಕಲಾಗಿತ್ತು, ಆದರೂ ಈ ಸಭೆಗೆ ಪೂರ್ವಾನುಮತಿ ಇಲ್ಲದಿದ್ದರೂ ಪೋಲಿಸರಿಂದ ಯಾವ ನಿರ್ಬಂಧವೂ ವ್ಯಕ್ತಗೊಳ್ಳಲಿಲ್ಲ ಎಂಬ ವರದಿಗಳೂ ಇವೆ.

ಮಂಜುಲ್‍ ರವರ ಈ ವ್ಯಂಗ್ಯಚಿತ್ರ(ಫಸ್ಟ್ ಪೋಸ್ಟ್ ನಲ್ಲಿ) ಈ ವಿದ್ಯಮಾನವನ್ನು ತೆರೆದಿಟ್ಟಿದೆ:

“……ಆ ಎಲ್ಲ ಘೋಷಣೆಗಳು ದ್ವೇಷ ಪೂರಿತವಾಗಿದ್ದವು”

“ಹೌದು, ನಾನೂ ಅದನ್ನೇ ಯೋಚಿಸುತ್ತಿದ್ದೆ.”  “ನಾವು ಅವರನ್ನು ಪತ್ತೆ ಹಚ್ಚಬೇಕೆಂದು ಬಯಸುತ್ತೀರಲ್ಲವೇ?”

“ಖಂಡಿತಾ” “ಮತ್ತು ಯು.ಎ.ಪಿ.ಎ. ಅಥವಾ ಎನ್‍.ಎಸ್‍.ಎ. ಅಡಿಯಲ್ಲಿ ಚಾರ್ಜಿಶೀಟ್‍?”
“ಓ…ಚಾರ್ಜ್ ಶೀಟಾ? ಅವರಿಗೆ ಚುನಾವಣೆಯಲ್ಲಿ ಟಿಕೆಟ್‍ ಕೊಡುವ ಬಗ್ಗೆ ಯೋಚಿಸುತ್ತಿದ್ದೆ!”

(ಮಂಜುಲ್, ಫಸ್ಟ್ ಪೋಸ್ಟ್)

***

ಆಗಸ್ಟ್ 12ರಂದು ಕಾನ್ಪುರದಲ್ಲಿ ನಡೆದ ಘಟನೆಯ ಬಗ್ಗೆ ‘ಸ್ಯಾನಿಟರಿ ಪ್ಯಾನಲ್ಸ್’ನ ಈ ವ್ಯಂಗ್ಯಚಿತ್ರ ನೋಡಿ:

”ಕಾನ್ಪುರದಲ್ಲಿ ಒಬ್ಬನನ್ನು ಥಳಿಸುತ್ತಿರುವ, ಆತನ ಮಗಳು ಅಳುತ್ತಿದ್ದ ಭೀಕರ ದೃಶ್ಯವನ್ನು ನೋಡಿದ್ದೀಯಾ?”
“ಅದು ಹೃದಯವಿದ್ರಾವಕ, ಇದು ನನ್ನ ಭಾರತ ಅಲ್ಲ”

“ಆದರೆ, ನೀವು ಚುನಾಯಿಸಿರುವ ಭಾರತ ಇದೇ”

***

ಇದಕ್ಕೆ ಮೊದಲು, ಕಳೆದ ತಿಂಗಳ ತನ್ನ ಮನದ ಮಾತಿನಲ್ಲಿ ಪ್ರಧಾನಿಗಳು ಬ್ರಿಟಿಷರ ವಿರುದ್ಧ ಭುಗಿಲೆದ್ದ “ಭಾರತ್ ಛೋಡೋ” ಘೋಷಣೆಯ ನೆನಪಿನಲ್ಲಿ ಈಗ “ಭಾರತ್ ‍ಜೋಡೋ” ಕರೆ ನೀಡಿದ್ದರು. ಆಗ ಮಂಜುಲ್(ವೈಬ್ಸ್ ಆಫ್‍ ಇಂಡಿಯಾ.ಕಾಂ) ರವರು ಮಾಡಿದ ಈ ಕಾರ್ಟೂನ್ ನೋಡಿ -‘ಭಾರತವನ್ನು ಹೋಡಿಸಿಕೊಳ್ಳಿ!!’:

ಭಾರತವನ್ನು ಜೋಡಿಸಲು “ಕಪಿಲ್ ಮಿಶ್ರಾ ಅಂಟು”, “ಅನುರಾಗ್‍ ಠಾಕುರ್ ಗೋಂದು”(ಇಬ್ಬರೂ ದಿಲ್ಲಿಯ ಗೋಲೀ ಮಾರೋ ‘ಖ್ಯಾತಿ’ಯವರು-ಒಬ್ಬರು ಕೇಂದ್ರ ಮಂತ್ರಿಯೂ ಆಗಿದ್ದಾರೆ), ದೀದಿ-ಒ-ದೀದಿ, ರಾಮ್ಜಾದೆ ಇತ್ಯಾದಿ ಇತ್ಯಾದಿ!!

ಬಹುಶಃ ಇದಕ್ಕೆ ಈಗ ಭಾರತದ ಒಲಿಂಪಿಕ್ ಹಾಕಿ ಆಟಗಾರ್ತಿಯ ಮನೆಯೆದುರು, ಆಕೆಯ ಕುಟುಂಬದವರ ವಿರುದ್ಧ ನಡೆಸಿದ ದಾಂಧಲೆಯನ್ನೂ ಸೇರಿಸಬಹುದು. ಇಂತಹ  ಪ್ರಸಕ್ತ ಭೀಕರತೆಗಳ ಪ್ರಸ್ತಾಪ  ಭಾರತ್ ‍ಜೋಡೋ ಕರೆ ನೀಡಿದ ಅದೇ ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಕೇಳ ಬರಲಿಲ್ಲ.

***

ದಿಲ್ಲಿಯ ಆಗಸ್ಟ್ 8ರ ದ್ವೇಷ ಪ್ರಚಾರದ ಘಟನೆಯ ಸಂಘಟಕರ ಬಗ್ಗೆ ಪೂರ್ಣ ವಿವರಗಳಿದ್ದರೂ ದಿಲ್ಲಿ ಪೋಲೀಸ್ “ಅಜ್ಞಾತ” ವ್ಯಕ್ತಿಗಳ ಮೇಲೆ ಎಫ್‍ಐಆರ್ ಹಾಕಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಈ ವ್ಯಂಗ್ಯಚಿತ್ರ ವ್ಯಕ್ತಪಡಿಸುವ ಭಯ ಅವಾಸ್ತವ ಅಥವ ಉತ್ಪ್ರೇಕ್ಷಿತ ಎನ್ನಬಹುದೇ?

ತನ್ನನ್ನು ಕಾಡುತ್ತಿರುವ “ಅಜ್ಞಾತದ ಭಯ”ದ ಕಾಯಿಲೆಗೆ ಔಷಧಿ ಕೊಡಿ, ಡಾಕ್ಟ್ರೇ,  ಎಂದು ಗಾಂಧೀಜಿ ಡಾ. ಅಂಬೇಡ್ಕರ್ ಅವರನ್ನು ಕೇಳಿದರೆ, ಅವರು ತನಗೂ ಈ ಭಯವಿರುವಂತೆ ಕಾಣುತ್ತದೆ ಎನ್ನುತ್ತಿದ್ದಾರೆ.

(ಸಂದೀಪ್‍ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ)

***

ಈ ‘ಅಜ್ಞಾತದ ಭಯ’ದ ಸಂದರ್ಭದಲ್ಲಿ ಸಜಿತ್‍ ಕುಮಾರ್ (ಡೆಕ್ಕನ್‍ ಹೆರಾಲ್ಡ್‌) ರವರ ಈ ವ್ಯಂಗ್ಯಚಿತ್ರ ಬಹಳ ಮಾರ್ಮಿಕವಾಗಿದೆ.

ಸ್ವತಂತ್ರ ಭಾರತ ಮೊದಲ ವರ್ಷವನ್ನು ಪ್ರವೇಶಿಸುತ್ತಿದ್ದಾಗ ಗಾಂಧೀಜಿ ದಿಲ್ಲಿಯಲ್ಲಿ ಇರಲಿಲ್ಲ, ದೂರದ ಕೊಲ್ಕತಾದಲ್ಲಿ ಕೋಮುದಂಗೆ ಪೀಡಿತರ ನಡುವೆ ಇದ್ದರಂತೆ. ಈಗ ಸ್ವತಂತ್ರ ಭಾರತ 75ನೇ ವರ್ಷವನ್ನು ಪ್ರವೇಶಿಸುತ್ತಿರುವಾಗ “ನನ್ನ ಬದುಕೇ ನನ್ನ ಸಂದೇಶ” ಎಂದು ಸಾರುವ ಅವರ ಪ್ರತಿಮೆ ‘ಸೆಂಟ್ರಲ್ ವಿಸ್ತಾ’ ರಚನೆಗಾಗಿ ಮೂವರ್ಸ್‍ ಅಂಡ್ ‍ಪ್ಯಾಕರ್ಸ್‍ ಕೈಗಳಿಗೆ ಹೋಗಿರುವುದು ಕೇವಲ ಕಾಕತಾಳೀಯ ಎನ್ನಬಹುದೇ?

***

‘ನ್ಯೂ ಇಂಡಿಯಾ’ದಲ್ಲಿ ಆರಂಭವಾದ ಚುನಾವಣಾ ಬಾಂಡುಗಳ ಕಳೆದ ಮೂರು ವರ್ಷಗಳ ದಾಖಲೆಯಲ್ಲಿ ಈಗಿನ ಆಳುವ ಪಕ್ಷದ ಪಾಲು 10 ಪಟ್ಟು ಹೆಚ್ಚಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. 2019-20ರಲ್ಲಿ ಮಾರಾಟವಾದ ಚುನಾವಣಾ ಬಾಂಡುಗಳಲ್ಲಿ 74% ಈ ಪಕ್ಷಕ್ಕೆ ಹೋಗಿದೆಯಂತೆ. ಅದೀಗ ಒಟ್ಟು ರೂ.3501 ಕೋಟಿ ರೂ. (ಬ್ಯಾಂಕ್‍ ಖಾತೆಗಳಲ್ಲಿ ಮತ್ತು ನಗದು) ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಪಕ್ಷ (ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ 2019-20ರ ಆಡಿಟ್ ಅಕೌಂಟ್‍ ಪ್ರಕಾರ)

(ಪಿ.ಮಹಮ್ಮದ್, ವಾರ್ತಾಭಾರತಿ)

ಭಾರತ ಬಡಜನಗಳಿಂದ ತುಂಬಿರುವ ಶ್ರೀಮಂತ ದೇಶ ಎನ್ನಲಾಗುತ್ತಿತ್ತು. ಈಗ ಅದು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ದೊಡ್ಡ ಸಾಲಹೊರೆಯೊಂದಿಗೆ  ಅತ್ಯಂತ ಶ್ರೀಮಂತ ಪಕ್ಷದ ಆಳ್ವಿಕೆಯಲ್ಲಿ  ಪ್ರವೇಶಿಸುತ್ತಿದೆ!

Donate Janashakthi Media

Leave a Reply

Your email address will not be published. Required fields are marked *