ಬಂಡವಾಳಶಾಹಿಯನ್ನು ಅಂದಗೊಳಿಸುವ ಯತ್ನ ಅಂತರ್ಗತ ಬಿಕ್ಕಟ್ಟನ್ನು ನಿವಾರಿಸಲಾರದು

ಪ್ರೊ.ಪ್ರಭಾತ್ ಪಟ್ನಾಯಕ್

ಮೂರನೇ ಜಗತ್ತು ನವ ಉದಾರವಾದಿ ವ್ಯವಸ್ಥೆಯನ್ನು ಅಂಗೀಕರಿಸುವಂತೆ ತೋಳು-ತಿರುಚಿದ, ಮುಂದುವರೆದ ಬಂಡವಾಳಶಾಹಿ ದೇಶಗಳೇ ಈಗ ಅದೇ ನವ ಉದಾರವಾದಿ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಆಮದುಗಳಿಂದ ತಮ್ಮ ಅರ್ಥವ್ಯವಸ್ಥೆಗಳನ್ನು ಸಂರಕ್ಷಿಸಿಕೊಳ್ಳುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡವು.

ಮೂರನೇ ಜಗತ್ತು ನವ ಉದಾರವಾದಿ ವ್ಯವಸ್ಥೆಯನ್ನು ಅಂಗೀಕರಿಸುವಂತೆ ತೋಳು-ತಿರುಚಿದ, ಮುಂದುವರೆದ ಬಂಡವಾಳಶಾಹಿ ದೇಶಗಳೇ ಈಗ ಅದೇ
ನವ ಉದಾರವಾದಿ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಆಮದುಗಳಿಂದ ತಮ್ಮ ಅರ್ಥವ್ಯವಸ್ಥೆಗಳನ್ನು ಸಂರಕ್ಷಿಸಿಕೊಳ್ಳುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡಿವೆ. ಅವು ನಿರ್ದಿಷ್ಟವಾಗಿ ಗುರಿಯಿಟ್ಟಿರುವುದು ರಫ್ತು-ಆಧಾರಿತ ಬೆಳವಣಿಗೆಗೆ ಉಜ್ವಲ ಉದಾಹರಣೆಯಾಗಿರುವ ಚೀನಾವನ್ನು. ಆದರೆ ಚೀನಾಕ್ಕೆ ಇದರಿಂದ ಬಹಳಷ್ಟೇನೂ ತೊಂದರೆಯಾಗುವಂತೆ ಕಾಣುತ್ತಿಲ್ಲ; ಇತ್ತ ಈ ಸಂರಕ್ಷಣಾವಾದಕ್ಕೆ ಮೊರೆಹೋಗುವ ಧೋರಣೆಯೂ ಬಂಡವಾಳಶಾಹಿಯ ಅಂತರ್ಗತ ಬಿಕ್ಕಟ್ಟನ್ನು ನಿವಾರಿಸಲಾರದು.

ಉದಾರವಾದಿ ಬೂರ್ಜ್ವಾ ಬರಹಗಾರರು ಬಂಡವಾಳಶಾಹಿಯ ಅಡಿಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ವ್ಯವಸ್ಥೆಯ ಅಂತರ್ಗತ ಪ್ರವೃತ್ತಿಯಿಂದ ವಿವರಿಸಲು ಹೋಗುವುದಿಲ್ಲ, ಬದಲಿಗೆ ಎಲ್ಲಾ ಸಮಸ್ಯೆಗಳು ನಿರ್ದಿಷ್ಟ ಸರ್ಕಾರಗಳ ಚಪಲತೆಯಿಂದಾಗಿ ಎನ್ನುತ್ತಾರೆ. ಈ ರೀತಿಯಾಗಿ ಅವರು ತಮ್ಮ ಬಂಡವಾಳಶಾಹಿ ಮುದ್ದಾಗಿ ಕಾಣಿಸುವಂತೆ ಸಿಂಗರಿಸುವ ತಮ್ಮ ಸುಳ್ಳು ಸಿದ್ಧಾಂತಗಳನ್ನು ತಾವೇ ನಂಬುವುದನ್ನು ಮುಂದುವರಿಸುತ್ತಲೇ, ಅದು ಉಂಟುಮಾಡುವ ಸಂಕಷ್ಟಗಳಿಗೆ ರಾಜಕೀಯ ಹುಚ್ಚುತನವೇ ಕಾರಣ ಎಂದು ದೂಷಿಸುತ್ತಾರೆ. ಅಂತಹ ಅಂದಗಾಣಿಸುವ ಒಂದು ಉದಾಹರಣೆಯೆಂದರೆ, ಅದು ಅಂತರಾಷ್ಟ್ರೀಯ ವ್ಯಾಪಾರವನು ಎಲ್ಲರಿಗೂ ಪ್ರಯೋಜನಕಾರಿಯಾಗಿರುವ ವ್ಯವಸ್ಥೆ ಎಂದು ಚಿತ್ರಿಸುವುದು.

ಶತಮಾನಗಳ ಕಾಲ ವಸಾಹತುಶಾಹಿಯು ತಾನು ವಶಪಡಿಸಿಕೊಂಡ ದೇಶಗಳ ಅರ್ಥವ್ಯವಸ್ಥೆಯನ್ನು ಹಾಳುಗೆಡವಿ, ಅವುಗಳ ಮೇಲೆ ಒಂದು ಶೋಷಕ ವ್ಯಾಪಾರ ಸಂಬಂಧವನ್ನು ಹೇರಿ ಬಡತನ, ನಿರುದ್ಯೋಗ ಮತ್ತು ಅನಭಿವೃದ್ಧಿಗೆ ಕಾರಣವಾಗಿರುವಾಗ ಅದನ್ನು ಮುದ್ದಾಗಿ ಕಾಣುವಂತೆ ಚಿತ್ರಿಸಲು ಸಾಧ್ಯವೇ ಇಲ್ಲ. ಆದರೆ ಬೂರ್ಜ್ವಾ ಅರ್ಥಶಾಸ್ತ್ರದಲ್ಲಿ ವಸಾಹತುಶಾಹಿಯೆಂಬುದು ಎಲ್ಲೂ ಕಾಣಿಸದು ತಾನೇ!

ಅಂತರರಾಷ್ಟ್ರೀಯ ವ್ಯಾಪಾರವು ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ ಎಂಬ ನಂಬಿಕೆಯ ಬುಡದಲ್ಲಿರುವ ಹಲವು ಗ್ರಹಿಕೆಗಳಲ್ಲಿ ಒಂದೆಂದರೆ, ವ್ಯಾಪಾರದ ಮೊದಲು ಮತ್ತು ನಂತರ ಎಲ್ಲಾ ಉತ್ಪಾದನೆಯ ಅಂಶಗಳ (ಶ್ರಮವನ್ನು ಒಳಗೊಂಡಂತೆ) ಸಂಪೂರ್ಣ ಬಳಕೆಯಾಗುವುದು ಎಲ್ಲ ದೇಶಗಳ ಅನುಭವಕ್ಕೆ ಬರುತ್ತದೆ ಎಂಬುದು.

ವ್ಯಾಪಾರವು ಈ ಮೊದಲು ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಬಳಸಿ ಉತ್ಪಾದಿಸಿದ ವಸ್ತುಗಳ ಸಂಚಯದಲ್ಲಿ ಒಂದು ಬದಲಾವಣೆಯನ್ನಷ್ಟೇ ತರುತ್ತದೆ. ಈ ಬದಲಾವಣೆಯಲ್ಲಿ ಪ್ರತಿ ದೇಶವು ತುಲನಾತ್ಮಕ ಪ್ರಯೋಜನವನ್ನು ಹೊಂದಿರುವ ಸರಕುಗಳ ಉತ್ಪಾದನೆಯಲ್ಲಿನ ಹೆಚ್ಚಿನ ಪ್ರಾವೀಣ್ಯತೆಯ ಪಾತ್ರ ಇರುತ್ತದೆ. ಆದ್ದರಿಂದ ವ್ಯಾಪಾರದ ಮೂಲಕ, ಒಟ್ಟಾಗಿ ಪ್ರಪಂಚದ ಉತ್ಪಾದನೆಯು ಹೆಚ್ಚಾಗುತ್ತದೆ ಮತ್ತು ಇದು ಎಲ್ಲಾ ದೇಶಗಳು ವ್ಯಾಪಾರದಿಂದ ಲಾಭ ಪಡೆಯುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಈ ಪರಿಸ್ಥಿತಿಯಲ್ಲಿ ಯಾವುದೇ ದೇಶಕ್ಕೆ ಅತ್ಯಂತ ಕೆಟ್ಟ ಸಂಭವವೆಂದರೆ, ಅದು ವ್ಯಾಪಾರದಿಂದ ಲಾಭ ಪಡೆಯದಿರಬಹುದು; ಆದರೆ ಅದರಿಂದ ನಷ್ಟ ಅನುಭವಿಸಲು ಯಾವುದೇ ಕಾರಣವಿಲ್ಲ ಎನ್ನಲಾಗುತ್ತದೆ.

ನಿರುದ್ಯೋಗದ ರಫ್ತು

ಆದರೆ, ವ್ಯಾಪಾರದ ಮೊದಲಾಗಲೀ, ನಂತರವಾಗಲೀ ಎಲ್ಲಾ ಅಂಶಗಳ ಸಂಪೂರ್ಣ ಬಳಕೆಯಂತೂ ದೂರ, ಬಂಡವಾಳಶಾಹಿಯೇ ಸದಾ ಬೇಡಿಕೆ ನಿರ್ಬಂಧಿತವಾಗಿರುತ್ತದೆ, ಸುಮಾರಾಗಿ ಸದಾಕಾಲವೂ ಅತಿ-ಉತ್ಪಾದನೆಯಿಂದ ಬಳಲುತ್ತಿರುತ್ತದೆ. ಇದನ್ನು ಒಬ್ಬ ಅಪರೂಪದ ಉದಾರವಾದಿ ಬೂರ್ಜ್ವಾ ಅರ್ಥಶಾಸ್ತ್ರಜ್ಞರೇ, ಅಂದರೆ ಜಾನ್ ಮೇನಾರ್ಡ್ ಕೇನ್ಸ್ ಗುರುತಿಸಿದ್ದರು. ಅವರು ಈ ಅತಿ- ಉತ್ಪಾದನೆಯನ್ನು “ಅನೈಚ್ಛಿಕ ನಿರುದ್ಯೋಗ” ಎಂದು ಕರೆದಿದ್ದಾರೆ.

ಅಂತಹ ಸಂದರ್ಭದಲ್ಲಿ ವ್ಯಾಪಾರವು ಪ್ರಾಥಮಿಕವಾಗಿ ಆ ವ್ಯಾಪಾರದ ಪಾಲುದಾರರಿಗೆ ನಿರುದ್ಯೋಗವನ್ನು ರಫ್ತು ಮಾಡುವ ಸಾಧನವಾಗುತ್ತದೆ, ಹೆಚ್ಚುವರಿ ರಫ್ತು ಇದನ್ನು ಮಾಡುತ್ತದೆ. ಬೇಡಿಕೆಯ ನಿರ್ಬಂಧ ಹೆಚ್ಚು ಬಲಯುತವಾಗಿದ್ದಷ್ಟು ಮತ್ತು ನಿರುದ್ಯೋಗದ ಪರಿಸ್ಥಿತಿಯು ಹೆಚ್ಚು ತೀವ್ರವಾಗಿದ್ದಷ್ಟು, ದೇಶಗಳ ನಡುವೆ ನಿರುದ್ಯೋಗವನ್ನು ಪರಸ್ಪರ ರಫ್ತು ಮಾಡಲು ಹೋರಾಟವೂ ಹೆಚ್ಚಾಗುತ್ತದೆ. ಈ ಹೋರಾಟದಲ್ಲಿ, ನಿರುದ್ಯೋಗವನ್ನು ಸ್ವತಃ ಬಂಡವಾಳಶಾಹಿಯಾಗಿರದ ದೇಶಗಳಿಗೂ ರಫ್ತುಮಾಡಲು ಪ್ರಯತ್ನಿಸಲಾಗುತ್ತದೆ.

ನವ-ಉದಾರವಾದೀ ವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳ ಹರಿವು ಬಹಳಷ್ಟು ಅನಿಯಂತ್ರಿತವಾಗಿರುತ್ತದೆ, ಹಣಕಾಸು ಮತ್ತು ಬಂಡವಾಳ ಕೂಡ ದೇಶದ ಗಡಿಗಳನ್ನು ದಾಟಿ ಅನಿಯಂತ್ರಿತವಾಗಿ ಹರಿಯಲು ಬಿಡುವ ಈ ವ್ಯವಸ್ಥೆಯನ್ನು ವ್ಯಾಪಾರವು ಎಲ್ಲರಿಗೂ ಲಾಭದಾಯಕವಾಗಿದೆ ಎಂಬ ಬೂರ್ಜ್ವಾ ತರ್ಕದ ಮೇಲೆಯೇ ಸ್ಥಾಪಿಸಲಾಗಿದೆ, ಆದ್ದರಿಂದ ಅದು ಎಲ್ಲರಿಗೂ ಪ್ರಯೋಜನಕಾರಿ ಎಂದು ಭಾವಿಸಲಾಗಿದೆ.

ಇದನ್ನೂ ಓದಿ:ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನೇನಿದೆ? | ಇಲ್ಲಿ ಕ್ಲಿಕ್ ಮಾಡಿ

ಆದರೆ ಅಮೆರಿಕಾದ ವಸತಿ ಗುಳ್ಳೆಯ ಕುಸಿತದ ನಂತರ ವಿಶ್ವ ಅರ್ಥವ್ಯವಸ್ಥೆಯು ಅತಿ-ಉತ್ಪಾದನೆಯ ದೀರ್ಘಾವಧಿಯ ಬಿಕ್ಕಟ್ಟಿಗೆ ಸಿಲುಕಿದ (ಅಂದರೆ, ಗಂಭೀರವಾದ ಬೇಡಿಕೆಯ ಕೊರತೆಯನ್ನು ಅನುಭವಿಸಿದ) ನಂತರ, ಪ್ರತಿ ದೇಶದಲ್ಲೂ ಸರಕುಗಳ ಆಮದುಗಳಿಂದ ತಮ್ಮ ಅರ್ಥವ್ಯವಸ್ಥೆಯನ್ನು ಸಂರಕ್ಷಿಸಿಕೊಳ್ಳುವ ಆಟವು ಜೋರಾಗಿಯೇ ಪ್ರಾರಂಭವಾಯಿತು. ಇದುವರೆಗೆ ಆಮದು ಮಾಡಿಕೊಳ್ಳಲಾಗುತ್ತಿದ್ದ ಸರಕುಗಳನ್ನು ತಮ್ಮಲ್ಲಿಯೇ ಉತ್ಪಾದಿಸುವುದು ಮತ್ತು ಆ ಮೂಲಕ ವಿದೇಶಗಳಲ್ಲಿ ಉದ್ಯೋಗವನ್ನು ಬಲಿಗೊಟ್ಟು ದೇಶೀಯ ಉದ್ಯೋಗವನ್ನು ಹೆಚ್ಚಿಸುವುದು (ಅಂದರೆ ಅವರಿಗೆ ನಿರುದ್ಯೋಗವನ್ನು ರಫ್ತು
ಮಾಡುವುದು).

ಮೂರನೇ ಜಗತ್ತು ನವ ಉದಾರವಾದಿ ವ್ಯವಸ್ಥೆಯನ್ನು ಅಂಗೀಕರಿಸುವಂತೆ ತೋಳು-ತಿರುಚಿದ, ಮುಂದುವರೆದ ಬಂಡವಾಳಶಾಹಿ ದೇಶಗಳೇ ಈಗ ಅದೇ ನವ ಉದಾರವಾದಿ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಆಮದುಗಳಿಂದ ತಮ್ಮ ಅರ್ಥವ್ಯವಸ್ಥೆಗಳನ್ನು ಸಂರಕ್ಷಿಸಿಕೊಳ್ಳುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡವು. ಅವು ನಿರ್ದಿಷ್ಟವಾಗಿ ಗುರಿಯಿಟ್ಟಿರುವುದು ರಫ್ತು-ಆಧಾರಿತ ಬೆಳವಣಿಗೆಗೆ ಉಜ್ವಲ ಉದಾಹರಣೆಯಾಗಿದ್ದ ಚೀನಾವನ್ನು. ಅಂತಹ ರಫ್ತುಗಳನ್ನು ಚೀನಾ ಸಾಧಿಸಿದ್ದು ಕೂಡ ಗಮನಾರ್ಹ ಮಟ್ಟದ ವರೆಗೆ ಚೀನಾದಲ್ಲೇ ನೆಲೆಯಿರುವ ಮುಂದುವರೆದ ಬಂಡವಾಳಶಾಹಿ ದೇಶಗಳ ಬಂಡವಾಳದ ಆಶ್ರಯದಲ್ಲೇ, ಅವರಿಗೇ ರಫ್ತುಮಾಡುವ ಮೂಲಕ.

ಅತಿ-ಉತ್ಪಾದನೆಯ ಬಿಕ್ಕಟ್ಟು

ಪಾಶ್ಚಿಮಾತ್ಯ ಉದಾರವಾದಿ ಬೂರ್ಜ್ವಾ ಅರ್ಥಶಾಸ್ತ್ರಜ್ಞರು ಚೀನೀ ಸರಕುಗಳ ವಿರುದ್ಧ ಸಂರಕ್ಷಣಾವಾದಿ ಧೋರಣೆಗೆ ಕಾರಣ ಚೀನಾದ ವಿರುದ್ಧದ ರಾಜಕೀಯ ಹುಚ್ಚುತನ ಮತ್ತು ಇದರಿಂದಾಗಿಯೇ ಪಾಶ್ಚಿಮಾತ್ಯ ದೇಶಗಳು ನವ-ಉದಾರವಾದ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಸಮಜಾಯಿಷಿ ಕೊಡುತ್ತಾರೆ. ಆದರೆ, ವಾಸ್ತವವಾಗಿ, ಇದು ಅತಿ-ಉತ್ಪಾದನೆಯ ಬಿಕ್ಕಟ್ಟು, ಇದು ಬಂಡವಾಳಶಾಹಿಯಲ್ಲೇ ಅಂತರ್ಗತವಾಗಿರುವ ಪ್ರವೃತ್ತಿಗಳ ಪರಿಣಾಮವೇ ಹೊರತು, ಚೀನಾವನ್ನು ಶಿಕ್ಷಿಸುವ ಯಾವುದೇ ಶುದ್ಧ ರಾಜಕೀಯ ಬಯಕೆಯಲ್ಲ. ಅಂತಹ ರಾಜಕೀಯ ಬಯಕೆಯೂ ಇರಬಹುದು, ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ
ಸಂರಕ್ಷಣಾವಾದಿ ಧೋರಣೆಯನ್ನು ಹುಟ್ಟುಹಾಕುವುದಕ್ಕೆ ಅದೊಂದೇ ಕಾರಣ ಎಂದು ನೋಡುವುದು ಬಂಡವಾಳಶಾಹಿ ಅಂತರ್ಗತ ವೈರುಧ್ಯಗಳಿಂದ ಕೂಡಿಲ್ಲ, ಈ ಒಂದು ಬಲಿಹಾಕುವ ಕೃತ್ಯವಿಲ್ಲದಿದ್ದರೆ, ಮುಕ್ತ ವ್ಯಾಪಾರವು ಈಗಲೂ ಎಲ್ಲರಿಗೂ ಪ್ರಯೋಜನಕಾರಿಯಾಗಿಯೇ ಮುಂದುವರೆಯುತ್ತಿತ್ತು ಎಂಬ ರಮ್ಯ ಕಟ್ಟುಕತೆಯನ್ನೇ ಹೇಳಿಕೊಂಡಂತಾಗುತ್ತದೆ.

“ನನ್ನ ನೆರೆಯವ ಭಿಕ್ಷಕುನಾಗಲಿ” ಎಂಬ ಧೋರಣೆಗಳ ಮೂಲಕ ನಿರುದ್ಯೋಗವನ್ನು ರಫ್ತು ಮಾಡುವ ಇಂತಹ ಹತಾಶ ಪ್ರಯತ್ನಗಳು 1930 ರ ಮಹಾ ಆರ್ಥಿಕ ಕುಸಿತದ ಅವಧಿಯ ಮುಖ್ಯ ಲಕ್ಷಣವಾಗಿತ್ತು, 1930ರ ದಶಕದ ಬಹುಭಾಗದಲ್ಲಿ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರದ ವೆಚ್ಚವನ್ನು ಹೆಚ್ಚಿಸುವ ಧೋರಣೆಯನ್ನು ಎಲ್ಲೂ ಪ್ರಯತ್ನಿಸಲಾಗಿರಲಿಲ್ಲ, ಫ್ಯಾಸಿಸ್ಟ್ ದೇಶಗಳಲ್ಲಿ ಮಾತ್ರವೇ ಸರಕಾರಗಳು ಭರ್ಜರಿ ಯುದ್ಧ ತಯಾರಿಗೆ ಭಾರೀ ವೆಚ್ಚ ಮಾಡುತ್ತಿದ್ದವು.
ರೂಸ್ವೆಲ್ಟ್ ಅವರ ‘ನ್ಯೂ ಡೀಲ್’ 1930 ರ ದಶಕದ ಆರಂಭದಲ್ಲಿ ಬಂತು, ಆದರೆ ಅದರಿಂದ ಯುಎಸ್ ಅರ್ಥವ್ಯವಸ್ಥೆ ಚೇತರಿಕೆಯ ಕೆಲವು ಚಿಹ್ನೆಗಳನ್ನು ತೋರಿಸಿದಾಕ್ಷಣ ಅದನ್ನು ಮೊಟಕುಗೊಳಿಸಲಾಯಿತು, ಇದು ಮತ್ತೆ ಬಿಕ್ಕಟ್ಟಿಗೆ ಕಾರಣವಾಯಿತು. ಯುದ್ಧವು ಸನ್ನಿಹಿತವಾದಾಗ ಮಾತ್ರವೇ ಉದಾರವಾದಿ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸರಕಾರಗಳು ಶಸ್ತ್ರಾಸ್ತ್ರಗಳ ಮೇಲೆ ವೆಚ್ಚಮಾಡಲು ಆರಂಭಿಸಿದವು. ಆದರೆ ದೊಡ್ಡ-ಪ್ರಮಾಣದ ಸರ್ಕಾರಿ ವೆಚ್ಚವನ್ನು ಕೈಗೊಳ್ಳುವ ಮೊದಲು, “ನನ್ನ ನೆರೆಯವ ಭಿಕ್ಷಕುನಾಗಲಿ” ಎಂಬ ಧೋರಣೆಗಳ ಮೂಲಕ ವಿನಿಮಯ ದರಗಳನ್ನು ಇಳಿಸುವ ಸ್ಪರ್ಧೆಗಿಳಿದು ನಿರುದ್ಯೋಗವನ್ನು ರಫ್ತು ಮಾಡುವ ಕ್ರಮವೇ ಆ ಅವಧಿಯ ಮುಖ್ಯ ಲಕ್ಷಣವಾಯಿತು. ಆದರೆ ಎಲ್ಲರೂ ಇಂತಹ “ನನ್ನ ನೆರೆಯವ ಭಿಕ್ಷಕುನಾಗಲಿ” ಎಂಬ ಧೋರಣೆಯನ್ನೇ ಅನುಸರಿಸುತ್ತಿದ್ದುದರಿಂದ, ಯಾವುದೇ ದೇಶದಲ್ಲಿಯೂ ಆರ್ಥಿಕ ಕುಸಿತವನ್ನು ತಡೆಯುವಲ್ಲಿ ಗಮನಾರ್ಹವಾದ ಯಶಸ್ಸೇನೂ ದಕ್ಕಲಿಲ್ಲ.

ಆದರೆ ತೃತೀಯ ಜಗತ್ತಿನ ದೇಶಗಳಲ್ಲಿ, ವಿಶೇಷವಾಗಿ ಲ್ಯಾಟಿನ್ ಅಮೆರಿಕಾದಲ್ಲಿ ಸಂರಕ್ಷಣಾವಾದವು ಆ ಖಂಡದಲ್ಲಿ ಆಮದು- ಬದಲಿ ಕೈಗಾರಿಕೀಕರಣದ ಬೀಜಗಳನ್ನು ಬಿತ್ತಿತು. ಈ ಬಿಕ್ಕಟ್ಟು ತೃತೀಯ ಜಗತ್ತಿನಲ್ಲಿ ಕೈಗಾರಿಕೀಕರಣದ ಹರಿಕಾರನಾಗಿ ಕೆಲಸ
ಮಾಡಿತು.

ನೀತಿ ಬೋಧಕರ ಅನೀತಿ

ಈಗ ಮತ್ತೊಮ್ಮೆ ಚೀನಾದ ರಫ್ತು ಯಶಸ್ಸಿನ ಮೇಲಿನ ದಾಳಿಯ ಮರೆಯಲ್ಲಿ ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಸಂರಕ್ಷಣಾವಾದಿ ಧೋರಣೆಗಳತ್ತ ನಡೆಗಳನ್ನು ನೋಡುತ್ತಿದ್ದೇವೆ. ಆದರೆ ಇದು ಉದಾರವಾದಿ ಅರ್ಥಶಾಸ್ತ್ರಜ್ಞರು ನಂಬಿಸಬಯಸುವಂತೆ, ನವ ಉದಾರವಾದವು ತಂದ ಮುಕ್ತ ವ್ಯಾಪಾರದ ಅದ್ಭುತ ವ್ಯವಸ್ಥೆಯನ್ನು ಹಾಳುಮಾಡುವ ಭೌಗೋಳಿಕ-ರಾಜಕೀಯ ಪೈಪೋಟಿಯ ಕತೆಯೇನೂ ಅಲ್ಲ. ಬದಲಿಗೆ, ಇದು ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ನಿರುದ್ಯೋಗವನ್ನು ರಫ್ತು ಮಾಡುವ ಸಾಧನವಾಗಿ, ಬಹುಶಃ ವಿಶ್ವದ ಅತ್ಯಂತ ಯಶಸ್ವಿ ರಫ್ತು ಮಾಡುವ ರಾಷ್ಟ್ರದ ವಿರುದ್ಧ ಗುರಿಯಿಟ್ಟಿರುವಂತದ್ದು.

ಭೌಗೋಳಿಕ-ರಾಜಕೀಯ ಪೈಪೋಟಿಯು ಒಂದು ನೆಪವನ್ನು ಒದಗಿಸುತ್ತದೆ; ಅಮೆರಿಕ ಸಂಯುಕ್ತ ಸಂಸ್ಥಾನ ತಾನು ಬೋಧಿಸುವ ಮುಕ್ತ ವ್ಯಾಪಾರದಲ್ಲಿ ತನಗೆ ನಂಬಿಕೆ ಇದೆ, ಆದರೆ ಭೌಗೋಳಿಕ-ರಾಜಕೀಯ ವಾಸ್ತವಗಳನ್ನು ಪರಿಗಣಿಸಬೇಕಾಗುತ್ತದೆ, ಅದರಿಂದಾಗಿ ಚೀನಾದ ವಿರುದ್ಧ ಸಂರಕ್ಷಣಾವಾದಿ ಕ್ರಮಗಳನ್ನು ಹೇರಬೇಕಾಗಿದೆ ಎಂದು ವಾದಿಸಬಹುದು. ಆದರೆ ಸತ್ಯವು ತದ್ವಿರುದ್ಧವಾಗಿದೆ; ಭೌಗೋಳಿಕ-ರಾಜಕೀಯ ಪೈಪೋಟಿಯ ಮರೆಯಲ್ಲಿ ಅದು ತನ್ನ ಸಂರಕ್ಷಣಾವಾದಿ ಕ್ರಮಗಳ ಮೂಲಕ ಚೀನಾಕ್ಕೆ ನಿರುದ್ಯೋಗವನ್ನು ರಫ್ತು ಮಾಡುವಲ್ಲಿ ತೊಡಗಿದೆ.

ಚೀನಾಕ್ಕೆ ಅಮೆರಿಕಾದ ಸಂರಕ್ಷಣಾವಾದದಿಂದ ಬಹಳಷ್ಟೇನೂ ತೊಂದರೆಯಾಗುವಂತೆ ಕಾಣುತ್ತಿಲ್ಲ; ಕೊನೆಗೂ ಪಾಶ್ಚಿಮಾತ್ಯ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂಬ ನಿರೀಕ್ಷೆಯಿಂದಲೇ ಮತ್ತು ಆಂತರಿಕವಾಗಿ ರೈತರ ಅಸಮಾಧಾನವನ್ನು ಹೋಗಲಾಡಿಸಲು, ಕೆಲವು ಸಮಯದಿಂದ ತನ್ನ ಉತ್ಪಾದನೆಯನ್ನು ರಫ್ತಿನಿಂದ ಆಂತರಿಕ ಮಾರುಕಟ್ಟೆಯತ್ತಲೂ ಹರಡಿಸುತ್ತಿದೆ. ವಾಸ್ತವವಾಗಿ, ಕೆಲವು ವರ್ಷಗಳ ಹಿಂದೆ ಅದು “ಒಂದು ಸಮಾಜವಾದಿ ಹಳ್ಳಿಗಾಡಿನ ಕಡೆಗೆ” ಎಂಬ ದಸ್ತಾವೇಜನ್ನು ಅಂಗೀಕರಿಸಿದೆ. ಈ ದಸ್ತಾವೇಜು ಗ್ರಾಮೀಣ ಚೀನಾದಲ್ಲಿ ಪ್ರಭುತ್ವ ವೆಚ್ಚವನ್ನು ಅಳವಡಿಸಿಕೊಂಡಿದೆ, ಅದು ಗ್ರಾಮೀಣ ಚೀನಾದಲ್ಲಿ ಸರಕಾರ ಇನ್ನೂ ಹೆಚ್ಚಿನ ವೆಚ್ಚ ಮಾಡುವ ಬಗ್ಗೆ ಯೋಚಿಸಿದೆ.

ರಫ್ತು-ನಿರ್ದೇಶಿತ ಬೆಳವಣಿಗೆಯ ಕಾರ್ಯತಂತ್ರದಲ್ಲಿನ ಅಪಾಯಗಳು

ಈ ಇಡೀ ಪ್ರಕರಣ, ಇಂದಿನ ಸಂದರ್ಭದಲ್ಲಿ ರಫ್ತು-ನಿರ್ದೇಶಿತ ಬೆಳವಣಿಗೆಯ ಕಾರ್ಯತಂತ್ರದಲ್ಲಿರುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ: ಒಂದು ದೇಶ, ವಿಶೇಷವಾಗಿ ದೊಡ್ಡ ದೇಶವು ಹೆಚ್ಚಿನ ದರದ ರಫ್ತು-ನಿರ್ದೇಶಿತ ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶಸ್ವಿಯಾದರೆ, ಅದು ಇಂದಲ್ಲ ನಾಳೆ ಮುಂದುವರೆದ ಬಂಡವಾಳಶಾಹಿ ಅರ್ಥವ್ಯವಸ್ಥೆಗಳ ಪ್ರತಿರೋಧಕ್ಕೆ ಆಹ್ವಾನವಾಗುತ್ತದೆ.

ಇಲ್ಲಿಯವರೆಗೆ ನಾವು ಅತಿ-ಉತ್ಪಾದನೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾತ್ರ ಉದ್ಭವಿಸುವ ಪ್ರತಿರೋಧದ ಬಗ್ಗೆ ಮಾತನಾಡಿದ್ದೇವೆ. ಆದರೆ ಗಮನಾರ್ಹವಾದ ಅತಿ-ಉತ್ಪಾದನೆಯ ಬಿಕ್ಕಟ್ಟು ಇಲ್ಲದಿದ್ದರೂ ಸಹ, ಯಶಸ್ವಿ ರಫ್ತು ಮಾಡುವ ರಾಷ್ಟ್ರದ ಕಡೆಯಿಂದ ಪ್ರಮುಖ ಸಾಮ್ರಾಜ್ಯಶಾಹಿ ದೇಶಕ್ಕೆ ಹೋಲಿಸಿದರೆ ರಫ್ತು ಹೆಚ್ಚುವರಿಯು ಮುಂದುವರೆಯುತ್ತಲೇ ಇದ್ದರೆ, ಅದು ಸಾಮ್ರಾಜ್ಯಶಾಹಿ ದೇಶದಿಂದ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಅದರ ಋಣಭಾರ ಹೆಚ್ಚಲು
ಕಾರಣವಾಗುತ್ತದೆ. ಅದು ಕೂಡ ಪ್ರಮುಖ ಸಾಮ್ರಾಜ್ಯಶಾಹಿ ದೇಶದಿಂದ ಪ್ರತಿರೋಧಕ್ಕೆ ಆಹ್ವಾನವಾಗುತ್ತದೆ.

ಇದನ್ನೂ ಓದಿ: ಬೆಂಗಳೂರು: ಚೈತ್ರ ಕುಂದಾಪುರ ಹಗರಣದ ಹಿಂದಿರುವ ‘ಪ್ರಭಾವಿ’ಗಳ ತನಿಖೆಗೆ ಬುಧವಾರ ‘ಆಗ್ರಹ ಸಭೆ’

ಚೀನಾಕ್ಕಿಂತ ಮುಂಚೆಯೇ, ಯುಎಸ್‌ಗೆ ಯಾವುದೇ ಭೌಗೋಳಿಕ-ರಾಜಕೀಯ ಸವಾಲನ್ನು ಒಡ್ಡಿರದ ಜಪಾನ್ ಕೂಡ, ಇದೇ ರೀತಿಯ ಪಾಡು ಅನುಭವಿಸಿತು: ರಫ್ತು-ನಿರ್ದೇಶಿತ ಬೆಳವಣಿಗೆಯನ್ನು ಸಾಧಿಸುವಲ್ಲಿ ಜಪಾನಿನ ಉತ್ತಮ ಯಶಸ್ಸು ಅಂತಿಮವಾಗಿ ಜಪಾನಿನ ರಫ್ತುಗಳಿಗೆ ಅಮೆರಿಕದ ಪ್ರತಿರೋಧಕ್ಕೆ ಕಾರಣವಾಯಿತು, ಅದು ಜಪಾನ್‌ನ ಬೆಳವಣಿಗೆಯ ದರವನ್ನು ಇಳಿಸಿತು. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪ್ರಸ್ತುತ ಅಮೇರಿಕನ್ ಕ್ರಮಗಳು ರಫ್ತು-ನಿರ್ದೇಶಿತ ಬೆಳವಣಿಗೆಯನ್ನು ಸಾಧಿಸುವಲ್ಲಿ ಜರ್ಮನಿಯ ಯಶಸ್ಸಿನ ವಿರುದ್ಧ ಅಂತಹ ಪ್ರತಿರೋಧದ ಉದಾಹರಣೆಯಾಗಿದೆ ಎಂದು ವಾದಿಸಲು ಸಾಧ್ಯವಿದೆ: ನಾರ್ಡ್ ಸ್ಟ್ರೀಮ್ ಪೈಪ್‌ಲೈನ್ ಅನ್ನು ಸ್ಫೋಟಿಸುವ ಮೂಲಕ ಜರ್ಮನಿಗೆ ರಷ್ಯಾದ ಅಗ್ಗದ ಅನಿಲದ ಸರಬರಾಜನ್ನು ಪುನರಾರಂಭಿಸುವುದು ಸುಮಾರಾಗಿ ಅಸಾಧ್ಯವೇ ಆಗಿದೆ ಮತ್ತು ಅದು ಜರ್ಮನ್ ಉದ್ಯಮದ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವುದರಿಂದ ಜರ್ಮನಿ ಮತ್ತೆ ರಫ್ತು ಯಶಸ್ಸನ್ನು ಸಾಧಿಸುವುದು ಸದ್ಯ ಭವಿಷ್ಯದಲ್ಲಂತೂ ಸಾಧ್ಯವಾಗದಂತೆ ಮಾಡಿದೆ.

ನಿಜ, ಆಮದುಗಳನ್ನು ಕಡಿತಗೊಳಿಸುವುದಷ್ಟೇ ಬೆಳವಣಿಗೆಯನ್ನು ಉಂಟುಮಾಡಲು ಸಾಕಾಗುವುದಿಲ್ಲ; ಇದು ಉದ್ಯೋಗ ಮತ್ತು ಉತ್ಪಾದನೆಯನ್ನೇನೋ ಹೆಚ್ಚಿಸುತ್ತದೆ, ಆದರೆ ಒಮ್ಮೆಗೆ ಮಾತ್ರ. ಅರ್ಥವ್ಯವಸ್ಥೆಯಲ್ಲಿ ಸುಸ್ಥಿರ ಬೆಳವಣಿಗೆಯನ್ನು ಉಂಟುಮಾಡಲು ದೀರ್ಘಕಾಲಿಕ ಬಾಹ್ಯ ಬೆಳವಣಿಗೆಯ ಪ್ರಚೋದನೆ ಇರಬೇಕು. ವಿತ್ತೀಯ ಕೊರತೆಯಿಂದ ಅಥವಾ ಶ್ರೀಮಂತರ ಮೇಲಿನ ತೆರಿಗೆಗಳಿಂದ ಹಣಕಾಸು ಒದಗಿಸಿಕೊಂಡು ಸರ್ಕಾರದ ವೆಚ್ಚವನ್ನು ಹೆಚ್ಚಿಸುವುದು ಅಂತಹ ಪ್ರಚೋದನೆಯನ್ನು ಒದಗಿಸಬಹುದು; ಆದರೆ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ದೊಡ್ಡ ಸರ್ಕಾರಿ ವೆಚ್ಚಗಳಿಗೆ ಹಣಕಾಸು ಒದಗಿಸುವ ಎರಡೂ ವಿಧಾನಗಳನ್ನು ವಿರೋಧಿಸಿಯೇ ತೀರುತ್ತದೆ. ಆದ್ದರಿಂದ ಪ್ರಮುಖ ಮುಂದುವರೆದ ಬಂಡವಾಳಶಾಹಿ ದೇಶವು ಬಿಕ್ಕಟ್ಟನ್ನು ನಿವಾರಿಸಲು ತನ್ನ ಅರ್ಥವ್ಯವಸ್ಥೆಯನ್ನು ಆಮದುಗಳಿಂದ ಸಂರಕ್ಷಿಸುವುದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗುತ್ತದೆ.

(ಅನು: ಕೆ.ವಿ.)

ವಿಡಿಯೋ ನೋಡಿ:ಗೌರಿ ನೆನಪಿನಲ್ಲಿ ಮೂಡಿ ಬಂದ ಹಾಡುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *