“ಬಂಡವಾಳಶಾಹಿಯು ಬದಲಾಗಿದೆಯೇ”, ಅದು ಒಂದು ಕಲ್ಯಾಣಕಾರಿ ಬಂಡವಾಳಶಾಹಿಯಾಗಿ ಬದಲಾಗಿದೆಯೇ ಎಂಬುದರ ಕುರಿತು ಐವತ್ತರ ಮತ್ತು ಅರವತ್ತರ ದಶಕಗಳಲ್ಲಿ ಬಹಳಷ್ಟು ಚರ್ಚೆಗಳು ನಡೆದವು. ಅನೇಕರು ಅದು ಬದಲಾಗಿದೆ ಎಂದು ನಂಬಿದ್ದರು. ಆದರೆ, ನವ-ಉದಾರವಾದಿ ನೀತಿಗಳ ಹೇರಿಕೆಯು ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿಯೂ ಸಹ ಕಾರ್ಮಿಕರ ಪರಿಸ್ಥಿತಿಯನ್ನು ಹದಗೆಡಿಸಿತು. ಮತ್ತು ಈ ನೀತಿಗಳ ಹೇರಿಕೆ ಕೂಡ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿತ್ತು. ಬಂಡವಾಳಶಾಹಿಯನ್ನು “ಸುಧಾರಿಸುವ”, ಅದನ್ನು ಒಂದು ಹೆಚ್ಚು “ಮಾನವೀಯ” ವ್ಯವಸ್ಥೆಯನ್ನಾಗಿ ಮಾಡುವ ಎಲ್ಲಾ ಪ್ರಯತ್ನಗಳಿಗೂ ಭಾರೀ ಸೋಲು ತಪ್ಪದು. ಏಕೆಂದರೆ ಒಂದು “ಮಾನವೀಯ” ಸಮಾಜವನ್ನು ನಿರ್ಮಿಸುವುದು. ಬಂಡವಾಳಶಾಹಿಯನ್ನು ಮೀರಿ , ಉತ್ಪಾದನಾ ಸಾಧನಗಳು ಸಾಮಾಜಿಕ ಒಡೆತನ ಹೊಂದಿರುವ ಒಂದು ವ್ಯವಸ್ಥೆಯನ್ನು ತರುವ ಮೂಲಕ ಮಾತ್ರವೇ .
ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ವಿಶ್ವಾದ್ಯಂತ ವಿದ್ಯಾರ್ಥಿಗಳಿಗೆ ಬೋಧಿಸಲಾಗುವ ಸಮಕಾಲೀನ “ಮುಖ್ಯಧಾರೆ”ಯ ಅರ್ಥಶಾಸ್ತ್ರವು ಬಂಡವಾಳಶಾಹಿಯ ವಾಸ್ತವತೆಯನ್ನು ಗ್ರಹಿಸಿಕೊಂಡಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಒಂದು ವಾಸ್ತವಾಂಶ. ಸ್ವಲ್ಪ ಮಟ್ಟಿಗೆ ಗುರುತಿಸಲ್ಪಟ್ಟಿರುವ ಸಂಗತಿ ಏನೆಂದರೆ, ಈ “ಮುಖ್ಯಧಾರೆ”ಯ ಅರ್ಥಶಾಸ್ತ್ರವು, ಅದರ ಈಗಿರುವ ಅವತಾರಗಳಲ್ಲಿ ಮಾತ್ರವಲ್ಲ, ಅದು ಯಾವ ಹೊಸ ಅವತಾರವನ್ನಾದರೂ ಆವಾಹಿಸಿಕೊಂಡರೂ ಸಹ, ಬಂಡವಾಳಶಾಹಿಯ ವಾಸ್ತವತೆಯನ್ನು ಗ್ರಹಿಸುವಲ್ಲಿ ಅಸಮರ್ಥವಾಗಿದೆ ಎಂಬುದು. ಬಂಡವಾಳಶಾಹಿಯ ವಾಸ್ತವತೆಯನ್ನು ಗ್ರಹಿಸುವಲ್ಲಿ “ಮುಖ್ಯಧಾರೆ”ಯ ಅರ್ಥಶಾಸ್ತ್ರವು ಏಕೆ ಅಸಮರ್ಥವಾಗಿದೆ ಎಂಬುದನ್ನು ಈಗ ನೋಡೋಣ.
ಯಾವುದೇ ಉತ್ಪಾದನೆಗೆ ಹಲವಾರು ವ್ಯಕ್ತಿಗಳ ಕೆಲಸ ಕಾರ್ಯಗಳು ಸಮನ್ವಯದೊಂದಿಗೆ ನಡೆಯುವ ಅಗತ್ಯವಿರುತ್ತದೆ. ಬುಡಕಟ್ಟು ಸಮುದಾಯದ ಸದಸ್ಯರು ಒಂದು ಕಾಡುಹಂದಿಯನ್ನು ಬೇಟೆಯಾಡುವುದೇ ಆಗಿರಲಿ, ಅಥವಾ ಆಟೋಮೊಬೈಲ್‌ಗಳನ್ನು ತಯಾರಿಸುವ ಒಂದು ಆಧುನಿಕ ಬಂಡವಾಳಶಾಹಿ ಕಾರ್ಖಾನೆಯೇ ಆಗಿರಲಿ, ಇಂಥಹ ಚಟುವಟಿಕೆಗಳಲ್ಲಿ ತೊಡಗುವವರು ಒಂದು ನಿರ್ದಿಷ್ಟ ಯೋಜನೆಯ ಪ್ರಕಾರ ಕೆಲಸ ಮಾಡುವುದು ಮುಖ್ಯವಾಗುತ್ತದೆ ಮತ್ತು ಆ ಯೋಜನೆಯನ್ನು ಸಾಧಿಸಿಕೊಳ್ಳುವುದಕ್ಕಾಗಿ ಕೆಲಸ ಕಾರ್ಯಗಳು ಸಮನ್ವಯದೊಂದಿಗೆ ನಡೆಯುವ ಅಗತ್ಯವಿರುತ್ತದೆ. ಸಮನ್ವಯಗೊಂಡು ನಡೆಯುವ ಕೆಲಸ ಕಾರ್ಯಗಳಲ್ಲಿ ಶಿಸ್ತು ಇರಬೇಕಾಗುತ್ತದೆ. ಈ ಶಿಸ್ತನ್ನು ಬಹಳ ಹಿಂದಿನ ಉತ್ಪಾದನಾ ವಿಧಾನಗಳಲ್ಲಿ ಬಲವಂತವಾಗಿ ಮತ್ತು ಮುಚ್ಚುಮರೆ ಇಲ್ಲದೆ ಹೇರಲಾಗುತ್ತಿತ್ತು. ಒಟ್ಟಿಗೆ ಕೆಲಸ ಮಾಡುವ ಗುಲಾಮರಲ್ಲಿ ಕೆಲವರ ಅಸಡ್ಡೆಯ ಕೆಲಸದ ಕಾರಣದಿಂದ ಕೆಲಸ ಕಾರ್ಯಗಳು ಒಂದು ವೇಳೆ ಅನ್ಯೋನ್ಯವಾಗಿ ನಡೆಯದಿದ್ದರೆ, ಆಗ, ಅಂತಹ ಸೋಂಬೇರಿಗಳನ್ನು ಗುಲಾಮ-ಮಾಲೀಕರ ಏಜೆಂಟರು ದೈಹಿಕವಾಗಿ ಬಡಿಯುತ್ತಿದ್ದರು. ಅದೇ ರೀತಿಯಲ್ಲಿ, ಊಳಿಗಮಾನ್ಯ ವ್ಯವಸ್ಥೆಯಲ್ಲಿ, ಒಬ್ಬ ಒಡೆಯನ ಭೂಮಿಯಲ್ಲಿ ಕೆಲಸ ಮಾಡುವ ಜೀತದಾಳುಗಳು ಬೆಳೆ ಕೊಯ್ಲು-ಸುಗ್ಗಿ ಮಾಡುವಾಗ ಹೊಂದಿಕೊಂಡು ಕೆಲಸ ಮಾಡದ ಕಾರಣದಿಂದಾಗಿ ಒಂದಿಷ್ಟು ಫಸಲು ನಾಶವಾದರೆ, ಕೆಲಸದಲ್ಲಿ ಹಿಂದೆಬಿದ್ದವರೆAದು ಹೇಳಲಾದ ಜೀತದಾಳುಗಳನ್ನು ಬಡಿಯಲಾಗುತ್ತಿತ್ತು.
ಬಲವಂತದ ವಿಧಾನಗಳ ಅಗತ್ಯ
ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವುದೇ ಉತ್ಪಾದನೆಗೆ ಒಂದು ರೀತಿಯ ಸಮನ್ವಯದ ಅಗತ್ಯವಿರುತ್ತದೆ ಮತ್ತು ಉತ್ಪಾದನಾ ಸಾಧನಗಳು ಸಾಮಾಜಿಕವಾಗಿ ಒಡೆತನದಲ್ಲಿಲ್ಲದ ಯಾವುದೇ ಸಮಾಜದಲ್ಲಿ, ಮಾಲೀಕರು ಮತ್ತು ಕಾರ್ಮಿಕರ ನಡುವೆ ಒಂದು ಭಿನ್ನತೆ ಇರುವುದರಿಂದಾಗಿ ಒಂದು ಸಮನ್ವಯಗೊಳಿಸಿದ ಕ್ರಿಯಾ ಯೋಜನೆಗೆ ಅನುಗುಣವಾಗಿ ಕೆಲಸಮಾಡುವ ಆಸಕ್ತಿಯನ್ನು ಕಾರ್ಮಿಕರು ಇಚ್ಛಾಪೂರ್ವಕವಾಗಿ ಹೊಂದಿರುವುದಿಲ್ಲ. ಆದ್ದರಿಂದ ಹೇಳಿದ್ದನ್ನು ವಿಧೇಯತೆಯಿಂದ ಅನುಸರಿಸುವಂತೆ ಮಾಡುವ ಕೆಲವು ಬಲವಂತದ ವಿಧಾನಗಳು ಅಗತ್ಯವಾಗುತ್ತವೆ.
ಬಂಡವಾಳಶಾಹಿಯು ಒಂದು ವರ್ಗ-ವಿಭಜಿತ ಸಮಾಜವಾಗಿರುವುದರ ಹೊರತಾಗಿಯೂ, ಅದು ಕಣ್ಣಿಗೆ ಕಾಣುವ ರೀತಿಯ ಯಾವುದೇ ಬಲ ಪ್ರಯೋಗವನ್ನು ಅವಲಂಬಿಸುವುದಿಲ್ಲ. ಅಂದರೆ, ದೈಹಿಕ ದಂಡನೆಯನ್ನು ಬಂಡವಾಳಗಾರರು ಪ್ರಾಸಂಗಿಕವಾಗಿ ಬಳಸುವುದಿಲ್ಲ ಎಂದಲ್ಲ. ಆದರೆ, ಈ ವ್ಯವಸ್ಥೆಯಡಿಯಲ್ಲಿ ಬಲ ಪ್ರಯೋಗವು ಒಂದು ನಿಯಮವಲ್ಲ. ಇದು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಸಮನ್ವಯಗೊಳಿಸಿದ ಕಾರ್ಯ ಯೋಜನೆಗೆ ಅನುಗುಣವಾಗಿ ಕಾರ್ಮಿಕರು ಕೆಲಸ ಕಾರ್ಯಗಳನ್ನು ಬಂಡವಾಳಶಾಹಿಯ ಅಡಿಯಲ್ಲಿ ಮಾಡುವಂತಾಗುವ ಕೆಲಸ-ಶಿಸ್ತನ್ನು ಹೇಗೆ ಕಾಪಾಡಿಕೊಳ್ಳಲಾಗುತ್ತದೆ? ಉತ್ತರವೆಂದರೆ, ಪೋಲಂಡಿನ ಮಾರ್ಕ್ಸ್ ವಾದಿ ಅರ್ಥಶಾಸ್ತ್ರಜ್ಞ ಮಿಚಲ್ ಕಲೆಕಿ ಕರೆದ “ವಜಾ ಮಾಡುವ ಬೆದರಿಕೆ” ಮೂಲಕ ಇದನ್ನು ಬಂಡವಾಳಶಾಹಿಯ ಅಡಿಯಲ್ಲಿ ಸಾಧಿಸಲಾಗುತ್ತದೆ. ಸಮನ್ವಯಗೊಳಿಸಿದ ಕಾರ್ಯ ಯೋಜನೆಯನ್ನು ತನ್ನ ಸೋಮಾರಿತನದಿಂದ ಕೆಡಿಸುವ ಕೆಲಸಗಾರನನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಅಂದರೆ, ಆ ವ್ಯಕ್ತಿಯು ವ್ಯವಸ್ಥೆಯೊಳಗೆ ತನಗಿರುವ ಸ್ಥಾನವನ್ನು ಕಳೆದುಕೊಳ್ಳುತ್ತಾನೆ ಮತ್ತು ವ್ಯವಸ್ಥೆಯ ಹೊರಗೆ ಎಸೆಯಲ್ಪಡುತ್ತಾನೆ.
ಇದರಿಂದ ತಿಳಿದು ಬರುವುದು ಏನೆಂದರೆ, ಒಂದು ವ್ಯವಸ್ಥೆಯಾಗಿ ಬಂಡವಾಳಶಾಹಿಯು ತನ್ನ ಉತ್ಪಾದನೆಗೆ ಅಗತ್ಯವಾದ ಕೆಲಸ-ಶಿಸ್ತನ್ನು ಜಾರಿಮಾಡಲು ಒಂದು “ಒಳಗಿನ” ಅಂಶ ಮತ್ತು ಒಂದು “ಹೊರಗಿನ” ಅಂಶ ಎರಡನ್ನೂ ಹೊಂದಿದೆ ಎಂಬುದು. ಊಳಿಗಮಾನ್ಯ ಪದ್ಧತಿಯಲ್ಲಿದ್ದ ಒಬ್ಬ ಗುಲಾಮನನ್ನು ಹಸಿವಿನಿಂದ ಬಳಲಿಸುವ ಅಥವಾ ಒಬ್ಬ ಜೀತದಾಳುವನ್ನು ಬಡಿಯುವ ರೀತಿಯ ದೈಹಿಕ ದಂಡನೆ ಇಲ್ಲದಿದ್ದರೂ, ಬಂಡವಾಳಶಾಹಿಯಡಿಯಲ್ಲಿ ಕಾರ್ಮಿಕರ ಮೇಲೆ ಒಂದು ರೀತಿಯ ಸೂಚ್ಯ ಬಲಾತ್ಕಾರವನ್ನು ಹೇರಲಾಗುತ್ತದೆ. ಈ ರೀತಿಯ ಬಲಾತ್ಕಾರವಿಲ್ಲದೆ ಈ ವ್ಯವಸ್ಥೆಯಡಿಯಲ್ಲಿ ಉತ್ಪಾದನೆ ಮಾಡುವುದು ಸಾಧ್ಯವಾಗುವುದಿಲ್ಲ. ಈ ಸೂಚ್ಯ ರೀತಿಯ ಬಲಾತ್ಕಾರವು ಬಂಡವಾಳಶಾಹಿಯೊಳಗಿನ ಪ್ರದೇಶದಲ್ಲಿ ಕೆಲಸ ಮಾಡುವವವರು ಜೀವನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿರುವ ಒಂದು “ಹೊರಗಿನ” ಪ್ರದೇಶಕ್ಕೆ ತಳ್ಳಲ್ಪಟ್ಟರೆ ಭಯ ಪಡುವಂಥಹ ಒಂದು ಅವಕಾಶವು ವ್ಯವಸ್ಥೆಯ “ಹೊರಗಡೆ” ಇರಬೇಕಾಗುತ್ತದೆ.
ಇದನ್ನೂ ಓದಿ : ಮಂಡ್ಯ | ಗಾಂಧಿ ಹಾಗೂ ಅಂಬೇಡ್ಕರ್ ಜಯಂತಿಗೆ ಮಾಂಸಾಹಾರ ನಿಷೇಧ ಏಕೆ? ಅಂಕಣಕಾರ ಶಿವಸುಂದರ್
ಕಾರ್ಮಿಕ ಮೀಸಲು ಪಡೆ ಮತ್ತು ಬಂಡವಾಳಶಾಹಿ ‘ಶಿಸ್ತು’
ಆದ್ದರಿಂದ ಬಂಡವಾಳಶಾಹಿಯ ಪೂರ್ಣತೆಯು ಎರಡು ಆಂಶಗಳನ್ನು ಒಳಗೊಂಡಿದೆ: “ಒಳಗಿನ” ಮತ್ತು “ಹೊರಗಿನ” ಅಂಶಗಳು. ಮಾರ್ಕ್ಸ್ ವಾದಿ ಪರಂಪರೆ ಮಾತ್ರವೇ ಈ ಸಂಗತಿಯನ್ನು ಅರಿತುಕೊಳ್ಳುತ್ತದೆ ಮತ್ತು “ಕಾರ್ಮಿಕ ಮೀಸಲು ಪಡೆ”ಯ ಅಸ್ತಿತ್ವವನ್ನು ಈ “ಹೊರಗಿನ” ಅಂಶವು ಬಂಡವಾಳಶಾಹಿಯ ಒಂದು ಅಗತ್ಯ ಲಕ್ಷಣವಾಗಿ ಗುರುತಿಸುತ್ತದೆ.
ಅನೇಕ ಮಾರ್ಕ್ಸ್ ವಾದಿಗಳು ಅಥವಾ ಮಾರ್ಕ್ಸ್ ವಾದದ ಬಗ್ಗೆ ಸಹಾನುಭೂತಿ ಹೊಂದಿರುವವರು ಈ ಅಂಶವನ್ನು ಗ್ರಹಿಸುವುದಿಲ್ಲ. ಈ ಮಹಾಶಯರು ಕಾರ್ಮಿಕರ ಮೀಸಲು ಪಡೆಯ ಅಸ್ತಿತ್ವವನ್ನು ಬಂಡವಾಳಶಾಹಿಯ ಅಡಿಯಲ್ಲಿ ನಿಜ ಕೂಲಿಯು ಜೀವನಾಧಾರ ಮಟ್ಟಕ್ಕೆ (ಐತಿಹಾಸಿಕವಾಗಿ) ಏಕೆ ಕಟ್ಟಿಹಾಕಲ್ಪಟ್ಟಿದೆ ಎಂಬುದನ್ನು ವಿವರಿಸುವುದಕ್ಕಾಗಿ ಮಾತ್ರ ಒಪ್ಪಿಕೊಳ್ಳುತ್ತಾರೆ. ಅಂದರೆ, ರಿಕಾರ್ಡಿಯನ್ ಪದ್ಧತಿಯಲ್ಲಿ ಥಾಮಸ್ ಮಾಲ್ತುಸ್ ಅವರ ಜನಸಂಖ್ಯಾ ಸಿದ್ಧಾಂತವು ವಹಿಸಿದ ಪಾತ್ರವನ್ನೇ ಕಾರ್ಮಿಕರ ಮೀಸಲು ಪಡೆ ವಹಿಸುತ್ತದೆ ಎಂಬುದು ಅವರ ಗ್ರಹಿಕೆ. ರಿಕಾರ್ಡೊ ಅವರ ದೃಷ್ಟಿಕೋನದಲ್ಲಿ ಮಾಲ್ತೂಸಿಯನ್ ಸಿದ್ಧಾಂತವು ಕಾರ್ಮಿಕರ ನಿಜ ಕೂಲಿಯು ಹೆಚ್ಚು ಕಡಿಮೆ ಜೀವನಾಧಾರ ಮಟ್ಟದಲ್ಲಿ ಉಳಿದಿರುವ ಅಂಶವನ್ನು ವಿವರಿಸುತ್ತದೆ – ಮಾಲ್ತುಸ್ ಪ್ರಕಾರ, ಕೂಲಿಯು ಒಂದು ವೇಳೆ ಜೀವನಾಧಾರ ಮಟ್ಟಕ್ಕಿಂತಲೂ ಉನ್ನತವಾಗಿದ್ದರೆ ಕಾರ್ಮಿಕರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ. ಅಂದರೆ, ಕಾರ್ಮಿಕರ (ಶ್ರಮ ಶಕ್ತಿಯ) ಸಂಖ್ಯೆ ಹೆಚ್ಚುತ್ತದೆ. ಅಂದರೆ, ಶ್ರಮ ಶಕ್ತಿಯ ಪೂರೈಕೆ ಹೆಚ್ಚುತ್ತದೆ. ಆಗ ಶ್ರಮ ಶಕ್ತಿಯ ಈ ಹೆಚ್ಚಳವು ಕೂಲಿಯನ್ನು ಜೀವನಾಧಾರ ಮಟ್ಟಕ್ಕೆ ಮತ್ತೊಮ್ಮೆ ತಳ್ಳುತ್ತದೆ. ಮಾಲ್ತಸ್‌ನ ಈ ಸಿದ್ಧಾಂತವನ್ನು ಮಾರ್ಕ್ಸ್ ತಿರಸ್ಕರಿಸಿದರು. ಅದನ್ನು “ಮಾನವ ಜನಾಂಗದ ಮೇಲೆ ಹೊರಿಸಿದ ಅಪಮಾನ” ಎಂದು ಅವರು ಕರೆದರು. ನಿಜ ಕೂಲಿಯನ್ನು ಜೀವನಾಧಾರ ಮಟ್ಟಕ್ಕೆ ಇಳಿಸಲು ಸಹಾಯ ಮಾಡಿದ ಮಾಲ್ತುಸ್‌ರ ಈ ಅಪಮಾನಕರ ವಿವರಣೆಯನ್ನು ಮಾರ್ಕ್ಸ್ ತಮ್ಮ ʼಕಾರ್ಮಿಕರ ಮೀಸಲು ಪಡೆʼ ಪರಿಕಲ್ಪನೆಯೊಂದಿಗೆ ಬದಲಿಸಿದರು ಎಂದು ಸಾಮಾನ್ಯವಾಗಿ ನಂಬಲಾಗಿದೆ.
ಇದು ಮಾರ್ಕ್ಸ್ ಅವರ ಈ ವಿಚಾರದ ಅಪೂರ್ಣ ಅರ್ಥವಾಗುತ್ತದೆ. ನಿಜ ಕೂಲಿಯನ್ನು ಕಾರ್ಮಿಕ ಮೀಸಲು ಪಡೆಯು ಐತಿಹಾಸಿಕವಾಗಿ-ನೀಡಲಾದ ಜೀವನಾಧಾರ ಮಟ್ಟಕ್ಕೆ ಇಳಿಸುತ್ತದೆ ಎಂಬುದು ಖಂಡಿತವಾಗಿಯೂ ನಿಜ. ಆದರೆ ಇದೊಂದೇ ಅದರ ಪಾತ್ರವಲ್ಲ. ಕಾರ್ಮಿಕ ಮೀಸಲು ಪಡೆಯಿಲ್ಲದ ಹೊರತು ಬಂಡವಾಳಶಾಹಿಯ ಅಡಿಯಲ್ಲಿ ಯಾವುದೇ ಕೆಲಸದಲ್ಲಿ ಶಿಸ್ತು ಉಳಿಯುವುದಿಲ್ಲ ಮತ್ತು ಅದರಿಂದಾಗಿ ಬಂಡವಾಳಶಾಹಿ ಉತ್ಪಾದನೆ ಅಸಾಧ್ಯವಾಗುತ್ತದೆ.
ಒಳಗೆ ಮತ್ತು ಹೊರಗೆ
ಸಮಕಾಲೀನ “ಮುಖ್ಯಧಾರೆಯ” ಎಲ್ಲ ಅರ್ಥಶಾಸ್ತ್ರಗಳೂ ಬಂಡವಾಳಶಾಹಿಯನ್ನು, ಮಾರುಕಟ್ಟೆಗಳಿಗೆ ಒಂದು ವೇಳೆ ಮುಕ್ತವಾಗಿ ಕಾರ್ಯನಿರ್ಹಿಸುವ ಅವಕಾಶವನ್ನು ನೀಡಿದಾಗ, ಎಲ್ಲ “ಉತ್ಪಾದನಾ ಸಾಧನಗಳನ್ನು” ಪೂರ್ಣವಾಗಿ ಬಳಸಿಕೊಳ್ಳುವ ಒಂದು ಸ್ವಯಂ-ಪೂರ್ಣ ವ್ಯವಸ್ಥೆಯಾಗಿ ನೋಡುತ್ತವೆ. ಅದೇನೇ ಇದ್ದರೂ, ಈ ಪ್ರತಿಪಾದನೆಯನ್ನು ಸ್ವೀಕರಿಸದ ಕೀನ್ಸ್ ಪರಂಪರೆಯಂಥಹ ಅಸ್ತಿತ್ವದಲ್ಲಿರುವ ಎಡವಟ್ಟು ಪರಂಪರೆಗಳು, ಒಂದು ಸ್ವಯಂ-ಪೂರ್ಣ ವ್ಯವಸ್ಥೆಯಾಗಿರುವ ಬಂಡವಾಳಶಾಹಿಯು ಮಾರುಕಟ್ಟೆ ಕಾರ್ಯನಿರ್ವಹಣೆಗೆ ಪೂರಕವಾದ ಪ್ರಭುತ್ವದ ಪ್ರಯತ್ನಗಳ ಮೂಲಕ ಎಲ್ಲ “ಉತ್ಪಾದನಾ ಸಾಧನಗಳನ್ನು” ಬಳಕೆ ಮಾಡಿಕೊಂಡು ಪೂರ್ಣ ಉದ್ಯೋಗ ಪರಿಸ್ಥಿತಿಯನ್ನು ಸಾಧಿಸಬಲ್ಲದು ಎಂದು ನಂಬುತ್ತವೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮಾರ್ಕ್ಸ್ ವಾದಿಯಲ್ಲದ ಆರ್ಥಿಕ ಸಿದ್ಧಾಂತದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಾಸ್ತ್ರೀಯ ಮತ್ತು ಶಾಸ್ತ್ರೀಯವಲ್ಲದ ಎರಡೂ ಪರಂಪರೆಗಳು ಬಂಡವಾಳಶಾಹಿಯ “ಒಳಗೆ” ಮಾತ್ರ ನೋಡುತ್ತವೆ, ಅದರ “ಹೊರಗೆ” ಅಲ್ಲ. ವಾಸ್ತವವಾಗಿ ನಿರುದ್ಯೋಗಿಗಳು, ಅರೆ-ಉದ್ಯೋಗಿಗಳು ಮತ್ತು ಕಣ್ಣಿಗೆ ಬೀಳದ ನಿರುದ್ಯೋಗಿ (ಒಬ್ಬ ಮಾಡುವ ಕೆಲಸದಲ್ಲಿ ಹಲವರು ತೊಡಗಿಕೊಂಡ ರೀತಿಯ ನಿರುದ್ಯೋಗಿಗಳ – disguised-unemployed workers) ಕಾರ್ಮಿಕರ ಸಮೂಹವನ್ನು ಒಳಗೊಂಡ “ಹೊರಗಿನ” ಪ್ರದೇಶದಲ್ಲಿರುವ ಪಡೆಗೆ ಒಗೆಯುವ ಸಾಧ್ಯತೆಯು ಉದ್ಯೋಗಿ ಕಾರ್ಮಿಕರಲ್ಲಿ ಭಯವನ್ನು ತುಂಬುತ್ತದೆ ಮತ್ತು ಬಂಡವಾಳಶಾಹಿ ಉತ್ಪಾದನೆಗೆ ಸಂಪೂರ್ಣವಾಗಿ ಅಗತ್ಯವಾದ ಶಿಸ್ತಿಗೆ ಅವರಲ್ಲಿ ವಿಧೇಯತೆಯನ್ನು ತುಂಬುತ್ತದೆ ಎಂಬ ಅಂಶವನ್ನು ಅವರು ಕಾಣುವುದಿಲ್ಲ.
ಸಮಕಾಲೀನ “ಮುಖ್ಯಧಾರೆ”ಯ ಅರ್ಥಶಾಸ್ತ್ರ ಮತ್ತು ಅದರ ಅಸಾಂಪ್ರದಾಯಿಕ ವಿಮರ್ಶಕರೂ ಸಹ ಈ “ಹೊರಗಿನ” ಪ್ರದೇಶದ ಅಗತ್ಯವನ್ನು ನೋಡದಿರಲು ಕಾರಣವೆಂದರೆ, ಅವರು ಉತ್ಪಾದನೆಯನ್ನು ಅದರದ್ದೇ ಆದ ಲಕ್ಷಣಗಳೊಂದಿಗೆ ವಿಶ್ಲೇಷಿಸುವುದಿಲ್ಲ. ಅದನ್ನು ವಿನಿಮಯದ ಒಂದು ವಿಸ್ತರಣೆಯಾಗಿ ಮಾತ್ರ ಕಾಣುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಅವರು ವಿನಿಮಯ ಪ್ರಕ್ರಿಯೆಯ ಮೇಲೆ ಮಾರುಕಟ್ಟೆಗಳು ಉಂಟು ಮಾಡುತ್ತವೆ ಎಂದು ಹೇಳಲಾದ ಪರಿಣಾಮಗಳ ಬಗ್ಗೆ ಗಮನ ಹರಿಸುತ್ತಾರೆ. ಮತ್ತು ಅಲ್ಲಿಗೆ ಅವರ ವಿಶ್ಲೇಷಣೆ ನಿಲ್ಲುತ್ತದೆ. ಒಬ್ಬ ಬಂಡವಾಳಗಾರನು ಕಚ್ಚಾ ವಸ್ತುಗಳು ಮತ್ತು ಶ್ರಮ ಶಕ್ತಿಯನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಕಾರ್ಖಾನೆಯ ಆವರಣಕ್ಕೆ ಹೋದಾಗ ಏನಾಗುತ್ತದೆ ಎಂಬುದು ಅವರ ಗಮನವನ್ನು ವ್ಯಾಪಿಸಿಕೊಳ್ಳುವ ವಿಷಯವಲ್ಲ. ಅವರ ವಿಶ್ಲೇಷಣೆಯು ಹೆಚ್ಚೆಂದರೆ ಎಲ್ಲ ಉತ್ಪಾದನೆಯೂ ಪ್ರತಿಯೊಬ್ಬ ಕುಶಲಕರ್ಮಿಯೂ ಕೆಲಸ-ಶಿಸ್ತನ್ನು ಹೇರುವ ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿಲ್ಲದೆ ತನ್ನ ಶ್ರಮವನ್ನು ಮಾತ್ರವೇ ಬಳಸಿಕೊಳ್ಳುವ ಕುಶಲಕರ್ಮಿ ಉತ್ಪಾದನೆಯೇ ಆಗಿರುವ ಕಾಲ್ಪನಿಕ ಜಗತ್ತಿನ ಉತ್ಪಾದನೆಗೆ ಮಾತ್ರವೇ ಅನ್ವಯವಾಗಬಲ್ಲದು. ಆದರೆ, ಈ ಕಾಲ್ಪನಿಕ ಬ್ರಹ್ಮಾಂಡದ ಹೊರಗೆ, ಮತ್ತು ಖಂಡಿತವಾಗಿಯೂ ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ವಿಷ್ಲೇಷಣೆಗಾಗಿ, “ಮುಖ್ಯಧಾರೆ”ಯ ಅರ್ಥಶಾಸ್ತ್ರ ಮತ್ತು ಕೀನ್ಸಿಯನ್ ಸಿದ್ಧಾಂತದ ರೀತಿಯ ಸಮಂಜಸ ಮತ್ತು ಒಳನೋಟವುಳ್ಳ ವಿಮರ್ಶಾತ್ಮಕ ಸಿದ್ಧಾಂತಗಳು ಎರಡೂ ಸಹ ಅಪೂರ್ಣವಾಗಿವೆ.
“ಬೇಡಿಕೆ ನಿರ್ವಹಣೆ”ಯ ಭ್ರಾಂತಿ
ಇಲ್ಲಿ ಕೆಲವು ಗೋಜಲುಗಳಿವೆ. ಕಾರ್ಮಿಕ ಮೀಸಲು ಪಡೆಯ ಅಸ್ತಿತ್ವವು ಉತ್ಪಾದನೆಗೆ ಮಾತ್ರವಲ್ಲದೆ, ಈಗಾಗಲೇ ಗಮನಿಸಿದಂತೆ ನಿಜ ಕೂಲಿಯನ್ನು ಇಳಿಕೆ ಮಾಡಲು ಮಾತ್ರವಲ್ಲದೆ, ಕಾರ್ಮಿಕರು ತಮ್ಮ ನಿಜ ಕೂಲಿಯು ಇಳಿಕೆಯಾಗುತ್ತಿರುವ ಸನ್ನಿವೇಶದಲ್ಲೂ ಹೆಚ್ಚಿನ ಹಣ ಕೂಲಿಯ ಬೇಡಿಕೆಯನ್ನು ಮಂಡಿಸುವಲ್ಲಿ ಮತ್ತು ಅದನ್ನು ಪಡೆಯುವಲ್ಲಿ ದುರ್ಬಲರಾಗಿರುವುದರಿಂದ ಬೆಲೆ-ಸ್ವೀಕರಿಸುವ (ಅಂದರೆ, ಕೂಲಿಯ ಮೇಲೆ ಅಧಿಕಾರವಿಲ್ಲದೆ ಕೊಟ್ಟಷ್ಟು ಪಡೆಯುವ) ವರ್ಗವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲೂ ಸಹ ಅವಶ್ಯವಾಗುತ್ತದೆ. ಕಾರ್ಮಿಕ ಮೀಸಲು ಪಡೆ ಒಂದು ವೇಳೆ ಅಳಿದು ಹೋದರೆ ಅಥವಾ ಕ್ಷೀಣಿಸಿದರೆ, ಬಂಡವಾಳಶಾಹಿ ವ್ಯವಸ್ಥೆಯು ತಕ್ಷಣವೇ ಕುಸಿಯುತ್ತದೆ ಎಂಬುದು ಇದರ ಅರ್ಥವಲ್ಲ. ಕಾಲಾನಂತರದಲ್ಲಿ ಅದರ ಕಾರ್ಯಾಚರಣೆ ಅಸಾಧ್ಯವಾಗುತ್ತದೆ ಎಂಬುದಷ್ಟೇ ಇದರ ಅರ್ಥ. ಈ ಎಲ್ಲವೂ ಏನನ್ನು ಅರ್ಥೈಸುತ್ತದೆ ಎಂದರೆ, ಬಂಡವಾಳಶಾಹಿಯ ಅಡಿಯಲ್ಲಿ ಪೂರ್ಣ ಉದ್ಯೋಗ ಪರಿಸ್ಥಿತಿಯನ್ನು ಕಾಪಾಡಿಕೊಳ್ಳುವುದು ಅಸಾಧ್ಯ ಎಂಬುದನ್ನು. ಒಟ್ಟಾರೆ ಬೇಡಿಕೆಯ ಕೊರತೆಯೇ ಅನೈಚ್ಛಿಕ ನಿರುದ್ಯೋಗದ ಏಕೈಕ ಕಾರಣ ಎಂದು ಕೀನ್ಸ್ ಪ್ರತಿಪಾದಿಸಿದ್ದರು. “ಬೇಡಿಕೆ ನಿರ್ವಹಣೆ”ಯಲ್ಲಿ ಪ್ರಭುತ್ವದ ಹಸ್ತಕ್ಷೇಪದ ಮೂಲಕ ಬಂಡವಾಳಶಾಹಿ ಅರ್ಥವ್ಯವಸ್ಥೆಗಳು ಪೂರ್ಣ ಉದ್ಯೋಗ ಪರಿಸ್ಥಿತಿಯನ್ನು ಕಾಯ್ದುಕೊಳ್ಳಬಹುದು ಎಂದು ನಂಬಿದ್ದರು. ಆದರೆ, ಅವರ ಈ ಕಲ್ಪನೆಯು ಒಂದು ಭ್ರಾಂತಿಯೇ ಸರಿ.
ಇದು ಕೇವಲ ಒಂದು ನಿರರ್ಥಕ ಹೇಳಿಕೆಯಲ್ಲ. ಏಕೆಂದರೆ, ಮಹಾಯುದ್ಧಾನಂತರದ ಅವಧಿಯಲ್ಲಿ ಕೀನ್ಸ್ ಅವರ ಸಲಹೆಯ ಮೇರೆಗೆ ಜಾರಿಗೊಳಿಸಿದ ಪ್ರಭುತ್ವದ ಹಸ್ತಕ್ಷೇಪದ ಮೂಲಕ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಿ ಪೂರ್ಣ ಉದ್ಯೋಗ ಸಾಧಿಸಿ, ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ ನಿರುದ್ಯೋಗವನ್ನು ಇಳಿಸಿ, ಕಾರ್ಮಿಕರ “ಬೆಲೆ-ಸ್ವೀಕರಿಸುವ” ಪರಿಸ್ಥಿತಿಯನ್ನು ಕೊನೆಗೊಳಿಸಿ, ಹಣ ಕೂಲಿಯ ಬಾಹುಳ್ಯದಲ್ಲಿ ಪರಿಣಮಿಸಿತು. ಇದು ಹಣದುಬ್ಬರದ ಸ್ಫೋಟಕ್ಕೆ ಕಾರಣವಾಗಿ ವ್ಯವಸ್ಥೆಯು 1968ರಲ್ಲಿ ಒಂದು ವಿಪತ್ತಿನಲ್ಲಿ ಸಿಕ್ಕಿಕೊಂಡಿತು. ಪ್ರಾಥಮಿಕ ಸರಕುಗಳ ಬೆಲೆಗಳು ವಿಪರೀತವಾಗಿ ಏರಿದವು. ಹಣದುಬ್ಬರ ಮತ್ತಷ್ಟು ಮೇಲೇರಿತು. ಹಣದುಬ್ಬರದ ಈ ಸ್ಫೋಟವನ್ನು ರೇಗನ್ ಮತ್ತು ಥ್ಯಾಚರ್ ಅಂತಿಮವಾಗಿ ಕೊನೆಗೊಳಿಸಿದರು. ಅವರು ಕೀನ್ಸ್ ಪ್ರತಿಪಾದನೆಯ “ಬೇಡಿಕೆ ನಿರ್ವಹಣೆ” ನೀತಿಯನ್ನು ಕೊನೆಗೊಳಿಸಿದರು ಮತ್ತು ಬೃಹತ್ ನಿರುದ್ಯೋಗವನ್ನು ಮರು-ಸೃಷ್ಟಿಸಿದರು.
ಈ ರೀತಿಯಲ್ಲಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪೂರ್ಣ ಉದ್ಯೋಗ ಪರಿಸ್ಥಿತಿಯನ್ನು ಉಳಿಸಿಕೊಳ್ಳುವುದು ಅಸಾಧ್ಯವಾದರೆ, ಅದು ಕಲ್ಯಾಣ ರಾಜ್ಯದ ಕ್ರಮಗಳನ್ನು ಉಳಿಸಿಕೊಳ್ಳುವುದೂ ಸಹ ಅಸಾಧ್ಯವಾಗುತ್ತದೆ. ಕಲ್ಯಾಣ ರಾಜ್ಯ ಕ್ರಮಗಳು ನಿರುದ್ಯೋಗಿಗಳ ಅಸಹನೀಯ ಪರಿಸ್ಥಿತಿಯನ್ನು ಹಗುರ ಮಾಡುತ್ತವೆ. ಹಾಗೆಯೇ, ಕೆಲಸದ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ “ವಜಾ ಮಾಡಲ್ಪಟ್ಟ” ಕೆಲಸಗಾರನ ಶಿಕ್ಷೆಯ ಪರಿಣಾಮವನ್ನೂ ಹಗುರ ಮಾಡುತ್ತವೆ. ಆದ್ದರಿಂದ, ಇಂಥಹ ಕ್ರಮಗಳು ಬಂಡವಾಳಶಾಹಿ ವ್ಯವಸ್ಥೆಯೊಳಗೆ ಕೆಲಸ-ಶಿಸ್ತನ್ನು ಒಳಗೊಳಗೇ ಹಾಳುಗೆಡುವುತ್ತವೆ. ಅದಕ್ಕಿಂತಲೂ ಮಿಗಿಲಾಗಿ, ಅವು ಕಾರ್ಮಿಕರ ಚೌಕಾಸಿ ಶಕ್ತಿಯನ್ನು ಹೆಚ್ಚಿಸುತ್ತವೆ. ಅದರಿಂದಾಗಿ ಅವರ “ಬೆಲೆ-ಸ್ವೀಕರಿಸುವ” ಪರಿಸ್ಥಿತಿಯನ್ನು ಕೊನೆಗೊಳಿಸುತ್ತವೆ. ಕಲ್ಯಾಣ ಪ್ರಭುತ್ವದ ಕ್ರಮಗಳು ಇನ್ನೂ ಒಂದಿಷ್ಟು ಕಾಲ ಜಾರಿಯಲ್ಲಿರಬಹುದು. ಆದರೆ, ಇವುಗಳನ್ನು ಕ್ಷೀಣಿಸುವ ಪ್ರಯತ್ನಗಳನ್ನು ಬಂಡವಾಳಗಾರರು ಸದಾ ಮಾಡುತ್ತಲೇ ಇರುತ್ತಾರೆ.
ಐವತ್ತರ ದಶಕದಲ್ಲಿ ಮತ್ತು ಅರವತ್ತರ ದಶಕದ ಆರಂಭದಲ್ಲಿ “ಬಂಡವಾಳಶಾಹಿಯು ಬದಲಾಗಿದೆಯೇ”, ಅದು ತನ್ನ ಪರಭಕ್ಷಕ ಸ್ವರೂಪದಿಂದ ಒಂದು ಕಲ್ಯಾಣಕಾರಿ ಬಂಡವಾಳಶಾಹಿಯಾಗಿ ಬದಲಾಗಿದೆಯೇ ಎಂಬುದರ ಕುರಿತು ಬಹಳಷ್ಟು ಚರ್ಚೆಗಳು ನಡೆದವು. ಅನೇಕರು ಅದು ಬದಲಾಗಿದೆ ಎಂದು ನಂಬಿದ್ದರು. ಆದರೆ, ನವ-ಉದಾರವಾದಿ ನೀತಿಗಳ ಹೇರಿಕೆಯು ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿಯೂ ಸಹ ಕಾರ್ಮಿಕರ ಪರಿಸ್ಥಿತಿಯನ್ನು ಹದಗೆಡಿಸಿತು. ಮತ್ತು ಈ ನೀತಿಗಳ ಹೇರಿಕೆಯ ಅಂಶವು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿತ್ತು. ಬಂಡವಾಳಶಾಹಿಯನ್ನು “ಸುಧಾರಿಸುವ”, ಅದನ್ನು ಒಂದು ಹೆಚ್ಚು “ಮಾನವೀಯ” ವ್ಯವಸ್ಥೆಯನ್ನಾಗಿ ಮಾಡುವ ಎಲ್ಲಾ ಪ್ರಯತ್ನಗಳಿಗೂ ಭಾರೀ ಸೋಲು ತಪ್ಪದು. ಬಂಡವಾಳಶಾಹಿಯನ್ನು ಮೀರಿ, ಉತ್ಪಾದನಾ ಸಾಧನಗಳು ಸಾಮಾಜಿಕ ಒಡೆತನ ಹೊಂದಿರುವ ಒಂದು ವ್ಯವಸ್ಥೆಯನ್ನು ಸ್ವಾಗತಿಸುವ ಮೂಲಕ ಮಾತ್ರವೇ ಒಂದು ಹೆಚ್ಚು “ಮಾನವೀಯ” ಸಮಾಜವನ್ನು ನಿರ್ಮಿಸಬಹುದು.
ಇದನ್ನೂ ನೋಡಿ : ಚಿತ್ರದುರ್ಗ | ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ Janashakthi Media
