ಲಖ್ನೋ: ಬಿಜೆಪಿ ಪಕ್ಷದ ಗೆಲುವುಗೆ ಸಂಬಂಧಿಸಿದಂಗೆ ಅವರಿಗೆ ಅವಕಾಶ ನೀಡಲಿಕ್ಕಾಗಿಯೇ ಬಿಎಸ್ ಪಿ ನಾಯಕಿ ಮಾಯಾವತಿ ನಮ್ಮ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾಯಾವತಿ ಅತ್ಯಂತ ಕಠಿಣತೆಯಿಂದ ಪ್ರತ್ಯೂತ್ತರ ನೀಡಿದ್ದಾರೆ.
”ಅವರಿಗೆ ತಮ್ಮ ಸ್ವಂತ ಮನೆಯನ್ನೇ ಸರಿಯಾಗಿ ಕಟ್ಟಿಕೊಳ್ಳಲು ಆಗುತ್ತಿಲ್ಲ. ಬಿಎಸ್‌ಪಿಯನ್ನು ದೂಷಿಸ್ತಿದ್ದಾರೆ” ಎಂದು ವಾಗ್ದಾಳಿ ಮಾಡಿದ ಮಾಯಾವತಿ ರಾಹುಲ್ ಗಾಂಧಿ ಅವರು ಹೇಳಿರುವುದು ಸಂಪೂರ್ಣ ಸುಳ್ಳು. ಅವರು ಇಂತಹ ಸಣ್ಣ ವಿಷಯಗಳ ಬದಲಾಗಿ ಯುಪಿ ಚುನಾವಣೆಯ ಸೋಲಿನ ಬಗ್ಗೆ ಗಮನಹರಿಸಬೇಕು ಎಂದರು.
“ಕಾಂಗ್ರೆಸ್ ಇಂತಹ ಟೀಕೆಗಳನ್ನು ಮಾಡುವ ಮೊದಲು 100 ಬಾರಿ ಯೋಚಿಸಬೇಕು. ಅವರು ಬಿಜೆಪಿ ಎದುರು ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂತಹ ಟೀಕೆ, ದೋಷಾರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ, ಇಲ್ಲದಿರುವಾಗಲೂ ಏನನ್ನೂ ಮಾಡಿಲ್ಲ” ಎಂದು ಮಾಯಾವತಿ ಹೇಳಿದರು.
ನೆನ್ನೆ (ಏಪ್ರಿಲ್ 09) ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾವು ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೆವು. ಇದಕ್ಕಾಗಿ ಮಾಯಾವತಿ ಅವರನ್ನು ಮುಖ್ಯಮಂತ್ರಿ ಮಾಡಲು ಪ್ರಸ್ತಾಪ ಮುಂದಿಟ್ಟಿದ್ದೆವು. ಬಿಜೆಪಿಗೆ ಮುಕ್ತ ಅವಕಾಶ ನೀಡಲು ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದ್ದರು. ಅವರಿಗೆ ಸಿಬಿಐ, ಇಡಿ, ಪೆಗಾಸಸ್ ಭಯವಿದ್ದುದರಿಂದ ನಮ್ಮ ಮನವಿಗೆ ಸ್ಪಂದಿಸಲೇ ಇಲ್ಲ ಎಂದಿದ್ದರು.
ರಾಹುಲ್ ಅವರ ಹೇಳಿಕೆಗೆ ಇಂದು ಮಾಯಾವತಿ ಅವರು ಮಾಜಿ ಪ್ರಧಾನಿ ಮತ್ತು ರಾಹುಲ್ ಗಾಂಧಿ ಅವರ ತಂದೆ ದಿವಂಗತ ರಾಜೀವ್ ಗಾಂಧಿ ಕೂಡ ತಮ್ಮ ಬಹುಜನ ಸಮಾಜ ಪಕ್ಷದ ಮಾನಹಾನಿ ಮಾಡಲು ಪ್ರಯತ್ನಿಸಿದರು. “ಕಾನ್ಶಿರಾಮ್ ಸಿಐಎ ಏಜೆಂಟ್ ಎಂದು ಹೇಳುವ ಮೂಲಕ ರಾಜೀವ್ ಗಾಂಧಿ ಬಿಎಸ್‌ಪಿ ಆರೋಪಗಳನ್ನು ಮಾಡಿದ್ದರುʼʼ ಎಂದು ಮಾಯಾವತಿ ಆರೋಪಿಸಿದರು.
“ಈಗ ಪ್ರಿಯಾಂಕಾ ಗಾಂಧಿ ಕೂಡ ಅದೇ ರೀತಿ ಮಾಡುತ್ತಿದ್ದಾರೆ, ನಾನು ಇಡಿ ಮತ್ತು ಇತರ ತನಿಖಾ ಸಂಸ್ಥೆಗಳಿಗೆ ಹೆದರುತ್ತೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲವೂ ನಿಜವಲ್ಲ. ನಾವು ಈ ಎಲ್ಲಾ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಿ ಗೆದ್ದಿದ್ದೇವೆ ಎಂದು ಅವರು ತಿಳಿದುಕೊಳ್ಳಬೇಕು” ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿದಿತ್ತು. ಕೇವಲ 2 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಬಿಎಸ್‌ಪಿ 1 ಸ್ಥಾನ ಮಾತ್ರ ಗೆದ್ದಿದೆ.