ಯುದ್ಧ ವಿರೋಧಿ ಕವಿಗೋಷ್ಠಿ | ಶಸ್ತ್ರಗಳ ವ್ಯಾಪಾರಿಯ ಮಧ್ಯಸ್ಥಿಕೆ ಯುದ್ಧ ನಿಲ್ಲಿಸಲು ಸಾಧ್ಯವೇ?: ಪ್ರೊ. ಮಾಲತಿ ಪಟ್ಟಣಶೆಟ್ಟಿ

ಸಮುದಾಯ – 50ರ ಅಂಗವಾಗಿ ನಡೆದ ಕಾರ್ಯಕ್ರಮ 
ಧಾರವಾಡ: ಜಗತ್ತಿನ ಬಲಿಷ್ಠ ಶಸ್ತ್ರಗಳ ವ್ಯಾಪಾರಿಯೊಬ್ಬನ ಮಧ್ಯಸ್ಥಿಕೆ ವಿವಿಧ ದೇಶಗಳ ಮಧ್ಯೆ ನಡೆಯುವ ಯುದ್ಧಗಳನ್ನು ತಡೆಯಲು ಸಾಧ್ಯವೇ ?. ಅಮೇರಿಕ ಅಧ್ಯಕ್ಷ ಟ್ರಂಪ್ ನಮ್ಮುಂದಿರುವ ಉದಾಹರಣೆ ಅಲ್ಲವೇ ?. ಯುದ್ಧ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸುವವನು ನಿಶ್ವಾರ್ಥಿ, ಮಾನವ ಜನಾಂಗದ ಶಾಂತಿ ಬಯಸುವವನಾಗಿರಬೇಕು. ವಿಶ್ವ ಸಂಸ್ಥೆ ಸರ್ವನಾಶಕ ಯುದ್ಧಗಳನ್ನು ತಡೆಯುವ ಶಕ್ತಿದಾಯಕ ನೀತಿಯನ್ನು ರೂಪಿಸಿಕೊಳ್ಳಬೇಕು. ಯುದ್ಧದ ಕಿಡಿಗಳು ಬೆಂಕಿಯಾಗಿ, ಧಳ್ಳುರಿಯಾಗಿ ಒಂದು ದಿನ ಪ್ರಳಯವೇ ಆಗಬಹುದು. ಜನತೆ ಶಾಂತಿಯ ಹಡಗವನ್ನು ಕಾಯಲು ಸಂಘಟಿತ ಪ್ರಯತ್ನ ಮಾಡಲೇಬೇಕು. ಆಳುವ ವ್ಯವಸ್ಥೆಯ ಕುತಂತ್ರಗಳ ವಿರುದ್ಧ ಪ್ರತಿರೋಧ ಇರಲೇಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು. ವಿರೋಧಿ

ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸಮುದಾಯ, ಧಾರವಾಡ “ಸಮುದಾಯ-50” ಅಂಗವಾಗಿ ಏರ್ಪಡಿಸಿದ್ದ “ಯುದ್ಧ ತಂತ್ರ ಅಳಿಯಲಿ, ಶಾಂತಿ ಮಂತ್ರ ಮೊಳಗಲಿ” ಘೋಷಣೆಯಡಿ ನಡೆಸ ಯುದ್ಧ ವಿರೋಧಿ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: ಚಿತ್ರದುರ್ಗ| ಹಿಂಡಸಕಟ್ಟೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ

ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಶಶಿಧರ ತೋಡಕರ ಸಾಮ್ರಾಟ ಅಶೋಕ ಕಳಿಂಗ ಯುದ್ಧದ ಮಾರಣ ಹೋಮದಿಂದ ಕಂಗೆಟ್ಟು ತನ್ನ ಸಾಮ್ರಾಜ್ಯ ಹಾಳಾದರಾಗಲಿ ಎಂದು ಸದ್ಭಾವದಿಂದ ಶಾಂತಿಯ ಸಂದೇಶಕನಾಗಿ ಬದಲಾಗಿದ್ದು ಪ್ರೇರಣೆಯಾಗಬೇಕು. ಕನ್ನಡದ ವಿವೇಕ ಕೂಡ ಹಿಂಸೆಯನ್ನು ಒಪ್ಪಿಕೊಂಡಿಲ್ಲ. ಸಾವಿರ ವರ್ಷಗಳ ಹಿಂದೆನೇ ಯುದ್ಧ ಬೇಡ ಎಂದು ಆದಿಕವಿ ರನ್ನ ವಿವರಿಸಿದ್ದಾರೆ ಎಂದರಲ್ಲದೇ ಈ ಯುದ್ಧ ಸಂದರ್ಭಗಳಿಗೆ ಕೈಗನ್ನಡಿಯಾದ ಸವಿತಾ ನಾಗಭೂಷಣ ಅವರ “ಬಲಾಢ್ಯರು” ಕವನವನ್ನು ಓದಿದರು.

ಕವಿಗಳಾದ ಮಹಾಂತಪ್ಪ ನಂದೂರ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ನಿರ್ಮಲಾ ಶೆಟ್ಟರ, ಡಾ. ಲಿಂಗರಾಜ ರಾಮಾಪೂರ, ರಾಮಚಂದ್ರ ಕುಲಕರ್ಣಿ, ರಂಜಾನ ಕಿಲ್ಲೇದಾರ, ಸಿ.ಎಂ. ಮುನಿಸ್ವಾಮಿ, ಗಾಯತ್ರಿ ಬಡಿಗೇರ, ಎಸ್.ಎಸ್. ಚಿಕ್ಕಮಠ, ವಿರುಪಾಕ್ಷ ಕಟ್ಟಮನಿ, ಲಲಿತಾ ಚಾಕಲಬ್ಬಿ, ಸುಹಾಸಿನಿ ಕೊಕಡೊಳ್ಳಿ, ಮಲ್ಲಮ್ಮ ಯಾಟಗಲ್, ಜೋಸಫ್ ಮಲ್ಲಾಡಿ, ಡಾ. ಯೋಗೇಶ ಪಾಟೀಲ, ಸಿ.ಎಂ. ಚನ್ನಬಸಪ್ಪ ಅವರುಗಳು ಜನರ ಗಮನ ಸೆಳೆದ ಶಾಂತಿ ಸಂದೇಶ ಸಾರುವ ತಮ್ಮ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.

ಗೌರವಾಧ್ಯಕ್ಷ ಡಾ. ಶಿವಾನಂದ ಶೆಟ್ಟರ ಅವರು ಪ್ರಸ್ತಾವಿಕವಾಗಿ ಮಾತನಾಡಿ ಅಗಸ್ಟ್-06 ಹಿರೋಶಿಮಾ ನಾಗಾಸಾಕಿಯ ಮೇಲೆ ಸರ್ವನಾಶಕ ಬಾಂಬ್ ಹಾಕಿನ ಜಗತ್ತನ್ನೆ ತಲ್ಲಣಗೊಳಿಸಿದ ಈ ದಿನ ಶಾಂತಿ ಸಾರುವ ದಿನ ಎಂದರು.

ಅಧ್ಯಕ್ಷ ಬಿ.ಐ. ಈಳಿಗೇರ ಮಾತನಾಡಿದರು. ಸಮುದಾಯ ಕಲಾ ತಂಡದವರು ಯುದ್ಧ ವಿರೋಧಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಜಗತ್ತಿನ ಯುದ್ಧ, ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೀರಣ್ಣ ಹೊಸಮನಿ ನಿರೂಪಿಸಿದರು. ರಂಜಾನ್ ಕಿಲ್ಲೇದಾರ ಕವಿಗೋಷ್ಠಿ ಸಂಯೋಜಿಸಿದರು. ಜೋಸಫ್ ಮಲ್ಲಾಡಿ ವಂದಿಸಿದರು. ಸೋಮಲಿಂಗ ಉಳ್ಳಿಗೇರಿ, ಹೇಮಾ ಪಟ್ಟಣಶೆಟ್ಟಿ, ಎ.ಎಂ. ಖಾನ್, ಮಹೇಶ ಪತ್ತಾರ, ಈರಣ್ಣ ಐನಾಪೂರ, ಗಂಗಾಧರ ಗಾಡದ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ : ಅಧಿಕಾರ ದರ್ಪ, ಹಣದ ಅಹಂಕಾರ ಕೊನೆಯಾಗಲಿ Janashakthi Media

Donate Janashakthi Media

Leave a Reply

Your email address will not be published. Required fields are marked *