- ದೀಪಾವಳಿ ಹಬ್ಬದ ರಜೆಯ ವಿಚಾರವಾಗಿ ಇಬ್ಬರ ಯೋಧರ ನಡುವೆ ವಾಗ್ವಾದ
- ಕೋಪಗೊಂಡು ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ ಸೈನಿಕ
- ಘಟನೆಯಲ್ಲಿ ನಾಲ್ವರು ಸಿಆರ್‌ಪಿಎಫ್ ಯೋಧರ ಸಾವು ಹಲವರ ಸ್ಥಿತಿ ಗಂಭೀರ
ಛತ್ತೀಸ್‍ಗಢ : ಛತ್ತೀಸ್‌ಗಢದ ಸುಕ್ಮಾದ ಮರೈಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಯೋಧನಿಂದ ಫೈರಿಂಗ್ ನಡೆದಿದ್ದು, ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಛತ್ತೀಸ್ ಗಢದ ಮರೈಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯ ರಾಜಧಾನಿ ರಾಯ್‍ಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ ಮರೈಗುಡೆಮ್‍ನಲ್ಲಿರುವ ಲಿಂಗಂಪಲ್ಲಿಯ 50ನೇ ಬೆಟಾಲಿಯನ್‍ನ ಶಿಬಿರದಲ್ಲಿ ಸಿಆರ್‍ಪಿಎಫ್ ಯೋಧರ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆ ಮುಂಜಾನೆ 3.30ರ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ. ಹೇಳಿದ್ದಾರೆ.
ತೆಲಂಗಾಣ-ಛತ್ತೀಸ್‌ಗಢ ಗಡಿ ಭಾಗದಲ್ಲಿ ಸೋಮವಾರ ಬೆಳಗ್ಗೆ, ದೀಪಾವಳಿ ರಜೆ ವಿಚಾರವಾಗಿ ಇಬ್ಬರು ಯೋಧರ ನಡುವೆ ನಡೆದ ಕಿತ್ತಾಟ ನಡೆದಿದೆ. ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ತಾರಕ್ಕೇರಿದ್ದು, ಪರಸ್ಪರ ಗನ್‌ಗಳಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಬಿಹಾರದ ರಾಜಮಣಿ ಯಾದವ್, ದಾಂಜಿ ಮತ್ತು ಬಂಗಾಳದ ರಾಜುಮಂಡಲ್ ಎಂಬ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಾಳುಗಳನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ನಡುವೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆಂದು ವರದಿಗಳು ತಿಳಿಸಿವೆ.