ಪ್ರಕಾಶ ಕಾರಟ್
ಹರಿದ್ವಾರ ಮತ್ತಿತರ ಕಡೆಗಳಿಂದ ಕೇಳಬರುತ್ತಿರುವ ‘ದ್ವೇಷ ಭಾಷಣಗಳು’ ಆವೇಶಭರಿತ ಮಾತುಗಾರಿಕೆಗಷ್ಟೇ ಸೀಮಿತವಾದವುಗಳಲ್ಲ. ಅವುಗಳು ದೈನಂದಿನ ಜೀವನದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ದಬ್ಬಾಳಿಕೆ ನಡೆಸುವಲ್ಲಿ ಪರ್ಯಾವಸಾನವಾಗುತ್ತಿವೆ, ಪ್ರತಿಫಲನಗೊಳ್ಳುತ್ತಿವೆ. ಇವೆಲ್ಲ ಕೇವಲ ದ್ವೇಷ ಭಾಷಣಗಳಾಗಿ ಉಳಿದಿಲ್ಲ. ಹಿಂಸಾಚಾರಕ್ಕೆ ಹಾಗೂ ಜನಾಂಗೀಯ ನಾಶಕ್ಕೇ ಬಹಿರಂಗ ಕರೆಯಾಗಿವೆ. ಇವನ್ನು ಸಂಘಟಿಸಿದವರು ಭಾರತವನ್ನು ‘ಹಿಂದೂರಾಷ್ಟ್ರ’ ಮಾಡುವತ್ತ ‘ಧರ್ಮ ಸಂಸದ್’ ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ಇಸ್ಲಾಂ ವಿರುದ್ಧದ ಹೋರಾಟಕ್ಕೆ ಕರೆ ಕೊಟ್ಟಿದ್ದೇ ಮಾತ್ರವಲ್ಲದೆ ಅಖಾಡಾಗಳನ್ನು ಶಸ್ತಾಸ್ತ್ರ ತರಬೇತಿ ಹಾಗೂ ಹಿಂದು ‘ಧರ್ಮ ರಕ್ಷಣೆ’ಯ ಗುಂಪುಗಳ ಕೇಂದ್ರವಾಗಿ ಮಾಡಲಾಗುವುದು ಎಂದೂ ಅವರು ಘೋಷಿಸಿದ್ದಾರೆ. ಇವರೆಲ್ಲರೂ ಹಿಂದೂ ರಾಷ್ಟ್ರ ಹೇರುವ ಉದ್ದೇಶದಿಂದ ಸಂವಿಧಾನ ಮತ್ತು ಪ್ರಭುತ್ವದ ಸಂಸ್ಥೆಗಳನ್ನು ಬುಡಮೇಲು ಮಾಡುವ ಹಿಂದುತ್ವ ಸೇನೆಯ ಭಾಗವಾಗಿದ್ದಾರೆ. ಆದರೆ ಉತ್ತರಾಖಂಡ ಪೊಲೀಸರು ಮಾತ್ರ ಇನ್ನೂ ದೃಢವಾದ ಪುರಾವೆಗಾಗಿ ಹುಡುಕಾಡುತ್ತಿದ್ದಾರೆ!.
ಹರಿದ್ವಾರದಲ್ಲಿ 2021ರ ಡಿಸೆಂಬರ್ 17ರಿಂದ 19ರ ವರೆಗೆ ದ್ವೇಷ ಭಾಷಣ ಹರಿಬಿಟ್ಟ ‘ಧರ್ಮಸಂಸದ್’ ನಡೆದು ಎರಡು ವಾರವಾದರೂ ಒಬ್ಬನೇ ಒಬ್ಬನನ್ನೂ ಇದುವರೆಗೆ ಬಂಧಿಸಲಾಗಿಲ್ಲ. ಮುಸ್ಲಿಮರ ಮೇಲೆ ದಾಳಿ ಮಾಡಲು ಮತ್ತು ಸಾಮೂಹಿಕ ಹತ್ಯೆ ನಡೆಸಿ ನಿರ್ಮೂಲಗೊಳಿಸಬೇಕು ಎಂದು ಅಲ್ಲಿ ಕರೆಗಳನ್ನು ಕೊಡಲಾಗಿತ್ತು. ದಾಖಲಾದ ಮೊದಲ ಎಫ್‌ಐಆರ್‌ನಲ್ಲಿ ಒಂದೇ ಒಂದು ಹೆಸರು ಉಲ್ಲೇಖಗೊಂಡಿದೆ. ಅದರಲ್ಲೂ ಹಿಂದೂ ಧರ್ಮಕ್ಕೆ ಮತಾಂತರಗೊAಡ ಒಬ್ಬ ಮುಸ್ಲಿಮನ ಹೆಸರು ಅದಾಗಿದೆ. ಆನಂತರ, ಇನ್ನೊಂದು ಎಫ್‌ಐಆರ್ ದಾಖಲಾಗಿದ್ದು ಈ ಸಮಾರಂಭದ ಸಂಘಟಕ ಯತಿ ನರಸಿಂಘಾನಂದ ಸಹಿತ ಇನ್ನೂ ನಾಲ್ಕು ಹೆಸರುಗಳು ಅದರಲ್ಲಿ ನಮೂದಾಗಿವೆ.
ದ್ವೇಷ ಭಾಷಣ ವಿಚಾರದ ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಉತ್ತರಾಖಂಡ ಸರ್ಕಾರ ಜನವರಿ 1ರಂದು ಪ್ರಕಟಿಸಿದೆ. ದೃಢವಾದ ಪುರಾವೆ ಸಿಕ್ಕರಷ್ಟೇ ಬಂಧನ ಮಾಡಲಾಗುತ್ತದೆ ಎಂದು ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್‌ಐಟಿ ಉಸ್ತುವಾರಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪುರಾವೆ ಸಾರ್ವಜನಿಕವಾಗಿದೆ
ದ್ವೇಷ ಭಾಷಣಕ್ಕೆ ಪುರಾವೆ ಸಾರ್ವಜನಿಕವಾಗಿಯೇ ಇದೆ. ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿತ್ತು. ಭಾಷಣದ ವಿಡಿಯೋಗಳು ವ್ಯಾಪಕವಾಗಿ ಪ್ರಸಾರವಾಗಿವೆ. ಒಬ್ಬರಾದ ನಂತರ ಇನ್ನೊಬ್ಬ ಭಾಷಣಕಾರ ಶಸ್ರಾಸ್ತ್ರ ಕೈಗೆತ್ತಿಕೊಂಡು ಮುಸ್ಲಿಮರ ನರಮೇಧ ನಡೆಸಬೇಕೆಂದು, ಹಳ್ಳಿಗಳನ್ನು ಮುಸ್ಲಿಮರಿಂದ ಮುಕ್ತಗೊಳಿಸಬೇಕೆಂದು ಕರೆ ಕೊಟ್ಟಿದ್ದನ್ನು ಇವುಗಳು ತೋರಿಸುತ್ತವೆ. ಒಬ್ಬ ಭಾಷಣಕಾರನಂತೂ ತನಗೆ ಅವಕಾಶ ಸಿಕ್ಕಿದ್ದರೆ (ಮಾಜಿ) ಪ್ರಧಾನಿ ಮನಮೋಹನ್ ಸಿಂಗ್‌ರನ್ನು ರಿವಾಲ್ವರ್‌ನಿಂದ ಹೊಡೆದು ಸಾಯಿಸುತ್ತಿದ್ದೆ ಎಂದು ಹೇಳಿದ್ದೂ ದಾಖಲಾಗಿದೆ. ಇವೆಲ್ಲ ಕೇವಲ ದ್ವೇಷ ಭಾಷಣವಾಗಿ ಉಳಿದಿಲ್ಲ. ಹಿಂಸಾಚಾರಕ್ಕೆ ಹಾಗೂ ಜನಾಂಗೀಯ ನಾಶಕ್ಕೆ ಬಹಿರಂಗ ಕರೆಯಾಗಿದೆ. ಆದರೆ ಉತ್ತರಾಖಂಡ ಪೊಲೀಸರು ಮಾತ್ರ ಇನ್ನೂ ದೃಢವಾದ ಪುರಾವೆಗಾಗಿ ಹುಡುಕಾಡುತ್ತಿದ್ದಾರೆ! ಐಪಿಸಿಯ 153ನೇ ಸೆಕ್ಷನ್ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಸಾಮರಸ್ಯ ಕೆಡಿಸಲು, ವೈರತ್ವಕ್ಕೆ ಅಥವಾ ವಿವಿಧ ಗುಂಪುಗಳ ಮಧ್ಯೆ ಧರ್ಮದ ಆಧಾರದಲ್ಲಿ ದ್ವೇಷ ಭಾವನೆ ಬಿತ್ತಲು ಪ್ರಚೋದನೆ ಕೊಡುವುದು ಅಪರಾಧ ಎನ್ನುತ್ತದೆ ಈ ಸೆಕ್ಷನ್. ಆದರೆ ಇಲ್ಲಿ ಅದಕ್ಕಿಂತಲೂ ದೊಡ್ಡ ಅಪರಾಧ ಎಸಗಲಾಗಿದೆ.
‘ಧರ್ಮ ಸಂಸದ್’ನ ಸಂಘಟಕರು ಅಥವಾ ಅದರಲ್ಲಿ ಪಾಲ್ಗೊಂಡವರು ಪ್ರಕರಣದಲ್ಲಿ ದಾಖಲಿಸಿದ ಎಫ್‌ಐಆರ್ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ‘ಧರ್ಮ ಸಂಸದ್’ ನಡೆದ ಒಂದು ವಾರದ ನಂತರ, ಅಂದರೆ ಡಿಸೆಂಬರ್ 28ರಂದು ವಿವಿಧ ಅಖಾಡಗಳ ಸ್ವಾಮಿಗಳು ಸಭೆ ಸೇರಿ 21 ಸದಸ್ಯರ ಕೋರ್ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಅದರಲ್ಲಿ ನರಸಿಂಘಾನಂದ ಮತ್ತು ಸಂಸತ್‌ನಲ್ಲಿ ಭಾಗವಹಿಸಿದ್ದ ಐವರು ಇತರರೂ ಇದ್ದಾರೆ. ಇಸ್ಲಾಂ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಅವರು ಘೋಷಿಸಿದ್ದಾರೆ. ಕುರಾನ್ ವಿರುದ್ಧ ಹಾಗೂ ನಗರದ ಅನೇಕ ಮೌಲಾನಾಗಳು ಮತ್ತು ಇಮಾಮರ ವಿರುದ್ಧ ಹರಿದ್ವಾರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮಟ್ಟಕ್ಕೂ ಅವರು ಹೋಗಿದ್ದಾರೆ.
‘ಹಿಂದೂರಾಷ್ಟ್ರ’ ಮತ್ತು ‘ಧರ್ಮಸಂಸದ್’
ಭಾರತವನ್ನು ‘ಹಿಂದೂರಾಷ್ಟ್ರ’ ಮಾಡುವತ್ತ ‘ಧರ್ಮ ಸಂಸದ್’ ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಂ ವಿರುದ್ಧದ ಹೋರಾಟಕ್ಕೆ ಕರೆ ಕೊಟ್ಟಿದ್ದೇ ಮಾತ್ರವಲ್ಲದೆ ಅಖಾಡಾಗಳನ್ನು ಶಸ್ತ್ರಾಸ್ತ್ರ ತರಬೇತಿ ಹಾಗೂ ಹಿಂದು ‘ಧರ್ಮ ರಕ್ಷಣೆ’ಯ ಗುಂಪುಗಳ ಕೇಂದ್ರವಾಗಿ ಮಾಡಲಾಗುವುದು ಎಂದೂ ಅವರು ಘೋಷಿಸಿದ್ದಾರೆ.
ಪ್ರಸ್ತುತ ಕಾನೂನಿನ ಅನ್ವಯ ಯಾವ ರೀತಿಯಲ್ಲಿ ನೋಡಿದರೂ ಇದೊಂದು ದೇಶದ್ರೋಹದ ಪ್ರಕರಣವಾಗಿದೆ. ಹಿಂಸೆಗೆ ಕರೆ ನೀಡಿದರೆ ಅಥವಾ ಪ್ರಚೋದನೆ ಇದ್ದಾಗ ಮಾತ್ರವೇ ದೇಶದ್ರೋಹದ ಸೆಕ್ಷನ್ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ವ್ಯಾಖಾನಿಸಿದೆ.
ಹರಿದ್ವಾರ ಪ್ರಕರಣ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿವೆ. ಮುಸ್ಲಿಂ-ವಿರೋಧಿ ಭಾಷಣ ಮಾಡಿದ ಹಾಗೂ ಅವರನ್ನು ಸರ್ವನಾಶ ಮಾಡಲು ಕರೆ ಕೊಟ್ಟ ಕೇಸರಿಧಾರಿ ಪುರುಷರು ಮತ್ತು ಮಹಿಳೆಯರು ಯಾವುದೋ ಕೆಲವು ಪುಡಿ ಶಕ್ತಿಗಳಲ್ಲ. ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಹಿತ ಹಿಂದುತ್ವದ ಮುಖ್ಯವಾಹಿನಿಯನ್ನು ಪ್ರತಿನಿಧಿಸುವವರಾಗಿದ್ದಾರೆ. ಅವರಿಗೆ ಪ್ರಭುತ್ವದ ರಕ್ಷಣೆ ಇದೆಯೆನ್ನುವುದಕ್ಕೆ ಒಂದು ಚಿತ್ರವೇ ಸಾಕ್ಷಿಯಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ‘ಧರ್ಮ ಸಂಸದ್’ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರಲ್ಲಿ ಒಬ್ಬರಾದ ಸ್ವಾಮಿ ಪ್ರಬೋಧಾನಂದರ ಪಾದಸ್ಪರ್ಶ ಮಾಡಿದ್ದು ಆ ಚಿತ್ರದಲ್ಲಿದೆ.
ಹರಿದ್ವಾರದ ಈ ಮೇಳವು ಆರ್‌ಎಸ್‌ಎಸ್ ಸಂಸ್ಥೆಗಳು ಹಾಗೂ ಬಿಜೆಪಿ ನಾಯಕರ ಭಾಷಣಗಳು ಹಾಗೂ ವಾಗಾಡಂಬರದ ಭಾಗವಾಗಿತ್ತು. ಯೋಗಿ ಆದಿತ್ಯನಾಥ ಪದೇ ಪದೇ ಮಾಡುವ ಮುಸ್ಲಿಂ ವಿರೋಧಿ ಭಾಷಣದಿಂದ ಹಿಡಿದು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆ ತರಲು ಮಠ ಮತ್ತು ಮಂದಿರಗಳನ್ನು ಬಳಸಿಕೊಳ್ಳಬೇಕೆಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈಚೆಗೆ ನೀಡಿದ್ದ ಕರೆಯ ವರೆಗೆ ಅದು ಗಟ್ಟಿಯಾಗಿ ಹರಡಿಕೊಂಡಿದೆ. ಈ ‘ದ್ವೇಷ ಭಾಷಣಗಳು’ ಆವೇಶಭರಿತ ಮಾತುಗಾರಿಕೆಗಷ್ಟೇ ಸೀಮಿತವಾದವುಗಳಲ್ಲ್ಲ. ಅವುಗಳು ದೈನಂದಿನ ಜೀವನದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ದಬ್ಬಾಳಿಕೆ ನಡೆಸುವಲ್ಲಿ ಪರ್ಯಾವಸಾನವಾಗುತ್ತಿವೆ, ಪ್ರತಿಫಲನಗೊಳ್ಳುತ್ತಿವೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಂಥ ರಾಜ್ಯಗಳಲ್ಲಿ ಬೀದಿಬದಿ ವ್ಯಾಪಾರಿಗಳು, ಸಂಚಾರಿ ವ್ಯಾಪಾರಿಗಳು ಮತ್ತು ಆಟೋ ಚಾಲಕರಂಥ ಸಾಮಾನ್ಯ ಮುಸ್ಲಿಮರ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ದಬ್ಬಾಳಿಕೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಕ್ರೈಸ್ತರು ಹಾಗೂ ಅವರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ.
ಹಿಂದುತ್ವ ಸೇನೆಯ ಭಾಗ
ಆರ್‌ಎಸ್‌ಎಸ್‌ನ ಬಜರಂಗ ದಳ, ವಿಶ್ವ ಹಿಂದು ಪರಿಷತ್ ಮತ್ತಿತರ ಸಂಘಟನೆಗಳು, ‘ಧರ್ಮ ಸಂಸದ್’ನ ಸಾಧುಗಳು ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು -ಇವರೆಲ್ಲರೂ ಹಿಂದೂ ರಾಷ್ಟ್ರ ಹೇರುವ ಉದ್ದೇಶದಿಂದ ಸಂವಿಧಾನ ಮತ್ತು ಪ್ರಭುತ್ವದ ಸಂಸ್ಥೆಗಳನ್ನು ಬುಡಮೇಲು ಮಾಡುವ ಹಿಂದುತ್ವ ಸೇನೆಯ ಭಾಗವಾಗಿದ್ದಾರೆ.
ಫ್ಯಾಸಿಸ್ಟ್ ತೆರನ ಹಿಂದುತ್ವ ಶಕ್ತಿಗಳು ಒಡ್ಡಿರುವ ಅಪಾಯದ ಗಹನತೆಯನ್ನು ಅರ್ಥ ಮಾಡಿಕೊಳ್ಳಲು ಕೆಲವು ಜಾತ್ಯತೀತ ಪ್ರತಿಪಕ್ಷಗಳು ವಿಫಲವಾಗಿರುವುದು ವಿಷಾದದ ಸಂಗತಿಯಾಗಿದೆ. ಕೆಲವರು ಘಟನೆ ಬಗ್ಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ, ಕೆಲವರು ಖಂಡಿಸಿದ್ದಾರೆ. ಇನ್ನು ಕೆಲವರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಷಯದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಾತಿನಲ್ಲಿ ಖಂಡಿಸಿದರೆ ಮಾತ್ರವೇ ಸಾಲದು. ಸತತ ಸಂಘಟಿತ ಹೋರಾಟ ಅಗತ್ಯವಾಗಿದೆ. ಮತಾಂಧ ಶಕ್ತಿಗಳು ಬೇಕಾಬಿಟ್ಟಿಯಾಗಿ ವರ್ತಿಸಲು ಬಿಜೆಪಿ-ಆಳ್ವಿಕೆಯ ರಾಜ್ಯಗಳಲ್ಲಿ ಅವಕಾಶ ನೀಡಲಾಗಿದೆ. ಇಂಥ ಸನ್ನಿವೇಶದಲ್ಲಿ, ಈ ಶಕ್ತಿಗಳನ್ನು ಎದುರಿಸಿ ಹಿಮ್ಮೆಟ್ಟಿಸುವುದು ಜಾತ್ಯತೀತ ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳ ಕರ್ತವ್ಯವಾಗಿದೆ.
ಅನು: ವಿಶ್ವ