ಕಮಲ-ದಳ ಮೈತ್ರಿ ಲೆಕ್ಕಾಚಾರ :ಜೆಡಿಎಸ್ ಮುಂದಿವೆ ಹಲವಾರು ಸವಾಲುಗಳು

ಮೈಸೂರು: ಜೆಡಿಎಸ್ ಮತ್ತು ಬಿಜೆಪಿ ನಡುವೆ ಬೆಳೆಯುತ್ತಿರುವ ಸೌಹಾರ್ದತೆ ಮತ್ತು ಸಹಕಾರವು ಮುಂಬರುವ ಲೋಕಸಭೆ ಚುನಾವಣೆಗೆ ಅವರ ಸಂಭಾವ್ಯ ಮೈತ್ರಿ ಅಥವಾ ಸಹಯೋಗದ ಬಗ್ಗೆ ರಾಜಕೀಯ ವಲಯಗಳಲ್ಲಿ ವ್ಯಾಪಕ ಊಹಾಪೋಹಗಳಿಗೆ ಮತ್ತು ಚರ್ಚೆಗೆ ಕಾರಣವಾಗಿದೆ. ಆದರೆ, ಇದು ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಕರ್ನಾಟಕ ರಾಜಕೀಯದಲ್ಲಿ ತನ್ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವಲ್ಲಿ ಸಂಕಷ್ಟ ಎದುರಿಸುತ್ತಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ನಂತರ ನಾಯಕತ್ವದೊಂದಿಗೆ ಜೆಡಿಎಸ್‌ಗೆ ಹಲವು ಸವಾಲುಗಳು ಎದುರಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜಕೀಯವಾಗಿ ಪುಟಿದೇಳುವ ಜೊತೆಗೆ ತನ್ನ ಬೆಂಬಲಿಗರನ್ನು ಹಿಡಿದಿಟ್ಟುಕೊಳ್ಳುವ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ತನ್ನ ನೆಲೆಯನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ.

ಇದನ್ನೂ ಇದಿ:ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆ “ಕುರುಡನ ಹೆಗಲ ಮೇಲೆ ಕುಂಟನ ಸವಾರಿ”ಯಂತಿದೆ! ಕಾಂಗ್ರೆಸ್‌ ಟ್ವೀಟ್

ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವುದು ಪಕ್ಷದೊಳಗೆ ಗೊಂದಲಕ್ಕೆ ಕಾರಣವಾಗಬಹುದು. ಏಕೆಂದರೆ, ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಈ ಕ್ರಮದಿಂದ ಅಸಮಾಧಾನಗೊಂಡಿದ್ದಾರೆ. ಪ್ರಾದೇಶಿಕ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಾನ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಒಂದು ಗುಂಪು ಇನ್ನೂ ನಂಬುತ್ತದೆ. ಅದರಲ್ಲೂ ವಿಶೇಷವಾಗಿ, ಬಿಜೆಪಿ ವಿರುದ್ಧ ಧ್ವನಿಯೆತ್ತಿರುವ ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕುಮಾರಸ್ವಾಮಿ ಅವರ ನಡೆಯಿಂದಾಗಿ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಬೆಳವಣಿಗೆಗಳ ನಂತರ ಅವರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ, ಇನ್ನು ಕೆಲವರು ಬಿಜೆಪಿಯೊಂದಿಗಿನ ಮೈತ್ರಿಯು ಮುಂದಿನ ದಿನಗಳಲ್ಲಿ ಒಂದೆರಡು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷಕ್ಕೆ ಲಾಭದಾಯಕವಾಗಲಿದೆ ಎಂದೇ ಭಾವಿಸಿದ್ದಾರೆ. ಆದರೆ, ಇದು ದೀರ್ಘಾವಧಿಯಲ್ಲಿ ಹಾನಿಕಾರಕವಾಗಿ ಮಾರ್ಪಡಬಹುದು.

ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವಲ್ಲಿ ವಿಫಲವಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಉಲ್ಲೇಖಿಸಿದ ಜೆಡಿಎಸ್ ಮುಖಂಡರೊಬ್ಬರು, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮೈತ್ರಿಯ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗದ ಕಾರಣಕ್ಕಾಗಿ ಸೋತಿದ್ದಾರೆ ಎಂದು ಹೇಳಿದರು.

ಶಿವಸೇನೆ, ಎನ್‌ಸಿಪಿ ಮತ್ತು ಎಲ್‌ಜೆಪಿಯಂತಹ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಹತ್ತಿಕ್ಕುತ್ತಿರುವ ಉದಾಹರಣೆಗಳನ್ನು ಕೆಲವು ನಾಯಕರು ಉಲ್ಲೇಖಿಸುತ್ತಾರೆ. 2019ರಂತಹ ಪರಿಸ್ಥಿತಿಯನ್ನು ತಪ್ಪಿಸಲು ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮತ್ತೊಂದು ಮೂಲಗಳು ತಿಳಿಸಿವೆ. ಮಾಜಿ ಮೇಯರ್ ರವಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಮತ್ತು ಕಾಂಗ್ರೆಸ್‌ಗೆ ಮತ ಹಾಕಿರುವ ಮುಸ್ಲಿಮರು ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯ ತ್ಯಜಿಸಿದ ನಂತರ ಜೆಡಿಎಸ್‌ಗೆ ಮರಳಲಿದ್ದಾರೆ ಎಂದು ಹೇಳಿದರು. ಈಮಧ್ಯೆ, ಬಿಜೆಪಿಯೊಂದಿಗೆ ಯಾವುದೇ ವಿಲೀನವನ್ನು ತಳ್ಳಿಹಾಕಿದ ದೇವೇಗೌಡರು, ಎಲ್ಲಾ ವರ್ಗಗಳನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷವನ್ನು ಸಂಘಟಿಸುವಂತೆ ಮುಖಂಡರಿಗೆ ಕರೆ ನೀಡಿದರು. ಹಿರಿಯ ಶಾಸಕ ಜಿ.ಟಿ. ದೇವೇಗೌಡ ಹಾಗೂ ಇತರರಿಗೆ ರಾಜ್ಯ ಪ್ರವಾಸ ಮಾಡಿ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ಮೂಲೆಗುಂಪು ಮಾಡಲು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದೇವೆ ಎಂದು ಜೆಡಿಎಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ ಮತ್ತು ಬಿಜೆಪಿ ನಾಯಕರಿಂದ ಹಲವಾರು ಪ್ರಸ್ತಾಪಗಳು ಬಂದಿದ್ದರೂ, ಲೋಕಸಭೆ ಚುನಾವಣೆಗೆ ಮೈತ್ರಿಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಆದಾಗ್ಯೂ, ಬಿಜೆಪಿಯು ಜೆಡಿಎಸ್ ಅನ್ನು ಹೇಗೆ ಪರಿಗಣಿಸುತ್ತದೆ ಮತ್ತು ಬೇಡಿಕೆಗಳನ್ನು ಅವಲಂಬಿಸಿ ಮೈತ್ರಿಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಕ್ಷಕ್ಕೆ ಪುನಶ್ಚೇತನ ನೀಡುವ ನಿರ್ಧಾರ ಕೈಗೊಳ್ಳಲು ಕುಮಾರಸ್ವಾಮಿ ಅವರಿಗೆ ಪಕ್ಷ ಅಧಿಕಾರ ನೀಡಿದೆ. ಯುವಕರು ಮತ್ತು ಮಹಿಳೆಯರನ್ನು ಸೆಳೆಯುವ ಮೂಲಕ ಪಕ್ಷವನ್ನು ಪುನರುಜ್ಜೀವನಗೊಳಿಸಲು ಪಕ್ಷದ ನಾಯಕರು ರಾಜ್ಯ ಪ್ರವಾಸ ಮಾಡುತ್ತಾರೆ ಎಂದು ಜಿಟಿ ದೇವೇಗೌಡ ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನ ಹರಿಸುತ್ತಿದ್ದು, ಸರ್ಕಾರವು ತನ್ನ ಭರವಸೆಗಳು ಮತ್ತು ಕಾರ್ಯಕ್ರಮಗಳನ್ನು ಈಡೇರಿಸುವತ್ತ ಗಮನಹರಿಸಿರುವುದರಿಂದ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *