ಸಿಎಜಿ ವರದಿಗಳು : ಇವುಯಾರು“ತಿಂದ”ಕತೆಗಳೋ

(ಸಂಗ್ರಹ ಕೆ. ವಿ)

ಭಾರತದ ಮಹಾಲೆಕ್ಕ ಪರಿಶೋಧಕರ(ಸಿಎಜಿ) ಕಚೇರಿ ಇತ್ತೀಚೆಗೆ 12 ವರದಿಗಳನ್ನು ಬಿಡುಗಡೆ ಮಾಡಿದೆ. ಇವು ತೆರಿಗೆದಾರರ ಹಣವನ್ನು ಸರಕಾರ ಹೇಗೆ ಖರ್ಚು ಮಾಡಿದೆ ಎಂಬುದನ್ನು ಪರಿಶೋಧಿಸಿರುವ ವರದಿಗಳು. ಇವು ಹೆದ್ದಾರಿ ಯೋಜನೆಗಳಲ್ಲಿ ಬೃಹತ್ ಭ್ರಷ್ಟಾಚಾರಗಳು ನಡೆದಿವೆ, ರೈಲ್ವೆಯಲ್ಲಿ ಮಂಜೂರಾತಿಯಿಲ್ಲದೆ ಖರ್ಚುಗಳನ್ನು ಮಾಡಲಾಗಿದೆ, ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ ನಿಧಿ ಮಂಜೂರು ಮಾಡಿದೆ, ಪಿಂಚಣಿ ಯೋಜನೆಯ ನಿಧಿಗಳನ್ನು ಬೇರೆ ಯೋಜನೆಗಳ ಪ್ರಚಾರಕ್ಕೆ ಬಳಸಲಾಗಿದೆ, ಎಲ್ಲಕ್ಕೂ ಮಿಗಿಲಾಗಿ, ಬಹುಪ್ರಚಾರಿತ ಆಯುಷ್ಮಾನ್ ಯೋಜನೆಯಲ್ಲಿ ಭ್ರಷ್ಟಾಚಾರದತ್ತ ಬೊಟ್ಟು ಮಾಡುತ್ತಿವೆ.

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರದ ವಿಷಯದಲ್ಲಿ ಸರಕಾರದ ವಿಫಲತೆಯಿಂದಾಗಿ ಉಂಟಾದ ಸನ್ನಿವೇಶದಲ್ಲಿ ಒಂದೆಡೆಯಲ್ಲಿ ಹಲವು ಮಸೂದೆಗಳನ್ನು ಚರ್ಚೆಯಿಲ್ಲದೆ ಪಾಸು ಮಾಡಿಸಿಕೊಳ್ಳಲಾಯಿತು. ಇನ್ನೊಂದೆಡೆಯಲ್ಲಿ ಈ ಸಿಎಜಿ ವರದಿಗಳನ್ನು ಸದ್ದಿಲ್ಲದೆ ಸದನದಲ್ಲಿ ಮಂಡಿಸಲಾಯಿತು. ಸಂಸತ್ತಿನಲ್ಲಿ ಚರ್ಚೆ ಸಾಧ್ಯವಿರಲಿಲ್ಲ. ‘ಗೋದಿ ಮೀಡಿಯಾ’ದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ನಿರೀಕ್ಷಿಸುವಂತೆಯೇ ಇಲ್ಲವಲ್ಲ. ಆದರೆ ಜನ-ಪರ ಪರ್ಯಾಯ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ.

‘ಆಯುಷ್ಮಾನ್ ಭಾರತ” – ನಿಜವಾಗಿ ಯಾರ ಪ್ರಯೋಜನಕ್ಕಾಗಿ?

ಮುಖ್ಯವಾಗಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ(ಪಿಎಂಜೆಎವೈ) ಕುರಿತ ಸಿಎಜಿ ಟಿಪ್ಪಣಿಗಳು ಬಹಳ ಗಂಭೀರ ಸ್ವರೂಪದವುಗಳು ಎಂದು ಪರಿಣಿತರು ಅಭಿಪ್ರಾಯ ಪಡುತ್ತಿದ್ದಾರೆ.

ಇದು ಜಗತ್ತಿನಲ್ಲೇ ಅತಿ ದೊಡ್ಡ ಸರಕಾರೀ ಆರೋಗ್ಯ ಪಾಲನೆ ಕಾರ್ಯಕ್ರಮ ಎಂದು ಪ್ರಧಾನಿಗಳು ಬೆನ್ನು ತಟ್ಟಿಕೊಂಡಿರುವ ‘ಆಯುಷ್ಮಾನ್ ಭಾರತ್” ಯೋಜನೆ ಎಂಬುದರ ಭಾಗ. 2018ರಲ್ಲಿ ಪ್ರಾರಂಭವಾದ ಈ ಯೋಜನೆ ಬಡಜನರ ಆರೋಗ್ಯ ವಿಮೆಗಾಗಿ ಇರುವ ಭಾರತ ಸರಕಾರದ ಒಂದು ಪ್ರಮುಖ ಯೋಜನೆ. ಇದು ಪ್ರತಿ ಕುಟುಂಬಕ್ಕೆ 5ಲಕ್ಷ ರೂ. ವರೆಗಿನ ವಿಮಾ ರಕ್ಷಣೆಯನ್ನು ಕೊಡುತ್ತದೆ.

ಈ ಯೋಜನೆಗೆ ಅರ್ಹರಲ್ಲದ ಕುಟುಂಬಗಳು ಇದರ ಅಡಿಯಲ್ಲಿ 12 ಲಕ್ಷ ರೂ.ನಿಂದ 22.44 ಕೋಟಿ ರೂ.ಗಳ ವರೆಗೆ ಪ್ರಯೋಜನಗಳನ್ನು ಪಡೆದಿವೆ ಎಂದು ಸಿಎಜಿ ಗಮನಿಸಿದೆ.

ಈ ಯೋಜನೆಯನ್ನು ನಿರ್ವಹಿಸುವ ‘ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ’(ಎನ್‌ಹೆಚ್‌ಎ)ದ ಪ್ರಕಾರ 7.87 ಕೋಟಿ ಕುಟುಂಬಗಳು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿವೆ. ಅಂದರೆ 73% ಗುರಿಯನ್ನು ತಲುಪಿದೆ. ಇನ್ನೊಂದು ವರದಿಯ ಪ್ರಕಾರ ಎನ್‌ಹೆಚ್‌ಎ ದತ್ತಾಂಶ ಭಂಡಾರ( ಡಾಟಾಬೇಸ್)ದಲ್ಲಿ 24.42 ಕೋಟಿ ಫಲಾನುಭವಿಗಳ ನೋಂದಾವಣೆಯಾಗಿದೆ. ಇದುವರೆಗೆ ಈ ಯೋಜನೆಯ ಅಡಿಯಲ್ಲಿ 67,456.21 ಕೋಟಿ ರೂ.ಗಳ ವೆಚ್ಚವಾಗಿದೆ

ಈ ನೋಂದಾವಣೆ ವಿಧಾನದಲ್ಲಿ ಸಾಕಷ್ಟು ಹತೋಟಿಗಳ ಕೊರತೆಯಿಂದಾಗಿ ಫಲಾನುಭವಿಗಳ ದತ್ತಾಂಶ ನೆಲೆಯಲ್ಲಿ ಬಹಳಷ್ಟು ತಪ್ಪುಗಳು ಪತ್ತೆಯಾಗದೆ ಹೋಗಿವೆ ಎಂದಿರುವ ಸಿಎಜಿ ಗಮನಿಸಿದ ಇತರ ದೋಷಗಳು ಹೀಗಿವೆ:

* 2.25 ಲಕ್ಷ ಕೇಸುಗಳಲ್ಲಿ ಶಸ್ತ್ರಚಿಕಿತ್ಸೆಯ ದಿನಾಂಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ದಿನಾಂಕದ ನಂತರದ್ದಾಗಿದೆ. ಇದರಲ್ಲಿ 1.79ಲಕ್ಷ ಕೇಸುಗಳು ಮಹಾರಾಷ್ಟ್ರದ್ದೇ ಆಗಿದ್ದು, ಇದರ ‘ಫಲಾನುಭವಿ’ಗಳ ಲೆಕ್ಕದಲ್ಲಿ 300 ಕೋಟಿ ರೂ. ಖರ್ಚಾಗಿದೆ ಎಂದು ಲೆಕ್ಕಪತ್ರಗಳು ತೋರಿಸುತ್ತವೆ.

* 45,846 ಕೇಸುಗಳಲ್ಲಿ ಆಸ್ಪತ್ರೆಗೆ ದಾಖಲಾದ ದಿನಾಂಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದ ನಂತರದ್ದಾಗಿದೆ.

* ದತ್ತಾಂಶಗಳ ಪ್ರಕಾರ 88,760 ರೋಗಿಗಳು ಆರೈಕೆಯ ವೇಳೆಯಲ್ಲಿ ಸತ್ತರು. ಆದರೂ ಈ ‘ಸತ್ತ’ ರೋಗಿಗಳಿಗೆ ನೀಡಿದ ಹೊಸ ‘ಆರೈಕೆ’ಗಳಿಗೆ ಹಣ ಪಾವತಿ ಮಾಡಿದ 2,14,923 ಕೇಸುಗಳು ದಾಖಲಾಗಿವೆ. 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದಾವೆಗಳ ಇತ್ಯರ್ಥಕ್ಕೆ ಸುಮಾರು 7 ಕೋಟಿ ರೂ.ವೆಚ್ಚ ಮಾಡಲಾಗಿದೆ.

* ಇತರ ಅಕ್ರಮಗಳೆಂದರೆ ಈ ಯೋಜನೆ ಆರಂಭವಾಗುವ ಮೊದಲಿನ ದಿನಾಂಕದಲ್ಲೇ ಅಸ್ಪತ್ರೆಗಳಿಗೆ ಹಣದ ವರ್ಗಾವಣೆ, ದಾವೆಗಳನ್ನು ಸಲ್ಲಿಸುವ ಮೊದಲೇ ಹಣದ ವರ್ಗಾವಣೆ, ನೋಂದಾವಣೆ ಕಾರ್ಡುಗಳನ್ನು ಕೊಟ್ಟ ಮೇಲೆ ಅವನ್ನು ರದ್ದು ಮಾಡುವುದು, ಆದರೆ ಇಂತಹ ‘ಅನರ್ಹ’ ಕಾರ್ಡುಗಳಿಗೂ ಹಣದ ಪಾವತಿ. ಇಂತಹ ಪಾವತಿಗಳ ಮೊತ್ತ 71.47 ಲಕ್ಷ ರೂ.

* ಈ ರೀತಿ 11.04 ಲಕ್ಷ ಬೋಗಸ್ ಫಲಾನುಭವಿಗಳಿರಬಹುದು, ಅವನ್ನು ಪತ್ತೆ ಹಚ್ಚಬೇಕೆಂದು ಎನ್‌ಹೆಚ್‌ಎ ಹೇಳಿತ್ತು. ಇದರಲ್ಲಿ 7.07ಲಕ್ಷ ಮಾತ್ರ ಪತ್ತೆಯಾಗಿದೆ ಎಂದು ಹೇಳಲಾಗಿದೆ.

* ಮುಖ್ಯ ಲೋಪವೆಂದರೆ, ಒಂದೆ ಗುರುತು ನಂಬರಿನ(ಐಡಿ) ಹಲವು ಫಲಾನುಭವಿಗಳ ಹೆಸರುಗಳು ದತ್ತಾಂಶ ಭಂಡಾರದಲ್ಲಿ ಕಂಡು ಬಂದಿರುವುದು. 1.57 ಲಕ್ಷ ಐಡಿಗಳು ಒಂದಕ್ಕಿಂತ ಹೆಚ್ಚು ಬಾರಿ ಕಾಣ ಬರುತ್ತಿವೆ.

* ಆಧಾರ್ ಮತ್ತು ಮೊಬೈಲ್ ನಂಬರುಗಳ ವಿಷಯದಲ್ಲೂ ಇಂತಹುದೇ ದೋಷಗಳು ಕಂಡುಬಂದಿವೆ. ತಮಿಳುನಾಡಿನಲ್ಲಿ ಏಳು ಆಧಾರ್ ನಂಬರುಗಳಲ್ಲಿ 4761 ನೋಂದಾವಣೆಗಳು ಆಗಿವೆಯಂತೆ. ಹಾಗೆಯೇ 9999999999 ಮೊಬೈಲ್ ನಂಬರಿನಲ್ಲಿ 7.5ಲಕ್ಷ ನೋಂದಾವಣೆಗಳು ಆಗಿದ್ದರೆ, 8888888888 ನಂಬರಿನಲ್ಲಿ 1.4ಲಕ್ಷ ನೋಂದಾವಣಿಯಾಗಿದೆಯಂತೆ.

ಇದನ್ನೂ ಓದಿ:ಆಯುಷ್ಮಾನ್ ಯೋಜನೆಯಲ್ಲಿ ‘ಸತ್ತ’ವರ ಚಿಕಿತ್ಸೆಗಾಗಿ ಸುಮಾರು 7 ಕೋಟಿ! | ಸಿಎಜಿ ವರದಿ

ಇನ್ನು ಈ ಯೋಜನೆಯ ಅಡಿಯಲ್ಲಿ ಆರೈಕೆಗೆಂದು ಆಸ್ಪತ್ರೆಗಳ ನೋಂದಾವಣೆಯಲ್ಲೂ ಹಲವು ಅಕ್ರಮಗಳು ಕಂಡು ಬಂದಿವೆ. ನೋಂದಾವಣೆಗೆ ಸಹಜವಾಗಿಯೇ ಔಷಧಾಲಯಗಳು, ರಕ್ತಬ್ಯಾಂಕ್, ಪ್ರಯೋಗಾಲಯಗಳು, ಡಯಾಲಿಸಿಸ್ ಘಟಕಗಳು, ಶಸ್ತ್ರಚಿಕಿತ್ಸೆಯ ನಂತರದ ಸೌಲಭ್ಯಗಳು, ಐಸಿಯು ಇತ್ಯಾದಿಗಳು ಇರಬೇಕೆಂಬ ಶರತ್ತುಗಳಿವೆ. ಈ ಶರತ್ತುಗಳಿಗೆ ಬದ್ಧವಾಗಿ 27,649 ಆಸ್ಪತ್ರೆಗಳ ನೋಂದಾವಣೆಯಾಗಿದೆ, ಇವುಗಳಲ್ಲಿ ಸುಮಾರು 15000 ಖಾಸಗಿ ಆಸ್ಪತ್ರೆಗಳು, ಉಳಿದವು ಸರಕಾರೀ ಆಸ್ಪತ್ರೆಗಳು. ಆದರೆ ಇವುಗಳಲ್ಲಿ 4682 ಆಸ್ಪತ್ರೆಗಳು 2018ರಿಂದಲೇ ನಿಷ್ಕ್ರಿಯವಾಗಿವೆಯಂತೆ. ಅಂದರೆ ಒಂದೇ ಒಂದು
ರೋಗಿಗೆ ಆರೈಕೆ ನೀಡಿಲ್ಲ. ಉಳಿದವುಗಳಲ್ಲೂ ಎಲ್ಲ ಆಸ್ಪತ್ರೆಗಳೂ ನೋಂದಾವಣೆಯ ಶರತ್ತು ಪೂರೈಸಿರುವುದರ ಬಗ್ಗೆ ಸಂದೇಹವಿದೆ. ಉದಾ: ಬಿಹಾರಿನ 23 ಆಸ್ಪತ್ರೆಗಳನ್ನು ಪರಿಶೀಲಿಸಿದಾಗ 16 ಈ ಶರತ್ತುಗಳ ಪ್ರಕಾರ ಇಲ್ಲ ಎಂದು ಕಂಡು ಬಂತು.

ಇವೆಲ್ಲ ಈ ಯೋಜನೆಯಲ್ಲಿ ಇರುವ ಭ್ರಷ್ಟಾಚಾರಗಳತ್ತ ಬೊಟ್ಟು ಮಾಡುವ ಸಂಗತಿಗಳು ಎಂದು ಗುರುತಿಸಲಾಗಿದೆ. ಆರೋಗ್ಯ ಸಚಿವಾಲಯ ಈ ಕುರಿತು ‘ಸ್ಪಷ್ಟೀಕರಣ’ ನೀಡಬೇಕಾಗಿ ಬಂದಿರುವುದು ಈ ಟೀಕೆ-ಟಿಪ್ಪಣಿಗಳ ಮಹತ್ವವನು ತೋರಿಸುತ್ತದೆ ಎನ್ನಬಹುದು. 4-ಪುಟಗಳ ಈ ‘ಸ್ಪಷ್ಟೀಕರಣ’ದಲ್ಲಿ, ಆರೋಗ್ಯ ಸಚಿವಾಲಯ ಮಾಧ್ಯಮಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದು ಹೇಳಿದೆ. ಆದರೆ ಯಾವ ಮಾಹಿತಿ ತಪ್ಪು ಎಂದೇನೂ ಹೇಳಿಲ್ಲ. ವಾಸ್ತವವಾಗಿ ಇದು ಸಿಎಜಿಯ ಟಿಪ್ಪಣಿಗಳಲ್ಲೇ ದೋಷವಿದೆಯೆಂದು ಪರೋಕ್ಷವಾಗಿ ಹೇಳುತ್ತಿರುವಂತೆ ಕಾಣುತ್ತದೆ ಎಂದೊಬ್ಬ ಮಾಧ್ಯಮ ಪರಿಣಿತರು ಟಿಪ್ಪಣಿ ಮಾಡಿದ್ದಾರೆ.

ಆದರೆ ಸಿಎಜಿ ಇಂತಹ ವರದಿಗಳನ್ನು ಸಲ್ಲಿಸುವ ಮೊದಲು ಸಂಬಂಧಪಟ್ಟ ಸರಕಾರೀ ಇಲಾಖೆಯ ಅವಗಾಹನೆಗೆ , ಸ್ಪಷ್ಟೀಕರಣಕ್ಕೆ ಇವನ್ನು ಕಳಿಸಿ, ಅದಕ್ಕೆ ದೊರೆತ ಉತ್ತರಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ವರದಿಗಳನ್ನು ಸಲ್ಲಿಸುತ್ತವೆ ಎಂಬ ಅಂಶವನ್ನು ಅವರು ನೆನಪಿಸಿದ್ದಾರೆ.

ಅಕ್ರಮಗಳನ್ನೂ ಮೀರಿದ ವಿಶಿಷ್ಟ ‘ಭ್ತಷ್ಟಾಚಾರ’

ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ಇಂತಹ ಯೋಜನೆಗಳು ಸಾರ್ವತ್ರಿಕ ಆರೋಗ್ಯಪಾಲನೆಯ ವ್ಯವಸ್ಥೆಗೆ ಬದಲಿಯಾಗಲು ಸಾಧ್ಯವಿಲ್ಲ ಎಂಬ ಹಲವು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರುಗಳ ಅಭಿಪ್ರಾಯದಲ್ಲಿ ಬಹಳಷ್ಟು ಹುರುಳಿದೆ ಎಂಬುದನ್ನು ಇವು ತೋರಿಸುತ್ತವೆ ಎಂದೂ ಕೆಲವು ಪರಿಣಿತರು ಒಪ್ಪುತ್ತಿದ್ದಾರೆ.

ವಾಸ್ತವಿಕವಾಗಿ, ಈ ಯೋಜನೆ ಸಾರ್ವತ್ರಿಕ ಆರೋಗ್ಯಪಾಲನೆಯ ಗುರಿಯನ್ನು ತುಚ್ಛೀಕರಿಸುತ್ತದೆ ಎಂದು ಒಬ್ಬ ಅರ್ಥಶಾಸ್ತ್ರಜ್ಞ ಆಗಲೇ ಟಿಪ್ಪಣಿ ಮಾಡಿದ್ದರು. ಇದು ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯಪಾಲನಾ ಯೋಜನೆ ಎಂಬುದು ಅತಿರಂಜಿತ ಮಾತು ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಭಾರತದ ಜನಸಂಖ್ಯೆಯಿಂದಾಗಿ ಇಲ್ಲಿ ಯಾವುದೇ ಸಾರ್ವತ್ರಿಕ ಯೋಜನೆಯ ಗಾತ್ರ ದೊಡ್ಡದೇ ಆಗಿರುತ್ತದೆ. ಆದರೆ ಆರೋಗ್ಯ ರಂಗದಲ್ಲಿ ಚೀನಾದ ಸಾರ್ವತ್ರಿಕ ಆರೋಗ್ಯಪಾಲನೆ ಕಾರ್ಯಕ್ರಮ ಇದಕ್ಕಿಂತ ಎಷ್ಟೋ ದೊಡ್ಡದು, ಜನಸಂಖ್ಯೆಯ ದೃಷ್ಟಿಯಿಂದ ಮಾತ್ರವೇ ಅಲ್ಲ, ಅಲ್ಲಿ ಆರೋಗ್ಯದ ಮೇಲೆ ತಲಾ ಸಾರ್ವಜನಿಕ ವೆಚ್ಚ ಭಾರತದ ಐದು ಪಟ್ಟು ಎಂಬುದೇ ಇದನ್ನು ತೋರಿಸುತ್ತದೆ ಎನ್ನಲಾಗಿದೆ. ಈ ಯೋಜನೆಗೆಂದು ಭಾರತ ಸರಕಾರ ವೆಚ್ಚ ಮಾಡಬೇಕೆಂದಿರುವ ಹಣ ಏನೇನೂ ಸಾಲದು. ವಾಸ್ತವವಾಗಿ, ಇದರ ಉದ್ದೇಶ ಬಡವರಿಗೆ ಆರೋಗ್ಯ ಪಾಲನೆ ಒದಗಿಸುವುದಲ್ಲ, ಬದಲಾಗಿ ಖಾಸಗಿ ಆರೋಗ್ಯ ವಲಯಕ್ಕೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸಂಬಂಧಿ ದತ್ತಾಂಶಗಳನ್ನು ಒದಗಿಸಿ ಕೊಟ್ಟು ಅದರಿಂದ ಅವರು ಲಾಭ ಸೂರೆಮಾಡಲು ಅವಕಾಶ ಕಲ್ಪಿಸಿಕೊಡುವುದು, ಇದು ಸರಕಾರೀ ಯೋಜನೆಗಳ ಬೆನ್ನೇರಿ “ಸಾರ್ವಜನಿಕ ವೇದಿಕೆಗಳನ್ನು ಸೃಷ್ಟಿಸುವ ಮಾಹಿತಿ ತಂತ್ರಜ್ಞಾನದ ಮಾಂತ್ರಿಕರ” ಬೇಡಿಕೆಯನ್ನು ಈಡೇರಿಸುವದರ ಭಾಗವಾಗಿರುವಂತೆ ಕಾಣುತ್ತದೆ ಎಂದು ಆಗ ಅವರು ಹೇಳಿದ್ದರು ಎಂಬುದನ್ನು ನೆನಪಿಸಿ ಕೊಳ್ಳಬಹುದು.

ಸಿಎಜಿ ಟಿಪ್ಪಣಿಗಳು ಇದನ್ನು ಸಾಬೀತುಡಿಸುವಂತೆ ಕಾಣುತ್ತಿದೆ.

‘ಅಯೋಧ್ಯೆಯ ಅಭಿವೃದ್ಧಿ’ಯಲ್ಲೂ, ‘ದ್ವಾರಕಾ ಎಕ್ಸ್ಪ್ರೆಸ್‌ವೇ’ನಲ್ಲೂ …

ಇನ್ನೊಂದು ಸಿಎಜಿ ವರದಿ ‘ಸ್ವದೇಶ ದರ್ಶನ ಯೋಜನೆ’ಯ ಅನುಷ್ಠಾನ ಕುರಿತಾದ್ದು. ಇದು ಕೂಡ ಹಲವು ಅಕ್ರಮಗಳನ್ನು ಗುರುತಿಸಿದೆ.

ಇದು 2015 ರಲ್ಲಿ ಆರಂಭವಾದ ಯೋಜನೆ ಅಲ್ಲಿಂದ 2022ರ ವರೆಗಿನ ಲೆಕ್ಕ ಪರಿಶೋಧನೆಯನ್ನು ಮಾಡಲಾಗಿದೆ. 500 ಕೋಟಿ ರೂ. ಆರಂಭಿಕ ಬಾಬ್ತಿನಿಂದ ಆರಂಭಿಸಿ ಪ್ರವಾಸೋದ್ಯಮ ಇಲಾಖೆ ಪ್ರಾಜೆಕ್ಟ್ ಗಳನ್ನು ಮಂಜೂರು ಮಾಡುತ್ತಲೇ ಇದ್ದು 2016- 17ರ ವೇಳೆಗೆ ಅದರ ಮೊತ್ತ 4000 ಕೋಟಿ ರೂ. ಆಗಿತ್ತು. 1000 ಕೋಟಿ ರೂ.ಗಳ ಮೇಲಿನ ಯೋಜನೆಗಳಿಗೆ ಸಂಪುಟದ ಅನುಮತಿ ಅಗತ್ಯ. ಆದರೆ ಅದನ್ನು ಪಡೆಯದೆಯೇ ಮಂಜೂರಾತಿ ನೀಡಲಾಗಿದೆ ಎಂದು ಸಿಎಜಿ ಟಿಪ್ಪಣಿ ಮಾಡಿದೆ.

15 ಪ್ರವಾಸೀ ಸರ್ಕಿಟ್‌ಗಳನ್ನು ಗುರುತಿಸಿ 76 ಪ್ರಾಜೆಕ್ಟ್ಗಳಿಗೆ ಮಂಜೂರಾತಿ ನೀಡಲಾಗಿದೆ . ಆದರೆ ಗುರುತಿಸುವ ಮೊದಲು ಸಾಧ್ಯತಾ ವರದಿಗಳನ್ನು ತಯಾರಿಸದೇ ಇದ್ದುದರಿಂದ, ಪ್ರವಾಸಿ ಸ್ಥಳಗಳನ್ನು ಸರಿಯಾಗಿ ಗುರುತಿಸದಿರುವುದು, ಜಾರಿಯಲ್ಲಿ ಕೊರತೆ, ವಿಳಂಬದಿಂದಾಗಿ ಹೆಚ್ಚುವರಿ ವೆಚ್ಚ , ಹಣದ ಬಳಕೆ ಆಗದಿರುವುದು ಮುಂತಾದವುಗಳು ಸಂಭವಿಸಿವೆ ಎಂದು ವರದಿ ಟಿಪ್ಪಣಿ ಮಾಡಿದೆ.

ಇದರಲ್ಲಿ ಉತ್ತರಪ್ರದೇಶ ನಿರ್ಮಾಣ ನಿಗಮ ನಿರ್ವಹಿಸುವ ‘ಅಯೋಧ್ಯಾ ಅಭಿವೃದ್ಧಿ’ಯೋಜನೆಯಲ್ಲಿ ಕಾಂಟ್ರ‍್ರಾಕ್ಟರುಗಳಿಗೆ ಅಕ್ರಮ ಪ್ರಯೋಜನಗಳನ್ನು ಒದಗಿಸಲಾಗಿದೆ , ಈ ಮೂಲಕ ಆರು ಪ್ರಾಜೆಕ್ಟ್ ಗಳಲ್ಲಿ 19.73 ಕೋಟಿ ರೂ.ಗಳಷ್ಟು ಪ್ರಯೋಜನವನ್ನು ಕಾಂಟ್ರಾಕ್ಟರುಗಳಿಗೆ ಒದಗಿಸಲಾಗಿದೆ ಎಂದು ವರದಿ ಗುರುತಿಸಿದೆ.

ಹೆದ್ದಾರಿಗಳ ಸಚಿವಾಲಯದ ‘ಭಾರತಮಾಲಾ ಪರಿಯೋಜನಾ’ದ ಮೊದಲ ಘಟ್ಟದ ಭಾಗವಾಗಿ ಕಿ.ಮೀ.ಗೆ 18.2 ಕೋಟಿ ರೂ. ವೆಚ್ಚದಲ್ಲಿ 29 ಕಿ.ಮೀ. ದೂರದ ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)ಅನುಮೋದನೆ ನೀಡಿತ್ತು. ಆದರೆ ಈಗ ತಗಲಿರುವ ವೆಚ್ಚ ಅದರ ಸುಮಾರು 14ಪಟ್ಟು, ಅಂದರೆ, ಕಿ.ಮೀ.ಗೆ 250.77 ಕೋಟಿ ರೂ. ಎಂದು ಈ ಕುರಿತ ಸಿಎಜಿ ವರದಿ ಹೇಳಿದೆ. ಅಲ್ಲದೆ ಯಾವುದೇ ಪ್ರಾಜೆಕ್ಟ್ ರಿಪೋರ್ಟ್ ಇಲ್ಲದೆಯೇ ಇದಕ್ಕೆ ಮಂಜೂರಾತಿ ನೀಡಲಾಗಿತ್ತು ಅದು ಟಿಪ್ಪಣಿ ಮಾಡಿದೆ.‌

ಒಟ್ಟಾಗಿ,ಭಾರತಮಾಲಾ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ 5.35 ಲಕ್ಷ ಕೋಟಿ ರೂ. ಆದರೆ, ಮಾರ್ಚ್ 2023 ರ ಹೊತ್ತಿಗೆ ಆಗಿರುವ ಕೆಲಸ 39%ದಷ್ಟು ಮಾತ್ರವೇ ಆದರೂ 8.47 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದೂ ಸಿಎಜಿ ಬೊಟ್ಟು ಮಾಡಿದೆ.

ಇನ್ನು, 2017-28ರಿಂದ 2020-21ರ ಅವಧಿಯಲ್ಲಿ ಈ ಒಟ್ಟು ಪರಿಯೋಜನೆಯ ಮೊದಲ ಹಂತದ ಕೆಲಸ-ಕಾರ್ಯಗಳ ಲೆಕ್ ಪರಿಶೋಧನೆಯ ಇನ್ನೊಂದು ವರದಿಯಲ್ಲಿ ವಿವಿಧ ಹೆದ್ದಾರಿ ಪ್ರಾಜೆಕ್ಟ್ ಗಳನ್ನು ವಹಿಸಿಕೊಡುವಲ್ಲಿ ಅಕ್ರಮಗಳನ್ನು ಗುರುತಿಸಲಾಗಿದೆ. ವಿವರವಾದ ಪ್ರಾಜೆಕ್ಟ್ ವರದಿಗಳಿಲ್ಲದೆ,ಅಥವ ದೋಷಪೂರ್ಣ ವರದಿಗಳ ಮೇಲೆ ಪ್ರಾಜೆಕ್ಟ್ ಗಳನ್ನ ನೀಡಲಾಗಿದೆ, ಕೆಲವು ಪ್ರಕರಣಗಳಲ್ಲಿ ಸಿಸಿಇಎ ವಿಧಿಸಿರುವ ಅನುಮೋದನಾ ವಿಧಾನವನ್ನೂ ಪಾಲಿಸಿಲ್ಲ ಎಂದು ವರದಿ ಟಿಪ್ಪಣಿ ಮಾಡಿದೆ.

ಇದರಿಂದಾಗಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುವರಿ ವೆಚ್ಚ ಮಾಡಬೇಕಾಗಿ ಬಂದಿದೆ. ಸಿಸಿಇಎ ಅನುಮೋದಿಸಿದ ಒಟ್ಟು ಹೆದ್ದಾರಿ ದೂರದಲ್ಲಿ 75.62%ಯನ್ನು ಮಾತ್ರ ವಹಿಸಿಕೊಡಲಾಗಿದೆ, ಆದರೆ ಮಾರ್ಚ್ 31, 2023 ರ ವರೆಗೆ ಅದಕ್ಕೆ ಮಂಜೂರು ಮಾಡಿದ ಹಣಕಾಸು ಮೊತ್ತ ದಲ್ಲಿ 158.24% ಹೆಚ್ಚಳವಾಗಿದೆ ಎಂದು ಸಿಎಜಿ ವರದಿ ಗಮನಿಸಿದೆ. ಈ ಪರಿಯೋಜನೆಯಲ್ಲಿ ಇನ್ನೂ ಹಲವು ಅಕ್ರಮಗಳು ನಡೆದಿರುವುದು ಸಿಎಜಿ ಟಿಪ್ಪಣಿಗಳಲ್ಲಿ ಕಾಣ ಬರುತ್ತಿದೆ ಎಂದು ಹೇಳಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *