ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಎಸ್ಎಸ್ಎಲ್ಸಿ) ಹಾಗೂ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ವಿಲೀನಗೊಳಿಸುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ಸಂಬಂಧ ಸೋಮವಾರ(ಸೆಪ್ಟಂಬರ್ 19) ನಡೆದ ಸಂಪುಟ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ 1966 ತಿದ್ದುಪಡಿ ಮಸೂದೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಎರಡೂ ಪರೀಕ್ಷಾ ಮಂಡಳಿಗಳ ವಿಲೀನದ ಕುರಿತಾದ ವಿದೇಯಕವನ್ನು ಪ್ರಸಕ್ತ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇಂದು ಅಥವಾ ನಾಳೆ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಎರಡೂ ಮಂಡಳಿಗಳನ್ನು ಒಂದೇ ಮಂಡಳಿ ಮಾಡಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020) ಅನ್ವಯ ಮಂಡಳಿಗಳನ್ನು ವಿಲೀನಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ವಿಧಾನ ಮಂಡಲದಲ್ಲಿ ಹೊಸ ಕಾಯ್ದೆಗೆ ಒಪ್ಪಿಗೆ ಸಿಕ್ಕ ಕೂಡಲೇ ವಿಲೀನಗೊಳ್ಳಲಿದೆ. ಬಳಿಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಂದು ಮರು ನಾಮಕರಣ ಮಾಡಲಾಗುವುದು.
ಹೊಸದಾಗಿ ರಚನೆಗೊಳ್ಳಲಿರುವ ಮಂಡಳಿಗೆ ಐಎಎಸ್ ಅಧಿಕಾರಿ ಅಧ್ಯಕ್ಷರು ಓಆರ್ ಕಮಿಷನ್ ಹೆಸರಿನಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಐಎಎಸ್ ಅಧಿಕಾರಿ ಕೆಳಗೆ ಎಸ್ಎಸ್ಎಲ್ಸಿ ಪರೀಕ್ಷೆ, ಇತರೆ ಪರೀಕ್ಷೆಗಳು ನಡೆಯಲಿವೆ.