ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ಮಾರುಕಟ್ಟೆಗಳನ್ನು ನಾಶ ಮಾಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಸಂವಿಧಾನ ಬದ್ದ ಧಾರ್ಮಿಕ ಸ್ವಾತಂತ್ರ್ಯ ನಿರಾಕರಿಸುವ ಮತಾಂತರ ನಿಷೇಧ ಕಾಯ್ದೆ ಯನ್ನು ವಾಪಸ್ಸು ಪಡೆಯಲು ನಿರ್ಧರಿಸಿರುವ ಸಿದ್ದರಾಮಯ್ಯ ಸಂಪುಟದ ತೀರ್ಮಾನವನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತದೆ ಎಂದು ಪ್ರಕಟಣೆ ನೀಡಿದೆ.
ಇದೇ ರೀತಿ ಉಳಿದ ರೈತ ವಿರೋಧಿ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ 2020, ಕರ್ನಾಟಕ ರಾಜ್ಯ ಭೂ ಸ್ವಾಧೀನ ಕಾಯ್ದೆ 2019 ಅನ್ನು ಕೂಡ ರದ್ದುಪಡಿಸಬೇಕು. ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು.
ಇದನ್ನೂ ಓದಿ:ಸಿಎಂ ಜೊತೆ ಚರ್ಚೆ : ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸಿ – ರೈತ ಸಂಘಟನೆಗಳ ಆಗ್ರಹ
ರೈತಾಪಿ ಕೃಷಿ ನಾಶ ಮಾಡಿ ,ಕಾರ್ಪೊರೇಟ್ ಕೃಷಿ ಉತ್ತೇಜಿಸುವ ಉದ್ದೇಶ ಸಾಧನೆಗೆ ತಂದಿದ್ದ ಕೇಂದ್ರ ಕೃಷಿ ಕಾಯ್ದೆಗಳು ರದ್ದಾದ ನಂತರವೂ ಅದೇ ಉದ್ದೇಶದ ರಾಜ್ಯ ಕೃಷಿ ಕಾಯ್ದೆಗಳು ಮುಂದುವರೆಸಿದ್ದನ್ನು ರಾಜ್ಯದ ರೈತರು ಪ್ರಬಲವಾಗಿ ವಿರೋಧಿಸಿದ್ದರು. ಕೃಷಿ ಬಿಕ್ಕಟ್ಟನ್ನು ತೀವ್ರಗೊಳಿಸುವ ,ರಾಜ್ಯದ ರೈತರಿಗೆ ಬೆಂಬಲ ಬೆಲೆ ನಿರಾಕರಿಸುವ ವ್ಯಾಪಾರಿಗಳ ಮರ್ಜಿಗೆ ರೈತರನ್ನು ದಯನೀಯವಾಗಿ ನೂಕುವ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ರದ್ದತಿ ನಿರ್ಧಾರ ರೈತ ಹೋರಾಟಕ್ಕೆ ಜಯವಾಗಿದೆ. ದುರ್ಬಲ ಗೊಂಡಿರುವ ಎಪಿಎಂಸಿ ಯನ್ನು ಬಲಪಡಿಸಲು ,ರೈತ ಸ್ನೇಹಿಯಾಗಿಸಲು ,ಎಪಿಎಂಸಿ ಸೆಸ್ ಮೂಲಕ ಸಂಗ್ರಹವಾಗುವ ಅವರ್ಥ ನಿಧಿಯನ್ನು ಸಮರ್ಥವಾಗಿ ರೈತರ ಹಿತ- ರಕ್ಷಣೆಗೆ ಬಳಸಬೇಕೆಂದು. ಮತ್ತುತನ್ನ ಪೂರ್ಣ ವ್ಯಾಪ್ತಿಗೆ ಎಪಿಎಂಸಿ ಸಮಿತಿಗಳ ಅಧಿಕಾರವನ್ನು ಪುನರ್ ಸ್ಥಾಪಿಸುವ ಈ ರದ್ದತಿ ಒಂದೇ ಎಪಿಎಂಸಿ ಬಲಪಡಿಸಲು ಸಾಕಾಗುವುದಿಲ್ಲ. ಉದಾರೀಕರಣ ನೀತಿಗಳ ಒತ್ತಡಕ್ಕೆ ತಂದಿರುವ ಖಾಸಗೀ ಕಂಪನಿಗಳ ಪರವಾದ ಈ ಹಿಂದಿನ ತಿದ್ದಪಡಿಗಳಾದ ಆನ್ ಲೈನ್ ಮಾರಾಟ , ಕೋಲ್ಡ್ ಸ್ಟೋರೇಜ್ , ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಎಪಿಎಂಸಿಯನ್ನು ಬೈ ಪಾಸ್ ಮಾಡುವ ರೈತ ವಿರೋಧಿ ತಿದ್ದುಪಡಿ ಗಳು ಕೂಡ ರದ್ದಾಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಅಧ್ಯಕ್ಷರಾದ ಜಿಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.