ನವದೆಹಲಿ: ಪ್ರಧಾನ ಮಂತ್ರಿ ಗತಿ ಶಕ್ತಿ ಕಾರ್ಯಕ್ರಮದಡಿಯಲ್ಲಿ ರೈಲ್ವೆ ಭೂಮಿಯನ್ನು ದೀರ್ಘಾವಧಿಯವರೆಗೆ ಗುತ್ತಿಗೆ ನೀಡುವ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಅನುರಾಗ್ ಠಾಕೂರ್ ಪ್ರಸ್ತಾಪಿಸಿದ್ದಾರೆ.
‘ಮುಂದಿನ ಐದು ವರ್ಷಗಳಲ್ಲಿ 300 ಕಾರ್ಗೊ ಟರ್ಮಿನಲ್‌ಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಈ ನೀತಿಯಿಂದ ರೈಲ್ವೆ ಇಲಾಖೆಗೂ ಹೆಚ್ಚು ಆದಾಯ ದೊರೆಯಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.
ಹಳೆಯ ನೀತಿ ನಿಯಮಗಳ ಪ್ರಕಾರ 5 ವರ್ಷದವರೆಗೆ ಭೂಮಿ ಗುತ್ತಿಗೆ ನೀಡುವ ವ್ಯವಸ್ಥೆ ಇತ್ತು. ಹೊಸ ನೀತಿಯ ಪ್ರಕಾರ ರೈಲ್ವೆ ಭೂಮಿಯನ್ನು 35 ವರ್ಷದವರೆಗೂ ಗುತ್ತಿಗೆ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದು, ದೇಶದ ವಿವಿಧೆಡೆ 300 ‘ಕಾರ್ಗೊ ಟರ್ಮಿನಲ್’ಗಳನ್ನು ನಿರ್ಮಿಸುವ ಮೂಲಕ 1.25 ಲಕ್ಷ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರದ ಯೋಜನೆಯಾಗಿದೆ ಎಂದರು.
ಪಿ.ಎಂ–ಶ್ರೀ ಶಾಲೆಗಳ ನಿರ್ಮಾಣಕ್ಕೆ ₹27,360 ಕೋಟಿ ವಿನಿಯೋಗ
ಪಿ.ಎಂ–ಶ್ರೀ ಯೋಜನೆಯಡಿ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಒಟ್ಟು ₹27,360 ಕೋಟಿ ವೆಚ್ಚವಾಗಲಿದೆ. ಇದಕ್ಕಾಗಿ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಈ ಯೋಜನೆಯಡಿ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳನ್ನು ಬಲಪಡಿಸಲಾಗುತ್ತದೆ. ಐದು ವರ್ಷಗಳಲ್ಲಿ ನಿಗದಿತ ಸಂಖ್ಯೆಯ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅನುದಾನ ಈ ಪೈಕಿ ಕೇಂದ್ರ ಸರ್ಕಾರವು ₹18,128 ಕೋಟಿ ಭರಿಸಲಿದೆ’ ಎಂದು ಮಾಹಿತಿ ಸಚಿವರು ಮಾಹಿತಿ ತಿಳಿಸಿದರು.
ಶಿಕ್ಷಕರ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಘೋಷಿಸಿದ್ದರು.