ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅಧಿಸೂಚನೆ ಹೊರಡಿಸಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ. ಸಿಎಎಯನ್ನು ”ದೇಶದ ಕಾಯಿದೆ” ಎಂದು ಕರೆದಿರುವ ಅವರು, “ಈ ಕಾಯ್ದೆಯು ಪೌರತ್ವ ನೀಡುವ ಕಾಯ್ದೆಯೆ ಹೊರತು ಯಾರದೆ ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಅಲ್ಲ” ಎಂದು ಹೇಳಿದ್ದಾರೆ.
“ಸಿಎಎ ದೇಶದ ಕಾಯಿದೆ…ಚುನಾವಣೆಯ ಮೊದಲು ಅದಕ್ಕೆ ಅಧಿಸೂಚನೆ ತರಲಾಗುವುದು. ಅದರ ಸುತ್ತ ಯಾವುದೇ ಗೊಂದಲ ಇರಬಾರದು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ…” ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ | ಮಸೀದಿ & ಮದ್ರಸಾ ಧ್ವಂಸದ ನಂತರ ಭುಗಿಲೆದ್ದ ಹಿಂಸಾಚಾರ; 5 ಸಾವು
“ಸಿಎಎ ಯಾರದೆ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಕಾಯಿದೆಯಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ಒದಗಿಸುವ ಕಾಯಿದೆಯಾಗಿದೆ” ಎಂದು ದೆಹಲಿಯ ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡುತ್ತಾ ಅಮಿತ್ ಶಾ ಹೇಳಿದ್ದಾರೆ.
2019ರ ಡಿಸೆಂಬರ್ 11 ರಂದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ಕಾಯ್ದೆಯನ್ನು ಅನುಷ್ಠಾನ ಮಾಡಲಿದ್ದೇವೆ ಎಂಬ ಭರವಸೆ ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಮಹತ್ವದ ಚುನಾವಣಾ ಕಾರ್ಯಸೂಚಿಯಾಗಲಿದೆ ಎಂದು ಲೆಕ್ಕಾಚಾರ ನಡೆದಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು ದೇಶದಲ್ಲಿ ಸಿಎಎ ಜಾರಿಗೊಳಿಸುವ ಭರವಸೆಯಿಂದ ಹಿಂದೆ ಸರಿದಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
“ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದ್ದು, ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಅವರು ಅದರಿಂದ ಹಿಂದೆ ಸರಿಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
ಇದನ್ನೂ ಓದಿ: ‘ಮನೆ ಕೆಡವಿ ಪತ್ರಿಕೆಯಲ್ಲಿ ಪ್ರಕಟಿಸುವುದು ಫ್ಯಾಶನ್ ಆಗಿದೆ’ – ಮುನ್ಸಿಪಲ್ ಕಾರ್ಪೊರೇಷನ್ ವಿರುದ್ಧ ಹೈಕೋರ್ಟ್ ಆಕ್ರೋಶ
ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?
ಸಾಮಾನ್ಯವಾಗಿ ಸಿಎಎ ಎಂದು ಕರೆಯಲ್ಪಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಚಯಿಸಿತು. ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಮತ್ತು ಡಿಸೆಂಬರ್ 31, 2014 ರವರೆಗೆ “ಧಾರ್ಮಿಕ ಕಿರುಕುಳ ಅಥವಾ ಧಾರ್ಮಿಕ ಕಿರುಕುಳದ ಭಯದ ಕಾರಣದಿಂದ ಭಾರತವನ್ನು ಪ್ರವೇಶಿಸಿದ” ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡುವ ಗುರಿಯನ್ನು ಈ ಕಾಯಿದೆ ಹೊಂದಿದೆ.
ಆದಾಗ್ಯೂ, ಇದು ಮುಸ್ಲಿಮರು ಅಥವಾ ಬೇರೆ ನೆರೆ ದೇಶಗಳಿಂದ ವಲಸೆ ಬಂದ ಇತರ ಸಮುದಾಯಗಳಿಗೆ ಪೌರತ್ವ ನೀಡುವ ಉದ್ದೇಶವನ್ನು ಒಳಗೊಂಡಿಲ್ಲ. ಈ ಕಾರಣಕ್ಕೆ ಈ ಕಾಯ್ದೆಯು ದೇಶಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಸಿಎಎ ಪ್ರತಿಭಟನೆ
ಸಂಸತ್ತಿನಲ್ಲಿ ಸಿಎಎ ಪರಿಚಯಿಸಿದ ನಂತರ 2019ರ ಡಿಸೆಂಬರ್ 4ರಂದು ಅಸ್ಸಾಂನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಅದಾಗ್ಯೂ, 2019ರ ಡಿಸೆಂಬರ್ 11 ರಂದು ಕಾಯಿದೆಯ ಅಂಗೀಕಾರದ ನಂತರ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡವು. ಪ್ರತಿಭಟನೆ ವೇಳೆ ದೇಶದ ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ಕೂಡಾ ನಡೆದಿತ್ತು.
ಪ್ರತಿಭಟನಾಕಾರರು ಸಿಎಎಯನ್ನು “ತಾರತಮ್ಯ” ಮತ್ತು “ಭಾರತದ ಜಾತ್ಯತೀತತೆಯ ಮೇಲಿನ ದಾಳಿ” ಎಂದು ಕರೆದಿದ್ದರು. ಪ್ರತಿಭಟನೆಯ ಸಮಯದಲ್ಲಿ ಪೋಲಿಸರ ದಾಳಿಯಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದರು. ಅದಾಗ್ಯೂ ದೇಶದಾದ್ಯಂತ ಕೋಟ್ಯಾಂತರ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಡಿಯೊ ನೋಡಿ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪು : ಫೆಬ್ರವರಿ 10 ರಂದು ಸಮಾವೇಶJanashakthi Media