ಬೆಂಗಳೂರು: ಚನ್ನಪಟ್ಟಣ ಟಿಕೆಟ್ ಕೈತಪ್ಪುವುದು ಖಚಿತವಾದ ಹಿನ್ನೆಲೆಯಲ್ಲಿ ಬಿಜೆಪಿಗೆ ಸಿ.ಪಿ. ಯೋಗೇಶ್ವರ್ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯೋಗೇಶ್ವರ್, ಇಂದು ಅಧಿಕೃತವಾಗಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ವಾಟ್ಸಪ್ ಮೂಲಕ ರಾಜೀನಾಮೆಯನ್ನು ಯೋಗೇಶ್ವರ್ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ಈ ದಿನ ರಾಜೀನಾಮೆ ಸಲ್ಲಿಸುತ್ತಿದ್ದು, ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ, ಇಲ್ಲಿಯವರೆಗೂ ತಾವು ನನಗೆ ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ..
ಇದನ್ನೂ ಓದಿ: ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
ಸತತವಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದ ಯೋಗೇಶ್ವರ್, ರಾಜ್ಯ ನಾಯಕರನ್ನೂ ಕರೆದೊಯ್ದು ಟಿಕೆಟ್ಗಾಗಿ ಲಾಭಿ ನಡೆಸಿದ್ದರು. ಕಡೆ ಕ್ಷಣದ ಪ್ರಯತ್ನ ವಿಫಲವಾಗಿ ಎನ್ಡಿಎ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿಗೆ ನೀಡುವ ನಿರ್ಧಾರಕ್ಕ ಬಿಜೆಪಿ ವರಿಷ್ಠರು ಬಂದ ಹಿನ್ನೆಲೆಯಲ್ಲಿ ಯೋಗೇಶ್ವರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಬಿಜೆಪಿ ಮೈತ್ರಿ ಧರ್ಮ ಪಾಲನೆಯಿಂದ ಹಿಂದೆ ಸರಿಯದ ಕಾರಣ, ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಅಂತಾನೇ ಹೇಳಿಕೊಂಡು ಬಂದಿತ್ತು. ಡಿಸಿಎಂ ಮಾತ್ರ ನಾನೇ ಅಭ್ಯರ್ಥಿ ಅಂತಾನೇ ಹೇಳಿಕೆ ನೀಡಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸಿ.ಪಿ.ಯೋಗೇಶ್ವರ್ ಅವರನ್ನು ಮನವೊಲಿಸಿ ಕಾಂಗ್ರೆಸ್ಗೆ ಕರೆದುಕೊಂಡು ಬರುವ ಟಾಸ್ಕ್ ನ್ನು ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಡಿಕೆ ಶಿವಕುಮಾರ್ ನೀಡಿದ್ದರು ಎನ್ನಲಾಗಿದೆ.
ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡೋದು ಖಾತ್ರಿಯಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಇತ್ತ ಜೆಡಿಎಸ್ನಿಂದ ಯಾರು ಅಭ್ಯರ್ಥಿ ಆಗ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಡಾ.ಸಿಎನ್ ಮಂಜುನಾಥ್ ಪತ್ನಿ ಅನುಸೂಯಾ ಅವರ ಹೆಸರು ಜೆಡಿಎಸ್ ಅಂಗಳದಿಂದ ಪ್ರಬಲವಾಗಿ ಕೇಳಿ ಬರುತ್ತಿದೆ.
ಇದನ್ನೂ ನೋಡಿ: ಹಾಸನ ಲೈಂಗಿಕ ದೌರ್ಜನ್ಯ| ಪೆನ್ಡ್ರೈವ್ ಪ್ರಕರಣ – ಪ್ರಜ್ವಲ್ಗಿಲ್ಲ ಬೇಲ್, ಜೈಲು ಗ್ಯಾರಂಟೀನಾ?? – ಕೆಎಸ್ ವಿಮಲಾ