ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಅವ್ಯವಹಾರ ಹಗರಣಕ್ಕೆ ಸಂಬಂಧಿಸಿ ಸಚಿವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು. ಇದರ ಹೊಣೆ ಹೊತ್ತ ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಎಂದು ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಆಗ್ರಹಿಸಿದರು. ರಾಜೀನಾಮೆ
ಮಲ್ಲೇಶ್ವರಂದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯವು ನಿನ್ನೆಯೇ ಬೆಂಗಳೂರಿನ ಸಿಬಿಐ ಕಚೇರಿಗೆ ದೂರು ಕೊಟ್ಟಿದೆ. ಅದರನ್ವಯ ಸಿಬಿಐ ತನಿಖೆ ನಡೆಯಲಿ ಎಂದೂ ಒತ್ತಾಯಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಗರಣಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ದೂರಿದರು. ನಕಲಿ ಖಾತೆ ತೆರೆದು, ಕ್ರಿಯಾ ಯೋಜನೆ ಇಲ್ಲದೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ರದ್ದು ಮಾಡುವಂತೆ ಕೋರ್ಟ್ ಮೊರೆ ಹೋದ ಎಸ್‌ಐಟಿ
ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ವಾಲ್ಮೀಕಿ ನಿಗಮದ ಈ ಅವ್ಯವಹಾರವು ಪರಿಶಿಷ್ಟ ಪಂಗಡಕ್ಕೆ ಆಗಿರುವ ಅನ್ಯಾಯ ಎಂದು ತಿಳಿಸಿದರು. ನೇರ ಹೊಣೆಯಾಗಿರುವ ಮುಖ್ಯಮಂತ್ರಿಗಳಿಗೆ ಇನ್ನೂ ಧ್ವನಿಯೇ ಬಂದಿಲ್ಲ. ಎಲ್ಲಿ ಧ್ವನಿ ಅಡಗಿ ಹೋಗಿದೆಯೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಹಣ ತೆಲಂಗಾಣದ ಯಾರ ಖಾತೆಗೆ ಹೋಗಿದೆ? ಯಾರು ಆ ವ್ಯಕ್ತಿಗಳು? ಎಂದ ಅವರು, ನಾಗೇಂದ್ರರು ಹಣವನ್ನು ನೇರವಾಗಿ ದರೋಡೆ ಮಾಡಿದ್ದಾಗಿ ಆಪಾದಿಸಿದರು.
ದಾಖಲಾದ ಎಫ್‍ಐಆರ್ ನಲ್ಲಿ ಮಂತ್ರಿ ಮೇಲೆ ಕೇಸಿಲ್ಲ; ಅಧಿಕಾರಿ ಮೇಲೆ ಕೇಸಿಲ್ಲ. ಬರೀ ಬ್ಯಾಂಕ್ ಅಧಿಕಾರಿ ಮೇಲೆ ಪ್ರಕರಣ ದಾಖಲಾಗಿದೆ. ಇದೇನು ಇಲಾಖೆ? ಎಂಥ ಕಾಮಿಡಿ ಇದು? ಇದು ಭಂಡತನದಿಂದ ಕೂಡಿದೆ ಎಂದು ದೂರಿದರು.
ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಪ್ರತಿಕ್ಷಣ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ಸರಕಾರ ಖಜಾನೆ ರಕ್ಷಿಸುವ ಬದಲು ನೇರವಾಗಿ ಖಜಾನೆಗೆ ಕೈ ಹಾಕಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರವು ಅಧಿಕಾರ ದಾಹ, ಭ್ರಷ್ಟಾಚಾರದಲ್ಲಿ ತೊಡಗಿ, ಪ್ರತಿನಿತ್ಯ ಅವರನ್ನು ಬಯಲಿಗೆ ಎಳೆಯುವಂತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದು, ಹಣ ದುರ್ಬಳಕೆ ಹಗರಣ ಸಂಬಂಧ ಸಚಿವರು, ಉನ್ನತಾಧಿಕಾರಿಗಳ ವಿರುದ್ಧ ಆಪಾದನೆ ಮಾಡಿದ್ದಾರೆ. ಇದನ್ನು ಡೆತ್ ನೋಟಿನಲ್ಲಿ ಬರೆದಿದ್ದರೂ ಎಫ್‍ಐಆರ್‍ನಲ್ಲಿ ಯೂನಿಯನ್ ಬ್ಯಾಂಕಿನವರನ್ನು ಮಾತ್ರ ಉಲ್ಲೇಖಿಸಿದ್ದಾರೆ ಎಂದು ಆಕ್ಷೇಪಿಸಿದರು.
ಇದೊಂದು ಕೆಟ್ಟ ಸರಕಾರ, ದುಷ್ಟ ಸರಕಾರ ಮಾತ್ರವಲ್ಲದೆ ಭ್ರಷ್ಟ ಸರಕಾರ ಎಂದು ಅವರು ಆಪಾದಿಸಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಕೇಂದ್ರ ವಕ್ತಾರ ಬಿ.ವಿ.ಗಣೇಶ್ ಅವರು ಭಾಗವಹಿಸಿದ್ದರು.
ಇದನ್ನೂ ನೋಡಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಸಾವು: ಸಾವಿನ ಸುತ್ತ ಅನುಮಾನದ ಹುತ್ತ