ನವದೆಹಲಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರು ಮೂಲದ ಎಜುಟೆಕ್ ಸಂಸ್ಥೆ ಬೈಜೂಸ್ ತನ್ನ ಕೋರ್ಸ್‌ಗಳನ್ನು ಖರೀದಿಸುವಂತೆ ಮಕ್ಕಳು ಮತ್ತು ಪೋಷಕರ ಮೇಲೆ ಒತ್ತಡ ಹೇರಿದ ಆರೋಪ ಕೇಳಿಬಂದಿದ್ದು, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೈಜು ರವೀಂದ್ರನ್ ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಿದೆ.
ಬೈಜೂಸ್ ಸಂಸ್ಥೆಯು ಕೋರ್ಸ್‌ಗಳನ್ನು ಖರೀದಿ ಮಾಡಲು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಮಿಷ ಒಡ್ಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಗ್ರಾಹಕರ ಹಕ್ಕು ರಕ್ಷಣಾ ಅಂತರ್ಜಾಲ ತಾಣದಲ್ಲಿ ದೂರುಗಳು ದಾಖಲಾಗಿದ್ದು ಅದರ ಅನ್ವಯ ಸಂಸ್ಥೆಯ ಮುಖ್ಯಸ್ಥ ರವೀಂದ್ರನ್ ಅವರಿಗೆ ನೋಟಿಸು ನೀಡಲಾಗಿದೆ ಎಂದು ವರದಿಯಾಗಿದೆ.
‘ಕೋರ್ಸ್‌ಗಳನ್ನು ಖರೀದಿ ಸೇರಿದಂತೆ ಅಕ್ರಮಗಳಲ್ಲಿ ತೊಡಗಿಕೊಂಡಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ತಮ್ಮ ಉಳಿತಾಯ ಮತ್ತು ಭವಿಷ್ಯಕ್ಕಾಗಿ ಕೂಡಿಟ್ಟ ಹಣ ಅಪಾಯಕ್ಕೆ ಸಿಲುಕಿದೆ ಎಂದು ಕೆಲವು ಗ್ರಾಹಕರು ಬೈಜೂಸ್ ವಿರುದ್ಧ ದೂರುಗಳನ್ನು ದಾಖಲಿಸಿರುವುದು ವರದಿಗಳಿಂದ ತಿಳಿದುಬಂದಿದೆ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸೂಚನೆ ನೀಡಿದ್ದು, ಮಕ್ಕಳಿಗೆ ಬೈಜೂಸ್ ಒದಗಿಸುತ್ತಿರುವ ಕೋರ್ಸ್, ಪಠ್ಯ ರಚನೆ, ಶುಲ್ಕ, ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ, ಸಂಸ್ಥೆ ನಡೆಸಿದ ವ್ಯವಹಾರಗಳು, ಮುಂತಾದ ಮಾಹಿತಿಗಳನ್ನು ವಿಚಾರಣೆ ವೇಳೆ ಹಾಜರುಪಡಿಸಬೇಕೆಂದು ಹೇಳಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದೆ ಇದ್ದಲ್ಲಿ ನಿಯಮಗಳನ್ವಯ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಚ್ಚರಿಕೆ ನೀಡಲಾಗಿದೆ.
‘ಪೋಷಕರು ಅಥವಾ ಮಕ್ಕಳನ್ನು ಸಾಲ ಆಧಾರಿತ ಒಪ್ಪಂದಗಳಿಗೆ ಒಳಪಡಿಸುವುದು, ಶೋಷಣೆಗೆ ಒಳಪಡಿಸುವುದು ಮತ್ತು ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಮಕ್ಕಳ ಕಲ್ಯಾಣಕ್ಕೆ ವಿರುದ್ಧವಾಗಿದೆ. ಇದು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯ ಸೆಕ್ಷನ್ 13 ಮತ್ತು 14ರ ಉಲ್ಲಂಘನೆ’ ಎಂದು ಆಯೋಗ ತಿಳಿಸಿದೆ.
2011ರಲ್ಲಿ ಬೈಜೂಸ್ ಸಂಸ್ಥೆ ಆರಂಭವಾಗಿದ್ದು, 2015ರಲ್ಲಿ ಕಲಿಕಾ ಆಪ್ ಸ್ಥಾಪನೆ ಮಾಡುವ ಮೂಲಕ ಡಿಜಿಟಲ್ ವಿಭಾಗವನ್ನು ವಿಸ್ತರಿಸಿಕೊಂಡಿತು. ಶೀಘ್ರದಲ್ಲೇ ಈ ಸಂಸ್ಥೆಯು ಮಲ್ಟಿ-ಬಿಲಿಯನರ್ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳು ಬೈಜೂಸ್‌ನ ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ನೋಡಿಕೊಳ್ಳಲು ಆರಂಭ ಮಾಡಿದ್ದರು.
ನಮ್ಮನ್ನು ಗುಲಾಮರಂತೆ ನೋಡಲಾಗಿದೆ: ಉದ್ಯೋಗಿಗಳ ಆರೋಪ
ಕೋರ್ಸ್ ಖರೀದಿಗೆ ಸಂಬಂಧಿಸಿದಂತೆ ಕೇಳಿ ಬಂದ ಆರೋಪದೊಂದಿಗೆ ಬೈಜೂಸ್ ಸಂಸ್ಥೆಯ ಬಗ್ಗೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಸಂಸ್ಥೆಯು ತಮ್ಮನ್ನು ಶೋಷಣೆ, ದೌರ್ಜನ್ಯವನ್ನು ಮಾಡಿ ನಮ್ಮಲ್ಲಿ ಕೆಲಸ ಮಾಡಿಸಿ ಆದಾಯವನ್ನು ಹೆಚ್ಚಿಸಿಕೊಂಡಿದೆ ಎಂದು ಹಲವಾರು ಉದ್ಯೋಗಿಗಳು ಆರೋಪಿಸಿದ್ದಾರೆ. ಅತೀ ಕಡಿಮೆ ಆದಾಯವಿರುವ ಕುಟುಂಬವನ್ನು ಟಾರ್ಗೆಟ್ ಮಾಡಿ, ಅವರ ಬೈಜೂಸ್ ಕೋರ್ಸ್ ಖರೀದಿ ಮಾಡುವಂತೆ ಒತ್ತಾಯ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ.
ಬೈಜೂಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹೆಚ್ಚಾಗಿ ಕಾಲೇಜು ಪದವಿಧರರಾಗಿದ್ದಾರೆ ಮತ್ತು ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ಅಧಿಕ ಅವಧಿ ಕೆಲಸ ಮಾಡಿಸಲಾಗುತ್ತಿದೆ. ವಾರಕ್ಕೆ 72 ಗಂಟೆಗೂ ಅಧಿಕ ಕಾಲ ಕೆಲಸ ಮಾಡಲು ಒತ್ತಡ ಹೇರಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿದೆ.