ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಮೂರು ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ ನಡೆಯಲಿದೆ. ಈ ಸಂಬಂಧ ಚುನಾವಣೆ ಆಯೋಗ ಜೂನ 6 ರಂದು ಘೋಷಣೆ ಮಾಡಿದ್ದು.ಕರ್ನಾಟಕ ವಿಧಾನಪರಿಷತ್ ಮೂವರು ಸದಸ್ಯರು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿಗೊಳಿಸುವ ಹಿನ್ನೆಲೆಯಲ್ಲಿ ಮೂರು ಸ್ಥಾನಗಳಿಗೆ ಜೂನ್ 30 ರಂದು ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ.
ಇದರಿಂದ, ಚುನಾವಣಾ ಅಧಿಸೂಚನೆ ಜೂನ್ 13 ರಂದು ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಜೂನ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 21 ರಂದು ನಾಮಪತ್ರ ಪರಿಶೀಲನೆ, ಜೂನ್ 23ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಜೂನ್ 30ಕ್ಕೆ ಮತದಾನ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ರಾಜೀನಾಮೆ ಕೊಟ್ಟಿರುವ ಸದಸ್ಯರು: ಬಾಬುರಾವ್ ಚಿಂಚನಸೂರ್, ಆರ್.ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ಮಾರ್ಚ್ 20 ರಂದು ರಾಜೀನಾಮೆ ನೀಡಿದ್ದಾರೆ. ಅವರ ಸದಸ್ಯತ್ವದ ಅವಧಿ 2024ರ ಜೂನ್ 17ರ ತನಕ ಇತ್ತು. ಆರ್.ಶಂಕರ್ ಅವರು ಏಪ್ರಿಲ್ 12 ರಂದು ರಾಜೀನಾಮೆ ಸಲ್ಲಿಸಿದ್ದರು. ಅವರ ಸದಸ್ಯತ್ವದ ಅವಧಿ 2026ರ ಜೂನ್ 30ರ ತನಕ ಇತ್ತು. ಲಕ್ಷ್ಮಣ ಸವದಿ ಏಪ್ರಿಲ್ 14 ರಂದು ರಾಜೀನಾಮೆ ನೀಡಿದ್ದು,ಅವರ ಸದಸ್ಯತ್ವದ ಅವಧಿ 2028ರ ಜೂನ್ 14ರ ವರೆಗೆ ಇತ್ತು.
ಶಾಸಕರೇ ಮತದಾರರು:ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ ಈ ಮತದಾನಕ್ಕೆ ವಿಧಾನ ಸಭೆಯ ಸದಸ್ಯರೇ ಮತದಾರರು, ವಿಧಾನ ಸೌಧದಲ್ಲೇ ಮತದಾನ ನಡೆಯಲಿದ್ದು, ಜೂನ್ 30 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯ ತನಕ ಮತದಾನಕ್ಕೆ ಅವಕಾಶವಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.