ಉಪ ಚುನಾವಣೆಯಲ್ಲಿ ದಾಖಲೆಯ ಮತದಾನ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ತೆರವಾಗಿದ್ದ ಸಂಡೂರು ಚನ್ನಪಟ್ಟಣ  ಹಾಗೂ ಶಿಗ್ಗಾವಿ ಈ 3 ಕ್ಷೇತ್ರಗಳಿಗೆ ಇಂದು ಮತದಾನವಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೂ ಮತದಾನ ಜರುಗಿದೆ. ಎಲ್ಲಾ ಮೂರು ಕ್ಷೇತ್ರಗಳಲ್ಲಿಯೂ ದಾಖಲೆಯ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಚನ್ನಪಟ್ಟಣದಲ್ಲಿ 88.80 ರಷ್ಟು ಮತದಾನ!

ಇಡೀ ದೇಶದ ಗಮನಸೆಳೆದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದ್ದು, ಈ ಬಾರಿ ದಾಖಲೆ ಪ್ರಮಾಣದ ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು ಶೇ. 88.80 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,06,866 ಮತದಾನವಾಗಿದೆ. ಇದರಲ್ಲಿ 1,00,501 ಪುರುಷರು ಹಾಗೂ 1,06,362 ಮಹಿಳೆಯರು ಮತ ಚಲಾಯಿಸಿದ್ದಾರೆ. ಇವರ ಜೊತೆಗೆ 3 ಇತರೆ ಮತದಾರರು ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಒಟ್ಟಾರೆಯಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಿರುವುದಾಗಿ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಮಾಹಿತಿ ನೀಡಿದ್ದಾರೆ. ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದರೆ, ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.

ಶಿಗ್ಗಾವಿಯಲ್ಲಿ 80.48 ರಷ್ಟು ಮತದಾನ!

ಚನ್ನಪಟ್ಟಣದ ಜೊತೆಗೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿಯೂ ಕೂಡ ಬಸವರಾಜ ಬೊಮ್ಮಾಯಿ ಅವರಿಂದಾಗಿ ತೆರವಾಗಿರುವದರಿಂದ ಉಪಚುನಾವಣೆ ನಡೆದಿದ್ದು, ಇಲ್ಲಿ ಕೂಡ ದಾಖಲೆ ಶೇ. 80.48 ರಷ್ಟು ಮತದಾನವಾಗಿದೆ. ಬೆಳಿಗ್ಗೆ 7 ರಿಂದ ಆರಂಭವಾದ ಮತದಾನ ಸಂಜೆ 6 ಗಂಟೆವರೆಗೆ ನಡೆದಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಒಟ್ಟು 2,37,525 ಮತದಾರರ ಪೈಕಿ, 1,91,166 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇದರಲ್ಲಿ 98,642 ಪುರುಷರು ಹಾಗೂ 92,522 ಮಹಿಳೆಯರು ಮತ್ತು ಇಬ್ಬರು ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನಿಂದ ಯಾಸಿರ್ ಖಾನ್ ಪಠಾಣ್ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಸಂಡೂರಿನಲ್ಲಿ 76.24 ರಷ್ಟು ಮತದಾನ

ಇನ್ನೊಂದೆಡೆ ಬಳ್ಳಾರಿಯ ಸಂಡೂರು ಕ್ಷೇತ್ರಕ್ಕೆ ಕೂಡ ಇಂದು ಮತದಾನ ನಡೆದಿದೆ. ಇಲ್ಲಿ ಕಾಂಗ್ರೆಸ್‌ನಿಂದ ಈ ತುಕಾರಾಂ ಪತ್ನಿ ಅನ್ನಪೂರ್ಣ ಹಾಗೂ ಬಿಜೆಪಿಯಿಂದ ಜನಾರ್ಧನ ರೆಡ್ಡಿ ಆಪ್ತ ಬಂಗಾರು ಹನುಮಂತು ಕಣದಲ್ಲಿದ್ದಾರೆ. ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 1,80,189 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಅದರಲ್ಲಿ 90,922 ಪುರುಷರು ಹಾಗೂ 89,252 ಮಹಿಳೆಯರು ಮತ್ತು 12 ಮಂದಿ ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂತಿಮವಾಗಿ ಸಂಡೂರಿನಲ್ಲಿ ಒಟ್ಟು 76.24% ರಷ್ಟು ಮತದಾನವಾಗಿದೆ

ಮತದಾರ ಯಾರ ಕೈ ಹಿಡಿದಿದ್ದಾನೆ ಎಂಬುದನ್ನು ಫಲಿತಾಂಶದ ಬಳಿಕವಷ್ಟೇ ಹೇಳಬಹುದು.‌

Donate Janashakthi Media

Leave a Reply

Your email address will not be published. Required fields are marked *