ನವದೆಹಲಿ: ಸೆಪ್ಟೆಂಬರ್ 5ರ ಮಂಗಳವಾರ ದೇಶದಾದ್ಯಂತ ನಡೆದ ಉಪಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಒಟ್ಟು ಆರು ರಾಜ್ಯಗಳ ಏಳು ವಿಧಾನಸಭಾ ಸ್ಥಾನಗಳ ಮತ ಎಣಿಕೆಯನ್ನು ಆಯಾ ರಾಜ್ಯಗಳಲ್ಲಿ ಸ್ಥಾಪಿಸಲಾದ ಕೇಂದ್ರಗಳಲ್ಲಿ ನಡೆಯಿತು. ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ, ಪಶ್ಚಿಮ ಬಂಗಾಳದ ಧೂಪ್ಗುರಿ, ಜಾರ್ಖಂಡ್‌ನ ಡುಮ್ರಿ ಮತ್ತು ತ್ರಿಪುರಾದ ಬೋಕ್ಸನಗರ ಮತ್ತು ಧನ್‌ಪುರ ಕ್ಷೇತ್ರಗಲ್ಲಿ ಉಪ ಚುನಾವಣೆ ನಡೆದಿತ್ತು.
ತ್ರಿಪುರಾದ ಬೋಕ್ಸನಗರ ಮತ್ತು ಧನ್‌ಪುರ ಕ್ಷೇತ್ರಗಲ್ಲಿ ಬಿಜೆಪಿ ಗೆದ್ದಿದೆ. ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಸತತವಾಗಿ ಆಯ್ಕೆಯಾಗುತ್ತಿದ್ದ ಧನಪುರ ಕ್ಷೇತ್ರದಲ್ಲಿ ಬಿಜೆಪಿಯ ಬಿಂದು ದೇಬನಾಥ್ ಅವರು ಸಿಪಿಐ(ಎಂ)ನ ಕೌಶಿಕ್ ಚಂದಾ ಅವರನ್ನು 18,000 ಮತಗಳಿಂದ ಸೋಲಿಸಿದ್ದಾರೆ. ರಾಜ್ಯದ ಬೋಕ್ಸಾನಗರದಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸಿಪಿಐಎಂ ಅಭ್ಯರ್ಥಿ ಮಿಜಾನ್ ಹೊಸೈನ್ ಅವರನ್ನು ಬಿಜೆಪಿ ಅಭ್ಯರ್ಥಿ ತಫಜ್ಜಲ್ ಹೊಸೈನ್ ಅವರು ಸೋಲಿಸಿದ್ದಾರೆ.
ತ್ರಿಪುರದಲ್ಲಿ ನಡೆದ ಚುನಾವಣೆಯಲ್ಲಿ ಸಂಪೂರ್ಣವಾಗಿ ರಿಗ್ಗಿಂಗ್ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗಿದೆ ಎಂದು ಸಿಪಿಐಎಂ ಆರೋಪಿಸುತ್ತು. ಮರು ಮತದಾನ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.
ಇದನ್ನೂ ಓದಿ: ‘ಸನಾತನ ಧರ್ಮವೋ? ಸನಾತನ ಮತವೋ?’
ಕೇರಳದ ಪುತ್ತುಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಾಂಡಿ ಒಮ್ಮನ್ 36,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಉತ್ತರಾಖಂಡದ ಬಾಗೇಶ್ವರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದ್ದು, ಅಭ್ಯರ್ಥಿ ಪಾರ್ವತಿ ದಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಸಂತ್ ಕುಮಾರ್ ಅವರನ್ನು 2400 ಮತಗಳಿಂದ ಸೋಲಿಸಿದ್ದಾರೆ.
ಜಾರ್ಖಂಡ್‌ನ ಡುಮ್ರಿಯಲ್ಲಿ ಮುಕ್ತಿ ಮೋರ್ಚಾ ಅಭ್ಯರ್ಥಿ ಬೇಬಿ ದೇವಿ 17,000 ಮತಗಳ ಅಂತರದಿಂದ ಎಜೆಎಸ್‌ಯು ಪಕ್ಷದ ಯಶೋದಾ ದೇವಿ ಅವರನ್ನು ಸೋಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್ ಅವರು ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಅವರು ಬಿಜೆಪಿಯ ತಪಸಾ ರಾಯ್ ಅವರನ್ನು 4300 ಮತಗಳಿಂದ ಸೋಲಿಸಿದ್ದಾರೆ.
ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸುಧಾಕರ್ ಸಿಂಗ್ ಅವರು 1,05,237 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಧಾರಾ ಸಿಂಗ್ ಚೌಹಾಣ್ 68,158 ಅಷ್ಟೆ ಮತಗಳನ್ನು ಪಡೆದಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, 34 ರೌಂಡ್‌ಗಳ ಎಣಿಕೆ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಈಗಾಗಲೆ, 27 ರೌಂಡ್‌ಗಳ ಎಣಿಕೆ ಮುಗಿದಿದೆ. ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸನಾತನ ಧರ್ಮವನ್ನು ಒಪ್ಪಿಕೊಳ್ಳುವವರು ಮನುಷ್ಯರೆ ಅಲ್ಲ; ಉದಯನಿಧಿ ಹೇಳಿಕೆ ಸಮರ್ಥಿಸಿದ ಡಿಎಂಕೆ ನಾಯಕ ಎ. ರಾಜಾ
ಈ ವರ್ಷಾಂತ್ಯದಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. 2024ರಲ್ಲಿ ನಡೆಯಲಿರುವ ನಿರ್ಣಾಯಕ ಲೋಕಸಭಾ ಚುನಾವಣೆಗೆ ಈ ಐದು ರಾಜ್ಯಗಳ ಚುನಾವಣೆಗಳು ದಿಕ್ಸೂಚಿಯಾಗಿದೆ ಎಂದು ಚುನಾವಣಾ ತಜ್ಞರ ಅಭಿಪ್ರಾಯವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ವಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ಗೆ ಉಪಚುನಾವಣೆ ಫಲಿತಾಂಶಗಳು ಪರೀಕ್ಷೆಯಾಗಿವೆ. ಒಟ್ಟು ಏಳು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ನಾಲ್ಕು ಗೆದ್ದುಕೊಂಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 3 ಕ್ಷೇತ್ರಗಳನ್ನಷ್ಟೆ ಗೆದ್ದುಕೊಂಡಿದೆ.
2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಗೆದ್ದಿದ್ದ ದಾರಾ ಸಿಂಗ್ ಚೌಹಾಣ್ ಅವರು ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಹೀಗಾಗಿ ಘೋಸಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಬಿಜೆಪಿ ಚೌಹಾಣ್ ಅವರನ್ನೆ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ್ದು, ಮತ್ತೊಂದೆಡೆ, ಸಮಾಜವಾದಿ ಪಕ್ಷವು ಸುಧಾಕರ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು.
ತ್ರಿಪುರಾದ ಧನಪುರದಲ್ಲಿ, ಬಿಜೆಪಿಯ ಪ್ರತಿಮಾ ಭೌಮಿಕ್ ಅವರು ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು, ಭೌಮಿಕ್ ಅವರ ಸಹೋದರ ಬಿಂದು ದೇಬನಾಥ್ ಅವರನ್ನು ಬಿಜೆಪಿ ಉಪಚುನಾವಣೆಗೆ ಕಣಕ್ಕಿಳಿಸಿತ್ತು. ಅವರ ವಿರುದ್ಧ ಸಿಪಿಐ(ಎಂ) ಕೌಶಿಕ್ ಚಂದಾ ಅವರನ್ನು ಕಣಕ್ಕಿಳಿಸಿತ್ತು. ತ್ರಿಪುರಾದ ಬೋಕ್ಸಾನಗರದಲ್ಲಿ, ಸಿಪಿಐ(ಎಂ) ಶಾಸಕ ಸಂಸುಲ್ ಹಕ್ ಅವರ ನಿಧನದ ಕಾರಣಕ್ಕೆ ತೆರವಾದ ಸ್ಥಾನಕ್ಕೆ ಬಿಜೆಪಿ ಮತ್ತು ಸಿಪಿಐ (ಎಂ) ಪರಸ್ಪರ ಸ್ಪರ್ಧಿಸಿತ್ತು.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಕೆ : ತನಿಖೆಗೆ ನಿರ್ಧಾರ
ಉತ್ತರಾಖಂಡದ ಬಾಗೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಚಂದನ್ ರಾಮ್ ದಾಸ್ ನಿಧನನ ಕಾರಣಕ್ಕೆ ಉಪಚುನಾವಣೆ ನಡೆದಿತ್ತು. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.
ಕಾಂಗ್ರೆಸ್ ಹಿರಿಯ ನಾಯಕ ಓಮನ್ ಚಾಂಡಿ ಅವರ ನಿಧನದಿಂದಾಗಿ ಕೇರಳದ ಪುತ್ತುಪಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಕ್ಷೇತ್ರದ ಹುರಿಯಾಳಾಗಿ ಕಾಂಗ್ರೆಸ್ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮನ್ ಅವರನ್ನು ಕಣಕ್ಕಿಳಿಸಿದರೆ, ಆಡಳಿತ ಪಕ್ಷ ಸಿಪಿಐ (ಎಂ) ಜೈಕ್ ಸಿ. ಥಾಮಸ್ ಅವರನ್ನು ಕಣಕ್ಕಿಳಿಸಿತ್ತು.
ಜಾರ್ಖಂಡ್‌ನ ಡುಮ್ರಿಯಲ್ಲಿ ಜೆಎಂಎಂ ಶಾಸಕ ಜಗರ್ನಾಥ್ ಮಹತೊ ಅವರ ನಿಧನದ ಕಾರಣಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಎನ್‌ಡಿಎ ಮೈತ್ರಿಕೂಟದ AJSU ಪಕ್ಷದ ಯಶೋದಾ ದೇವು ವಿರುದ್ಧ, ಇಂಡಿಯಾ ಒಕ್ಕೂಟದ ಜೆಎಂಎಂ ಪಕ್ಷವೂ ಬೇಬಿ ದೇವಿ ಅವರನ್ನು ಕಣಕ್ಕಿಳಿಸಿತ್ತು. ಪಶ್ಚಿಮ ಬಂಗಾಳದ ಧುಪ್ಗುರಿಯಲ್ಲಿ ಬಿಜೆಪಿ ಎಮ್‌ಎಲ್‌ಎ ಬಿಷ್ಣು ಪದಾ ರೇ ನಿಧನದ ಕಾರಣಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಕ್ಷೇತ್ರದಲ್ಲಿ ಬಿಜೆಪಿಯಿಂದ ತಪಸಿ ರಾಯ್ ಅವರು ಸ್ಪರ್ಧಿಸಿದ್ದರೆ, ಟಿಎಂಸಿಯಿಂದ ನಿರ್ಮಲ್ ಚಂದ್ರ ರಾಯ್ ಅವರು ಸ್ಪರ್ಧಿಸಿದ್ದರು.
ವಿಡಿಯೊ ನೋಡಿ: ಚಂದ್ರಯಾನ 3 – ಸುತ್ತಮುತ್ತ ಖಗೋಳ ವಿಜ್ಞಾನಿ ಪಾಲಹಳ್ಳಿ ವಿಶ್ವನಾಥ್ ಜೊತೆ ಮಾತುಕತೆ Janashakthi Media