ಐ.ಕೆ.ಬೋಳುವಾರ
ಇವತ್ತು ಸಪ್ಟೆಂಬರ್ 19 ಬಿವಿ ಕಾರಂತರ ಜನುಮ ದಿನ. ಅಹಮದಾಬಾದ್ ನಗರದಲ್ಲಿರುವ ಥಿಯೇಟರ್ ಮೀಡಿಯಾ ಸೆಂಟರ್ (ಬುಡ್ರೇಟ್ಲಿ ಟ್ರಸ್ಟ್) ನವರು ಮನ್ವಿತಾ ಬಾರಾಡಿ ಮತ್ತು ಹಸ್ಮುಖ್ ಬಾರಾಡಿಯವರ ಸಂಪಾದಕತ್ವದಲ್ಲಿ ಬಿವಿ ಕಾರಂತರ ರಂಗ ವಿಚಾರಗಳ ಕುರಿತಾಗಿ ಸಾಕ್ಷ ಗ್ರಂಥವೊಂದನ್ನು ಹಿಂದಿ ಭಾಷೆಯಲ್ಲಿ ಪ್ರಕಟಿಸಿದ್ದಾರೆ. ಈ ಪುಸ್ತಕದ ಸಂಪಾದಕರಲ್ಲೊಬ್ಬರಾದ ಮನ್ವಿತಾ ಬಾರಾಡಿ ಯವರು ಬರೆದ ಪುಸ್ತಕದ ಮುನ್ನುಡಿಯ ಬರಹ ರೂಪ ಇಲ್ಲಿದೆ.
ಈ ಪುಸ್ತಕದಲ್ಲಿ ಬಿವಿ ಕಾರಂತರ ರಂಗ ವಿಚಾರಗಳ ಕುರಿತಾಗಿ ಸಮಗ್ರ ವಿವರಗಳಿದ್ದರೆ ಪುಸ್ತಕದ ಮುನ್ನುಡಿಯಲ್ಲಿಯೇ ಬಹಳ ಅಪರೂಪದ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಬಿವಿ ಕಾರಂತರ ಜನುಮದಿನದ ನೆನಪಿನಲ್ಲಿ ಈ ಮುನ್ನುಡಿ ಬರಹವನ್ನು ಹಂಚಿಕೊಳ್ಳುತ್ತಿದ್ದೇನೆ.
ಬಿವಿ ಕಾರಂತರ ಕುರಿತು ಮನ್ವಿತ ಬಾರಾಡಿಯವರ ಬರಹ
ನಾನು ಔಪಚಾರಿಕ ಹಾಗೂ ಅನೌಪಚಾರಿಕ ರಂಗ ಪ್ರದರ್ಶನಗಳನ್ನು ಅಧ್ಯಯನ ಮಾಡುವುದಕ್ಕಾಗಿ ಮತ್ತು ಒಂದು ಸ್ಪೇಸ್ ಅಥವಾ ರಂಗಸ್ಥಳ ವನ್ನು ಸಿದ್ಧಪಡಿಸುವ ಜಾನಪದ ಮತ್ತು ಶಾಸ್ತ್ರೀಯವಾದ ಭಾರತೀಯ ರಂಗಸಂಪ್ರದಾಯಗಳನ್ನು ನನ್ನ ಅಧ್ಯಯನದ ಭಾಗವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆ ಕಾರಣಗಳಿಗಾಗಿ ನಾನು ಸಾಕಷ್ಟು ಜನರನ್ನು ಭೇಟಿ ಮಾಡಬೇಕಾಗುತ್ತಿತ್ತು. ಈ ಯೋಜನೆಗೆ ನನ್ನ ಗೈಡ್ ಆಗಿದ್ದ ಮತ್ತು ನನ್ನ ತಂದೆಯವರೂ ಆದ ಶ್ರೀ ಹಸ್ಮುಖ್ ಬಾರಾಡಿ ಯವರು ನಾನು ಭೇಟಿ ಮಾಡಬೇಕಾದ ವ್ಯಕ್ತಿಗಳ ಬಗ್ಗೆ ಹಾಗೂ ಸ್ಥಳಗಳ ಬಗ್ಗೆ ದೊಡ್ಡ ವಿವರ ಪಟ್ಟಿಯನ್ನೇ ನೀಡಿದ್ದರು.
ಇದನ್ನೂ ಓದಿ: ಯಾದಗಿರಿ| ಶಿಕ್ಷಕರ ನಿರ್ಲಕ್ಷ್ಯದಿಂದ 10ನೇ ತರಗತಿಯ ವಿದ್ಯಾರ್ಥಿ ಸಾವು
ರಂಗಭೂಮಿಯ ಮೇಲಿರುವ ನನ್ನ ಪ್ರೀತಿ ಮತ್ತು ಆಸಕ್ತಿಯ ಕಾರಣಗಳಿಗಾಗಿ ಮೊದಲಿಗೆ ನಾನು ಬಿವಿ ಕಾರಂತರನ್ನು ಮೈಸೂರಿನ ರಂಗಾಯಣದಲ್ಲಿ ಭೇಟಿ ಮಾಡಿದೆ ಮತ್ತು ಜಾನಪದ ರಂಗಭೂಮಿಯಲ್ಲಿ ಅಡಕವಾಗಿರುವ ರಂಗಾಂಶಗಳನ್ನು ಚರ್ಚಿಸಿದೆ .ಆಗ ಅವರು ನಾವು ಮಾಡಬಹುದಾದ ಸಂಚಾರಿ ಪ್ರವಾಸಿ ನಾಟಕ ಗುಂಪುಗಳ ಬಗ್ಗೆ ತಮ್ಮ ವಿಶಿಷ್ಟ ಆಲೋಚನೆಗಳ ಬಗ್ಗೆ ಬಹಳಷ್ಟು ವಿವರಗಳನ್ನು ಹಂಚಿಕೊಂಡಿದ್ದರು.
ಮೂಲತ: ನಾನೊಬ್ಬಳು ವಾಸ್ತುಶಿಲ್ಪ ಶಾಸ್ತ್ರದ ವಿದ್ಯಾರ್ಥಿನಿ ಆಗಿರುವುದರಿಂದ ಮತ್ತು ನನ್ನ ಕಲಿಕಾ ಯೋಜನೆಯ ಭಾಗವಾಗಿ ಸುಲಭದಲ್ಲಿ ಒಗ್ಗಿಕೊಳ್ಳಬಹುದಾದ ಒಂದು ರಚನೆಯನ್ನು ವಿನ್ಯಾಸಗೊಳಿಸಿದೆ. ಅದನ್ನು ಟ್ರಕ್ ನಂತಹ ವಾಹನಗಳಲ್ಲಿ ಜೋಡಿಸಿ ಬಹುದು -ಸಾಗಿಸಬಹುದು ಮತ್ತು ಸುಲಭವಾಗಿ ಜೋಡಣೆಯಿಂದ ಬಿಡುಗಡೆಗೊಳಿಸಿ ಯಾವುದೇ ಸ್ಥಳದಲ್ಲಿ ಸ್ಥಾಪಿಸಬಹುದಾಗಿತ್ತು. ಬಿವಿ ಕಾರಂತರ ಹೃದಯಕ್ಕೆ ಹತ್ತಿರವಾದ ಇಂತಹದ್ದೇ ಆದ ಪರಿಕಲ್ಪನೆಯಲ್ಲಿ ನಾನು ಕೆಲಸ ಮಾಡಬೇಕಾಗಿದೆ ಎಂದು ಕಾರಂತರು ನನ್ನನ್ನು ಹುರಿದುಂಬಿಸಿದ್ದರು ಕೂಡ
ಅವರು ಹೇಳುತ್ತಿದ್ದರು ಪ್ರತಿಯೊಂದು ಶಾಲೆಯಲ್ಲಿಯೂ ಒಬ್ಬರಾದರೂ ರಂಗ ಶಿಕ್ಷಕರು ಇರಲೇಬೇಕು. ಮತ್ತು ಆ ಶಾಲೆಯ ಸುತ್ತಮುತ್ತಲಿನ ಊರುಗಳಲ್ಲಿ ಊರವರದ್ದೇ ಆದ ರಂಗ ತಂಡಗಳು ಇರಬೇಕು ಎಂಬುದಾಗಿ. ಇದು ಅವರ ಖಚಿತ ಅಭಿಪ್ರಾಯವಾಗಿತ್ತು .
ಒಂದು ನಾಟಕ ತಂಡ ಅಥವಾ ರೆಪರ್ಟರಿ ತಂಡವು ಕಡ್ಡಾಯವಾಗಿ ತಮ್ಮದೇ ಆದ ಒಂದು ಟ್ರಕ್ ಮಾದರಿ ವಾಹನವನ್ನು ಹೊಂದಿರಬೇಕು. ನಾಟಕ ತಂಡದವರ ಮತ್ತು ನಾಟಕಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳ ಪೆಟ್ಟಿಗೆಗಳು ಸಂಗೀತ ಉಪಕರಣಗಳು ರಂಗ ಪರಿಕರಗಳು ಧ್ವನಿ ಮತ್ತು ಬೆಳಕಿನ ಉಪಕರಣಗಳು ಮುಂತಾದವುಗಳನ್ನು ಟ್ರಕ್ ನಲ್ಲಿ ತುಂಬಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವ ಊರಿನಲ್ಲಿ ಅಥವಾ ಯಾವ ಜಾಗಕ್ಕೆ ಹೋಗಿ ರಂಗ ಪ್ರದರ್ಶನ ನೀಡುತ್ತೇವೆಯೋ ಆ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಹೋಗಿ ಪ್ರದರ್ಶನದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಈ ಕೆಲಸ ವರ್ಷಪೂರ್ತಿ ನಿರಂತರವಾಗಿ ಮುನ್ನಡೆಯುತ್ತಿರಬೇಕು .ಇಂತಹ ಸುತ್ತಾಟಗಳು ನಿರಂತರವಾಗಿ ನಡೆಯುತ್ತಿದ್ದರೆ ಮಾತ್ರ ನಮ್ಮ ಸುತ್ತಮುತ್ತಲ ಸಮಾಜ ಸುಂದರವೂ ಸುದೃಢವೂ ಆಗಿ ರೂಪುಗೊಳ್ಳಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು.
ಇದನ್ನೂ ನೋಡಿ: ಸಿಜೆಐ ಮನೆಯ ಪೂಜೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದು ಸರಿಯೇ? | ಚಂದ್ರಪ್ರಭ ಕಠಾರಿ Janashakthi Media
ಇದರೊಂದಿಗೆ ಅವರು ಟೋಟಲ್ ರಂಗಭೂಮಿಯ ಕುರಿತು ವಿಸ್ತೃತವಾಗಿ ಮಾತನಾಡಿದರು. ನಾನು ಅವರು ಸೂಚಿಸಿದ ಮಾದರಿ ಪ್ರವಾಸಿ ತಂಡಕ್ಕಾಗಿ ಪರ್ಯಾಯ ರೇಖಾಚಿತ್ರಗಳನ್ನು ರಚಿಸಿದೆ. ಆ ಸಂದರ್ಭದಲ್ಲಿ ರಂಗಾಯಣದ ಕ್ಯಾಂಪಸ್ಸಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಬಯಲು ರಂಗ ಮಂದಿರಕ್ಕೂ ಕೆಲವು ಆಯ್ಕೆಗಳನ್ನು ರೂಪಿಸಿ ನೀಡಿದ್ದೆ.
ಬಿವಿ ಕಾರಂತರು ನನ್ನನ್ನು ಕ್ಯಾಂಪಸ್ ಸುತ್ತಲೂ ಕರೆದುಕೊಂಡು ಹೋಗಿ ಅವರ ಕನಸಿನ ರಂಗಭೂಮಿಯ ಕುರಿತಾಗಿ ಮಾತನಾಡಿದರು. ಟ್ರಕ್ ಹೇಗೆ ತುಂಬಿಸಿದ ಸಾಮಗ್ರಿಗಳನ್ನು ಸಾಗಿಸಬಲ್ಲುದು? ಎಷ್ಟು ದೊಡ್ಡ ಟ್ರಕ್ ಬೇಕಾಗಬಹುದು? ಅದಕ್ಕೆ ಎಷ್ಟು ವೆಚ್ಚ ಉಂಟಾಗಬಹುದು? ಎಂಬುದರ ಆಗುಹೋಗುಗಳ ಬಗ್ಗೆಯೂ ನಾವು ವಿವರವಾಗಿ ಚರ್ಚಿಸಿದ್ದೆವು.
ನಾನು ಚರ್ಚಿಸಿದ ಎಲ್ಲ ವಿನ್ಯಾಸಗಳ ಪರ್ಯಾಯಗಳಿಗೂ ಸೂಕ್ತವಾಗಿ ಪ್ರತಿಕ್ರಿಯಿಸಿದ ಬಳಿಕ ಅವರು ರಂಗತಾಲೀಮು ನಡೆಯುವಲ್ಲಿಗೆ ತೆರಳಿದ್ದರು. ಇಂತಹ ಅದ್ಭುತವಾದ ಯೋಜನೆ ನಮ್ಮ ಎದುರಿಗೆ ಇದ್ದರೂ ಆ ಕಲ್ಪನೆಗೆ ಸೂಕ್ತವಾದ ನಿಧಿ ಮತ್ತು ಪ್ರೋತ್ಸಾಹವನ್ನು ಪಡೆಯುವುದು ಸುಲಭವಾದ ಕೆಲಸವಲ್ಲ ಎಂಬುದಾಗಿಯೂ ಅವರು ಹೇಳಿದ್ದರು. ನಾನು ಕೂಡ ನಮ್ಮ ನಾಟಕ ತಂಡಕ್ಕೆ ಸರಿಯಾದ ಸಂಪನ್ಮೂಲಗಳನ್ನು ಕ್ರೋಢಿಕರಿಸಲು ಇನ್ನೂ ಕಾಯುತ್ತಿದ್ದೇನೆ. ಬಹುಶ: ನಮ್ಮ ಸುತ್ತಮುತ್ತಲ ಸಾಮಾಜಿಕ ವಾತಾವರಣ ಇನ್ನು ಕೂಡ ಸುಸಜ್ಜಿತ ಪ್ರವಾಸಿ ನಾಟಕ ಗುಂಪುಗಳ ನಟ ನಟಿಯರು ಮತ್ತು ಸಂವಹನಾಕಾರರಿಗೆ ಈ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗಿಲ್ಲ
ಬಿವಿ ಕಾರಂತರೊಂದಿಗಿನ ಈ ಒಡನಾಟ ನಮ್ಮ ಥೇಟರ್ ಮತ್ತು ಮೀಡಿಯಾ ಸೆಂಟರ್ ಆಗಿರುವ -ಗ್ಯಾರೇಜ್ ಸ್ಟುಡಿಯೋ ಅಹಮದಾಬಾದ್- ಗೆ ಭೇಟಿ ನೀಡಲು ಕಾರಣವಾಯಿತು.
ಅವರು ನಮ್ಮ ತಂಡದೊಂದಿಗೆ ಮ್ಯೂಸಿಕ್ ಇನ್ ಥೇಟರ್ ಮತ್ತು ಮ್ಯೂಸಿಕ್ ಆಫ್ ಥೇಟರ್ ಎಂಬ ರಂಗ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅದೇ ಸಂದರ್ಭದಲ್ಲಿ ನನ್ನ ತಂದೆಯವರು ರಂಗಭೂಮಿಯ ಭಾಷೆ ಮತ್ತು ರಂಗಭೂಮಿಯಲ್ಲಿನ ಭಾಷೆ ಕುರಿತಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಾಗಾರ ತಯಾರಿ ಪ್ರಕ್ರಿಯೆ ಭಾಗವಾಗಿ ಕಾರಂತರು ಕಾರ್ಯಾಗಾರಕ್ಕೆ ಔಪಚಾರಿಕ ಮತ್ತು ಸುಧಾರಿತ ಅಥವಾ ಹೊಂದಾಣಿಕೆಯ ವಾದ್ಯಗಳ ದೊಡ್ಡ ಪಟ್ಟಿಯನ್ನೇ ನೀಡಿದ್ದರು. ನಾವು ಅದನ್ನು ಶ್ರಮವಹಿಸಿ ಎಲ್ಲೆಲ್ಲಿಂದಲೋ ತಂದು ಒಟ್ಟುಗೂಡಿಸಿದ್ದೆವು.
ನಮ್ಮಲ್ಲಿ ಹೆಚ್ಚಿನವರು ರಂಗಭೂಮಿ ಮತ್ತು ನೇಪಥ್ಯ ರಂಗಭೂಮಿಯ ಹಿನ್ನೆಲೆ ಉಳ್ಳವರಾಗಿದ್ದೆವು. ಆದರೆ ಸಂಗೀತದಲ್ಲಿ ನಮಗೆ ಯಾರಿಗೂ ಯಾವುದೇ ಶಾಸ್ತ್ರೀಯ ಅಥವಾ ಔಪಚಾರಿಕ ತರಬೇತಿ ಇರಲಿಲ್ಲ. ಕಾರ್ಯಾಗಾರದಲ್ಲಿ ನಾವು ಧ್ವನಿಗಳನ್ನು ಉತ್ಪಾದಿಸಬಹುದು ಅಥವಾ ಅಹಿತಕರವಾದ ಧ್ವನಿ ಶಬ್ದಗಳನ್ನು ಪ್ರತ್ಯೇಕಿಸಬಹುದು ರಂಗಭೂಮಿಯಲ್ಲಿ ಸಂಗೀತವನ್ನು ಒಂದು ಅಂಶವನ್ನಾಗಿ ಮಾತ್ರ ಬಳಕೆ ಮಾಡಲಾಗುತ್ತದೆ. ಕಾರಂತರು ನಮ್ಮೆಲ್ಲರ ಕಿವಿಗಳನ್ನು ಕಿವಿ ಕೊಟ್ಟು ತೆರೆದು ಕೇಳುವಂತೆ ಮಾಡಿದರು ಮತ್ತು ಸಂಗೀತ ಪ್ರಪಂಚದ ಮೂಲಕ ವ್ಯವಸ್ಥಿತವಾಗಿ ಆಲೋಚಿಸುವಂತೆ ನಮಗೆ ಸಹಾಯ ಮಾಡಿದರು .ಸಂಗೀತದಲ್ಲಿನ ನಾಟಕೀಯತೆ ನಮಗೆ ರೋಮಾಂಚಕಾರಿ ಆವಿಷ್ಕಾರವಾಗಿತ್ತು ಅವರು ನಮಗೆಲ್ಲ ಅತ್ಯದ್ಭುತ ಶಿಕ್ಷಕರಾಗಿ ಪಾಠ ಮಾಡಿದರು. ಎಂದೇ ಹೇಳಬೇಕು.
ನಂತರದ ದಿನಗಳಲ್ಲಿ
ಬಿವಿ ಕಾರಂತರು ಸಂಚಾಲಕರಾಗಿದ್ದ ಸಂಗೀತ ನಾಟಕ ಅಕಾಡೆಮಿಯ ಯುವ ರಂಗ ನಿರ್ದೇಶಕರ ಕಾರ್ಯಾಗಾರಕ್ಕೆ ನನ್ನನ್ನು ಆಹ್ವಾನಿಸಿದ್ದು ನನ್ನ ಪಾಲಿನ ಅದೃಷ್ಟವೆಂದೇ ತಿಳಿದಿದ್ದೇನೆ. ದೆಹಲಿಯ ಆನಂದ ಗ್ರಾಮದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಈ ಕಾರ್ಯಗಾರದಲ್ಲಿ ನಮ್ಮ ದೇಶದ ವಿವಿಧ ರಾಜ್ಯಗಳಿಂದ 25 ಮಂದಿ ಯುವ ರಂಗ ನಿರ್ದೇಶಕರು ಪಾಲ್ಗೊಂಡಿದ್ದೆವು.
ಕಾರ್ಯಾಗಾರದ ರಂಗ ತಜ್ಞರುಗಳಾಗಿ ಶ್ರೀಯುತ ಕಾವಳಂ ನಾರಾಯಣ ಪಣಿಕ್ಕರ್ – ವಿಜಯ್ ಮೆಹ್ತಾ – ಹಬೀಬ್ ತನ್ವೀರ್ -ಅನಾಮಿಕಾ ಹಕ್ಸರ್ ಮುಂತಾದವರ ಪಾಠಗಳನ್ನು ರಂಗಾನುಭವ ಗಳನ್ನು ಹಂಚಿಕೊಳ್ಳಲು ನಮಗೆ ಸಾಧ್ಯವಾಗಿತ್ತು. ರಂಗ ಚಳುವಳಿಯ ವಿವಿಧ ಶೈಲಿಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವ ಮೂಲಕ ನಮ್ಮೆಲ್ಲರನ್ನು ರಂಗ ಅಭ್ಯಾಸ ನೀಡುವ ಸಾಮರ್ಥ್ಯ ವೃದ್ಧಿಗೊಳಿಸುವಲ್ಲಿ ಕಾರಂತರ ಮುನ್ನೋಟವು ನಮಗೆ ಆತ್ಮವಿಶ್ವಾಸವನ್ನೂ ನಾವು ಪ್ರಬುದ್ಧರಾಗಲು ಸಹಾಯವನ್ನೂ ಮಾಡಿದೆ.
ಅವರ ಅಮೂಲ್ಯ ಸಮಯದಲ್ಲಿ ನಮಗೂ ಸ್ವಲ್ಪ ಸಮಯ ನೀಡಿರುವುದಕ್ಕಾಗಿ ಅವರಿಗೆ ನಾವು ಯಾವತ್ತೂ ಕೃತಜ್ಞರಾಗಿರುತ್ತೇವೆ. ಅವರೊಂದಿಗೆ ಒಡನಾಡಿದ ಎಲ್ಲ ಕ್ಷಣಗಳನ್ನು ರೆಕಾರ್ಡಿಂಗ್ ನಲ್ಲಿ ಟಿಪ್ಪಣಿ ದಾಖಲಾತಿಗಳಲ್ಲಿ ಸಂರಕ್ಷಿಸಿದ್ದೇವೆ. ಇದು ಆಸಕ್ತ ರಂಗಾಭ್ಯಾಸಿಗಳಿಗೆ ಸಿಗುವುದಕ್ಕೆ ಕಾರಣವಾಗಿರುವುದು ನಮ್ಮ ಅದೃಷ್ಟ ಎಂದು ಭಾವಿಸಿದ್ದೇವೆ. ಇಂತಹ ಪ್ರತಿಭಾವಂತ ಸಹನಾಶೀಲ ವ್ಯಕ್ತಿತ್ವದ ಮಹಾನ್ ಮನುಷ್ಯರ ಒಡನಾಟವನ್ನು ನಾನು ಗೌರವದಿಂದ ನಮಿಸುತ್ತೇನೆ
ಮನ್ವಿತ ಬಾರಾಡಿ
ಸಿನಿಮಾ ನಿರ್ದೇಶಕ ಪಿ ಎನ್ ರಾಮಚಂದ್ರ ಫಿಲಂ ಡಿವಿಜನ್ ರವರಿಗಾಗಿ -ಬಾಬಾ ಕಾರಂತ್ – ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಅದರಲ್ಲಿ ಭಾರತ ದೇಶದ ಹಲವು ರಂಗನಿರ್ದೇಶಕರನ್ನು ಸಂದರ್ಶಿಸಿ ಮಾತನಾಡಿಸಿದ್ದಾರೆ. ದಾಖಲಿಸಿದ್ದಾರೆ. ಹೀಗೆ ದಾಖಲಾದ ಬಹಳಷ್ಟು ವಿವರಗಳನ್ನು ಆಡಿಯೋ ರೂಪದಲ್ಲಿ ಸಂಗ್ರಹಿಸಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಎಲ್ಲರಿಗೂ ಸಿಗುವ ಹಾಗೆ ಮಾಡಿದ್ದಾರೆ. ಅದರಲ್ಲಿರುವ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆಯವರು ಮಾತನಾಡಿರುವ ಆಡಿಯೋ ದಾಖಲಾತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಯೂಟ್ಯೂಬ್ ಲಿಂಕ್: https://youtu.be/sksJVLVl4BA?si=OBocf-PSs3r_Sx-F