ಬೆಂಗಳೂರು: ರಾಜ್ಯದಲ್ಲಿ ಕಳೆದ 12 ದಿನಗಳಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡುವಂತೆ ಸಾರಿಗೆ ನೌಕರರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿಂದು ಗೃಹ ಸಚಿವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಾರಿಗೆ ಇಲಾಖೆ ನೌಕರರ ಮುಷ್ಕರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ, ಸದ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡಾ ಕ್ವಾರಂಟೈನ್ನಲ್ಲಿದ್ದಾರೆ. ಕೊವಿಡ್ ಹೆಚ್ಚಾಗುತ್ತಿರುವ ಹಿನ್ನಲೆ ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸಾರಿಗೆ ಸಚಿವರು ಬಂದ ಬಳಿಕ ಸಾರಿಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಕಳೆದ 11 ದಿನಗಳಿಂದ ಸಾರಿಗೆ ನೌಕರರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇಸುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವ ಮಾತೆ ಇಲ್ಲ ಎಂದು ಕೋಡಿಹಳ್ಳಿಯವರೇ ಈ ಹಿಂದೆ ಹೇಳಿಕೆ ಕೊಟ್ಟಿದ್ದರು. ಆದರೆ ಈಗ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ನಡೆದ ಮಾತುಕತೆಯಿಂದ ಸಾರಿಗೆ ನೌಕರರ ಜೊತೆ ಚರ್ಚಿಸಿ ಕೋಡಿಹಳ್ಳಿಯವರು ಮುಷ್ಕರ ಹಿಂತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.