ಮುಂಬೈ: ಅಧಿಕಾರಿಗಳು ನಾವು ಹೇಳಿದಂತೆ ಕಾರ್ಯ ನಿರ್ವಹಿಸಬೇಕು, ಅವರು ಹೇಳಿದಂತೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಜನರ ಅಭಿವೃದ್ಧಿಗಾಗಿ ಕೆಲವೊಮ್ಮೆ ಕಾನೂನನ್ನು ಉಲ್ಲಂಘಿಸಬೇಕಾಗುತ್ತದೆ. ನಾವು ಹೇಳುವ ಯೋಜನೆಯನ್ನು ಅಧಿಕಾರಿಗಳು “ಹೌದು ಸರ್” ಎಂದು ಹೇಳಿ ಕಾರ್ಯರೂಪಕ್ಕೆ ತರಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ ಬುಡಕಟ್ಟು ಜನಾಂಗದವರ ಆರೋಗ್ಯಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರ ಕಲ್ಯಾಣಕ್ಕಾಗಿ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ. ಆ ಸಂದರ್ಭದಲ್ಲಿ 10 ಬಾರಿ ಬೇಕಾದರೂ ಕಾನೂನುಗಳನ್ನು ಉಲ್ಲಂಘಿಸಬಹುದು ಎಂದು ಮಹಾತ್ಮ ಗಾಂಧೀಜಿ ಹಿಂದೆ ಹೇಳಿದ್ದರು. ಕೆಲವೊಮ್ಮೆ ಜನರ ಅನುಕೂಲಕ್ಕಾಗಿ ಕಾನೂನನ್ನು ಉಲ್ಲಂಘಿಸುವ ಹಕ್ಕು ನಮಗೂ ಇದೆ ಎಂದು ಹೇಳಿದ್ದಾರೆ.
1995ರ ಘಟನೆಯೊಂದನ್ನು ಮೆಲುಕು ಹಾಕಿದ ಸಚಿವ ನಿತಿನ್ ಗಡ್ಕರಿ ಮನೋಹರ ಜೋಶಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಡ್ಚಿರೋಲಿ ಮತ್ತು ಮೇಲ್ಘಾಟ್‍ನಲ್ಲಿ ಅಪೌಷ್ಟಿಕತೆಯಿಂದ 2 ಸಾವಿರ ಆದಿವಾಸಿ ಮಕ್ಕಳು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆಗ ಆ ಭಾಗದ 450 ಹಳ್ಳಿಗಳಿಗೆ ರಸ್ತೆ ಸಂಪರ್ಕ ಇರಲಿಲ್ಲ ಮತ್ತು ಅರಣ್ಯ ಇಲಾಖೆ ಕಾನೂನುಗಳಿಂದಾಗಿ ರಸ್ತೆ ನಿರ್ಮಿಸಲು ಅಡ್ಡಿಯಾಗುತ್ತಿತ್ತು. ರಸ್ತೆ ಇಲ್ಲದ ಕಾರಣ ಆ ಹಳ್ಳಿಗಳು ಅಭಿವೃದ್ಧಿಯಾಗಿರಲಿಲ್ಲ. ಆಗ ಆ ಸಮಸ್ಯೆಯನ್ನು ನನ್ನದೇ ಆದ ರೀತಿಯಲ್ಲಿ ಬಗೆಹರಿಸಿದ್ದೆ ಎಂದು ವಿವರಿಸಿದರು.