ಬೆಂಗಳೂರು: ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ (ಜಿಎಬಿ ಹೊರತು ಪಡಿಸಿ) ಅನ್ವಯವಾಗುವಂತೆ ಕಟ್ಟಡ ನಕ್ಷೆ ಮತ್ತು ಬೈಲಾ ಉಲ್ಲಂಘನೆ ವಿನಾಯಿತಿ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ವಿಸ್ತರಿಸುವ ಮಹತ್ವದ ವಿಧೇಯಕಕ್ಕೆ ಆಗಸ್ಟ್ 19ರಂದು ವಿಧಾನಸಭೆ ಅಂಗೀಕಾರ ನೀಡಿದೆ.
ಇದರಿಂದ ಕಟ್ಟಡದ ಮಾಲೀಕರಿಗೆ ನಿರಾಳತೆ ತರುವುದರ ಜತೆಗೆ ಸರಕಾರದ ಬೊಕ್ಕಸಕ್ಕೂ ಆದಾಯ ಬರಲಿದೆ.
ವಿಧಾನಸಭೆಯಲ್ಲಿ ಈ ಕುರಿತಂತೆ ಮಂಡಿಸಲಾಗಿದ್ದ ವಿಧೇಯಕದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, 20/30, 30/40 ವಿಸ್ತೀರ್ಣದ ಕಟ್ಟಗಳಿಗೆ ಸಿಸಿ (ಕ್ಲಿಯರೆನ್ಸ್ ಸರ್ಟಿಫಿಕೇಟ್), ಒಸಿ (ಸ್ವಾಧೀನ ಪತ್ರ)ಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಶೀಘ್ರವೇ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ಆ ಎರಡೂ ಎರಡೂ ಪ್ರಮಾಣಪತ್ರಗಳನ್ನು 20/30, 30/40 ವಿಸ್ತೀರ್ಣ ಸೈಟುಗಳಿಗೆ ವಿನಾಯ್ತಿ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಪ್ರಕಟಣೆ ನೀಡಲಾಗುತ್ತದೆ ಎಂದರು.
ಸದನಕ್ಕೆ ವಿವರವಾದ ಮಾಹಿತಿ ನೀಡಿದ ಸಚಿವರು
ಕಟ್ಟಡ ನಕ್ಷೆ, ಬೈಲಾಗಳ ಉಲ್ಲಂಘನೆಯ ಮಿತಿ ಹೆಚ್ಚಿಸುವ ಸಂಬಂಧದ ‘ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ- 2025’ ಮಂಡಿಸಲಾಯಿತು. ಚರ್ಚೆ ಬಳಿಕ ಉತ್ತರ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ವಿನಾಯಿತಿ ಮಿತಿಯನ್ನು ಶೇ.15ಕ್ಕೆ ವಿಸ್ತರಿಸುವ ಭರವಸೆ ನೀಡಿದರು. ಜತೆಗೆ ಇದನ್ನು 20/30 ಚದರಡಿ ವಿಸ್ತೀರ್ಣದ ಮತ್ತು ಆಯ್ದ ವಿಸ್ತೀರ್ಣದ ಕಟ್ಟಡಗಳಿಗೆ ಈ ವಿನಾಯಿತಿ ನೀಡುವ ಬಗ್ಗೆ ವಿವರವಾಗಿ ಮಾತನಾಡಿದರು.
ಇದನ್ನೂ ಓದಿ: ಬೆಂಗಳೂರು | ಒಳಮೀಸಲಾತಿ ಜಾರಿ ಎಡಗೈ 6 ಬಲಗೈ 6 ಸ್ಪಶ್ಯ 5 ಸಂಪುಟ ಸಭೆಯಲ್ಲಿ ತೀರ್ಮಾನ
”ಎಷ್ಟು ವಿಸ್ತೀರ್ಣದ ಆಸ್ತಿಗಳಿಗೆ ಇದು ಅನ್ವಯವಾಗುತ್ತದೆ ಎಂಬುದನ್ನು ನಿಯಮಾವಳಿ ರೂಪಿಸುವಾಗ ನಿರ್ಧರಿಸಲಾಗುವುದು. 20/30 ಚದರ ಅಡಿ ಹಾಗೂ 30/40 ಚದರ ಅಡಿ ವಿಸ್ತೀರ್ಣದಲ್ಲಿನ ಕಟ್ಟಡಗಳಿಗೆ ಒ.ಸಿ ವಿನಾಯಿತಿ ನೀಡುವ ಬಗ್ಗೆಯೂ ಪರಿಶೀಲನೆ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಸಿ.ಸಿ ಹಾಗೂ ಒ.ಸಿ ಪಡೆಯಲು ಅಲೆದಾಡುವುದನ್ನು ತಪ್ಪಿಸಿ ಪರವಾನಗಿಯುಳ್ಳ ವೃತ್ತಿಪರರ ಸ್ವಯಂ ಪ್ರಮಾಣೀಕರಣದ ಅನುಮೋದನೆ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಲು ಈ ತಿದ್ದುಪಡಿ ತರಲಾಗಿದೆ. ಅಕ್ರಮ-ಸಕ್ರಮದಂತಹ ಯಾವುದೇ ಪ್ರಯತ್ನ ಕೈಗೊಂಡಿಲ್ಲ,” ಎಂದು ಸ್ಪಷ್ಟಪಡಿಸಿದರು.
”ಪಾಲಿಕೆಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹಾಗೂ ಉದ್ದಿಮೆ ಪರವಾನಗಿ ಶುಲ್ಕಕ್ಕೆ ಕನಿಷ್ಠ ಹಾಗೂ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ. ಸ್ವಾಧೀನ ಪತ್ರ (ಒ.ಸಿ) ಪಡೆಯದ ಕಟ್ಟಡಗಳಿಗೆ ಮೂಲಸೌಕರ್ಯ ಕಲ್ಪಿಸಲು ಅವಕಾಶವಿಲ್ಲ. ಹಾಗಾಗಿ ಜಾರಿಯಲ್ಲಿರುವ ಕಟ್ಟಡ ಬೈಲಾಗಳು ಅಥವಾ ಯಾವುದೇ ಕಾಯಿದೆಯ ನಿಯಮಗಳನ್ವಯ ಸಕ್ರಮಗೊಂಡಂತಹ ಕಾನೂನುಬಾಹಿರ ಕಟ್ಟಡಗಳಿಗಷ್ಟೇ ದಂಡ ಹಾಗೂ ಶುಲ್ಕ ಪಾವತಿಸಿಕೊಂಡು ಕ್ರಮಬದ್ಧಗೊಳಿಸಲು ಅವಕಾಶ ಕಲ್ಪಿಸುವ ವಿಧೇಯಕ ಮಂಡಿಸಲಾಗಿದೆ,” ಎಂದು ವಿಧೇಯಕ ಮಂಡಿಸಿದ ಸಚಿವರು ವಿವರಿಸಿದರು.
ಇದನ್ನೂ ನೋಡಿ: ದೂರುದಾರ ವ್ಯಕ್ತಿ ಪ್ರಾಮಾಣಿಕ, ಆತ ಹೇಳ್ತೀರೋದು ಎಲ್ಲವೂ ಸತ್ಯ – ಬಾಲನ್Janashakthi Media
