ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ರಾಜ್ಯದ ಯುವಜನರಿಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ‘ದುಡಿಯಲು ತುದಿಗಾಲಲ್ಲಿ ನಿಂತಿರುವ ಯುವಜನತೆಗೆ ಉದ್ಯೋಗ ಖಾತ್ರಿಪಡಿಸಿಲ್ಲ ಎಂದು ಡಿವೈಎಫ್ಐ ಹೇಳಿದೆ.
“ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿದ್ದು ಅವುಗಳ ಭರ್ತಿ ಮಾಡಲು ಹಾಗೂ ಆದ್ಯತಾ ಕ್ಷೇತ್ರವಾರು ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ ಬಜೆಟ್ ಯಾವುದೇ ಚಕಾರ ಎತ್ತದಿರುವುದು ಯುವಜನರನ್ನು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಡಿವೈಎಫ್ಐ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: Karnataka Budget 2023-24 | ರಾಜ್ಯವನ್ನು ಹಿಂದಕ್ಕೆ ತಳ್ಳುವ ರಿವರ್ಸ್ ಗೇರ್ ಬಜೆಟ್: ಮಾಜಿ ಸಿಎಂ ಬೊಮ್ಮಾಯಿ
“ಯುವನಿಧಿ ಯೋಜನೆ ಜಾರಿಗೆ ಸರಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಕೇವಲ ಹಿಂದಿನ ವರ್ಷ ಉತ್ತೀರ್ಣರಾದವರಿಗೆ ಈ ಯೋಜನೆಯನ್ನು ಅನ್ವಯಿಸಿರುವುದು, ಪದವಿ ಮುಗಿಸಿ ಐದು-ಹತ್ತು ವರ್ಷಗಳಿಂದ ಕೆಲಸ ಸಿಗದ ನಿರುದ್ಯೋಗಿಗಳಿಗೆ ಇದರಿಂದ ಯಾವುದೇ ಆಸರೆ ಸಿಗುವುದಿಲ್ಲ. ಸರಕಾರ ಇದನ್ನು ಪರಿಷ್ಕರಿಸಬೇಕು” ಎಂದು ಸಂಘಟನೆಯು ಒತ್ತಾಯಿಸಿದೆ.
ರಾಜ್ಯದಲ್ಲಿ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಗಳಲ್ಲಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಗುತ್ತಿಗೆ, ಹೊರಗುತ್ತಿಗೆ ಇತ್ಯಾದಿ ಹೆಸರಿನಲ್ಲಿ ನೌಕರರು ಸೇವೆಸಲ್ಲಿಸುತ್ತಿದ್ದಾರೆ. ಅವರ ಖಾಯಮಾತಿಗೆ ಯಾವುದೇ ಕ್ರಮವನ್ನು ಕೈಗೊಳ್ಳದ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಡಿವೈಎಫ್ಐ ಹೇಳಿದೆ.
ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ ಇದುವರೆಗೂ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಎಲ್ಲಾ ಕೌಶಲ್ಯ ತರಬೇತಿಯನ್ನು ITI, GTTC, Polytechnic ಸಂಸ್ಥೆಗಳ ಮೂಲಕವೇ ನೀಡಿ, Industry ಮತ್ತು Academy ಯನ್ನು ಸಮನ್ವಯಗೊಳಿಸಿ ಕೌಶಲ್ಯ ತರಬೇತಿಯನ್ನು ನಡೆಸಲು ಮುಂದಾಗಿರುವುದು ಸ್ಚಾಗತಾರ್ಹವಾಗಿದೆಯಾದರೂ ತರಭೇತಿ ಪಡೆದವರಿಗೆ ಉದ್ಯೋಗ ಒದಗಿಸುವ ಬದ್ಧತೆ ತೋರುವಲ್ಲಿ ಬಜೆಟ್ ಸೋತಿದೆ ಎಂದು ಡಿವೈಎಫ್ಐ ಹೇಳಿದೆ.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ರದ್ದಗೊಳಿಸಿರುವುದು ಮತ್ತು ಕೇಂದ್ರ ಸರಕಾರ ರದ್ದುಪಡಿಸಿದ್ದ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆದ ಕ್ರಮಗಳನ್ನು ಡಿವೈಎಫ್ಐ ಸ್ವಾಗತಿಸಿದೆ.
ಇದನ್ನೂ ಓದಿ: Karnataka Budget 2023 Live Updates | ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಸಂಕ್ಷಿಪ್ತ ಮಾಹಿತಿ
ಸರಕಾರ ತಾನು ಘೋಷಿಸಿದ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮತ್ತು ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಸಾಧಿಸುವ ತರಾತುರಿಯಲ್ಲಿ ಸ್ಟ್ಯಾಂಪಿಗ್, ದ್ವಿಚಕ್ರ ಮತ್ತು ಇತರ ವಾಣಿಜ್ಯ ವಾಹನಗಳ ಹಾಗೂ ಅಬಕಾರಿ ಮೇಲಿನ ತೆರಿಗೆ ಏರಿಕೆ ಮಾಡಿರುವುದು ಒಂದು ಕೈಯಲ್ಲಿ ನೀಡಿ ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಕ್ರಮವಾಗಿದೆ ಎಂದು ಡಿವೈಎಫ್ಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯೋಗಕ್ಕಾಗಿ ಹಾತೊರೆಯುತ್ತಿರುವ ರಾಜ್ಯದ ಯುವಜನರಿಗೆ ಬಜೆಟ್ ತೀವ್ರ ಹತಾಸೆಯನ್ನುಂಟು ಮಾಡಿದೆ. ರಾಜ್ಯ ಸರಕಾರ ಕೂಡಲೇ ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸಲು ಹಾಗೂ ಕೃಷಿ ಕ್ಷೇತ್ರ ಸೇರಿದಂತೆ ಇತರೆ ಆದ್ಯತಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.