ಹೊಸದೆಹಲಿ, ಫೆ01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ 2021-22ನೇ ಸಾಲಿನ ಆಯವ್ಯಯ ಮತ್ತು ಬಜೆಟ್ ಮಂಡನೆಯ ರೀತಿಯು ಪಶ್ಚಿಮ ಬಂಗಾಳದ ಪ್ರಜೆಗಳನ್ನು ಸೆಳೆಯುವ ತಂತ್ರದಂತೆ ಗೋಚರಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ. ಆ ಕುರಿತು ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಯಾಗುತ್ತಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಂಗಾಳದ ಪ್ರಸಿದ್ಧ “ಲಾಲ್ ಪಾದ್” ಸೀರೆಯನ್ನುಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 9ನೇ ಬಜೆಟ್ ಮಂಡಿಸಿದರು. ಬಜೆಟ್ ಮಂಡನೆ ಆರಂಭಿಸುವುದಕ್ಕೂ ಮೊದಲು ರವಿಂದ್ರನಾಥ್ ಟ್ಯಾಗೋರ್ ಅವರ ವಾಕ್ಯವನ್ನು ಉಲ್ಲೇಸಿದ್ದರು. ಅಲ್ಲದೇ 2021-22ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಪಶ್ಚಿಮ ಬಂಗಾಳಕ್ಕೆ 25000 ಕೋಟಿ ರೂಪಾಯಿ ಯೋಜನೆ ಘೋಷಿಸಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಈಗಿನಿಂದಲೇ ಆರಂಭವಾದಂತೆ ಕಾಣುತ್ತಿದೆ. ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಲಾಲ್ ಪಾದ್ ಸೀರೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಿಂಚಿದ್ದು ಅದಕ್ಕೆ ಸಾಕ್ಷಿ ಎನ್ನುವಂತಿದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾತ್ರ ಈ ಲಾಲ್ ಪಾದ್ ಸೀರೆಯನ್ನು ಉಟ್ಟುಕೊಳ್ಳಲಾಗುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದರೆ, ಮತದಾರರನ್ನು ಸೆಳೆಯುವುದಕ್ಕಾಗಿ ಬಜೆಟ್ ನಲ್ಲಿ ಬಂಗಾಳದ ಚುನಾವಣೆ ಅಡಗಿದ್ದು ಸತ್ಯವೆಂದು ಗೊತ್ತಾಗುತ್ತಿದೆ.