ಬೆಂಗಳೂರು: ವಿರೋದ ಪಕ್ಷದವರು ಏನೇ ಹೇಳಿದರೂ ಅಧಿಕಾರಕ್ಕೆ ಬರಲ್ಲ. ಅವರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ರಾಜ್ಯದಲ್ಲಿ 135ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಐದು ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಸಾಬೀತಾಗಿದೆ. ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ. ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆ ಎಂದು ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಅಧಿವೇಶನ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಕೇಂದ್ರ-ರಾಜ್ಯ ಸರ್ಕಾರದ ಕಾರ್ಯಕ್ರಮ ತಲುಪಿಸುತ್ತೇವೆ. ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ಭ್ರಮೆಯಲ್ಲಿದ್ದಾರೆ. ಅಂತಹ ಭ್ರಮೆಯಲ್ಲಿರುವ ಸಿದ್ದರಾಮಯ್ಯಗೆ ಹೇಳುತ್ತಿದ್ದೇನೆ. ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನಾವು ಮತ್ತೆ ವಿರೋಧ ಪಕ್ಷದಲ್ಲಿ ಶಾಶ್ವತವಾಗಿ ಕೂರಬೇಕಾಗುತ್ತದೆ. 5 ರಾಜ್ಯಗಳ ಫಲಿತಾಂಶ ಕರ್ನಾಟಕದಲ್ಲಿ ಮರುಕಳಿಸುತ್ತದೆ ಎಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿದ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ, ಬಜೆಟ್ ಮೇಲೆ ಚರ್ಚೆ ಬಿಟ್ಟು ಕಾಂಗ್ರೆಸ್ ವಿಚಾರ ಏಕೆ. ಕಾಂಗ್ರೆಸ್ ಧೂಳೀಪಟ ವಿಚಾರ ಏಕೆ ಮಾತನಾಡುತ್ತೀರಿ? ಎಂದು ಕೇಳಿದರು. ಅದು ನಾನು ಹೇಳಬೇಕಿಲ್ಲ, ಜನ ತೀರ್ಮಾನಿಸುತ್ತಾರೆ. ನೀವು ಕಾಂಗ್ರೆಸ್ ಮುಕ್ತ ಮಾಡೋದು ಬಿಡಿ, ಬಿಜೆಪಿಯವರು ಯಡಿಯೂರಪ್ಪ ಮುಕ್ತ ಮಾಡಿದ್ದಾರೆ ಎಂದು ಈ ವೇಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸಿದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗ 8 ಬಜೆಟ್ ಮಂಡಿಸಿದ್ದೇನೆ. ಕಳೆದ 2 ವರ್ಷದಲ್ಲಿ ಕೊರೊನಾದಿಂದ ಲಾಕ್ಡೌನ್ ಆಯಿತು. ಲಾಕ್ಡೌನ್ ಮಾಡಿದ್ದರಿಂದ ಆರ್ಥಿಕ ಕುಸಿತ ಆಯಿತು. ಸಹಜವಾಗಿ ರಾಜಸ್ವ ಕೊರತೆಯಾಯಿತು. ಕೊರತೆಯಿಂದ ಸಮನ್ವಯತೆ ಕಾಯ್ದುಕೊಳ್ಳುವುದು ಕಷ್ಟ. ಕೊರತೆ ಗಮನಿಸಿದಾಗ ಸತತ ವಿತ್ತೀಯ ಕೊರತೆ ಆಗಿದೆ. ಸಿದ್ದರಾಮಯ್ಯ ಆಡಳಿತದಲ್ಲೂ ವಿತ್ತೀಯ ಕೊರತೆಯಾಗಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದರು.
ನೀವು ಮತ್ತೆ ಸಿಎಂ ಆಗಲ್ಲ: ಸಿದ್ದರಾಮಯ್ಯ ವ್ಯಂಗ್ಯ
ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಮುಕ್ತ ಮಾಡಿದರು. ಯಡಿಯೂರಪ್ಪ ಕಣ್ಣೀರು ಸುರಿಸುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಣ್ಣೀರು ಸುಮ್ ಸುಮ್ನೆ ಬರುತ್ತದೋ? ಚುನಾವಣೆಯಲ್ಲಿ 135 ಸೀಟು ಬರುತ್ತೆ ಎಂದು ಯಡಿಯೂರಪ್ಪ ಹೇಳಿದರು. ಕಳೆದ ಬಾರಿ ಬಿಜೆಪಿಗೆ ಬಂದದ್ದು 104 ಸೀಟು ಮಾತ್ರ. ಯಡಿಯೂರಪ್ಪ ಇತ್ತೀಚೆಗೆ ಜನರ ಬಳಿ ಹೋಗಿಲ್ಲ ಅನಿಸುತ್ತೆ. ಜನ ಬಿಜೆಪಿಯನ್ನ ಹೊರ ಹಾಕಲು ತೀರ್ಮಾನ ಮಾಡಿದ್ದಾರೆ. ನಿಮ್ಮನ್ನು ಮಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗಲೇ ತೀರ್ಮಾನಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೂ ನೀವು ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಬೇರೆ, ಕರ್ನಾಟಕ ಬೇರೆ ಎಂದು ಹೇಳಿದ ಅವರು, ನೋವಿನಿಂದ ಯಡಿಯೂರಪ್ಪ ವ್ಯಂಗ್ಯವಾಗಿ ಮಾತಾಡ್ತಿದ್ದಾರೆ. ಬಿಜೆಪಿಯಿಂದ ಜನರಿಗೆ ನೋವಾಗಿದೆ ಎಂಬ ನೋವು ನಮಗಿದೆ. ನಾವು ಭ್ರಮೆಯಲ್ಲಿ ಇಲ್ಲ, ಜನ ತೀರ್ಮಾನ ಮಾಡಿಯಾಗಿದೆ. ಇತ್ತೀಚೆಗೆ ನಡೆದ ಉಪ ಚುನಾವಣಾ ಫಲಿತಾಂಶಗಳು ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ, ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಹೇಳಿದ್ದಾರೆ.
ಆದರೆ, ನೀವು ಬೇರೆ ಪಕ್ಷದ ಬಾಗಿಲಿಗೆ ಹೋಗಿ ಕೇಳಿಕೊಂಡಿದ್ದೀರಿ. ನೀವೇ ಮುಖ್ಯಮಂತ್ರಿ ಆಗಿ ಎಂದು ಕೇಳಿಕೊಂಡಿದ್ದು ನೀವಲ್ಲವೇ. ಫಲಿತಾಂಶ ಬರುವುದಕ್ಕೂ ಮುನ್ನವೇ ಹೋಗಿ ಅವರ ಬಳಿಕೆ ಹೋದಿರಿ ಎಂದು ಸಿದ್ದರಾಮಯ್ಯರನ್ನು ಉದ್ದೇಶಿಸಿ ಸಚಿವ ಮಾಧುಸ್ವಾಮಿ ಕೇಳಿದರು.
ಕೋಮುವಾದಿ ಪಕ್ಷವನ್ನು ದೂರ ಇಡುವ ಉದ್ದೇಶದಿಂದಾಗಿ ನಾವು ಕೇಳಿದೆವು. ಅವರಿಗೆ ಮುಖ್ಯಮಂತ್ರಿ ಆಗುವಂತೆ ನಾವು ಹೇಳಿದ್ದೆವು ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.