ಬಜೆಟ್‌ 2025ರ ಜನ-ವಿರೋಧಿ ಸ್ವರೂಪವನ್ನು ಬದಲಾಯಿಲು ಎಡಪಕ್ಷಗಳ 8-ಅಂಶಗಳ ಪರ್ಯಾಯ ಪ್ರಸ್ತಾವಗಳು

ಹಣಕಾಸು ಮಸೂದೆಯಲ್ಲಿ ಸೇರಿಸುವಂತೆ ಆಗ್ರಹಿಸಿ ಫೆ.14-20 ಸಾಮೂಹಿಕ ಪ್ರಚಾರ ಅಭಿಯಾನ

ನವದೆಹಲಿ: 2025-26ರ ಕೇಂದ್ರ ಬಜೆಟ್ ಜನರ ತಕ್ಷಣದ ಮತ್ತು ಮೂಲಭೂತ ಅವಶ್ಯಕತೆಗಳಿಗೆ ಬಗೆದಿರುವ ಒಂದು ವಿಶ್ವಾಸದ್ರೋಹವಾಗಿದೆ ಎಂದಿರುವ ಐದು ಎಡಪಕ್ಷಗಳು-ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)ಲಿಬರೇಷನ್, ಆರ್‍ಎಸ್‍ಪಿ ಮತ್ತು ಎಐಎಫ್‍ಬಿ- ಬಜೆಟ್‌ನಲ್ಲಿರುವ ಎಲ್ಲಾ ಜನವಿರೋಧಿ ಪ್ರಸ್ತಾಪಗಳನ್ನು ತಿರಸ್ಕರಿಸುತ್ತ, ಅವುಗಳ ಸ್ಥಾನದಲ್ಲಿ, 8 ಅಂಶಗಳ ಪರ್ಯಾಯ ಪ್ರಸ್ತಾವಗಳನ್ನು ಮುಂದಿಟ್ಟಿವೆ. ಬಜೆಟ್‌ 2025

ಈ ಪರ್ಯಾಯ ಪ್ರಸ್ತಾವಗಳು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯುವ ಜನರ ಹಕ್ಕನ್ನು ಖಚಿತಪಡಿಸಲು ಸಹಾಯ ಮಾಡುತ್ತವೆ ಎಂದಿರುವ ಎಡಪಕ್ಷಗಳು, ಇವುಗಳಿಗೆ ಬೆಂಬಲವಾಗಿ ಜನರನ್ನು ಅಣಿನೆರೆಸಲು, ಮತ್ತು ಈ ಪ್ರಸ್ತಾವಗಳನ್ನು ಹಣಕಾಸು ಮಸೂದೆಯ ಮೂಲಕ ಅಂತಿಮವಾಗಿ ಅಂಗೀಕರಿಸಬೇಕು ಎಂದು ಆಗ್ರಹಿಸಿ ಫೆಬ್ರವರಿ 14 ರಿಂದ 20 ರವರೆಗೆ ಒಂದು ವಾರದ ಸಾಮೂಹಿಕ ಅಭಿಯಾನವನ್ನು ನಡೆಸಲು ನಿರ್ಧರಿಸಿವೆ.

ಫೆಬ್ರುವರಿ 3ರಂದು ಸಭೆ ಸೇರಿದ ಎಡಪಕ್ಷಗಳ ಮುಖಂಡರು ಒಂದು ಜಂಟಿ ಹೇಳಿಕೆಯಲ್ಲಿ ಇದನ್ನು ತಿಳಿಸಿದ್ದಾರೆ.

ಜನರ ಕೈಯಲ್ಲಿ ಖರೀದಿ ಶಕ್ತಿಯ ಕೊರತೆ, ಸಾಮೂಹಿಕ ನಿರುದ್ಯೋಗ ಮತ್ತು ಕುಗ್ಗುತ್ತಿರುವ ಕೂಲಿ-ಸಂಬಳಗಳಿಂದಾಗಿ ಉಂಟಾಗಿರುವ ಅರ್ಥವ್ಯವಸ್ಥೆಯಲ್ಲಿನ ಬೇಡಿಕೆಯ ಸಮಸ್ಯೆಯನ್ನು ಪರಿಹರಿಸುವ ಬದಲು, ಮೋದಿ ಸರ್ಕಾರವು ಬಜೆಟ್ ಮೂಲಕ, ಖರ್ಚುಗಳನ್ನು ಕಡಿತಗೊಳಿಸುತ್ತಲೇ, ಶ್ರೀಮಂತರಿಗೆ ರಿಯಾಯಿತಿಗಳನ್ನು ನೀಡುವ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸಬಹುದೆಂದು ಬಾವಿಸಿದಂತಿದೆ. ಅದು ಶ್ರೀಮಂತರು ಮತ್ತು ದೊಡ್ಡ ಕಾರ್ಪೊರೇಟ್‍ ಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವ ಮತ್ತು ಉದ್ಯೋಗ ಸೃಷ್ಟಿಸಲು ಮತ್ತು ಜನರಿಗೆ ಕನಿಷ್ಠ ಕೂಲಿಯನ್ನು ಖಚಿತಪಡಿಸಲು ಸಹಾಯ ಮಾಡುವ ಸಾರ್ವಜನಿಕ ಹೂಡಿಕೆಗಳನ್ನು ವಿಸ್ತರಿಸುವ ಬದಲು, ತದ್ವಿರುದ್ಧವ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ, ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ವಲಯದ ಸೇವೆಗೆ ಸಲ್ಲಿಸುವ ಮೂಲಕ ಮತ್ತು ವಿದ್ಯುತ್ ಕ್ಷೇತ್ರದ ಖಾಸಗೀಕರಣ ಇತ್ಯಾದಿಗಳ ಮೂಲಕ ಹೆಚ್ಚಿನ ಸಂಪತ್ತಿನ ಸಂಗ್ರಹಣೆಯನ್ನು ಬಜೆಟ್ ಉತ್ತೇಜಿಸುತ್ತದೆ ಎಂದು ಈ ಪರ್ಯಾಯ ಪ್ರಸ್ತಾವಗಳನ್ನು ಮುಂದಿಟ್ಟಿರುವುದಕ್ಕೆ ಕಾರಣಗಳನ್ನು ಕೊಡುತ್ತ ಎಡಪಕ್ಷಗಳ ಈ ಜಂಟಿ ಹೇಳಿಕೆ ಹೇಳುತ್ತದೆ. ಬಜೆಟ್‌ 2025

ಇದನ್ನೂ ಓದಿ : ಕೇಂದ್ರ ಬಜೆಟ್‌ ಹಲವು ಯೋಜನೆಗಳಿಗೆ ಹಣ ಕಡಿತ – ರಾಜೀವ್ ಗೌಡ

ಈ ಬಜೆಟ್ ನಿರುದ್ಯೋಗದ ಪ್ರಶ್ನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಮತ್ತು ಆಹಾರ ಸಬ್ಸಿಡಿಗಳು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿಯ ಮೇಲಿನ ವೆಚ್ಚಗಳು, ಹಣದುಬ್ಬರವನ್ನು ಗಣನೆಗೆ ತಗೊಂಡರೆ, ಕಳೆದ ವರ್ಷಕ್ಕಿಂತ ಕಡಿಮೆಯಾಗಿವೆ ಅಥವಾ ಸ್ಥಗಿತಗೊಂಡಿವೆ. ಮನರೇಗಕ್ಕೆ , ಬೇಡಿಕೆ ಹೆಚ್ಚಿದ್ದರೂ ಸಹ, ಹಂಚಿಕೆ 86,000 ಕೋಟಿ ರೂ.ಗಳಲ್ಲಿ ಸ್ಥಗಿತಗೊಂಡಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ರೂ.ಗಳಿಗೆ ಹೆಚ್ಚಿಸುವುದರಿಂದ ಜನರ ಒಂದು ವಿಭಾಗಕ್ಕೆ ಪರಿಹಾರ ಸಿಕ್ಕಿದೆ, ಆದರೆ ಬೆಲೆ ಏರಿಕೆ ಮತ್ತು ಜಿಎಸ್‍ಟಿಯಂತಹ ಪರೋಕ್ಷ ತೆರಿಗೆಗಳಿಂದ ಬಳಲುತ್ತಿರುವ ಹೆಚ್ಚಿನ ಸಂಖ್ಯೆಯ ದುಡಿಯುವ ಜನರನ್ನು ಹೊರಗಿಡಲಾಗಿದೆ. ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದರಿಂದ ಅನುಭವಿಸಿದ ನಷ್ಟವನ್ನು ಶ್ರೀಮಂತ ವರ್ಗಗಳು ಮತ್ತು ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ದರಗಳನ್ನು ಹೆಚ್ಚಿಸುವ ಮೂಲಕ ಪೂರೈಸಬಹುದಿತ್ತು. ಆದರೆ ಸರ್ಕಾರ ಹಾಗೆ ಮಾಡದಿರಲು ನಿರ್ಧರಿಸಿದೆ, ಬದಲಾಗಿ ಕಾರ್ಪೊರೇಟ್ ವಲಯ ಮತ್ತು ಅತಿ ಶ್ರೀಮಂತರಿಗೆ ಬಕ್ಷೀಸುಗಳನ್ನು ಒದಗಿಸಿದೆ ಎಂದು ಈ ಸಂದರ್ಭದಲ್ಲಿ ಎಡಪಕ್ಷಗಳು ನೀಡಿರುವ ಜಂಟಿ ಹೇಳಿಕೆಯಲ್ಲಿ ಅಭಿಪ್ರಾಯ ಪಡಲಾಗಿದೆ.

ಬಜೆಟ್‍ ಅಧಿವೇಶನದಲ್ಲಿ ಮಂಡಿಸುವ ಹಣಕಾಸು ಮಸೂದೆಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ ಎಡಪಕ್ಷಗಳು ಮುಂದಿಟ್ಟಿರುವ ಪರ್ಯಾಯ ಪ್ರಸ್ತಾವಗಳು ಹೀಗಿವೆ:

1) ದೇಶದ 200 ಡಾಲರ್ ಶತಕೋಟ್ಯಾಧಿಪತಿಗಳ ಮೇಲೆ4 ಶೇ.ದಷ್ಟು ಸಂಪತ್ತು ತೆರಿಗೆ; ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸುವುದು.

2) ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಒದಗಿಸುವುದು ಮತ್ತು ಕೃಷಿ ಮಾರುಕಟ್ಟೆಯ ಕುರಿತಾದ ರಾಷ್ಟ್ರೀಯ ನೀತಿ ಚೌಕಟ್ಟನ್ನು ಹಿಂತೆಗೆದುಕೊಳ್ಳುವುದು.

3) ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣವನ್ನು ನಿಲ್ಲಿಸುವುದು ಮತ್ತು ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಮೂಲಕ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವುದನ್ನು ನಿಲ್ಲಿಸುವುದು. ವಿಮಾ ವಲಯದಲ್ಲಿ 100 ಶೇ. ಎಫ್.ಡಿ.ಐ.ಯನ್ನು ಹಿಂತೆಗೆದುಕೊಳ್ಳುವುದು.

4) ಮನರೇಗ ಹಂಚಿಕೆಯನ್ನು ಶೇ. 50 ರಷ್ಟು ಹೆಚ್ಚಿಸುವುದು; ನಗರ ಉದ್ಯೋಗ ಖಾತರಿ ಕಾಯ್ದೆಯನ್ನು ಪರಿಚಯಿಸುವುದು; ವೃದ್ಧಾಪ್ಯ ಪಿಂಚಣಿಗಳು ಮತ್ತು ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳಿಗೆ ಕೇಂದ್ರದ ನಿಯೋಜನೆಯನ್ನು ಹೆಚ್ಚಿಸುವುದು.

5) ಆರೋಗ್ಯ ಕ್ಷೇತ್ರದ ವಿನಿಯೋಗವನ್ನು ಜಿಡಿಪಿ ಯ ಶೇ. 3 ಕ್ಕೆ ಮತ್ತು ಶಿಕ್ಷಣ ಕ್ಷೇತ್ರದ ವಿನಿಯೋಗವನ್ನು ಜಿಡಿಪಿ ಯ ಶೇ. 6 ಕ್ಕೆ ಹೆಚ್ಚಿಸುವುದು.

6) ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಆಹಾರ ಸಬ್ಸಿಡಿಯನ್ನು ಹೆಚ್ಚಿಸುವುದು.

7) ಐಸಿಡಿಎಸ್ ಗೆ ಹೆಚ್ಚಿದ ವಿನಿಯೋಗ ಸೇರಿದಂತೆ SC, ST ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹಂಚಿಕೆಗಳನ್ನು ಗಣನೀಯವಾಗಿ ಹೆಚ್ಚಿಸುವುದು; ಸ್ಕೀಮ್ ನೌಕರರಿಗೆ ಗೌರವಧನದ ಕೇಂದ್ರ ಪಾಲನ್ನು ಹೆಚ್ಚಿಸುವುದು.

8) ರಾಜ್ಯಗಳಿಗೆ ನಿಧಿಗಳ ವರ್ಗಾವಣೆಯನ್ನು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣವನ್ನು ಗಣನೀಯವಾಗಿ ಹೆಚ್ಚಿಸುವುದು. ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾದ ವಿಭಜಿಸಬಹುದಾದ ಸಂಗ್ರಹದಲ್ಲಿ ಸೇರಿಸದೇ ಇರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ರದ್ದುಗೊಳಿಸುವುದು.

ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ಸೃಷ್ಟಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಕೂಲಿ-ಸಂಬಳಗಳನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ಸೃಷ್ಟಿಸಲು ಸಹಾಯ ಮಾಡುವ ಈ ಪರ್ಯಾಯ ಪ್ರಸ್ತಾಪಗಳನ್ನು ಅಂಗೀಕರಿಸುವಂತೆ ಸರಕಾರವನ್ನು ಆಗ್ರಹಿಸಲು ಎಡಪಕ್ಷಗಳು ನಿರ್ಧರಿಸಿವೆ. ಈ ಪರ್ಯಾಯ ಪ್ರಸ್ತಾವಗಳು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯುವ ಜನರ ಹಕ್ಕನ್ನು ಖಚಿತಪಡಿಸಲು ಸಹಾಯ ಮಾಡುತ್ತವೆ ಎಂದು ಅವು ಹೇಳಿವೆ.

ಈ ಪರ್ಯಾಯ ಪ್ರಸ್ತಾಪಗಳಿಗೆ ಬೆಂಬಲವಾಗಿ ಜನರನ್ನು ಅಣಿನೆರೆಸಲು, ಎಡಪಕ್ಷಗಳು ಕರೆ ನೀಡಿರುವ ಫೆಬ್ರವರಿ 14 ರಿಂದ 20 ರವರೆಗಿನ ಒಂದು ವಾರದ ಸಾಮೂಹಿಕ ಅಭಿಯಾನವನ್ನು ನಡೆಸಲು ಮತ್ತು ಮನೆ-ಮನೆ ಪ್ರಚಾರ, ಬೀದಿ ಮೂಲೆಯ ಸಭೆಗಳು, ಪ್ರದರ್ಶನಗಳು ಮತ್ತು ರ್ಯಾಲಿಗಳ ಮೂಲಕ ಗರಿಷ್ಠ ಸಂಖ್ಯೆಯ ಜನರನ್ನು ತಲುಪಲು ಯೋಜನೆಗಳನ್ನು ಎಡಪಕ್ಷಗಳ ರಾಜ್ಯ ಘಟಕಗಳು ರೂಪಿಸುತ್ತವೆ ಎಂದು ಎಡಪಕ್ಷಗಳ ಜಂಟಿ ಹೇಳಿಕೆ ತಿಳಿಸಿದೆ.

ಸಿಪಿಐ(ಎಂ)ನ ಪೊಲಿಟ್‍ ಬ್ಯುರೊದ ಸಂಯೋಜಕರಾದ ಪ್ರಕಾಶ ಕಾರಟ್‍, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಸಿಪಿಐ(ಎಂಎಲ್)ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್‍ ಭಟ್ಟಾಚಾರ್ಯ, ಆರ್‌ಎಸ್‍ಪಿ ಪ್ರಧಾನ ಕಾರ್ಯದರ್ಶಿ ಮನೋಜ್‍ ಭಟ್ಟಾಚಾರ್ಯ ಮತ್ತು ಎಐಎಫ್‍ಬಿ ಪ್ರಧಾನ ಕಾರ್ಯದರ್ಶಿ ಜಿ.ದೇವರಾಜನ್‍ ಈ ಜಂಟಿ ಹೇಳಿಕೆಯನ್ನು ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *