ಉದ್ಯೋಗ ಖಾತ್ರಿ ಪಡಿಸದ, ಯುವಜನರ ಕನಸುಗಳನ್ನು ಛಿದ್ರಗೊಳಿಸಿದ ಕೇಂದ್ರ ಬಜೆಟ್ : ಡಿವೈಎಫ್ಐ

ಬೆಂಗಳೂರು : ಉದ್ಯೋಗ ಸಿಗದೇ ಹತಾಶರಾಗಿರುವ ದೇಶದ ಯುವಜನತೆಗೆ ಉದ್ಯೋಗ ಖಾತ್ರಿಪಡಿಸದೇ ಕೇವಲ ಘೋಷಣೆಗೆ ಸೀಮಿತವಾದ ಒಕ್ಕೂಟ ಸರಕಾರದ ಬಜೆಟ್ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ದೇಶದಲ್ಲಿ ಮೊದಲಬಾರಿ ಅಧಿಕಾರಕ್ಕೇರುವ ಸಂದರ್ಭದಲ್ಲಿ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಯುವಜನರಲ್ಲಿ ಭ್ರಮೆ ಸೃಷ್ಟಿಸಿ ನತರ ಈವರೆಗೂ ಪ್ರಾಮಾಣಿಕವಾಗಿ ಉದ್ಯೋಗ ಸೃಷ್ಟಿಯತ್ತ ಕೆಲಸ ಮಾಡಲಿಲ್ಲ. ಪ್ರತಿಸಲ ಯುವಜನರನ್ನು ವಂಚಿಸುವ ಕೆಲಸವನ್ನು ಒಕ್ಕೂಟ ಸರಕಾರ ಮಾಡುತ್ತಿರುವುದು ಅಕ್ಷಮ್ಯ ಎಂದಿದ್ದಾರೆ.

ಮೊದಲೇ ನಿರುದ್ಯೋಗ ದರ ಪಾತಾಳ ತಲುಪಿರುವ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ, ಕೊರೋನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಅದೇ ಸಂದರ್ಭದಲ್ಲಿ ಇರುವ ಉದ್ಯೋಗಗಳನ್ನು ಕಡಿತ ಮಾಡಿ ಜನತೆಯನ್ನು ಬೀದಿಗೆ ತಳ್ಳಿದ ನರೇಂದ್ರ ಮೋದಿ ನೇತೃತ್ವದ ಸರಕಾರ ಈ ಬಜೆಟ್ಟಿನಲ್ಲಿ ಯುವಜನರಿಗೆ ಉದ್ಯೋಗದ ಕುರಿತು ಸಮರ್ಪಕ ಯೋಜನೆ-ಅನುದಾನ ನೀಡದೆ ವಂಚಿಸುತ್ತಿದೆ ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆರೋಪಿಸಿದ್ದಾರೆ.

ಕೇವಲ ನಾಮಕಾವಸ್ಥೆಗೆ ಕೌಶಲ್ಯ ಅಭಿವೃದ್ಧಿಗೊಳಿಸುತ್ತೇವೆ ಎಂದು ಬರೀ ಘೋಷಣೆ ನೀಡುತ್ತಿರುವ ಸರಕಾರ ನಂತರ ಉದ್ಯೋಗ ಒದಗಿಸುವ ಕುರಿತು ತನ್ನ ಬದ್ದತೆ ವ್ಯಕ್ತಪಡಿಸದೆ ನುಣುಚಿಕೊಳ್ಳುವ ನೀತಿ ಅನುಸರಿಸುತ್ತಿರುವುದು ದೇಶದ ಬಹುದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಮಾಡುವ ವಿದ್ರೋಹವಾಗಿದೆ.

ಇದುವರೆಗೂ ಯಾವುದೇ ಉದ್ಯೋಗ ಸೃಷ್ಟಿಸದ ಸರಕಾರ, ಈಗ ಐದು ವರ್ಷದಲ್ಲಿ ಆರವತ್ತು ಲಕ್ಷ ಉದ್ಯೋಗಗಳ ಸೃಷ್ಟಿಸುತ್ತೇವೆಂದು ಹೇಳುತ್ತಿರುವುದು ನಂಬಲಸಾಧ್ಯವಾದುದು. ಯಾಕೆಂದರೆ ಈ ಅರವತ್ತು ಲಕ್ಷ ಉದ್ಯೋಗ ಸೃಷ್ಟಿ ಹೇಗೆ ಎನ್ನುವ ಪ್ರಶ್ನೆಗೆ ಕಾರ್ಪೊರೇಟ್ ಧಣಿಗಳಿಗೆ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ, ಅದು ಅರವತ್ತು ಲಕ್ಷ ಉದ್ಯೋಗ ಸೃಷ್ಟಿಸುತ್ತದೆ ಎಂಬುದಾದರೆ ಯುವಜನರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂದರ್ಥ. ಕಾರ್ಪೊರೇಟ್ ಲಾಭವನ್ನು ಹೆಚ್ಚಿಸುವ ಉದ್ದೇಶಗಳು ಉದ್ಯೋಗ ಸೃಷ್ಟಿಸುತ್ತವೆ ಅನ್ನುವುದು ಭ್ರಮೆ ಮಾತ್ರ. ಈಗಾಗಲೇ ಇಂತಹ ಅರೆ ವೇತನ, ಅಭದ್ರ ಉದ್ಯೋಗಗಳಿಂದ ಯುವಜನತೆ ಪೂರ್ತಿ ನಿಶ್ಯಕ್ತರಾಗಿದ್ದಾರೆ. ಹಾಗಾಗಿ ಇದು ದೇಶದ ಜನ ಸಾಮಾನ್ಯರ ಬಜೆಟ್ ಆಗಿರೆದೇ ಇದು ಕಾರ್ಪೊರೇಟ್ ವಂಚಕರ ಬಜೆಟ್ ಆಗಿದೆ ಎಂಬುದು ಬಸವರಾಜ ಆರೋಪವಾಗಿದೆ.

ಯುವಜನತೆ ತಮ್ಮ ಬದುಕು ಕಟ್ಟಿಕೊಳ್ಳಲು ಪೂರಕ ಅಂಶಗಳಿರದ ಈ ಬಜೆಟ್ ಯುವಜನರ ಪಾಲಿಗೆ ಸಂಪೂರ್ಣ ನಿರಾಸೆದಾಯಕವಾಗಿದ್ದು, ಯುವಜನತೆ ಇದನ್ನು ವಿರೋಧಿಸಿ, ಉದ್ಯೋಗ ಖಾತ್ರಿ ಪಡಿಸುವ ನೀತಿ ಜಾರಿಗಾಗಿ ಪ್ರತಿಭಟಿಸಲು ಮುಂದಾಗಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *