ಪ್ರೊ. ಜಯತಿ ಘೋಷ್
ಜನರ ಯೋಗಕ್ಷೇಮ ಮತ್ತು ಜೀವನೋಪಾಯಕ್ಕೆ ನಿರ್ಣಾಯಕವಾಗುವ ಮತ್ತು ಅದರ ಮುಂದುವರಿಕೆಯ ಭಾಗವಾಗಿ, ಒಟ್ಟು ಬೇಡಿಕೆಯನ್ನು ಉನ್ನತಗೊಳಿಸುವ ಕೆಲವು ನಿರ್ಣಾಯಕ ವಲಯಗಳು ಮೊದಲಿಗಿಂತ ಕಡಿಮೆ ಹಣ-ಹಂಚಿಕೆ ಪಡೆದಿವೆ. ಇದು ಈ ಸರಕಾರದ ಅಜ್ಞಾನವನ್ನು ಜಾಹೀರುಪಡಿಸಿದೆ. ಅತ್ಯಂತ ವಿಕೃತ ಪ್ರಜಾಪ್ರಭುತ್ವಗಳನ್ನು ಬಿಟ್ಟರೆ, ಹಠಕ್ಕೆ ಬಿದ್ದು ಮುಂದುವರಿಯುವ ಇಂತಹ ಒಂದು ವಿತ್ತೀಯ ಕಾರ್ಯತಂತ್ರವು ಯಾವುದೇ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಇರಲುಂಟು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಮಧ್ಯಮಾವಧಿಯಲ್ಲಿ ಇಂತಹ ಒಂದು ಲಜ್ಜೆಗೆಟ್ಟ ಅಸಮಾನ ವಿತ್ತ ನೀತಿಯು ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬುದನ್ನು ನೋಡಬೇಕಾಗಿದೆ.
ಹಣಕಾಸು ಮಂತ್ರಿಗಳು ಮತ್ತು ಅವರ ಸಚಿವಾಲಯ ಭಾರತದ ಅರ್ಥವ್ಯವಸ್ಥೆಯ ಬಗ್ಗೆಯಾಗಲಿ ಅಥವಾ ಇಂದಿನ ಭಾರತದ ಬಹಳಷ್ಟು ಮಂದಿ ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದರ ಬಗ್ಗೆಯಾಗಲಿ ತಮಗೆ ತಿಳುವಳಿಕೆ ಇಲ್ಲವೆಂಬುದನ್ನು ಮತ್ತೊಮ್ಮೆ ಜಾಹೀರುಪಡಿಸಿದ್ದಾರೆ. ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ ಎಂದು ಹೇಳುತ್ತಾರಾದರೂ, ಪರಿಸ್ಥಿತಿ ದುರ್ಬಲವಾಗಿದೆ ಮತ್ತು ಜನರು ಹೆಚ್ಚಿನ ಸಂಕಷ್ಟದಲ್ಲಿದ್ದಾರೆ.
ಭಾರತದಲ್ಲಿ ಬಡವರ ಮತ್ತು ಹಸಿದವರ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ಬಹು ದೊಡ್ಡ ಹೆಚ್ಚಳವನ್ನು ಕಂಡಿದೆ. ಜನಸಂಖ್ಯೆ ಹೆಚ್ಚಳದ ಲಾಭ ಪಡೆಯುವುದೆಂದು ಭಾವಿಸಿದ್ದ ದೇಶದ ಉದ್ಯೋಗ ಪರಿಸ್ಥಿತಿ ಭಯಾನಕವಾಗಿದೆ. ದೊಡ್ಡ ಕಾರ್ಪೊರೇಟ್‌ಗಳಿಗೆ ಭಾರೀ ಪ್ರೋತ್ಸಾಹಕಗಳನ್ನು ನೀಡಿದ್ದರ ಹೊರತಾಗಿಯೂ ಖಾಸಗಿ ಹೂಡಿಕೆಯು ನಿರಾಶಾದಾಯಕವಾಗಿಯೇ ಇದೆ. ಜನರ ಅಗತ್ಯಗಳಿಗಾಗಿ ಕೊರೊನಾ ಸಮಯದಲ್ಲಿಯೂ ಕೈಬಿಗಿ ಹಿಡಿದು ಮಾಡಿದ ಖರ್ಚುಗಳು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಷ್ಟು ಅಸಮರ್ಪಕವಾಗಿವೆ. ಹಾಗಾಗಿ, ಈ ವಿಷಯದಲ್ಲಿ, ಮಧ್ಯಮ-ಆದಾಯ ದೇಶಗಳ ನಡುವೆಯೂ ಭಾರತವು ಹೊರಗುಳಿಯುತ್ತದೆ. ಪರಿಣಾಮವಾಗಿ, ಬಹುತೇಕ ಭಾರತೀಯರು, ಆರೋಗ್ಯ ಬಿಕ್ಕಟ್ಟಿನ ಮತ್ತು ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ಅವಧಿಯಲ್ಲಿ ತಮ್ಮ ಮೂಲಭೂತ ಸಾಮಾಜಿಕ-ಆರ್ಥಿಕ ಹಕ್ಕುಗಳಿಂದ ಮತ್ತು ಅಗತ್ಯ ಸಾರ್ವಜನಿಕ ಸೇವೆಗಳಿಂದ ವಂಚಿತರಾದರು.
ಈ ಪರಿಸ್ಥಿತಿಗೆ ಕಾರಣವೆಂದರೆ, ಬೇಡಿಕೆಯ ಕೊರತೆಯೇ. ಈ ಎಲ್ಲ ಸಮಸ್ಯೆಗಳ ಮೂಲದಲ್ಲಿರುವುದು ಬೇಡಿಕೆಯ ಕೊರತೆಯೇ. ಕೊರೊನಾ ಹರಡುವ ಮುನ್ನವೇ ಜನರ ಬಳಕೆಯ ಪ್ರಮಾಣ ಕುಸಿದಿತ್ತು. ಬೇಡಿಕೆ ಕೊರತೆಯ ಈ ಮೂಲ ಸಮಸ್ಯೆಯು, ಉದ್ಯೋಗದ ಮತ್ತು ಜೀವನೋಪಾಯದ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತದೆ. ಭಾರತದ ಶ್ರಮಿಕ ಪಡೆಯ ಬಹು ದೊಡ್ಡ ಭಾಗವನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಕುಸಿಯುತ್ತಿವೆ. ಕೃಷಿಕರ ಸಂಕಷ್ಟಗಳು ಮುಂದುವರಿಯುತ್ತಿವೆ. ತಮ್ಮ ಭವಿಷ್ಯವನ್ನು ಉತ್ತಮಗೊಳಿಸುವ ಆಕಾಂಕ್ಷೆಯಿಂದ ಕಾಲೇಜು ಶಿಕ್ಷಣ ಪಡೆದ ಲಕ್ಷಾಂತರ ಯುವಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಏತನ್ಮಧ್ಯೆ, ಜಜ್ಜಿ ಬಜ್ಜಿಯಾಗಿರುವ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಈ ಎರಡೂ ಸೇವೆಗಳ ಭವಿಷ್ಯದ ದಿಕ್ಪಥವು ಆತಂಕ ಮೂಡಿಸುತ್ತದೆ.
ಈ ಎಲ್ಲ ಸಮಸ್ಯೆಗಳ ಬಗ್ಗೆ ಹಣಕಾಸು ಸಚಿವರು ಅಸ್ಥೆ ವಹಿಸಿದ್ದರೆ, ನಾವು ಒಂದು ವಿಭಿನ್ನ ಬಜೆಟ್‌ಅನ್ನು ನೋಡುತ್ತಿದ್ದೆವು. ಈ ಬಜೆಟ್, ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಗಾತ್ರದ ಉದ್ದಿಮೆ)ಗಳ ಪುನರುಜ್ಜೀವನ, ರೈತರ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗಮನಾರ್ಹ ವಿಸ್ತರಣೆ ಮತ್ತು ಅದೇ ಮಾದರಿಯಲ್ಲಿ ಒಂದ ಹೊಸದಾದ ನಗರ ಉದ್ಯೋಗ ಖಾತ್ರಿ ಯೋಜನೆಯ ಆರಂಭ, ವರ್ಷಗಟ್ಟಲೆ ತೀವ್ರ ನಿರ್ಲಕ್ಷ್ಯಕ್ಕೊಳಗಾದ ಜನರ ಸಾಮಾಜಿಕ ಚೇತರಿಕೆಗೆ ನೆರವಾಗುವಂತೆ ಆರೋಗ್ಯ ಮತ್ತು ಶಿಕ್ಷಣ ಇವುಗಳ ಬಗ್ಗೆ ಗಮನ ಹರಿಸುತ್ತಿತ್ತು. ಈ ವರ್ಷದ ಬಜೆಟ್‌ನಲ್ಲಿ ಇದಾವುದೂ ಇಲ್ಲ. ಜನರ ಯೋಗಕ್ಷೇಮ ಮತ್ತು ಜೀವನೋಪಾಯಕ್ಕೆ ನಿರ್ಣಾಯಕವಾಗುವ ಮತ್ತು ಅದರ ಮುಂದುವರಿಕೆಯ ಭಾಗವಾಗಿ, ಒಟ್ಟು ಬೇಡಿಕೆಯನ್ನು ಉನ್ನತಗೊಳಿಸುವ ಕೆಲವು ನಿರ್ಣಾಯಕ ವಲಯಗಳು ಮೊದಲಿಗಿಂತ ಕಡಿಮೆ ಹಣ-ಹಂಚಿಕೆ ಪಡೆದಿವೆ.
ಈ ಒಂದು ಘೋರ ಮತ್ತು ಭಯಾನಕ ನಿರ್ಲಕ್ಷದ ಸೂಚನೆಯೆಂದರೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನಿಗದಿಪಡಿಸಿದ ಹಂಚಿಕೆಯ ಕಡಿತವೇ. ಕಾನೂನಿನ ಪ್ರಕಾರ ಇದೊಂದು ಬೇಡಿಕೆ-ಚಾಲಿತ ಯೋಜನೆಯಾಗಿದ್ದು, ಬೇಡಿಕೆಗೆ ತಕ್ಕಂತೆ ಹಣ ಒದಗಿಸುವುದು ಕೇಂದ್ರ ಸರ್ಕಾರದ ಕಾನೂನುಬದ್ಧ ಕರ್ತವ್ಯವಾಗುತ್ತದೆ. ಮುಂದುವರಿದ ಕೊರೊನಾ ಹಾವಳಿ ಮತ್ತು ಆದಾಯ ಗಳಿಸುವಲ್ಲಿ ಜನರಿಗೆ ಅನ್ಯ ಮಾರ್ಗಗವಿಲ್ಲದಿರುವಾಗ ಕೇಂದ್ರವು ಈ ಯೋಜನೆಗೆ ಒದಗಿಸುವ ಹಣವನ್ನು ಕಡಿತಗೊಳಿಸುವ ಮೂಲಕ ಈ ಯೋಜನೆಯನ್ನು ಮತ್ತು ಆ ಮೂಲಕ ಜನರನ್ನು ನಿತ್ರಾಣಗೊಳಿಸಿದೆ. ಪ್ರತಿ ವರ್ಷವೂ, ಬಜೆಟ್‌ನಲ್ಲಿ ಹಂಚಿಕೆಯಾದ ಹಣವು, ಈಗಾಗಲೇ ರಾಜ್ಯಗಳು ಮುಂಗಡವಾಗಿ ಮಾಡಿರುವ ಖರ್ಚುನ್ನು ಸರಿದೂಗಿವಷ್ಟೂ ಆಗುವುದಿಲ್ಲ ಮತ್ತು ಈ ಯೋಜನೆಗೆ ಒದಗಿಸುವ ಹಣವು ಪ್ರತಿ ವರ್ಷವೂ ಅಗತ್ಯಕ್ಕಿಂತ ಕಡಿಮೆಯೇ ಇರುತ್ತದೆ. ಲಾಕ್‌ಡೌನ್ ಪ್ರೇರಿತ ಬಿಕ್ಕಟ್ಟಿನ ತೀವ್ರತೆಯಿಂದಾಗಿ 2020-21ರ ಹಂಚಿಕೆಯಲ್ಲಿ ಸ್ವಲ್ಪ ಹೆಚ್ಚಳವಿತ್ತು, ನಿಜ. ಆದರೆ, ಅಗತ್ಯಕ್ಕೆ ಹೋಲಿಸಿದರೆ ಅದೂ ಅಸಮರ್ಪಕವೇ.
ಆಘಾತಕಾರಿ ಸಂಗತಿಯೆಂದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ, ರಾಜ್ಯಗಳ ಅಗತ್ಯವನ್ನು ಪೂರೈಸಲು ಕನಿಷ್ಠ 1, 20,000 ಕೋಟಿ ರೂ.ಗಳ ಅಗತ್ಯವಿದೆ ಎಂಬ ಸ್ಪಷ್ಟ ಸೂಚನೆಗಳ ಹೊರತಾಗಿಯೂ ಸರ್ಕಾರವು ಈ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಾಡಿರುವ ಹಂಚಿಕೆಯನ್ನು 73,000 ಕೋಟಿ ರೂ.ಗಳಿಗೆ ಇಳಿಸಿದೆ. ಈ ಹಣದಲ್ಲಿ, ಹಿಂದಿನ ವರ್ಷದ ಬಾಕಿಯನ್ನು ತೀರಿಸಲು ಕನಿಷ್ಠ 20,000 ಕೋಟಿ ರೂ.ಗನ್ನು ತೆಗೆದಿಡಬೇಕಾಗುತ್ತದೆ. ಹಾಗಾಗಿ, ಉಳಿದ ಹಣದಲ್ಲಿ, ಪ್ರಸ್ತುತ ದರದಲ್ಲಿ, ಪ್ರತಿ ಮನೆಗೆ 20 ದಿನಗಳಿಗಿಂತ ಕಡಿಮೆ ಕೆಲಸ ಒದಗಿಸಬಹುದಷ್ಟೆ. ಈ ಕ್ರಮದ ಪರಿಣಾಮಗಳು ಯೋಜನೆಯ ಆಚೆಗೂ ಹೋಗುತ್ತವೆ: ಸ್ಥಳೀಯ ಸೂಕ್ಷ್ಮ ಉದ್ಯಮಗಳಿಗೆ ಕಿರುದೆರೆಗಳನ್ನು ಸೃಷ್ಟಿಸುವ ಪರಿಣಾಮಗಳನ್ನು ಹೊಂದಿರುವ ಈ ಯೋಜನೆಯು ಒಟ್ಟು ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಒಂದು ಪ್ರಮುಖ ಮೂಲವಾಗಬಹುದು.
ಅದೇ ರೀತಿಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೆಚ್ಚಗಳಿಗೂ ಹೆಚ್ಚಳವಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಈ ವಿಷಯವು ಹೊಂದಿರುವ ಪ್ರಾಮುಖ್ಯತೆಯನ್ನು ಒಂದು ಅತ್ಯಂತ ಸಿನಿಕತನದ ಸರ್ಕಾರವೂ ಅರ್ಥಮಾಡಿಕೊಳ್ಳುತ್ತಿತ್ತು. ಕೊರೊನಾ ಸಮಯದಲ್ಲಿ ಕಲಿಕೆಯ ನಷ್ಟವನ್ನು ಸರಿದೂಗಿಸಲು ವಿಶ್ವದಾದ್ಯಂತ ಹೆಚ್ಚಿನ ದೇಶಗಳು ತಮ್ಮ ಶಿಕ್ಷಣ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಭಾರತದಲ್ಲಿ ಶಾಲಾ ಕಾಲೇಜುಗಳನ್ನು ಹಠಾತ್ ಮತ್ತು ದೀರ್ಘಕಾಲದ ವರೆಗೆ ಮುಚ್ಚಿರುವುದು ವಿನಾಶಕಾರಿ ಪರಿಣಾಮ ಬೀರಿದೆ. ಆದರೂ, ಕೇಂದ್ರ ಸರ್ಕಾರವು ಕೊರೊನಾ ಸಮಯದಲ್ಲಿ ಶಿಕ್ಷಣ ವೆಚ್ಚವನ್ನು ಕಡಿತಗೊಳಿಸಿದೆ. ಈ ವರ್ಷದ ಬಜೆಟ್‌ನಲ್ಲಿ ಮಾಡಿರುವ ಅತ್ಯಲ್ಪ ಹೆಚ್ಚಳವು, ಅಗತ್ಯವನ್ನು ಪೂರೈಸುವಷ್ಟು ಹತ್ತಿರದಲ್ಲಿಲ್ಲ. ಬದಲಾಗಿ, ಬಜೆಟ್ ಭಾಷಣವು ಉತ್ತಮ ತರಬೇತಿ ಪಡೆದ ಸಾಕಷ್ಟು ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುವ ಶಾಲೆಗಳಿಗೆ ಬದಲಿಯಾಗಿ ಟಿವಿ ಚಾನೆಲ್‌ಗಳನ್ನು ಉತ್ತೇಜಿಸುತ್ತದೆ.
ಹೆಚ್ಚಿನ ಜನರಿಗೆ ಬಹಳ ಅಗತ್ಯವಾದ ಮತ್ತು ನಿರ್ಣಾಯಕವಾದ ಈ ಕ್ಷೇತ್ರಗಳ ಬದಲಿಗೆ, ಈ ಬಜೆಟ್‌ನಲ್ಲಿ ಅಧಿಕ ಬಂಡವಾಳ ಹೂಡಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ ಎಂದು ಭಾವಿಸಲಾಗಿದೆ. ಇಂತಹ ಹೂಡಿಕೆಗಳು ಅಗತ್ಯವೆಂಬುದನ್ನು ಒಪ್ಪೋಣ. ಆದರೆ, ಈ ದೊಡ್ಡ ದೊಡ್ಡ ಮೂಲಸೌಕರ್ಯ ಯೋಜನೆಗಳೂ ಸಹ, ಗುತ್ತಿಗೆ ಪಡೆಯುವ ಸಾಮರ್ಥ್ಯವುಳ್ಳ ಕಂಪನಿಗಳಿಗೆ ಮಾತ್ರವೇ ತಕ್ಷಣ ಪ್ರಯೋಜನ ಕೊಡುತ್ತವೆ. ಈ ಗುತ್ತಿಗೆ ಪಡೆಯುವ ಸಂಭಾವನೆಯೂ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ನೀತಿಗಳ ಮೂಲಕ ಈಗಾಗಲೇ ಮೇಲುಗೈ ಪಡೆದವರಿಗೆ ಮಾತ್ರವೇ.
ರಾಷ್ಟ್ರೀಯ ದುರಂತದ ಈ ಅವಧಿಯಲ್ಲೂ ಸಹ, ಬೆರಳೆಣಿಕೆಯಷ್ಟು ಮಂದಿ ಸಾಕಷ್ಟು ಸಂಪತ್ತು ಗಳಿಸಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ವಿಶ್ವ ಅಸಮಾನತೆ ವರದಿ 2022 ಮತ್ತು ಆಕ್ಸ್ಫಾಮ್‌ನ ಅಸಮಾನತೆ ವರದಿ 2022 ಈ ಎರಡು ಅಂದಾಜುಗಳ ಪ್ರಕಾರವೂ ಇತ್ತೀಚಿನ ವರ್ಷಗಳಲ್ಲಿ ವರಮಾನ ಮತ್ತು ಸಂಪತ್ತುಗಳ ಅಸಮಾನತೆಯಲ್ಲಿ ಭಾರತವು ಅತಿ ದೊಡ್ಡ ಹೆಚ್ಚಳವನ್ನು ಕಂಡಿದೆ. ಉದ್ಯೋಗ ಮತ್ತು ಒಟ್ಟು ಬಳಕೆಯಲ್ಲಿ ಕುಸಿತವಾಗಿರುವ ಒಂದು ಅರ್ಥವ್ಯವಸ್ಥೆಯಲ್ಲಿ, ಬೇಡಿಕೆಯ ಹೊಸ ಮೂಲಗಳನ್ನು ಕಂಡುಕೊಳ್ಳದ ಹೊರತು ಸವಲತ್ತುಗಳುಳ್ಳವರೂ ಸಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮತ್ತು, ಈ ಪರಿಸ್ಥಿತಿಯಲ್ಲಿ, ಚುನಾವಣಾ ಬಾಂಡ್‌ಗಳ ಖರೀದಿದಾರರಿಗೆ ಲಾಭ ತರುವ ಒಂದು ತಕ್ಷಣದ ಮಾರ್ಗವನ್ನು ಸೃಷ್ಟಿಸಬಹುದಾದರೆ ಅದು ಹೆಚ್ಚಿನ ಮಟ್ಟದ ಬಂಡವಾಳ ಹೂಡಿಕೆಯಲ್ಲೇ.
ಅತ್ಯಂತ ವಿಕೃತ ಪ್ರಜಾಪ್ರಭುತ್ವಗಳನ್ನು ಬಿಟ್ಟರೆ, ಹಠಕ್ಕೆ ಬಿದ್ದು ಮುಂದುವರಿಯುವ ಇಂತಹ ಒಂದು ವಿತ್ತೀಯ ಕಾರ್ಯತಂತ್ರವು ಯಾವುದೇ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಇರಲುಂಟು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಮಧ್ಯಮಾವಧಿಯಲ್ಲಿ ಇಂತಹ ಒಂದು ಲಜ್ಜೆಗೆಟ್ಟ ಅಸಮಾನ ವಿತ್ತ ನೀತಿಯು ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬುದನ್ನು ನೋಡಬೇಕಾಗಿದೆ.
ಕೃಪೆ: Telegraph 02.02.2022
ಅನು: ಕೆ.ಎಂ.ನಾಗರಾಜ್