ಬಿಎಸ್​​ವೈ ಅವಧಿಯಲ್ಲಿ ನೇಮಕಗೊಂಡಿದ್ದ ಪ್ರಮುಖ ಹುದ್ದೆಗಳನ್ನು ರದ್ದುಪಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ರಚನೆಗೂ ಮುನ್ನವೇ ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮೂವರು ಉಪಮುಖ್ಯಮಂತ್ರಿ ಅವರುಗಳಿಗೆ ಪ್ರಮುಖ ಸಲಹಾ ಸ್ಥಾನಗಳಿಗೆ ನೇಮಕಗೊಂಡ ಬಿಜೆಪಿ ಶಾಸಕರು ಮತ್ತು ಪರಿಣಿತರ ನೇಮಕಾತಿಯನ್ನು ರದ್ದುಗೊಳಿಸಿದ್ದಾರೆ.

ಬಿ.ಎಸ್.‌ ಯಡಿಯೂರಪ್ಪನವರೊಂದಿಗೆ ಕಾರ್ಯನಿರ್ವಹಿಸಿದ ನಾಲ್ಕು ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಸ್‌.ಆರ್‌. ವಿಶ್ವನಾಥ್‌, ಎಂಪಿ ರೇಣುಕಾಚಾರ್ಯ, ಡಿಎನ್ ಜೀವರಾಜ್ ಮತ್ತು ಎನ್ ಆರ್ ಸಂತೋಷ್ ನೇಮಕಾತಿ ರದ್ದಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ (ಡಿಪಿಎಆರ್) ಅಧಿಸೂಚನೆಯ ಪ್ರಕಾರ, ಹಿಂದಿನ ಸರ್ಕಾರದಲ್ಲಿ ನಿರ್ವಹಿಸಿದ ವಿವಿಧ ಹುದ್ದೆಗಳಿಂದ 19 ಜನರನ್ನು ತಮ್ಮ ತಮ್ಮ ಸ್ಥಾನಗಳಿಂದ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 1 ಮತ್ತು ಆಗಸ್ಟ್ 2ರಂದು ಈ ನೇಮಕಾತಿ ರದ್ದು ಆದೇಶಗಳನ್ನು ನೂತನ ಸರ್ಕಾರ ಹೊರಡಿಸಿದೆ.

ಇದನ್ನು ಓದಿ: ಮುಗಿದ ಸಂಪುಟ ಕಸರತ್ತು : ಇಂದು ಮಧ್ಯಾಹ್ನ 2.15ಕ್ಕೆ ಸಚಿವರ ಪ್ರಮಾಣ ವಚನ ನಿಗದಿ

ಆಗಸ್ಟ್ 1 ರ ಆದೇಶದ ಪ್ರಕಾರ, ಯಡಿಯೂರಪ್ಪನವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ ಮತ್ತು ಶಿಕ್ಷಣ ತಜ್ಞ ಎಂ ಆರ್ ದೊರೆಸ್ವಾಮಿ ಇನ್ನು ಮುಂದೆ ಶಿಕ್ಷಣ ಸುಧಾರಣೆಗಳ ಕುರಿತು ಸರ್ಕಾರದ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗೆಯೇ, ಬೇಲೂರು ಸುದರ್ಶನ್ ಅವರನ್ನು ಮುಖ್ಯಮಂತ್ರಿಯ ಇ-ಆಡಳಿತ ಸಲಹೆಗಾರ ಸ್ಥಾನದಿಂದ ತೆಗೆದುಹಾಕಲಾಗಿದೆ.

ನೀತಿ ಮತ್ತು ಕಾರ್ಯತಂತ್ರದ ಕುರಿತು ಮುಖ್ಯಮಂತ್ರಿಯ ಸಲಹೆಗಾರರಾಗಿದ್ದ ಸ್ಟಾರ್ಟಪ್‌ ಹೂಡಿಕೆದಾರ ಪ್ರಶಾಂತ್ ಪ್ರಕಾಶ್‌ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿದ್ದ ಮಾಜಿ ಎಂಎಲ್‌ಸಿ ಮೋಹನ್‌ ಲಿಂಬಿಕಾಯಿ, ಮಾಧ್ಯಮ ಸಲಹೆಗಾರ ಎನ್. ಭೃಗೇಶ್, ಮಾಧ್ಯಮ ಸಂಯೋಜಕ ಜಿ.ಎಸ್. ಸುನೀಲ್, ಅವರ ನೇಮಕಾತಿಯೂ ರದ್ದಾಗಿದೆ.

ಯಡಿಯೂರಪ್ಪನವರ ನಾಲ್ಕು ರಾಜಕೀಯ ಕಾರ್ಯದರ್ಶಿಗಳು ಸೇರಿದಂತೆ  ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರ ಹುದ್ದೆಯಿಂದ ನಿರ್ಗಮಿಸುವಂತೆ ಆದೇಶಿಸಲಾಗಿದೆ.

ಜುಲೈ 26 ರಂದು ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯೊಂದಿಗೆ ಅವರ ಸಚಿವ ಸಂಪುಟ ಸಹ ಸ್ವಯಂಚಾಲಿತವಾಗಿ ವಿಸರ್ಜನೆಯಾಗಿದ್ದವು. ಇದರ ಪರಿಣಾಮವಾಗಿ, ಯಡಿಯೂರಪ್ಪನವರ ಅವಧಿಯಲ್ಲಿ ಅವರ ಅಥವಾ ಅವರ ಉಪ ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳಿಂದ ಯಾವುದೇ ನೇಮಕಾತಿಗೊಂಡಿದ್ದ ಹುದ್ದೆಗಳನ್ನು ಸ್ಥಾನ ರದ್ದುಪಡಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *