ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳಾದ ಸೌಂದರ್ಯ (30 ವರ್ಷ) ಇಂದು ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ಯಾಂಗ್ರೀಲಾ ಹೋಟೆಲ್ ಬಳಿ ಇರುವ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೌಂದರ್ಯ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. 2018ರಲ್ಲಿ ವೈದ್ಯ ಡಾ. ನೀರಜ್ ಅವರನ್ನು ಸೌಂದರ್ಯ ಮದುವೆಯಾಗಿದ್ದರು. ಮೃತ ಸೌಂದರ್ಯಗೆ ಒಂದು ಮಗು ಇದೆ. ಸೌಂದರ್ಯ ಪತಿ ನೀರಜ್ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು.
ಮನೆ ಕೆಲಸದವರು ಬಂದಾಗ ಬಾಗಿಲು ತೆಗೆಯದಿದ್ದಾಗ ಸೌಂದರ್ಯ ಪತಿ ಡಾ. ನೀರಜ್‌ಗೆ ಕೆಲಸದವರು ಕರೆ ಮಾಡಿದ್ದರು. ಮನೆ ಕೆಲಸದವರು ಫೋನ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
‘ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ತನಿಖೆಯಿಂದಲೇ ನಿಖರ ಮಾಹಿತಿ ತಿಳಿಯಬೇಕಿದೆ. ಪತಿ ಹಾಗೂ ಕುಟುಂಬದವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೈಗ್ರೌಂಡ್ಸ್ ಠಾಣೆ ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಬೊಮ್ಮಾಯಿ ಯಡಿಯೂರಪ್ಪ ನಿವಾಸಕ್ಕೆ ದೌಡು: ಇಂದು ತಮ್ಮ ಹುಟ್ಟುಹಬ್ಬ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ ಸುದ್ದಿ ಕೇಳಿಬರುತ್ತಿದ್ದಂತೆ ಬೆಂಗಳೂರಿನ ಕೆ ಕೆ ರಸ್ತೆಯಲ್ಲಿರುವ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ದೌಡಾಯಿಸಿದ್ದಾರೆ.
ಕೇಸು ದಾಖಲು
ಡಾ.ಸೌಂದರ್ಯ ನೇಣಿಗೆ ಶರಣಾದ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪತಿ ನೀರಜ್ ದೂರಿನ ಆಧಾರದ ಮೇಲೆ ಯುಡಿಆರ್ ಕೇಸ್ ದಾಖಲಿಸಲಾಗಿದೆ. ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಾ. ನೀರಜ್ ಬೆಳಗ್ಗೆ ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ ಹತ್ತು ಗಂಟೆಗೆ, ಡಾ. ನೀರಜ್‌ಗೆ ಫೋನ್ ಕಾಲ್ ಬಂದಿದೆ. ಮೇಡಂ ರೂಂ ಬಾಗಿಲು ಓಪನ್ ಮಾಡ್ತಾ ಇಲ್ಲ ಎಂದು ಕರೆ ಬಂದಿದೆ. 10.30 ರ ಸುಮಾರಿಗೆ ಪತಿ ನೀರಜ್ ಮನೆಗೆ ಆಗಮಿಸಿದ್ದಾರೆ. ಬಾಗಿಲು ಮುರಿದು ಒಳ ಹೋದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿರೋದು ಬೆಳಕಿಗೆ ಬಂದಿದೆ. ಇದೀಗ ನೀರಜ್ ದೂರಿನ ಮೇರೆಗೆ ಪೊಲೀಸರು ಯುಡಿಆರ್ ದಾಖಲಿಸಿದ್ದಾರೆ.
ವೇಲ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ನೇಣಿಗೆ ಬಳಸಿದ್ದ ವೇಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರಣೋತ್ತರ ಪರೀಕ್ಷೆ
ಡಾ. ಸೌಂದರ್ಯ ಕುತ್ತಿಗೆಯ ಭಾಗದಲ್ಲಿ ಮಾತ್ರ ಗಾಯವಾಗಿದೆ ಕುತ್ತಿಗೆಯ ಭಾಗದಲ್ಲಿ ಬಿಟ್ಟರೆ ಬೇರೆ ಯಾವುದೇ ಭಾಗದಲ್ಲಿಯೂ ಗುರುತ್ತಾಗಿಲ್ಲ. ಡಾ. ಸೌಂದರ್ಯ ಮರಣೋತ್ತರ ಪರೀಕ್ಷೆ ವರದಿ ಸಿದ್ಧವಾಗಿದ್ದು, ಅಧಿಕಾರಿಗಳಿಗೆ ಹಸ್ತಾಂತರಿಸ್ತೇವೆ ಎಂದು ಮರಣೋತ್ತರ ಪರೀಕ್ಷೆ ಬಳಿಕ ವೈದ್ಯ ಸತೀಶ್ ಹೇಳಿಕೆ ನೀಡಿದ್ದರು. ಬೌರಿಂಗ್ ಆಸ್ಪತ್ರೆಯಲ್ಲಿ ನಡೆದಿದ್ದ ಮರಣೋತ್ತರ ಪರೀಕ್ಷೆಯನ್ನು ಮೂವರು ವೈದ್ಯರ ಸಮ್ಮುಖದಲ್ಲಿ ನಡೆಸಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮರಣೋತ್ತರ ಪರೀಕ್ಷೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗಿದೆ.
ಪತಿ ಊರು ಅಬ್ಬಿಗೆರೆಯ ಫಾರಂಹೌಸ್ನಲ್ಲಿ ಸೌಂದರ್ಯ ಅಂತ್ಯಕ್ರಿಯೆ ನಡೆಸಲು ಕುಟುಂಬವು ನಿರ್ಧರಿಸಿತು.