- ರಾಜೀನಾಮೆ ನೀಡು ಎಂದರೆ ನೀಡುವೆ!
- ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿದ್ದೇನೆ!!
- ಮಧ್ಯಾಹ್ನ 1 ರ ನಂತರ ನಿಗದಿಯಾಗದ ಕಾರ್ಯಕ್ರಮ, ಈ ವೇಳೆ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ?
ಬೆಂಗಳೂರು: ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಹೈಕಮಾಂಡ್ ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಇಲ್ಲವಾದರೆ ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ಪ್ರವಾಸ ಮುಗಿಸಿ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನಗೆ ಇದುವರೆಗೆ ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರದ ನಾಯಕರು ಸೂಚಿಸಿದಾಗ ರಾಜೀನಾಮೆ ನೀಡುತ್ತೇನೆ. ವರಿಷ್ಠರು ಮುಂದುವರೆಯಲು ಸೂಚಿಸಿದರೆ ಮುಂದುವರೆಯುತ್ತೇನೆ. ಮುಖ್ಯಮಂತ್ರಿಯಾಗಿರುವ ಕೊನೆ ಕ್ಷಣದವರೆಗೂ ಕೆಲಸ ಮಾಡುತ್ತೇನೆ. ವರಿಷ್ಠರಿಂದ ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸಂದೇಶ ಬರಬಹುದು ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಮಾತುಗಳನ್ನಾಡಿರುವುದಕ್ಕೂ ಹೈಕಮಾಂಡ್ ನಿಂದ ಬರುವ ಸಂದೇಶಕ್ಕೆ ಸಂಬಂಧವಿಲ್ಲ. ನಾಳೆ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ರಾಜೀನಾಮೆ ಕೊಡುವಂತೆ ಸೂಚನೆ ಬಂದ ಕೂಡಲೇ ಕೊಡುತ್ತೇನೆ ಎಂದು ಹೇಳಿದ್ದಾರೆ.
ಸಮಯ ಕಾಯ್ದಿರಿಸಲಾಗಿದೆ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದಿಂದ ಮುಖ್ಯಮಂತ್ರಿಯವರ ಅಧಿಕೃತ ಕಾರ್ಯಕ್ರಮದ ವಿವರ ಪ್ರಕಟಿಸಲಾಗಿದೆ. ಸಹಜವಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪಟ್ಟಿ ಪ್ರತಿದಿನ ಸಂಜೆ ಪ್ರಕಟವಾಗುತ್ತದೆ. ಆದರೆ ಇಂದು ಮಾತ್ರ ನಾಳೆಯ ಕಾರ್ಯಕ್ರದ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸದಲ್ಲಿರುವಾಗಲೇ ಪ್ರತಿದಿನಕ್ಕಿಂತ ಬೇಗನೆ ಪ್ರಕಟಿಸಲಾಗಿರುವುದು ಕುತೂಹಲ ಮೂಡಿಸಿದೆ.
ನಾಳೆ ಬೆಳಗ್ಗೆ ಬೆಳಗ್ಗೆ 9.50 ರಿಂದ 10.10 ರವರೆಗೆ “ಕಾರ್ಗಿಲ್ ವಿಜಯ ದಿವಸ ಆಚರಣೆ 2021” ಕಾರ್ಯಕ್ರಮ ನಿಗದಿಯಾಗಿದೆ. 11.00 ರಿಂದ ಮಧ್ಯಾಹ್ನ 01.00 “ಸರಕಾರದ ಎರಡು ವರ್ಷದ ಸಂಭ್ರಮದ” ಕಾರ್ಯಕ್ರಮ ನಿಗದಿಯಾಗಿದೆ ನಂತರದ ಕಾರ್ಯಕ್ರಮಗಳನ್ನು ಕಾಯ್ದಿರಿಸಲಾಗಿದೆ. ಈ ಕಾಯ್ದಿರಿಸಿದ ಸಮಯ ಯಾಕೆ? ಈ ಸಮಯದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಬಹುದಾ? ಎಂಬೆಲ್ಲ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಒಟ್ಟಾರೆ ನಾಳೆಯ ದಿನ ರಾಜ್ಯ ರಾಜಕೀಯದಲ್ಲಿ ಮಹತ್ವದ ದಿನವಾಗಿ ದಾಖಲಾಗುವುದಂತೂ ಸತ್ಯ. ಒಂದೊಮ್ಮೆ ಯಡಿಯೂರಪ್ಪ ಅವರಿಗೆ, “ರಾಜೀನಾಮೆ ಕೊಡಿ” ಎಂದು ಹೈಕಮಾಂಡ್ ಸಂದೇಶ ರವಾನಿಸಬಹುದು ಅಥವಾ “ರಾಜೀನಾಮೆ ಕೊಡಬೇಡಿ” ಎಂದು ಸಂದೇಶ ರವಾನಿಸಬಹುದು. ಏನೇ ಆದರೂ ಯಡಿಯೂರಪ್ಪ ಅವರ ಪರವಾಗಿ ಮತ್ತೊಮ್ಮೆ ರಾಜ್ಯಾದ್ಯಂತ ಅನುಕಂಪದ ಅಲೆ ಏಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಈ ಎಲ್ಲವನ್ನೂ ಯೋಚಿಸಿಯೇ ಸಿಎಂ ಯಡಿಯೂರಪ್ಪ ಅವರ ನಾಳೆಯ ಕಾರ್ಯಕ್ರಮದ ಪಟ್ಟಿ ಬೇಗನೆ ಬಿಡುಗಡೆ ಮಾಡಲಾಗಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಒಟ್ಟಾರೆ ರಾಜಕೀಯದಲ್ಲಿ ಯಾವುದನ್ನೂ ತಳ್ಳಿಹಾಕುವಂತಿಲ್ಲ. ಯಾವುದನ್ನು ಊಹಿಸುವಂತೆಯೂ ಇಲ್ಲ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ನಾಳೆ ಏನಾಗಬಹುದು? ಎಂಬುದು ಜನ-ಸಾಮಾನ್ಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.