ಕ್ರಿಮಿನಲ್ ಗಳಿಗೆ ಟಿಕೆಟ್ ಕೊಟ್ಟಿರುವ ಬಿಜೆಪಿಯಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಬೃಂದಾ ಕಾರಟ್

‘ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಬಿಜೆಪಿಯು ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳನ್ನು ಪೋಷಿಸುತ್ತಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಪಡಿತರ ಅಕ್ಕಿ, ಮಕ್ಕಳ ಹಾಲಿನ ಪುಡಿ ಕದ್ದ ಆರೋಪಿಗೂ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ನೈತಿಕವಾಗಿ ಭ್ರಷ್ಟಗೊಂಡಿದೆ’ ಎಂದು ಹರಿಹಾಯ್ದಿರುವ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್,  ‘ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನು ಹೊಂದಿರುವ ಪಕ್ಷದಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ?’  ಎಂದು ಪ್ರಶ್ನಿಸಿದರು.

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಪಿಎಂ ಅಭ್ಯರ್ಥಿ ಪಾಂಡುರಂಗ ಮಾವಿನಕರ ಪರ ಚುನಾವಣಾ ಪ್ರಚಾರ ನಡೆಸಲು ಕಲಬುರಗಿ ಜಿಲ್ಲೆಗೆ ಬೇಟಿ ನೀಡಿದ್ದ ವೇಳೆ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದರು.

ರಾಜ್ಯದ ರಾಜಕೀಯ ಪರಿಸ್ಥಿತಿಯ ಕುರಿತು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ದುರಾಡಳಿತ ನಡೆಸಿದೆ. ಬಡವರು, ಶ್ರಮಿಕರು, ರೈತರಿಗೆ ಪ್ರಯೋಜನವಾಗುವ ಯಾವ ಕೆಲಸಗಳೂ ನಡೆದಿಲ್ಲ. ಬಿಜೆಪಿ ರಾಜ್ಯದಲ್ಲಿ ಸೋಲುವ ಸುಳಿವು ದೊರೆತ ಹಿನ್ನೆಲೆಯಲ್ಲಿ, ಪ್ರಧಾನಿ ರಾಜ್ಯದಲ್ಲಿ 24 ಗಂಟೆಯೂ ನಿರಂತರವಾಗಿ ‘ಪ್ರಚಾರದ ಡ್ಯೂಟಿ ನಡೆಸಿದ್ದಾರೆ. ಜನರು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ, ಪೆಟ್ರೋಲ್, ಡೀಸಲ್, ಅಡುಗೆ ಎಣ್ಣೆ ಬೆಲೆ ಹೆಚ್ಚಳ, ನಿರುದ್ಯೋಗದಿಂದ ತತ್ತರಿಸಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಹೀನಾಯವಾಗಿ ನೆಲಕಚ್ಚಲಿದೆ’ ಎಂದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಒಂದಾಗಿದ್ದ ಎಲ್ಲಾ ಎಡಪಕ್ಷಗಳು ಚುನಾವಣೆಯಲ್ಲಿ ಒಗ್ಗಟ್ಟಿಲ್ಲವೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಬೃಂದಾ ಅವರು, ‘ಪ್ರತಿ ರಾಜ್ಯದಲ್ಲೂ ಆಯಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯತಂತ್ರ ರೂಪಿಸುತ್ತೇವೆ. ಈಗಲೂ ಹಲವು ವಿಚಾರಗಳಲ್ಲಿ ನಮ್ಮಲ್ಲಿ ಒಗ್ಗಟ್ಟಿದೆ. ಸಂವಿಧಾನವನ್ನು ಬುಲ್ಡೋಜರ್ ಮೂಲಕ ಕೆಡವಿ ಹಾಕುವ ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರಕ್ಕೆ ನಮ್ಮೆಲ್ಲರ ವಿರೋಧವಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಎಲ್ಲ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಲಿವೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,  ‘ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆದು ‘ಆಪರೇಶನ್ ಕಮಲ’ ಮೂಲಕ ಬಿಜೆಪಿ ಸರ್ಕಾರ ರಚಿಸಿತ್ತು. ಇದೀಗ ಅದೇ ಪಕ್ಷದಿಂದ ಬಂದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಬದಲು, ಎರಡು ಅಥವಾ ಮೂರು ವರ್ಷ ಪಕ್ಷ ಸಂಘಟಿಸಲು ಸೂಚಿಸಬೇಕಿತ್ತು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಪಿಎಂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲವೇಕೆ ಎಂಬ ಪ್ರಶ್ನೆಗೆ ‘ಈ ಬಾರಿ ನಮ್ಮ ಪಕ್ಷದ ಸಂಘಟನಾ ಶಕ್ತಿಯನ್ನು ಗುಣಾತ್ಮಕವಾಗಿ ಬಳಸಿಕೊಳ್ಳುವ ಉದ್ದೇಶವಿದೆ. ಹೆಚ್ಚು ಮತಗಳು ಬರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವರು. ಇಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಘೋಷಿಸಿ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಬೆಂಬಲಿಸಿರುವುದು ನಮ್ಮ ಅಭ್ಯರ್ಥಿಗಳಿಗೆ ಹೆಚ್ಚು ಬಲ ತಂದುಕೊಟ್ಟಿದೆ’ ಎಂದು ಉತ್ತರಿಸಿದರು.

ಮೋದಿ ಅವರಿಗೆ ಅದಾನಿ, ಅಂಬಾನಿ ಬಗ್ಗೆಯೇ ಹೆಚ್ಚು ಆಸಕ್ತಿ: ಆಳಂದ ತಾಲ್ಲೂಕಿನ ನರೋಣಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬೃಂದಾ ಕಾರಟ್ ಅವರು ‘ಪ್ರಧಾನಿ ನರೇಂದ್ರ  ಮೋದಿ ಅವರಿಗೆ ಬಡಜನರ ಹಿತಕ್ಕಿಂತ ತಮ್ಮ ಶ್ರೀಮಂತ ಗೆಳೆಯರಾದ ಅದಾನಿ, ಅಂಬಾನಿ ಬಗ್ಗೆಯೇ ಹೆಚ್ಚು ಆಸಕ್ತಿ. ಅದಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಕಾರ್ಪೊರೇಟ್ ತೆರಿಗೆ ಮನ್ನಾ ಮಾಡಿದ್ದಾರೆ. ಇತ್ತ ಬಡವರಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆಯ ಮೊತ್ತವನ್ನು ಕಡಿತಗೊಳಿಸಿದ್ದಾರೆ’ ಎಂದು ಟೀಕಿಸಿದರು.

 ‘ಮೊದಿ ಮನ್ ಕಿ ಬಾತ್ ಬಿಟ್ಟು ಜನರ ಬಡತನ, ನಿರುದ್ಯೋಗದ ಬಗ್ಗೆ ಮಾತಾಡಲಿ. ಡಬಲ್ ಎಂಜಿನ್ ಸರ್ಕಾರದ ನೀತಿಯಿಂದ ಶೇ. 1ರಷ್ಟು ಜನರ ಬಳಿ ಶೇ. 40ರಷ್ಟು ಸಂಪತ್ತು ಕ್ರೋಡೀಕರಣಗೊಂಡಿದೆ. ಉಳಿದ ಶೇ. 99 ಜನರು ಶೇ. 60ರಷ್ಟು ಸಂಪತ್ತು ಹಂಚಿಕೊಂಡಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವು ಎಲ್ಲಿ ಹೋದವು? ಸರ್ಕಾರವು ಜನರ ಕವಚವಾಗಬೇಕು’ ಎಂದರು.

ಸಂತ್ರಸ್ತ ಕುಸ್ತಿಪಟುಗಳು ಕಾಣುತ್ತಿಲ್ಲವೇ? ;

‘ಬಿಜೆಪಿ ಅತಿ ಕ್ರೂರ ಅಪರಾಧಿಗಳನ್ನು ರಕ್ಷಿಸುತ್ತಿದೆ. ದೇಶಕ್ಕೆ ಪದಕ ತಂದುಕೊಟ್ಟ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಎಸಗಿದ ಕುಸ್ತಿ ಫೆಡರೇಶನ್ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶವೆಲ್ಲ ತಿರುಗುವ ಮೋದಿಗೆ ಈ ಸಂತ್ರಸ್ತ ಕುಸ್ತಿಪಟುಗಳು ಕಾಣುತ್ತಿಲ್ಲವೇ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *