ಬೆಂಗಳೂರು: ಸಾರಿಗೆ ಇಲಾಖೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿಸೆಂಬರ್ 29ರಂದು ಸಂಚಾರ ಬಂದ್ ಮಾಡಲು ಮುಂದಾಗಿದ್ದಾರೆ.
ಸಿಐಟಿಯು ಸಂಯೋಜಿತ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್(ಎಆರ್‌ಡಿಯು) ನೇತೃತ್ವದಲ್ಲಿ ಬೃಹತ್ ಜಂಟಿ ವೇದಿಕೆ ರಚಿಸಲಾಗಿದ್ದು, ಈ ವೇದಿಕೆಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲಾ ಆಟೋ ಸಂಘಟನೆಗಳು ಕೈಜೋಡಿಸಿ, ಒಂದುಗೂಡಿ ಡಿಸೆಂಬರ್ 29ರಂದು ವಿಧಾನಸೌಧ ಚಲೋ ನಡೆಸಲು ಕರೆ ನೀಡಿವೆ.
ಇದನ್ನು ಓದಿ: ಓಲಾ, ಊಬರ್, ರ‍್ಯಾಪಿಡೋ ಸೇವೆ ರದ್ದುಗೊಳಿಸಲು ಆಟೋ ಚಾಲಕರ ಆಗ್ರಹ
ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್, ಟ್ಯಾಕ್ಸಿ ಸಂಚಾರವನ್ನು ನಿಷೇಧಿಸಬೇಕು, ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ತೆಗೆದುಹಾಕಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಬೆಂಗಳೂರಿನಲ್ಲಿ ಆಟೋ ಸಂಚಾರ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದ್ದು, ಅಂದು ಆಟೋಗಳ ಸಂಚಾರ ಬಹುತೇಕ ಸ್ತಬ್ಧವಾಗುವ ಸಾಧ್ಯತೆ ಇದೆ.
ಸಾರಿಗೆ ಇಲಾಖೆ ರಾಜ್ಯದಲ್ಲಿ ಕೆಲ ಖಾಸಗಿ ಕಂಪನಿಗಳ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗೆ ಅವಕಾಶ ನೀಡಿದೆ. ಸದ್ಯ ಈ ವಿಚಾರ ಆಟೋ ಚಾಲಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಲವು ವರ್ಷಗಳಿಂದ ನಗರದ ಜನರಿಗೆ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರಿಗೆ ಆಗಬಹುದಾದ ಪರಿಣಾಮಗಳ ಬಗ್ಗೆ ಚಿಂತಿಸದೇ ಏಕಾಏಕಿ ಬೈಕ್ ಟ್ಯಾಕ್ಸಿಗೆ ಸಾರಿಗೆ ಇಲಾಖೆ ಅವಕಾಶ ನೀಡಿರುವುದು ಚಾಲಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲ ಹಂತದಲ್ಲಿ 100 ಎಲೆಕ್ಟ್ರಿಕ್ ಬೈಕ್‌ಗಳನ್ನ ರಸ್ತೆಗಿಳಿಸಲು ನಿರ್ಧರಿಸಿರುವ ಬೌನ್ಸ್ ಕಂಪನಿ, ನಂತರ ಹಂತ-ಹಂತವಾಗಿ ಸಾವಿರ ಇ-ಬೈಕ್‌ಗಳನ್ನ ರಸ್ತೆಗಿಳಿಸಲು ನಿರ್ಧಾರ ಮಾಡಿವೆ. ಈ ಹಿಂದೆ ಬೌನ್ಸ್ ಕಂಪನಿ ಬೈಕ್ ಸೇವೆ ನೀಡುತ್ತಿತ್ತು. ಆದರೆ ಕೊರೊನಾ ಸಾಂಕ್ರಾಮಿಕತೆಯಿಂದಾಗಿ ಬೈಕ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ-ಬೈಕ್ ಸೇವೆ ನೀಡಲು ಮುಂದಾಗಿರುವುದು ಚಾಲಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಈಗಾಗಲೇ ಕೊರೊನಾ ಸಂಕಷ್ಟದಿಂದ ಬೇಸತ್ತಿರುವ ಚಾಲಕರಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಹೆಚ್ಚಿನ ದರ ವಸೂಲಿ: ಓಲಾ, ಉಬರ್ ಆಟೋರಿಕ್ಷಾ ಸಂಚಾರ ತಕ್ಷಣ ಸ್ಥಗಿತಕ್ಕೆ ಸಾರಿಗೆ ಇಲಾಖೆ ಆದೇಶ
ಡಿಸೆಂಬರ್ 29ರಂದು ಬೆಂಗಳೂರಿನಾದ್ಯಂತ ಆಟೋ ಸಂಚಾರ ಸ್ಥಗಿತಗೊಳಿಸಲು ಆಟೋ ಚಾಲಕರು ಮುಂದಾಗಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮತಪ್ರದರ್ಶನ ನಡೆಯಲಿದೆ. ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ 2.10 ಲಕ್ಷ ಆಟೋ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ