ಚಿಕ್ಕಮಗಳೂರು: ಮಲೆನಾಡಲ್ಲಿ ಮುಂದುವರೆದ ಗಾಳಿ-ಮಳೆ ಅಬ್ಬರದಿಂದ ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದು ದಿನ ಶಾಲೆಗಳಿಗೆ ರಜೆ ಘೋಷಿಸಿರುವ ಬಿಇಓ 1ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ರಜೆ ನೀಡಿದ್ದಾರೆ.
ಮಳೆ ಕಡಿಮೆಯಾಗಿದ್ದರೂ ಭಾರೀ ಗಾಳಿ ಬೀಸುತ್ತಿದೆ. ಶಾಲೆಗಳಿಗೆ ರಜೆ ನೀಡಬೇಕೆಂದು ಸ್ಥಳೀಯರಿಂದ ಒತ್ತಡ ಬಂದ ಹಿನ್ನೆಲೆ ರಜೆ ಘೋಷಣೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದ ಮೂಡಿಗೆರೆ, ಕಳಸ ತಾಲೂಕುಗಳಲ್ಲಿ ಇಂದಿನ ಪರಿಸ್ಥಿತಿ ನೋಡಿ ನಾಳೆ ರಜೆ ನೀಡುವ ಬಗ್ಗೆ ತೀರ್ಮಾನಗೊಳ್ಳಲಿದೆ.
ಕಾಫಿನಾಡಲ್ಲಿ ಮಳೆ ಅಬ್ಬರಕ್ಕೆ ಮನೆ ಮೇಲೆ ಮರ ಬಿದ್ದು ಇಬ್ಬರ ದುರ್ಮರಣ ಹೊಂದಿದ್ದಾರೆ. ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಚಂದ್ರಮ್ಮ, ಸರಿತಾ ಎಂದು ಗುರುತಿಸಲಾಗಿದೆ.
ಮಳೆ ಹಾಗೂ ಗಾಳಿಯ ಅಬ್ಬರ ಮುಂದುವರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ಗಾಳಿ ಮಳೆಗೆ ಮೂವರು ಸಾವನ್ನಪ್ಪಿದ್ದಾರೆ. ಚಂದ್ರಮ್ಮ ಹಾಗೂ ಸರಿತಾ ಅವರು ಸೇರಿ ಜಿಲ್ಲೆಯಲ್ಲಿ ಈ ವರ್ಷದ ಮಳೆ ಅಬ್ಬರಕ್ಕೆ ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರೀ ಮಳೆಯ ಪರಿಣಾಮ ಮಂಗಳವಾರ (ಆಗಸ್ಟ್ 09) ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಮನೆ ಪಕ್ಕದ ಬೃಹತ್ ಮರ ಬಿದ್ದಿದೆ. ಸರಿತಾ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಚಂದ್ರಮ್ಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.
ಸರಿತಾ-ಚಂದ್ರಮ್ಮ ಸಂಬಂಧಿಗಳಾಗಿದ್ದು, ಅಕ್ಕ-ಪಕ್ಕದ ಮನೆಯವರು. ಸರಿತಾರವರಿಗೆ ಸುನೀಲ್, ದೀಕ್ಷಿತ್ ಇಬ್ಬರು ಮಕ್ಕಳು ಇದ್ದಾರೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರಡು ತಿಂಗಳ ಹಿಂದೆ ಚಂದ್ರಮ್ಮ ಹಾಗೂ ಸರಿತಾರವರು ಮನೆ ಮುಂದಿದ್ದ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿ. ಇದರಿಂದ ಅಪಾಯಯಿದೆ ಎಂದು, ಜನಪ್ರತಿನಿಧಿಗಳಿಗೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ತಹಶೀಲ್ದಾರ್ ಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.
ಮೊದಲೇ ಮರ ತೆರವಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದಲೇ ಈ ದುರಂತ ನಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಮೃತರು ಹಿಂದೆ ಮನವಿ ಮಾಡಿರುವ ವಿಡಿಯೋ ಗ್ರಾಮದಾದ್ಯಂತ ವಿಡಿಯೋ ವೈರಲ್ ಆಗಿದೆ.