“ಪರೇಡ್ ಪಥ” ಎಲ್ಲಿಂದ_ ಎಲ್ಲಿಗೆ,ಎಷ್ಟು ಹೊತ್ತಿಗೆ ರೂಟ್ ಮ್ಯಾಪ್ ಇಲ್ಲಿದೆ
ಬೆಂಗಳೂರು ಜ 25: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿಗೆ ಧಾವಿಸುತ್ತಿದ್ದಾರೆ. ಜನವರಿ 26ಗಣರಾಜ್ಯೋತ್ಸವದಂದೇ ಟ್ರ್ಯಾಕ್ಟರ್ ಮಾರ್ಚ್ ಮೂಲಕ ಕೇಂದ್ರ, ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿವೆ.
ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ವಾಹನಗಳ ಮೂಲಕ ಅನ್ನದಾತರು ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ಮಾಡಲಿದ್ದಾರೆ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನಿ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.
ಬೆಂಗಳೂರಿಗೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಲಿದ್ದಾರೆ, ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಕೂಲಿಕಾರರು, ವಿದ್ಯಾರ್ಥಿಗಳು, ಯುವಜನ, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದ್ದು ಐದು ಭಾಗಗಳಿಂದ ಸಾವಿರಾರು ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ರೈತರು ಫ್ರೀಡಂಪಾರ್ಕನಲ್ಲಿ ಸಮಾವೇಶಗೊಳ್ಳಲಿದ್ದಾರೆ. ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಬಸವರಾಜ ತಿಳಿಸಿದ್ದಾರೆ.
“ಪರೇಡ್ ಪಥ” ಎಲ್ಲಿಂದ_ ಎಲ್ಲಿಗೆ, ಎಷ್ಟು ಹೊತ್ತಿಗೆ ರೂಟ್ ಮ್ಯಾಪ್ ಇಲ್ಲಿದೆ : ಮೈಸೂರು ಮಂಡ್ಯ, ರಾಮನಗರ ಮಾರ್ಗವಾಗಿ ಬರುವ ರೈತರು ಬಿಡದಿ ಇಂಡಸ್ಟ್ರಿಯಲ್ ಜಂಕ್ಷನ್, ಬೈರಮಂಗಲ ಕ್ರಾಸ್ , ಟೌನ್ ಹಾಲ್ ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತದ ಮೂಲಕ ಫ್ರೀಡಂ ಪಾರ್ಕ್ ಸೇರಿಕೊಳ್ಳಲಿದ್ದಾರೆ.
ಕೋಲಾರ, ಹೊಸಕೋಟೆಯಿಂದ ಬರುವ ರೈತರು ಹೊಸಕೋಟೆ ಟೋಲ್ ಗೇಟ್ ನಿಂದ ಮೆರವಣಿಗೆ ಹೊರಟು ಕೆ.ಆರ್.ಪುರಂ, ಟಿನ್ ಫ್ಯಾಕ್ಟರಿ, ಇಂದಿರಾನಗರ, ಕಾರ್ಪೊರೇಷನ್, ಮೈಸೂರ ಬ್ಯಾಂಕ್ ಮೂಲಕ ಫ್ರೀಡಂ ಪಾರ್ಕ್ ಸೇರಿಕೊಳ್ಳಲಿದ್ದಾರೆ.
ಚಿಕ್ಕಬಳ್ಳಾಪುರದಿಂದ ಹೊರಡು ಟ್ರ್ಯಾಕ್ಟರ್ ಮೆರವಣಿಗೆ ನಂದಿ ಕ್ರಾಸ್ ನಿಂದ ಆರಂಭಗೊಂಡು ದೇವನಹಳ್ಳಿ ಹೆಬ್ಬಾಳ, ಮೇಕ್ರಿ ವೃತ್ತ, ಮೌರ್ಯ ವೃತ್ತ ದ ಮೂಲಕ ಪ್ರೀಡಂ ಪಾರ್ಕ್ ನಲ್ಲಿ ಸೇರಿಕೊಳ್ಳಲಿದ್ದಾರೆ.
ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಪ್ರದೇಶ, ಹಾಸನ, ದಾವಣಗೆರೆ, ತುಮಕೂರು ಜಿಲ್ಲೆಗಳ ರೈತರು ನೆಲಮಂಗಲ್ ಟೋಲ್ ನಿಂದ್ ಮೆರವಣಿಗೆ ಆರಂಭಿಸಲಿದ್ದಾರೆ. ಪೀಣ್ಯ ಕೈಗಾರಿಕಾ ವಲಯ, ಗೊರಗುಂಟೆಪಾಳ್ಯ, ಯಶವಂತಪುರ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದೆ.
ಬೆಂಗಳೂರು ನಗರ ಹಾಗೂ ಎಲ್ಲಾ ಜನಪರ ಸಂಘಟನೆಗಳು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ತಲುಪಲಿದ್ದಾರೆ.
ಬೆಂಗಳೂರಿನ ದಶ ದಿಕ್ಕುಗಳಿಂದಲೂ ರೈತ ಪ್ರವಾಹ ರಾಜಧಾನಿಗೆ ಹರಿದುಬರಲಿದೆ. ಸಿಎಂ ಯಡಿಯೂರಪ್ಪ ಭಾಷಣ ಮುಗಿಯುತ್ತಲೇ, ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಮಾರ್ಚ್ಗೆ ರೈತ ಸಂಘಟನೆಗಳು ಯೋಜನೆ ರೂಪಿಸಿಕೊಂಡಿವೆ.ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರಬೂರು ಶಾಂತುಮಾರ, ಬಡಗಲಪುರ ನಾಗೇಂದ್ರ, ಕುಮಾರ ಸಮತಳ ಒಂದೊಂದು ಪ್ರದೇಶದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಪರೇಡ್ ನ್ನು ಶಾಂತಿಯುತವಾಗಿ ನಡೆಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.
ಪರೇಡ್ ಗೆ ‘ಖಾಕಿ’ ಬ್ರೇಕ್?: ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಬೃಹತ್ ಟ್ರ್ಯಾಕರ್ ರ್ಯಾಲಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಪೊಲೀಸ್ ಆಯುಕ್ತರಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಇಂದು ಆಯುಕ್ತ ಕಮಲ್ ಪಂಥ್ ಸಭೆ ನಡೆಸಿ ನಿರ್ಧಾರ ತಿಳಿಸಲಿದ್ದಾರೆ. ಈಗಾಗಲೆ ಕೆಳ ಹಂತದ ಪೊಲೀಸ್ ಅಧಿಕಾರಿಗಳ ಜೊತೆ ಸಭೆಗಳು ನಡೆದಿದ್ದು ರೈತರು ತಾವುಹಾಕಿದ ಮಾರ್ಗ ಹಾಗೂ ಯೋಜನೆಯಿಂದ ಹಿಂದೆ ಸರಿಯುವ ಮಾತು ಇಲ್ಲ ಎಂದಿದ್ದಾರೆ.
ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿಗೆ ಬ್ರೇಕ್ ಹಾಕಲು ಖಾಕಿ ಪಡೆ ಪ್ಲಾನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.