ಬೆಂಗಳೂರು: ಭಾರತ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದವರು, ದೇಶಕಂಡ ಮಹಾ ದಾರ್ಶನಿಕ ಗಾಂಧೀಜಿ ಹತ್ಯೆಯನ್ನು ಸಂಭ್ರಮಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದೇಶ ದ್ರೋಹಿ ಸಂಘಟನೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ಆರ್ಎಸ್ಎಸ್ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗದು ಎಂದಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷವು, ಹೆಜ್ಜೆಹೆಜ್ಜೆಗೂ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುವ ಆರ್ಎಸ್ಎಸ್ ಬ್ರಿಟಿಷರ ಸೈನ್ಯ ಸೇರಲು ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದವರು, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದ ಆರ್ಎಸ್ಎಸ್ ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನು ಓದಿ: ಆರ್ಎಸ್ಎಸ್ ಕಾರ್ಯಸೂಚಿಯನ್ನು ಜಾರಿಗೆ ತರುವುದು ಬಿಜೆಪಿ ಉದ್ದೇಶವಾಗಿದೆ: ಮಾಜಿ ಸಚಿವ ಬಿ.ಕೆ ಚಂದ್ರಶೇಖರ್
ಗಾಂಧೀಜಿಯನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ. ಗೋಡ್ಸೆ ತಯಾರಾಗಿದ್ದು ಇದೇ ಆರ್ಎಸ್ಎಸ್ ಗರಡಿಯಲ್ಲಿ. ಈ ಬಗ್ಗೆ ನಾಥೂರಾಮ್ ಗೋಡ್ಸೆ ಸೋದರ ಖಚಿತಪಡಿಸಿದ್ದಾನೆ. ಗೋಪಾಲ ಗೋಡ್ಸೆ ಈ ಕುರಿತು ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾನೆ. ಆರ್ಎಸ್ಎಸ್ ಅನ್ನು ಭಾರತಕ್ಕೆ ದ್ರೋಹ ಬಗೆದ ಸಂಘಟನೆ ಎನ್ನಲು ನಿದರ್ಶನಗಳಿವೆ.
1929ರ ಲಾಹೋರ್ ಅಧಿವೇಶನದಲ್ಲಿ ಜವಾಹರ್ ಲಾಲ್ ನೆಹರು ಎಲ್ಲ ಸಂಸ್ಥೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದ್ದರು. 1930ರ ಜನವರಿ 26ರಂದು ಧ್ವಜ ಹಾರಿಸಲು ಕರೆ ಕೊಟ್ಟಿದ್ದರು. ಇದನ್ನು ನಿರಾಕರಿಸಿದ ಆರ್ಎಸ್ಎಸ್ ಭಗವಾಧ್ವಜವನ್ನು ಹಾರಿಸಿತ್ತು. ತನ್ನ ಸಂಘದ ಕಚೇರಿ ಮೇಲೆ ಭಗವಾಧ್ವಜವನ್ನು ಹಾರಿಸಿದ್ದಷ್ಟೇ ಅಲ್ಲದೆ, ತ್ರಿವರ್ಣ ಧ್ವಜ ಅನಿಷ್ಟದ ಸಂಕೇತ ಎಂದು ಆರ್ಎಸ್ಎಸ್ ತನ್ನ ಮುಖವಾಣಿ ‘ಆರ್ಗನೈಸರ್’ನಲ್ಲಿ ಬರೆದಿತ್ತು.
55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ಕೊಡದೆ, ಆರ್ಎಸ್ಎಸ್ ತನ್ನ ಸಂಘದ ಕಚೇರಿಗಳಲ್ಲಿ ಭಗವಾಧ್ವಜ ಹಾರಿಸಿತ್ತು. ಆರ್ಎಸ್ಎಸ್ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸಿತ್ತು. ನಾವು ಮೂವರು ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ ಆರ್ಎಸ್ಎಸ್ ಸಂಘಟನೆಯಲ್ಲೇ ಬೆಳೆದವು ಎಂದು ಹೇಳಬಹುದು ಎಂದು ಗೋಪಾಲ್ ಗೋಡ್ಸೆ ಸಂದರ್ಶನವೊಂದರಲ್ಲಿ ಹೇಳಿದ್ದರು ಎಂದು ಟ್ವೀಟ್ ಮೂಲಕ ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.