ಪರಿಹಾರ ನೀಡದೆ ಬುಲ್ಡೋಜರ್ ತರುವುದು ಸರ್ವಾಧಿಕಾರಿ ಆಡಳಿತದ ಲಕ್ಷಣ: ಮುನೀರ್ ಕಾಟಿಪಳ್ಳ

ಮಂಗಳೂರು: ವಾಮಜೂರಿನ ಮಂಗಳ ಜ್ಯೋತಿಯಲ್ಲಿ ನೂರಾರು ವರ್ಷಗಳಿಂದ  ವಾಸಿಸುತ್ತಿರುವ ಈ ನೆಲದ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಜನರನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಯಾವುದೇ ನೋಟಿಸು, ಪರ್ಯಾಯ ವ್ಯವಸ್ಥೆ ಮತ್ತು ಪರಿಹಾರಗಳನ್ನು ನೀಡದೆ ಮೂರು ಬಾರಿ ಒಕ್ಕಲಿಬ್ಬಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಬುಲ್ಡೋಜರ್ ತಂದಿರುವುದು ಸರ್ವಾಧಿಕಾರಿ ಆಡಳಿತದ ಲಕ್ಷಣ ಎಂದು ಸಾಮಾಜಿಕ ಹೋರಾಟಗಾರರು ಆದ ಮುನೀರ್ ಕಾಟಿಪಳ್ಳ ರವರು ಹೇಳಿದರು. ಪರಿಹಾರ

ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯ ಮುಂದೆ ನಡೆದ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾನೂನಿಗೆ ವ್ಯತಿರಿಕ್ತವಾಗಿ ಅಮಾನವೀಯವಾಗಿ ವರ್ತಿಸಿದೆ, ಕೇವಲ ಕೊರಗಜ್ಜ ಗುಡಿಗೆ ಮಾತ್ರ ನೋಟಿಸ್ ನೀಡಿ ಜುಜುಬಿ ಪರಿಹಾರ ಮೊತ್ತವನ್ನು ಘೋಷಿಸಿದೆ.

ಈ ಬಗ್ಗೆ ಸಂಘಟನೆಗಳು ಎರಡೆರಡು ಬಾರಿ ಪತ್ರ ಬರೆದು ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಆದಿವಾಸಿ ಕೊರಗ ಸಮುದಾಯವನ್ನು ಹೆದ್ದಾರಿ ಇಲಾಖೆಯು ಶೋಷಿಸಿ, ಹಿಂಸಿಸಲು ಹೊರಟಿರುವುದು ಮತ್ತುದೌರ್ಜನ್ಯ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ . ನಾಗರಿಕ ಸಮುದಾಯ ಆದಿವಾಸಿ ಕೊರಗ ಸಮುದಾಯದ ನ್ಯಾಯಯುತವಾದ ಹೋರಾಟವನ್ನು ಬೆಂಬಲಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಹಾರದಲ್ಲಿ ಸಿಡಿಲು ಮತ್ತು ಆಲಿಕಲ್ಲು ಮಳೆಯಿಂದ 61 ಮಂದಿ ಮರಣ

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗರು ಅವರು ಹೆದ್ದಾರಿ ಇಲಾಖೆಯು ಕನಿಷ್ಠ ನೀತಿ ನಿಯಮಗಳಿಗೆ ಬೆಲೆ ಕೊಡುವ ಇಲಾಖೆಯಾಗಿ ಉಳಿದಿಲ್ಲ ಸುಪ್ರೀಂಕೋರ್ಟಿನ ಸಮತಾ ತೀರ್ಪಿಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದೆ ಬುಲ್ಡೋಸರ್ ನೀತಿಯ ವಿರುದ್ಧ ಸುಪ್ರೀಂಕೋರ್ಟ್ ಕಟುವಾದ ಮಾತುಗಳಲ್ಲಿ ಟೀಕಿಸಿದ ಸಮಯವೇ ಬುಲ್ಡೋಜರ್ ಕಾರ್ಯಾಚರಣೆಗೆ ಹೆದ್ದಾರಿ ಪ್ರಾಧಿಕಾರ ಇಳಿದಿದೆ.

ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲಾದರು ಅದನ್ನು ಲೆಕ್ಕಿಸದೆ ನೆಲಸಮಕ್ಕೆ ಮುಂದಾಗಿದೆ ಬಡ ಮಹಿಳೆಯರು ಮಕ್ಕಳ ಪ್ರತಿರೋಧದಿಂದ ಬೀದಿಗೆ ಬೀಳಬೇಕಾದ ಸನ್ನಿವೇಶದಿಂದ ಕೊರಗ ಸಮುದಾಯ ಪಾರಾಗಿದೆ ಎಂದು ಹೇಳಿದರು . ಹೆದ್ದಾರಿ ಇಲಾಖೆ ಪೊಲೀಸ್ ಇಲಾಖೆಯನ್ನು ಉಪಯೋಗಿಸಿ ಬೆದರಿಸುವ ತಂತ್ರ ಮಾಡಿದೆ. ಕೊರಗಜ್ಜ ಗುಡಿಯ ಒಳ ಭಾಗದಲ್ಲಿ ಕಟ್ಟಿದ್ದ ಸಣ್ಣ ಬ್ಯಾನರಿಗೆ ತಡೆಯೊಡ್ಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸಬಾರದೆಂದು ಬೆದರಿಕೆ ಹಾಕಿದೆ. ಬಡ ನೆಲದ ಮೂಲ ನಿವಾಸಿಗಳ ಪರ ಇರಬೇಕಾದ ಪೊಲೀಸರು ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವ ಹೆದ್ದಾರಿ ಇಲಾಖೆಯೊಡನೆ ಸೇರಿ ದಮನಕಾರಿ ನೀತಿಯನ್ನು ಪ್ರದರ್ಶಿಸಿದೆ ಎಂದು ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಜನಪರ ಚಳುವಳಿಯ ಸಾಮಾಜಿಕ ಹೋರಾಟಗಾರ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಆದಿವಾಸಿ ಹಕ್ಕುಗಳ ಸಮಿತಿಯ ವಾಮಂಜೂರು ಘಟಕದ ಅಧ್ಯಕ್ಷರಾದ ಕರಿಯ .ಕೆ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ಮಾತನಾಡಿದರು.

ಮಂಗಳೂರಿನ ನಂತೂರಿನಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ನಡೆದ ಪ್ರತಿಭಟನಾ ಸಭೆಯ ನೇತೃತ್ವವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿಯ ಸದಸ್ಯರಾದ ಶೇಖರ ವಾಮಂಜೂರು ಜಿಲ್ಲಾ ಮುಂದಾಳುಗಳಾದ ರವೀಂದ್ರ , ವಿಕಾಸ್ , ದಿನೇಶ್ , ಪೂರ್ಣೇಶ್, ಪುನೀತ್, ತುಳಸಿ , ಬೆಳ್ಮನ್ನು ಸುನೀತ, ಮುಂತಾದವರು ವಹಿಸಿದ್ದರು ಆದಿವಾಸಿ ಹಕ್ಕುಗಳ ಸಮಿತಿಯ ಮಹಿಳಾ ಮುಖಂಡರಾದ ರಶ್ಮಿ ಸಂತೋಷ ನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು . ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ ವಂದಿಸಿದರು.

ಇದನ್ನೂ ನೋಡಿ: ಬಾಣಂತಿಯರ ಸಾವಿನ ಹೊಣೆ ಯಾರದ್ದು? ಮೆಡಿಸಿನ್ ಮಾಫಿಯಾಗೆ ಕಡಿವಾಣ ಯಾವಾಗ?! Janashakthi Media

Donate Janashakthi Media

Leave a Reply

Your email address will not be published. Required fields are marked *