ಚಿತ್ರವಧೆಯ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುವ ಯುಪಿ ಸರಕಾರದ ನಿರ್ಧಾರಕ್ಕೆ ರಾಜ್ಯಪಾಲರ ಅನುಮತಿ ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸಿ ಪತ್ರ
ನವದೆಹಲಿ: ಹತ್ತುವರ್ಷಗಳ ಹಿಂದೆ, ಸೆಪ್ಟೆಂಬರ್ 2015 ರಲ್ಲಿ ಇಡೀ ದೇಶದಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿದ್ದ ಮೊಹಮ್ಮದ್ ಅಖ್ಲಾಕ್ ಅವರ ದೊಂಬಿ ಚಿತ್ರವಧೆಯ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುವ ಉತ್ತರಪ್ರದೇಶ ಸರಕಾರದ ನಿರ್ಧಾರಕ್ಕೆ ಅಲ್ಲಿಯ ರಾಜ್ಯಪಾಲರ ಅನುಮತಿಯ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ಕೋರಿ ಸಿಪಿಐ(ಎಂ)ನ ಹಿರಿಯ ನಾಯಕಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯೆ ಬೃಂದಾ ಕಾರಟ್ ಅವರು ಡಿಸೆಂಬರ್ 13ರಂದು ರಾಷ್ಟ್ರಾಧ್ಯಕ್ಷರಿಗೆ ಪತ್ರಬರೆದಿದ್ದಾರೆ. ಹತ್ಯೆ
ಈ ಪ್ರಕರಣದಲ್ಲಿ ಲಾಠಿಗಳನ್ನು ಬಳಸಲಾಗಿತ್ತೇ ವಿನಹ ಬಂದೂಕುಗಳನ್ನಲ್ಲ, ಬಲಿಯಾದವರು ಮತ್ತು ಪೀಡಿತರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಮೊಕದ್ದಮೆಯನ್ನು ಮುಂದುವರಿಸುವುದು ಕೋಮು ಅಸಾಮರಸ್ಯಕ್ಕೆ ಕಾರಣವಾಗುತ್ತದೆ ಇತ್ಯಾದಿ ಅತ್ಯಂತ ಅಸಮರ್ಥನೀಯ ಆಧಾರದ ಮೇಲೆ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಉತ್ತರಪ್ರದೇಶ ಸರಕಾರ ಕೈಗೊಂಡಿದೆ ಎಂಬುದು ಒಂದು ವಿಷಯವಾದರೆ, ಕೊಲೆ, ಕೊಲೆ ಯತ್ನ ಮತ್ತು ದೊಂಬಿಚಿತ್ರವಧೆಯ ಒಂದು ಪ್ರಕರಣವನ್ನು ಹಿಂತೆಗೆದುಕೊಳ್ಳಲು ರಾಜಕೀಯ ಪ್ರೇರಿತ ಕ್ರಮವನ್ನು ಸರಕಾರ ತೆಗೆದುಕೊಳ್ಳುತ್ತಿದ್ದರೆ, ರಾಜ್ಯಪಾಲರು ಅಂತಹ ಕ್ರಮದ ವಿರುದ್ಧ ಸರ್ಕಾರಕ್ಕೆ ಬುದ್ಧಿ ಹೇಳಬೇಕಲ್ಲವೇ ಎಂಬುದು ಇನ್ನೊಂದು ಪ್ರಮುಖ ಅಂಶ.
ಸಂವಿಧಾನ ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವುದು ರಾಜ್ಯಪಾಲರ ಕರ್ತವ್ಯವಲ್ಲವೇ? ಇಂತಹ ಒಂದು ಪ್ರಕರಣವನ್ನು ಹಿಂತೆಗೆದುಕೊಂಡರೆ ನ್ಯಾಯದ ಪ್ರಕ್ರಿಯೆಗಳಲ್ಲಿ ಏನು ಉಳಿಯುತ್ತದೆ? ಲಾಠಿಗಳನ್ನು ಬಳಸಲಾಗಿದೆಯೇ ವಿನಹ ಬಂದೂಕುಗಳನ್ನಲ್ಲ, ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಸಾಮರಸ್ಯಕ್ಕಾಗಿ ಇಂತಹ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದು ಎಲ್ಲಾ ದೊಂಬಿಹತ್ಯೆ ಪ್ರಕರಣಗಳಿಗೆ ಅನ್ವಯಿಸುವುದಿಲ್ಲವೇ? ಇಂತಹ ಕಳವಳಕಾರೀ ಪ್ರಶ್ನೆಗಳು ಉದ್ಭವವಾಗಿರುವುದರಿಂದಾಗಿ ಈ ಪತ್ರವನ್ನು ಬರೆಯಲೇ ಬೇಕಾಗಿ ಬಂದಿದೆ ಎಂದಿರುವ ಬೃಂದಾ ಕಾರಟ್, ಉತ್ತರಪ್ರದೇಶ ಸರಕಾರದ ನಿರ್ಧಾರಕ್ಕೆ ಅಲ್ಲಿಯ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಹಿಂತೆಗೆದುಕೊಳ್ಳುವಂತೆ ಅವರಿಗೆ ನಿರ್ದೇಶಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್: ವೃದ್ಧರಿಗೆ 1.32 ಕೋಟಿ ರೂ. ವಂಚನೆ
ಅವರ ಪತ್ರದ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:
ಸೆಪ್ಟೆಂಬರ್ 2015 ರಲ್ಲಿ ನಡೆದ ಮೊಹಮ್ಮದ್ ಅಖ್ಲಾಕ್ ಅವರ ದೊಂಬಿ ಚಿತ್ರವಧೆಯ ಪ್ರಕರಣದ ವಿಷಯದಲ್ಲಿ ಉತ್ತರಪ್ರದೇಶ ರಾಜ್ಯಪಾಲರ ಪಾತ್ರದ ಬಗ್ಗೆ ನಿಮ್ಮ ತುರ್ತು ಗಮನ ಸೆಳೆಯಲು ನಾನು ಬರೆಯುತ್ತಿದ್ದೇನೆ. ಮುಖ್ಯ ಸಾಕ್ಷಿ ಈಗಾಗಲೇ ಸಾಕ್ಷ್ಯ ನೀಡಿದ್ದರೂ ಸಹ, ನ್ಯಾಯಪ್ರಕ್ರಿಯೆಗಳನ್ನು ಬುಡಮೇಲು ಮಾಡುವ ಮತ್ತು ಇಡೀ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುವ ಸಂಪೂರ್ಣ ಕಾನೂನುಬಾಹಿರ ಮತ್ತು ಅನ್ಯಾಯಫೂರ್ಣ ಪ್ರಯತ್ನದಲ್ಲಿ ಮುಂದುವರಿಯಲು ಉತ್ತರಪ್ರದೇಶ ಸರ್ಕಾರಕ್ಕೆ ರಾಜ್ಯಪಾಲರು ಲಿಖಿತ ಅನುಮತಿ ನೀಡಿದ್ದಾರೆ.
ರಾಜ್ಯಪಾಲರ ಅನುಮತಿಯೊಂದಿಗೆ ಸರ್ಕಾರವು ಗ್ರೇಟರ್ ನೋಯ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹಿಂಪಡೆಯಲು ಅಫಿಡವಿಟ್ ಸಲ್ಲಿಸಿದೆ. ಈ ವಿಷಯದ ಬಗ್ಗೆ ನಿಮಗೆ ಪತ್ರ ಬರೆಯಲೇ ಬೇಕಾಗಿ ಬಂದಿರುವುದಕ್ಕೆ ನನಗೆ ವಿಷಾದವಿದೆ, ಆದರೆ ರಾಜ್ಯಪಾಲರು ನಿಮ್ಮಿಂದ ನೇಮಕಗೊಂಡಿರುವುದರಿಂದ ಮತ್ತು ಅವರು ನಿಮಗೆ ಉತ್ತರದಾಯಿಯಾಗಿರುವುದರಿಂದ, ನ್ಯಾಯದ ಹಿತದೃಷ್ಟಿಯಿಂದ ನಿಮಗೆ ಸತ್ಯಸಂಗತಿಗಳನ್ನು ತಿಳಿಸುವುದು ಮತ್ತು ನಿಮ್ಮ ತುರ್ತು ಹಸ್ತಕ್ಷೇಪವನ್ನು ಕೋರುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಹಿಂದಿನ ಸಂದರ್ಭಗಳಲ್ಲಿ ನೀವು ನ್ಯಾಯದ ಪರವಾಗಿ ಹಲವಾರು ವಿಷಯಗಳಲ್ಲಿ ಘನ ಮಧ್ಯಪ್ರವೇಶ ನಡೆಸಿದ್ದೀರಿ.
1. ಬಿಸಾಹಡ ಗ್ರಾಮದ ಗೌತಮ ಬುದ್ಧನಗರದ ನಿವಾಸಿ ಮಹಮ್ಮದ್ ಅಖ್ಲಾಕ್ ಅವರನ್ನು ಸೆಪ್ಟೆಂಬರ್28, 2015 ರಂದು ಅವರ ಮನೆಯ ಹೊರಗೆ ಜನ ಜಂಗುಳಿಯೊಂದು ಹೊಡೆದು ಕೊಂದಿತು. ಅವರ ಮಗ ದಾನಿಶ್ ಅದೇ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ಈ ಬಗ್ಗೆ ಐಪಿಸಿಯ ಸೆಕ್ಷನ್ 147, 148, 149, 307, 323, 302, 504, 506, 427 ಮತ್ತು 458 ರ ಅಡಿಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿತ್ತು. ಈ ಅಮಾನುಷ ಹತ್ಯೆಗೆ ರಾಷ್ಟ್ರೀಯ ಆಕ್ರೋಶ ವ್ಯಕ್ತವಾಗಿತ್ತು. ಇದರಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯನ್ನು ಖಚಿತಪಡಿಸುವುದಾಗಿ ಸರ್ಕಾರ ಭರವಸೆ ನೀಡಿತು. ಆ ಕ್ರೂರ ಹತ್ಯೆಯ ಸಮಯದಿಂದ ಇಂದಿನವರೆಗೆ ನಾನು ಆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಅವರು ಅನುಭವಿಸಿದ ಅಪಾರ ಸಂಕಟಗಳನ್ನು, ಅವರ ಧೈರ್ಯ ಮತ್ತು ತಮಗೆ ನ್ಯಾಯ ಸಿಗುತ್ತದೆ ಎಂಬ ಅವರ ನಂಬಿಕೆಯನ್ನು ನಾನು ಬಲ್ಲೆ. ಇಂದಿಗೂ ದಾನಿಶ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಮತ್ತು ಅವನಿಗೆ ಉಂಟುಮಾಡಿದ ಗಂಭೀರ ಗಾಯಗಳ ಪರಿಣಾಮವನ್ನು ಅನುಭವಿಸುತ್ತಿದ್ದಾನೆ.
2. ಆರೋಪಪಟ್ಟಿ ಸಲ್ಲಿಸಲಾಯಿತು ಮತ್ತುಮೊಕದ್ದಮೆ ಪ್ರಾರಂಭವಾಯಿತು. 2022 ರಲ್ಲಿ, ಪ್ರತ್ಯಕ್ಷ ಸಾಕ್ಷಿ, ಪೀಡಿತರ ಮಗಳು ಸಾಕ್ಷ್ಯ ನೀಡಿದಳು ಮತ್ತು ಎಲ್ಲಾ ಆರೋಪಿಗಳನ್ನು ಹೆಸರಿಸಿದಳು ಮತ್ತು ಗುರುತಿಸಿದಳು. ಬೇರೆ ರೀತಿಯಲ್ಲಿ ಹೇಳುವುದಾದರೆ, ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗಿದೆ ಮತ್ತು ದಾಖಲಿಸಲಾಗಿದೆ. ಪ್ರಕರಣ ನಡೆಯುತ್ತಿದೆ ಮತ್ತು ಇತರ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ನೀಡಬೇಕಾಗಿದೆ.
3. ಇಂತಹ ಸಮಯದಲ್ಲಿ,ಉತ್ತರಪ್ರದೇಶ ಸರ್ಕಾರವು, ಬಂದೂಕುಗಳಲ್ಲ ಲಾಠಿಗಳನ್ನು ಬಳಸಲಾಗಿತ್ತು, ಬಲಿಯಾದವರೊಂದಿಗೆ,ಪೀಡಿತರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಮೊಕದ್ದಮೆಯನ್ನು ಮುಂದುವರಿಸುವುದು ಕೋಮು ಅಸಾಮರಸ್ಯಕ್ಕೆ ಕಾರಣವಾಗುತ್ತದೆ ಇತ್ಯಾದಿ ಅತ್ಯಂತ ಅಸಮರ್ಥನೀಯ ಆಧಾರದ ಮೇಲೆ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ. ಈ ಎಲ್ಲಾ ಸಮಯದಲ್ಲೂ ಫಿರ್ಯಾದಿಪಕ್ಷ ಸಾಕ್ಷಿಗಳಿಗೆ ಹಾಜರಾಗಲು ನೋಟಿಸ್ ನೀಡದೆ ಮೊಕದ್ದಮೆಯನ್ನು ವಿಳಂಬ ಮಾಡಿದೆ, ಮತ್ತು ಇಂದು ಈ ವಿಳಂಬವನ್ನೇ ಮೊಕದ್ದಮೆಯನ್ನು ಹಿಂಪಡೆಯಲು ಆಧಾರವಾಗಿ ಮಾಡಲಾಗುತ್ತಿದೆ.
4. ನ್ಯಾಯದ ಗುರಿಗಳನ್ನು ಪೂರೈಸಲು ಅಲ್ಲ,ಬದಲಾಗಿ ಇಡೀ ನ್ಯಾಯಾಂಗ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಉದ್ದೇಶಶದಿಂದ ಹೀಗೆ ಮಾಡಲಾಗುತ್ತಿದೆ. ಇದು CrPC 321 ರ ನಿರ್ಲಜ್ಜ ದುರುಪಯೋಗವಾಗಿದೆ. ಆದರೆ, ಇಲ್ಲಿರುವ ಅಂಶವೆಂದರೆ, ಸರ್ಕಾರವು ಕೊಲೆ, ಕೊಲೆ ಯತ್ನ ಮತ್ತು ದೊಂಬಿಚಿತ್ರವಧೆಯ ಒಂದು ಪ್ರಕರಣವನ್ನು ಹಿಂತೆಗೆದುಕೊಳ್ಳಲು ರಾಜಕೀಯ ಪ್ರೇರಿತ ಕ್ರಮವನ್ನು ತೆಗೆದುಕೊಳ್ಳುತ್ತಿದ್ದರೆ, ರಾಜ್ಯಪಾಲರು ಅಂತಹ ಕ್ರಮದ ವಿರುದ್ಧ ಸರ್ಕಾರಕ್ಕೆ ಬುದ್ಧಿ ಹೇಳಬೇಕಲ್ಲವೇ? ಸಂವಿಧಾನ ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವುದು ರಾಜ್ಯಪಾಲರ ಕರ್ತವ್ಯವಲ್ಲವೇ? ಇಂತಹ ಒಂದು ಪ್ರಕರಣವನ್ನು ಹಿಂತೆಗೆದುಕೊಂಡರೆ ನ್ಯಾಯದ ಪ್ರಕ್ರಿಯೆಗಳಲ್ಲಿ ಏನು ಉಳಿಯುತ್ತದೆ? ಲಾಠಿಗಳನ್ನು ಬಳಸಲಾಗಿದೆಯೇ ವಿನಹ ಬಂದೂಕುಗಳನ್ನಲ್ಲ, ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಸಾಮರಸ್ಯಕ್ಕಾಗಿ ಇಂತಹಹ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದು ಎಲ್ಲಾ ದೊಂಬಿಹತ್ಯೆ ಪ್ರಕರಣಗಳಿಗೆ ಅನ್ವಯಿಸುವುದಿಲ್ಲವೇ?
ಈ ಕಳವಳಕಾರೀ ಪ್ರಶ್ನೆಗಳಿಂದಾಗಿ, ನೀವು ಮಧ್ಯಪ್ರವೇಶಿಸಿ ನೀಡಲಾದ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ನಿರ್ದೇಶಿಸುತ್ತೀರಿ ಎಂಬ ಭರವಸೆಯೊಂದಿಗೆ ನಿಮಗೆ ಬರೆಯುತ್ತಿದ್ದೇನೆ.
ಈ ವಿಷಯ, ನಿನ್ನೆ (ಡಿಸೆಂಬರ್ 12, 2025) ನ್ಯಾಯಾಲಯದಲ್ಲಿ ಚರ್ಚಿಸಬೇಕಿದ್ದ ರಾಜ್ಯಪಾಲರು ಅನುಮೋದಿಸಿದ ಸರ್ಕಾರಿ ಅಫಿಡವಿಟ್ ಅನ್ನು ಪ್ರಾಸಿಕ್ಯೂಷನ್ ಕೋರಿಕೆಯ ಮೇರೆಗೆ ಮುಂದೂಡಲಾಗಿದೆಯಾದ್ದರಿಂದ ತುರ್ತಿನದ್ದಾಗಿದೆ.
ಇದನ್ನೂ ನೋಡಿ: ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media
