ಬುದ್ದ ಬಸವ ಅಂಬೇಡ್ಕರ ಸೂಫಿ ಸಂತರು ಹುಟ್ಟಿದ ನಾಡಿನಲ್ಲಿ ಸಂಘಿಗಳ ಆಟ ನಡೆಯುವುದಿಲ್ಲ – ಬೃಂದಾ ಕಾರಟ್

ಮಂಡ್ಯ : ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈಗ ಬಿಜೆಪಿಯ ಸ್ಟೆಪ್ನಿಯಾಗಿ ಕೆಲಸ ಮಾಡೋಕೆ ಹೊರಟದ್ದು ನಾಚಿಕೆಗೇಡಿನ ಸಂದರ್ಭ ಎಂದು ಸಿಪಿಐಎಂ ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆಕ್ರೋಶ ಹೊರಹಾಕಿದರು. ಬುದ್ದ

ದುಡಿಮೆ ಸಂಸ್ಕೃತಿಯ ಉಳಿವಿಗಾಗಿ, ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ ಮಂಡ್ಯದಲ್ಲಿ ನಡೆದ ಶ್ರಮಜೀವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೆರೆಗೋಡಿನಲ್ಲಿ ರಾಮ ಧ್ವಜ ಹರಿಸುವ ಮೂಲಕ ವಿವಾದವನ್ನು ಸೃಷ್ಟಿಸಿ, ರಾಜಕೀಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿರುವಾಗ, ಜೆಡಿಎಸ್ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವುದು ದುರಂತ. ಇದರ ವಿರುದ್ಧ ಹೋರಾಟವನ್ನು ನಡೆಸಿ ಐಕ್ಯತೆಯ ಮೂಲಕ ಮಂಡ್ಯದ ಸಹೋದರತೆ ಕಾಪಾಡಿ, ಕೋಮುಗಲಭೆ ಸೃಷ್ಟಿಕೋರರನ್ನು ಒದ್ದೋಡಿಸಿದ್ದೀರಿ ನಿಮಗೆ ಅಭಿನಂದನೆಗಳು ಎಂದು ಜನಪರ ಸಂಘಟನೆಗಳ ಕೆಲಸವನ್ನು ಶ್ಲಾಘಿಸಿದರು.

ನೀವು ಜನರ ಸೌಹಾರ್ದತೆಯನ್ನು ಅದೆಷ್ಟೇ ಬಾರಿ ಒಡೆಯಲು ಯತ್ನಿಸಿದರು ಮತ್ತೆ ಮತ್ತೆ ನಾವು ಸೌಹಾರ್ದತೆಯನ್ನು ಕಟ್ಟುವ ಕೆಲಸ ಮಾಡುತ್ತೇವೆ. ಬುದ್ದ ಬಸವ ಅಂಬೇಡ್ಕರ ಸೂಫಿ ಸಂತರು ಹುಟ್ಟಿದ ನಾಡಿನಲ್ಲಿ ನಿಮ್ಮ ಆಟ ನಡೆಯುವುದಿಲ್ಲ ಸಂಘಿಗಳೇ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ವಿರೋಧಿಸಿದರೆ ದೇಶದ್ರೋಹಿಗಳು ಎಂದು ಬೊಬ್ಬೆ ಹೊಡೆಯುವ ಆರ್ ಎಸ್ ಎಸ್ ನವರು ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಹನುಮ ಧ್ವಜವನ್ನು ಹಾರಿಸಿದ್ದು ಅವರ ಹುಸಿ ದೇಶಾಭಿಮಾನ ಎಂತದ್ದು ಎಂಬುದು ಸಾಬೀತಾಗಿದೆ. ಮಂಡ್ಯದ ಜನ ಸಹೋದರತೆಯಿಂದ ಬಾಳುತಿದ್ದಾರೆ, ಸಕ್ಕರೆಯಂತ ಜನರ ಜೀವನದಲ್ಲಿ ಹುಳಿ ಹಿಂಡುವ ಕೆಲಸ ಮಾಡುವ ಬಿಜೆಪಿ, ಜೆಡಿಎಸ್ ನವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ದಲಿತ ನಾಯಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಕೆರೆಗೋಡು ನೆಮ್ಮದಿಯಿಂದ ಇತ್ತು, ಯಾವತ್ತು ಇಂತಹ ದುರ್ಘಟನೆಗಳು ನಡೆದಿರಲಿಲ್ಲ, ರಾಜಕೀಯ ಲಾಭಕ್ಕಾಗಿ ಹನುಮಧ್ವಜ ಹಾರಿಸಿ ಸೌಹರ್ದತೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ. ಇದಕ್ಕೆ ತಕ್ಕ ಪಾಠವನ್ನು ಮಂಡ್ಯದ ಜನ ಕಲಿಸಲಿದ್ದಾರೆ ಎಂದರು.

ಮೋದಿಗೆ ಮೂಗುದಾರ ಹಾಕುವ ಸಮಯ ಬಂದಿದೆ. ಈ ಬಾರಿ ಅವರನ್ನು ಸೋಲಿಸದೆ ಹೋದರೆ ನಮ್ಮ ಸಂಕಟಗಳು ಇನ್ನಷ್ಟು ಹೆಚ್ಚಾಗಲಿವೆ. ಅದನ್ನು ತಡೆಯಲು ಕೋಮುವಾದಿಗಳನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ, 2024ರ ಚುನಾವಣೆಯಲ್ಲಿ ಸೂಕ್ತ ಸರ್ಕಾರವನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಎರಡು ಬಾರಿ ಅಧಿಕಾರ ನಡೆಸಿದ ಬಿಜೆಪಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಶ್ರೀಮಂತರಿಗೆ ಅಚ್ಚೇದಿನ್ ನೀಡಿದ ಮೋದಿ, ಬಡಜನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದರು ಎಂದು ಆರೋಪಿಸಿದರು.

ಬಿಜೆಪಿಯೇತರ ಆಡಳಿತ ಇರುವ ಸರ್ಕಾರಕ್ಕೆ ಒಪ್ಪಿಕೊಂಡಿರುವ ತೆರಿಗೆ ಹಣ ನೀಡುತ್ತಿಲ್ಲ, ಕೇರಳ, ಕರ್ನಾಟಕ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ನೀಡಿಲ್ಲ, ಬರಗಾಲದ ಸಂದರ್ಭದಲ್ಲಿ ರಾಜ್ಯಕ್ಕೆ ಸಹಾಯ ಮಾಡಿಲ್ಲ. ಕೇರಳ, ಕರ್ನಾಟಕ, ತಮಿಳುನಾಡು, ಪಂಜಾಬ್, ದೆಹಲಿ ರಾಜ್ಯಗಳಲ್ಲಿ ರಾಜ್ಯಪಾರನ್ನು ಮುಂದೆ ಬಿಟ್ಟು ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಸಿಪಿಐಎಂ ಮುಖಂಡ ಪುಟ್ಟಮಾಧು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ

ಮೀನಾಕ್ಷಿ ಸುಂದರಂ, ಮುಖಂಡರಾದ  ದೇವಿ, ಕುಮಾರಿ, ಕೆ ಎಸ್ ವಿಮಲಾ, ಗೌರಮ್ಮ, ಜಗದೀಶ್ ಸೂರ್ಯ, ಭರತ್‌ರಾಜ್, ಎಚ್‌.ಎಸ್‌ ಸುನಂದಾ, ಹನುಮೇಶ್, ಸುರೇಂದ್ರ, ಸುಶೀಲಾ, ಮಂಜುಳಾ, ಶೋಭಾ ಸೇರಿದಂತೆ ಅನೇಕರಿದ್ದರು.

ವಿಡಿಯೋ ನೋಡಿಶ್ರಮಜೀವಿಗಳ ಸಮಾವೇಶ ಮಂಡ್ಯ

 

Donate Janashakthi Media

Leave a Reply

Your email address will not be published. Required fields are marked *