ಕಾರವಾರ : ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 41 ವರ್ಷ ಹಳೆಯ ಸೇತುವೆ ಕುಸಿದು ಬಿದ್ದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿಯಿದ್ದ ಈ ಸೇತುವೆ ನಿನ್ನೆ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಕುಸಿದಿದೆ. ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 41 ವರ್ಷಗಳ ಹಳೆ ಸೇತುವೆ ಏಕಾಏಕಿ ಕುಸಿದು ಬಿದ್ದಿದ್ದು, ಈ ವೇಳೆ ಸೇತುವೆ ಮೇಲೆ ಹೋಗುತ್ತಿದ್ದ ಲಾರಿ ನದಿಗೆ ಬಿದ್ದಿದೆ.
ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್ (37) ಸಹ ನದಿಗೆ ಬಿದ್ದಿದ್ದರು. ಅವರನ್ನು ರಕಕ್ಷಿಸಲಾಗಿದೆ.
ತಮಿಳುನಾಡು ಮೂಲದ SSM ಟ್ರಾನ್ಸಪೋರ್ಟ ಕಂಪನಿಗೆ ಸೇರಿದ TN-52 AC -6880 ನೊಂದಣಿಯ ಖಾಲಿ ಟ್ರಕ್ ನದಿಗೆ ಬಿದ್ದಿದೆ. ಬೀಟ್ ಪೊಲೀಸರ ಮುಂಜಾಗೃತೆಯಿಂದ ಲಾರಿ ಚಾಲಕನಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಪೊಲೀಸರು ಲಾರಿ ಚಾಲಕನ ರಕ್ಷಣೆಯನ್ನು ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಾರವಾರ ಎಸ್‌ಪಿ ನಾರಾಯಣ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರ ತಂಡ ನದಿಗೆ ಇಳಿದು ಚಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕ ಬಾಲ್ ಮುರುಗನ್ ಅವರನ್ನು ರಕ್ಷಿಸಿದ್ದಾರೆ.
ಗೋವಾದಿಂದ ಹುಬ್ಬಳ್ಳಿ ಕಡೆ ಲಾರಿ ತೆರಳುತ್ತಿತ್ತು. ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ. ಆ ಬಳಿಕ ಮೂರು ಕಡೆ ಕುಸಿದು ಹೋಗಿದೆ. ಸದ್ಯ ಟ್ರಕ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನದಿಗೆ ನಿರ್ಮಿಸಿದ್ದ ಇನ್ನೊಂದು ಸೇತುವೆಯ ಮೇಲೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸೇತುವೆ ಕುಸಿತದ ವೇಳೆ ಮತ್ತೆ ಕೆಲವು ವಾಹನಗಳು ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಕಾಳಿ ನದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ಕಾರವಾರ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಈ ಸೇತುವೆ ಸುಮಾರು 41 ವರ್ಷಗಳಷ್ಟು ಹಳೆಯದಾಗಿದ್ದು, ಗೋವಾ – ಕಾರವಾರ ನಡುವೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿತ್ತು.