ಬ್ರೆಸಿಲಿಯಾ: ಕಳೆದ ಭಾನುವಾರ (ಜನವರಿ 8) ಬ್ರೆಜಿಲ್ ದೇಶದ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲಿನ ದಾಳಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ದೇಶದ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಪಾತ್ರದ ಬಗ್ಗೆ ಗಲಭೆಗೆ ಪ್ರಚೋದನೆ ನೀಡಿದವರು ಯಾರು? ಎಂಬ ಎಲ್ಲಾ ಅಂಶಗಳನ್ನು ತನಿಖೆ ನಡೆಸಲು ಅಲ್ಲಿನ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಇದನ್ನು ಓದಿ: ಬ್ರೆಜಿಲ್: ದಶಕದ ಬಳಿಕ ಅಧಿಕಾರಕ್ಕೆ ಮರಳಿದ ಎಡಪಂಥೀಯ ಅಧ್ಯಕ್ಷ ಲುಲಾ ಡಾ ಸಿಲ್ವಾ
ಗಲಭೆಯ ದಿನದಂದು ಬ್ರೆಸಿಲಿಯಾದಲ್ಲಿ ಸರ್ಕಾರದ ಕಟ್ಟಡಗ ಮೇಲೆ ನಡೆದ ದಾಳಿ ವೇಳೆಯಲ್ಲಿ ಕಿಟಕಿ, ಪೀಠೋಪಕರಣಗಳನ್ನು ಒಡೆದು ಹಾಕಿ ಅಮೂಲ್ಯವಾದ ಕಲಾಕೃತಿಗಳನ್ನು ನಾಶಪಡಿಸಲಾಗಿತ್ತು. ಈ ದಾಳಿ ನಂತರ ಸುಮಾರು 2,000ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಲಾಗಿದೆ.
2022ರಲ್ಲಿ ಜರುಗಿದ ಬ್ರೆಜಿಲ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಳ್ಳದ ಜೈರ್ ಬೊಲ್ಸೊನಾರೊ ಬೆಂಬಲಿಗರು ಸಂಸತ್ತು, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಅರಮನೆಗೆ ನುಗ್ಗಿ ದಾಂದಲೆ ನಡೆಸಿದ್ದರು.
ಅಧ್ಯಕೀಯ ಚುನಾವಣೆಯಲ್ಲಿ ಎಡಪಂಥೀಯ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಗೆಲುವು ಸಾಧಿಸಿದರು. ಚುನಾವಣೆ ಸೋಲಿನಿಂದ ಕೋಪಗೊಂಡಿದ್ದ ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಪ್ರಶ್ನಿಸಿ ಸಂದೇಶ ರವಾನಿಸಿದ್ದರು.
ಇದಾದ ನಂತರದಲ್ಲಿ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಮನವಿ ಮೇರೆಗೆ ಅವರನ್ನು ವಿಚಾರಣೆ ನಡೆಸಲು ನಿರ್ಧಾರವಾಯಿತು. ಅಧ್ಯಕ್ಷೀಯ ಚುನಾವಣೆಯ ಸೋಲಿನ ಬಳಿಕ ಸೋಲನ್ನು ಸ್ವೀಕರಿಸದ ಬೋಲ್ಸಾನಾರೊ ಅಮೆರಿಕಾಕ್ಕೆ ಪಲಾಯನಗೈದಿದ್ದರು.
ಮಾಜಿ ಕಾನೂನು ಮಂತ್ರಿ ಬಂಧನ
ಬೋಲ್ಸನಾರೊ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಆಂಡರ್ಸನ್ ಟೊರೆಸ್ ಅವರು ಅಮೆರಿಕಾದಿಂದ ಬ್ರೆಸಿಲಿಯಾಕ್ಕೆ ಆಗಮಿಸಿದಾಗ ಬಂಧಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ