ಬ್ರೆಜಿಲ್ : ಲುಲಾ  ಮೊದಲ ಸುತ್ತಿನಲ್ಲಿ ಗೆದ್ದಿದ್ದಾರೆ, ಆದರೆ ಉಗ್ರ ಬಲಪಂಥ  ಸೋತಿಲ್ಲ

– ವಸಂತರಾಜ ಎನ್.ಕೆ.

ಬಹಳ ಕುತೂಹಲ ಕೆರಳಿಸಿರುವ ಅಕ್ಟೋಬರ್ 2 ರಂದು ನಡೆದ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡ ಅಭ್ಯರ್ಥಿ ಲುಲಾ ಡಿ ಸಿಲ್ವಾ ಅತಿ ಹೆಚ್ಚು ಮತ ಪಡೆದು ಮೊದಲ ಸುತ್ತಿನಲ್ಲಿ ಗೆದ್ದಿದ್ದಾರೆ. ಅವರು ಶೇ.48.4 ಮತ ಗಳಿಸಿದ್ದು ಅವರ ಹತ್ತಿರದ ಪ್ರತಿಸ್ಪರ್ಧಿ ಜೈರ್ ಬೊಲ್ಸನಾರೊ ಶೇ.43.20 ಮತ ಗಳಿಸಿದ್ದಾರೆ. ಲುಲಾ ಶೇ. 50ಕ್ಕಿಂತ ಹೆಚ್ಚು ಮತ ಗಳಿಸದೆ ಇರುವುದರಿಂದ ಬ್ರೆಜಿಲ್ ಸಂವಿಧಾನದ ಪ್ರಕಾರ ಮೊದಲ ಎರಡು ಸ್ಥಾನ ಗಳಿಸಿದ ಇವರಿಬ್ಬರ ನಡುವೆ ಎರಡನೆಯ ಸುತ್ತಿನ ಚುನಾವಣೆ ಅಕ್ಟೋಬರ್ 30ರಂದು ನಡೆಯಲಿದೆ.  ಲುಲಾ ಮೊದಲನೆಯ ಸುತ್ತಿನಲ್ಲೇ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆ ಈಡೇರಿಲ್ಲ. ಅವರು ಎರಡನೆಯ ಸುತ್ತಿನಲ್ಲಿ ಬಹುಶಃ ಗೆಲ್ಲಬಹುದು. ಆದರೆ ಉಗ್ರ ಬಲಪಂಥ ಸೋತಿಲ್ಲ. ಅಧ್ಯಕ್ಷೀಯ, ಪಾರ್ಲಿಮೆಂಟರಿ ಮತ್ತು ರಾಜ್ಯಗಳಿಗೆ ನಡೆದ ಈ ಸಾರ್ವತ್ರಿಕ ಚುನಾವಣೆಗಳಲ್ಲಿ ನಿರೀಕ್ಷೆಗೆ ಮೀರಿ ಉತ್ತಮ ಪ್ರದರ್ಶನ ನೀಡಿದೆ. ವಿವರಗಳು ಮತ್ತು ವಿಶ್ಲೇಷಣೆ ಇಲ್ಲಿವೆ.

ಬಹಳ ಕುತೂಹಲ ಕೆರಳಿಸಿರುವ ಅಕ್ಟೋಬರ್ 2 ರಂದು ನಡೆದ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡ ಅಭ್ಯರ್ಥಿ ಲುಲಾ ಡಿ ಸಿಲ್ವಾ ಅತಿ ಹೆಚ್ಚು ಮತ ಪಡೆದು ಮೊದಲ ಸುತ್ತಿನಲ್ಲಿ ಗೆದ್ದಿದ್ದಾರೆ. ಅವರು ಶೇ.48.4 ಮತ ಗಳಿಸಿದ್ದು ಅವರ ಹತ್ತಿರದ ಪ್ರತಿಸ್ಪರ್ಧಿ ಜೈರ್ ಬೊಲ್ಸನಾರೊ ಶೇ.43.20 ಮತ ಗಳಿಸಿದ್ದಾರೆ. ಲುಲಾ ಶೇ.50 ಕ್ಕಿಂತ ಹೆಚ್ಚು ಮತ ಗಳಿಸುವ ಮೂಲಕ ಮೊದಲ ಸುತ್ತಿನಲ್ಲೇ ಆಯ್ಕೆಯಾಗುವ ನಿರೀಕ್ಷೆಯಿತ್ತು. ಚುನಾವಣಾ-ಪೂರ್ವ ಸಮೀಕ್ಷೆಗಳು ಲುಲಾ ಬೊಲ್ಸೆನಾರೊಗಿಂತ ಶೇ.6-14ರಷ್ಟು ಅಂತರದಲ್ಲಿ ಮುಂದಿರುತ್ತಾರೆ ಎಂದು ತಿಳಿಸಿದ್ದವು. ಇಕನೊಮಿಸ್ಟ್  ಸಮೀಕ್ಷೆ ಲುಲಾ ಶೇ.51 ಮತ ಗಳಿಸಿ ಮೊದಲ ಸುತ್ತಿನಲ್ಲಿ ಗೆಲ್ಲುತ್ತಾರೆ ಎಂದು ಹೇಳಿತ್ತು. ಆದರೆ ಸಮೀಕ್ಷೆಗಳ ನಿರೀಕ್ಷೆ ಮೀರಿ ಬೊಲ್ಸನಾರೊ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗೂ ಮೂರನೆಯ ಮತ್ತು ನಾಲ್ಕನೆಯ ಸ್ಥಾನದಲ್ಲಿದ್ದ ನಡು-ಬಲಪಂಥೀಯ ಅಭ್ಯರ್ಥಿಗಳಾದ ಸಿಮೊನ್ ಟೆಬೆಟ್ ಮತ್ತು ಸಿರೊ ಗೋಮ್ಸ್ ನಿರೀಕ್ಷೆಗೂ ಬಹಳ ಕಡಿಮೆ ಅಂದರೆ ಅನುಕ್ರಮವಾಗಿ ಶೇ.4.2 ಮತ್ತು ಶೇ.3 ಮತ ಗಳಿಸಿದ್ದಾರೆ.  ಗೋಮ್ಸ್ ಹಿರಿಯ ರಾಜಕಾರಣಿಯಾಗಿದ್ದು, ಹಿಂದೆ ಲುಲಾ ಮಂತ್ರಿಮಂಡಲದಲ್ಲಿದ್ದರು. 2018ರಲ್ಲಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಶೇ.12 ಮತ ಗಳಿಸಿದ್ದರು. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದು ಉಳಿದ 8 ಅಭ್ಯರ್ಥಿಗಳು ಅತ್ಯಂತ (ಶೇ. ೦.5ಕ್ಕಿಂತಲೂ) ಕಡಿಮೆ ಮತ ಗಳಿಸಿದ್ದಾರೆ. ಎಡ ಮತ್ತು ಉಗ್ರ ಬಲಪಂಥಗಳ ನಡುವೆ ನಿರೀಕ್ಷೆಗಿಂತಲೂ ಹೆಚ್ಚಿನ ಧ್ರುವೀಕರಣ ಆಯ್ತು ಎಂಬುದು ಇದರರ್ಥ ಎನ್ನಲಾಗಿದೆ.  ಉಗ್ರಬಲಪಂಥ ವಿಶೇಷವಾಗಿ ಮತ್ತು ಒಟ್ಟಾರೆಯಾಗಿ ಬಲಪಂಥ ಪರ್ಲಿಮೆಂಟರಿ ಮತ್ತು ರಾಜ್ಯಗಳ ಗವರ್ನರ್ ಚುನಾವಣೆಗಳಲ್ಲೂ ನಿರೀಕ್ಷೆಗಿಂತಲೂ ಹೆಚ್ಚು ಪ್ರಬಲವಾಗಿ ಹೊಮ್ಮಿದೆ.

 

ಬಲಪಂಥದ ಬಲ ಹೆಚ್ಚಿದೆ

ಬೊಲ್ಸೆನಾರೊ ಬೆಂಬಲಿಸಿದ ಪಕ್ಷಗಳು ಒಟ್ಟು 26 ರಾಜ್ಯ (ಮತ್ತು ಫೆಡೆರಲ್ ಜಿಲ್ಲೆ) ಗಳ ಗವರ್ನರ್ ಚುನಾವಣೆಗಳಲ್ಲಿ 4 ರಲ್ಲಿ ಮೊದಲ ಸುತ್ತಿನಲ್ಲಿ ಜಯ ಗಳಿಸಿವೆ. ಪ್ರಮುಖ ರಾಜ್ಯ ಸಾವೊ ಪೊಲೊ ಸೇರಿದಂತೆ ಇತರ 4 ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಭಾರೀ ಅಂತರದೊಂದಿಗೆ ಎರಡನೆಯ ಸುತ್ತಿಗೆ ಹೋಗಿವೆ. ಈ ಹೆಚ್ಚಿನ ರಾಜ್ಯಗಳಲ್ಲಿ ನಡು-ಬಲಪಂಥೀಯ ಅಥವಾ ಬಲಪಂಥೀಯ ಪಕ್ಷಗಳು ಎರಡನೆಯ ಸ್ಥಾನದಲ್ಲಿವೆ.  ಲುಲಾ ಅವರ ವರ್ಕರ್ಸ್‌ ಪಾರ್ಟಿ  3 ರಾಜ್ಯಗಳಲ್ಲಿ ಗೆದ್ದಿದ್ದು ಇನ್ನೂ 2 ರಲ್ಲಿ ಮೊದಲ ಸ್ಥಾನಗಳಿಸಿ ಎರಡನೆಯ ಸುತ್ತಿಗೆ ಹೋಗುತ್ತಿದೆ. ಇನ್ನೊಂದು ಎಡಪಂಥೀಯ ಸೋಶಲಿಸ್ಟ್ ಪಕ್ಷ ೩ ರಾಜ್ಯಗಳಲ್ಲಿ ಮೊದಲ ಸ್ಥಾನಗಳಿಸಿ ಎರಡನೆಯ ಸುತ್ತಿಗೆ ಹೋಗುತ್ತಿದೆ. ಆದರೆ ನಡು-ಬಲಪಂಥೀಯ  ಪಕ್ಷಗಳು  ೫ರಲ್ಲಿ ಗೆದ್ದಿದ್ದು, 3 ರಲ್ಲಿ ಮೊದಲ ಸ್ಥಾನ ಪಡೆದು ಎರಡನೆಯ ಸುತ್ತಿಗೆ ಹೋಗುತ್ತಿವೆ.

ಪಾರ್ಲಿಮೆಂಟ್ ಚುನಾವಣೆಗಳಲ್ಲೂ ಬೊಲ್ಸೆನಾರೊ ಬೆಂಬಲಿಸುವ ಪಕ್ಷಗಳು 513 ಸೀಟುಗಳಿರುವ ಪಾ‍ರ್ಲಿಮೆಂಟಿನ ಕೆಳಸದನದಲ್ಲಿ 193 ಸೀಟುಗಳನ್ನು ಗಳಿಸಿವೆ. ಕಳೆದ ಚುನಾವಣೆಗೆ ಹೋಲಿಸಿದರೆ 85 ಹೆಚ್ಚು ಸೀಟುಗಳನ್ನು ಗಳಿಸಿದೆ. ಲುಲಾ ಬೆಂಬಲಿಸುವ ಪಕ್ಷಗಳು 122 ಸೀಟುಗಳನ್ನು ಗಳಿಸಿವೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ 13ಸೀಟುಗಳನ್ನು ಕಳೆದುಕೊಂಡಿವೆ. ಸೀಮೊನ್ ಟೆಬೆಟ್ ಬೆಂಬಲಿಸಿದ ನಡು-ಬಲಪಂಥೀಯ ಪಕ್ಷಗಳು 10 ಸೀಟುಗಳನ್ನು ಕಳೆದುಕೊಂಡು 72 ಸೀಟುಗಳನ್ನು ಗಳಿಸಿವೆ. ಮೇಲ್ ಸದನದ 81 ಸೀಟುಗಳಲ್ಲಿ ಚುನಾವಣೆ ನಡೆದ 27 ಸೀಟುಗಳಲ್ಲಿ 14 ಸೀಟುಗಳನ್ನು ಬೊಲ್ಸೆನಾರೊ ಬೆಂಬಲಿಸುವ ಪಕ್ಷಗಳು ಪಡೆದಿವೆ. ಲುಲಾ ಬೆಂಬಲಿಸುವ ಪಕ್ಷಗಳು ಕೇವಲ 5 ಸೀಟು ಗಳಿಸಿವೆ.

ಲುಲಾ ಅವರ ವಿಶಾಲ ಕೂಟ

ಸಮರಶೀಲ ಟ್ರೇಡ್ ಯೂನಿಯನ್ ನಾಯಕ ಮತ್ತು ಸ್ಪಷ್ಟ ದಿಟ್ಟ ಎಡ ಕಾರ್ಯಕ್ರಮವಿದ್ದ 1998ರ ಮೊದಲ ಅಧ್ಯಕ್ಷೀಯ ಚುನಾವಣಾ ಅಭ್ಯಾರ್ಥಿಯಿಂದ ಲುಲಾ ಬಹಳ ದೂರ ಬಂದಿದ್ದಾರೆ. 2002ರಲ್ಲಿ ಮೊದಲ ಬಾರಿ ಅಧ್ಯಕ್ಷರಾಗಿ ಚುನಾಯಿತರಾಗಿ ಎರಡು ಅವಧಿಗಳಲ್ಲಿ ಮುಂದುವರೆದಿದ್ದು 2011ರಲ್ಲಿ ಎರಡನೆಯ ಅವಧಿ ಮುಗಿಯುವಹೊತ್ತಿಗೆ ಅವರ ಅಧ್ಯಕ್ಷೀಯ ಅನುಮೋದನೆ ಶೇ.87ರಷ್ಟು ಇತ್ತು. ಅವರು ಬ್ರೆಜಿಲ್ ನ ಚರಿತ್ರೆಯಲ್ಲೇ ಅತ್ಯಂತ  ಜನಪ್ರಿಯ ಅಧ್ಯಕ್ಷರಾಗಿದ್ದರು. ಬಡತನ ನಿರ್ಮೂಕನದ ಹಲವು ದಿಟ್ಟ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರು. ಆದರೆ ಅರ್ಥಕ ನೀತಿಗಳಲ್ಲಿ ನಡು-ಎಡ ಪಂಥೀಯ ನಿಲುವಿನತ್ತ ಸರಿದಿದ್ದರು. ಅವರ ನಂತರ ವರ್ಕರ್ಸ್‌ ಪಾರ್ಟಿಯ ದಿಲ್ಮಾ ರೌಸೆಫ್ ಅಧ್ಯಕ್ಷರಾಗಿ ಆಯ್ಕೆಯಾಗಿ ಈ ನೀತಿಗಳನ್ನು ಮುಂದುವರೆಸಿದ್ದರು. ಸತತ ಮೂರು ಬಾರಿ ವರ್ಕರ್ಸ್‌ ಪಾರ್ಟಿ ಗೆದ್ದಿದ್ದು ಬಲಪಂಥ ಮತ್ತು ಯು.ಎಸ್ ಗೆ ಇರುಸು ಮುರುಸಾಗಿದ್ದು ಅದರ ವಿರುದ್ಧ ಪಿತೂರಿ ರೂಪಿಸಿದರು.

ವರ್ಕರ್ಸ್‌ ಪಾರ್ಟಿ  ವಿರುದ್ಧ ಅಪಪ್ರಚಾರದ ಸುರಿಮಳೆ ಆರಂಭವಾಯಿತು. ಸುಳ್ಳು ಆಪಾದನೆಗಳನ್ನು ಹಾಕಿ ಅಧ್ಯಕ್ಷೀಯ ದೋಷಾರೋಪಣೆ ಪ್ರಕ್ರಿಯೆಯ ಮೂಲಕ ದಿಲ್ಮಾ ಸರಕಾರವನ್ನು 2016ರಲ್ಲಿ ಉರುಳಿಸಿದ್ದರು. ಇದನ್ನು ಸಂವಿಧಾನಿಕ ಕ್ಷಿಪ್ರಕ್ರಾಂತಿ ಎಂದು ಕರೆಯಲಾಗಿದೆ. ಸಂವಿಧಾನಿಕ ಪ್ರಕ್ರಿಯೆಗಳು ಮತ್ತು ಸ್ಥಾನಗಳ ಅತ್ಯಂತ ಹೇಯ ದುರ್ಬಳಕೆ ಮಾಡಿ ಇದನ್ನು ಸಾಧಿಸಲಾಯಿತು. 2018ರಲ್ಲಿ ಲುಲಾ ಅವರ ಮೇಲೆ ಸುಳ್ಳು ಭ್ರಷ್ಟಾಚಾರ ಆಪಾದನೆಗಳನ್ನು ಹಾಕಿ ಅವರು 2018ರ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸದಂತೆ ಮಾಡಲಾಯಿತು. ಆ ಚುನಾವಣೆಗಳಲ್ಲಿ ಲುಲಾ ಅವರಿಗೆ 12 ರಷ್ಯಾ ಜೈಲುಶಿಕ್ಷೆ ವಿಧಿಸಲಾಯಿತು.  ಆದರೆ ಅವರ ಜೈಲುಶಿಕ್ಷೆಯ ವಿರುದ್ಧ ದಿನಾ ಜೈಲಿನ ಎದುರು ಪ್ರತಿಭಟನಾ ಪ್ರದರ್ಶನ  ಮೂಲಕ ಧೀರ್ಘ ಪ್ರಚಾರಾಂದೋಲನ ರೂಪಿಸಲಾಯಿತು. ಜತೆಗೆ ಕಾನೂನು ಹೋರಾಟ ನಡೆಸಲಾಯಿತು. ಇವುಗಳ ಫಲವಾಗಿ ಸುಪ್ರೀಂ ಕೋರ್ಟ್‌ ಲುಲಾ ವಿರುದ್ಧ ಕೇಸನ್ನು ವಜಾ ಮಾಡಿತು. ಲುಲಾ  580  ದಿನಗಳ ಕಾಲದ ಜೈಲುವಾಸದ ನಂತರ 2019ರಲ್ಲಿ ಬಿಡುಗಡೆಯಾದರು.

ಜೈಲಿನಿಂದ ಬಿಡುಗಡೆಯಾದ ಕೂಡಲೇ ಬೊಲ್ಸೆನಾರೊ ಅವರ ದುರಾಡಳಿತದ ವಿರುದ್ಧ ಲುಲಾ ತೀವ್ರ ಪ್ರಚಾರಾಂದೋಲನ ಆರಂಭಿಸಿದ್ದರು. ಬೊಲ್ಸೆನಾರೊ ಅವರ ಲಕ್ಷಾಂತರ ಸಾವು-ನೋವುಗಳಿಗೆ, ಭಾರಿ ಬೆಲೆ ಎರಿಕೆ ಕಾರಣವಾದ  ಕೊವಿದ್ ಮತ್ತು ಅರ್ಥಿಕ ನಿರ್ವಹಣೆಯಲ್ಲಿ ತೀವ್ರ ವೈಫಲ್ಯ, ಅಮೆಝಾನ್ ಕಾಡುನಾಶಕ್ಕೆ ಕಾರಣವಾದ ಪರಿಸರ-ಮಾರಕ ಕ್ರಮಗಳು, ಸಾಮಾಜಿಕ ಪ್ರತಿಗಾಮಿ ಕ್ರಮಗಳು, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ವಿರುದ್ಧ ಸರಣಿ ಪ್ರತಿಭಟನೆ ಪ್ರತಿರೋಧಗಳನ್ನು ಸಂಘಟಿಸಲಾಯಿತು. ಟ್ರಂಪ್-ಮೋದಿ ಮಾದರಿಯ ಬೊಲ್ಸೆನಾರೊ ಅವರ ಉಗ್ರ ಬಲಪಂಥೀಯ ರಾಜಕಾರಣ ದೇಶದ ಮುಂದಿರುವ ದೊಡ್ಡ ಅಪಾಯ ಎಂದು ಭಾವಿಸಲಾಯಿತು. ಬೊಲ್ಸೆನಾರೊ ಅವರು ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿರುವ ದೇಶದ ಹಿಂದಿನ ಮಿಲಿಟರಿ ಸರ್ವಾದಿಕಾರವನ್ನು ಮೆಚ್ಚಿಕೊಳ್ಳುವುದು, ಪ್ರಜಾಪ್ರಭುತ್ವ ಸಂಸ್ಥೆಗಳ ಅವಹೇಳನ, ಚುನಾವಣಾ ವ್ಯವಸ್ಥೆಯನ್ನು ಪದೇ ಪದೇ ಶಂಕಿಸಿ ಟೀಕಿಸುವುದು, ಇತ್ಯಾದಿಗಳಿಂದ ತಮ್ಮ ಪ್ರಜಾಪ್ರಭುತ್ವ-ವಿರೋಧಿ ಸರ್ವಾದಿಕಾರಿ ಧೋರಣೆಯನ್ನು ಸ್ಪಷ್ಟ ಪಡಿಸಿದ್ದರು. ತಾವು ಚುನಾವಣೆ ಸೋಲುವ ಪ್ರಶ್ನೆಯೇ ಇಲ್ಲ, ಒಂದೊಮ್ಮೆ ಸೋತರೆ  ಅದರರ್ಥ ಚುನಾವಣಾ ಅಕ್ರಮವಾಗಿದೆ ಅಂತ.  ಸೋತರೂ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂಬ ಇತ್ತೀಚಿನವರೆಗಿನ ಹೇಳಿಕೆಗಳು, ಮತ್ತೆ ಮಿಲಿಟರಿ ಸರ್ವಾದಿಕಾರದ ಅಪಾಯವನ್ನು ಸೃಷ್ಟಿಸಿದ್ದವು. ಕಳೆದ ಚುನಾವಣೆಯಿಂದಲೇ ಬೊಲ್ಸೆನಾರೋ ಗೆ ಭಾರೀ ದೇಶಿ/ವಿದೇಶಿ ಕರ್ಪೋರೇಟುಗಳು, ಸಾಮೂಹಿಕ ಮಾಧ್ಯಮಗಳು, ಮಿಲಿಟರಿ ಅಧಿಕಾರಿಗಳು, ಅಮೆರಿಕನ್ ಸರಕಾರಗಳ ಬೆಂಬಲವಿರುವ ಹಿನ್ನೆಲೆಯಲ್ಲಿ ಈ ಅಪಾಯ ಗಂಭೀರವಾದದ್ದೇ.

ಈ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ರಕ್ಷಿಸುವುದು ಮುಖ್ಯವೆಂದು ಭಾವಿಸಿ ಬೊಲ್ಸೆನಾರೊ ವಿರುದ್ಧ ಲುಲಾ ವಿಶಾಲ ಕೂಟ ನಿರ್ಮಿಸಿದ್ದರು. ಎಡ-ನಡುಪಂಥೀಯ ಅಲ್ಲದೆ ಕೆಲವು ಪ್ರಜಾಪ್ರಭುತ್ವವಾದಿ ಬಲಪಂಥೀಯ ಪಕ್ಷಗಳು ಶಕ್ತಿಗಳನ್ನೂ ಕೂಟಕ್ಕೆ ಸೇರಿಸಿದ್ದರು. ವರ್ಕರ್ಸ್‌ ಪಾರ್ಟಿ ಹಾಗೂ ಕಮ್ಯುನಿಸ್ಟ್, ಗ್ರೀನ್ ಪಾರ್ಟಿಗಳು ಅಧ್ಯಕ್ಷೀಯ ಮತ್ತು ಪಾರ್ಲಿಮೆಂಟರಿ ಚುನಾವಣೆಗಳಿಗೂ ಮೈತ್ರಿಕೂಟ ರಚಿಸಿದ್ದವು. ಅಧ್ಯಕ್ಷೀಯ ಚುನಾವಣೆಗೆ 11 ಪಕ್ಷಗಳ ವಿಶಾಲ ಕೂಟ ರಚಿಸಿದರು. ತಮ್ಮ ಉಪಾಧ್ಯಕ್ಷ ಅಭ್ಯಾರ್ಥಿಯಾಗಿ ಅವರು ಹಿಂದೆ ಸೋಶಿಯಲ್ ಡೆಮೊಕ್ರಾಟಿಕ್ ‍ಪಾರ್ಟಿಯ ನಾಯಕರಾಗಿದ್ದ ಗೆರಾಲ್ಡೊ ಅಲ್ಕ್ ಮಿನ್ ನ್ನು ಆಯ್ಕೆ ಮಾಡಿದರು. ಅವರು 2006 ಅಧ್ಯಕ್ಷೀಯ ಚುನಾವಣೆಯಲ್ಲಿ ಲುಲಾ ವಿರುದ್ಧ ಸ್ಪರ್ಧಿಸಿದ್ದರು. 2018ರಲ್ಲಿ ಸಹ ಲುಲಾ ಭ್ರಷ್ಟರು ಎಂದು ಆಪಾದಿಸಿ ಅವರಿಗೆ ಜೈಲುಶಿಕ್ಷೆಯನ್ನು ಬೆಂಬಲಿಸಿದ್ದರು. ಆದರೆ ಅಭ್ಯಾರ್ಥಿಯಾದ ಮೇಲೆ ಈ ವಿಶಾಲ ಕೂಟದ ಸ್ತಂಭವಾದರು.

ವಿಶಾಲ ಕೂಟವೇ  ಮುಳುವಾಯಿತೇ?

ಆದರೆ ಈ ವಿಶಾಲ ಕೂಟ ಎಡ-ನಡು-ಬಲ ಶಕ್ತಿಗಳನ್ನು ಅಣಿ ನೆರೆಸಿ ಮೊದಲ ಸ್ಥಾನ ಗಳಿಸಲು ಸಾಧ್ಯವಾದರೂ, ಲುಲಾ ಮತ್ತು ಎಡ ಶಕ್ತಿಗಳು ಇದಕ್ಕೆ ಬೆಲೆ ಸಹ ತೆರಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಅಪಾಯ ಮುಖ್ಯ ಘೋಷಣೆಯಾದ್ದರಿಂದ ಮುಂಬರುವ ಅವಧಿಯಲ್ಲಿ ನವಉದಾರವಾದ-ವಿರೋಧಿ ಎಡ ಜನಪರ ನೀತಿಗಳನ್ನು, ಹೊಸ ಕಲ್ಯಾಣ ಯೋಜನೆಗಳನ್ನು ಪ್ರಸ್ತುತಪಡಿಸುವುದು ಸಾಧ್ಯವಾಗಿಲ್ಲ. ಪ್ರಚಾರದಲ್ಲಿ ಲುಲಾ ತನ್ನ ಹಿಂದಿನ ಅಧ್ಯಕ್ಷೀಯ ಅವಧಿಗಳ ಜನಪರ ಕಲ್ಯಾಣ ಯೋಜನೆಗಳ ಕುರಿತು ಮಾತ್ರ ಮಾತನಾಡುವುದು ಸಾಧ್ಯವಾಯಿತು. ರಾಜಕೀಯವಾಗಿ ಹಿಂದುಳಿದ ಜನತೆಯ ಹಲವು ವಿಭಾಗಗಳಿಗೆ ಜನಪರ ಕಲ್ಯಾಣಯೋಜನೆಗಳು ತಟ್ಟಿದಷ್ಟು ಪ್ರಜಾಪ್ರಭುತ್ವಕ್ಕೆ ಅಪಾಯ ಇತ್ಯಾದಿ ತಟ್ಟುವುದಿಲ್ಲ. ಬ್ರೆಜಿಲ್ನ  ಕ್ಯಾಥೊಲಿಕ್ ಹಿನ್ನೆಲೆ ಮತ್ತು ಸಾಮಾಜಿಕ ಸಾಂಪ್ರದಾಯಿಕತೆ ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರ ಗರ್ಭಪಾತ ಹಕ್ಕಿನ ಅಪಾಯಗಳು, ಅಪರಾಧದ ವಿರುದ್ಧ ಕಟು ಕ್ರಮಗಳ ಅಗತ್ಯತೆಗಳನ್ನು ಮುನ್ನೆಲೆಗೆ ತಂದು ಜನರನ್ನು ದಾರಿತಪ್ಪಿಸುವ ಬೊಲ್ಸೆನಾರೊ ಉಗ್ರ ಬಲಪಂಥೀಯ ಕ್ರಮಗಳು ಹೆಚ್ಚು ಯಶಸ್ವಿಯಾದವು.

ಎಡ-ನಡುಪಂಥೀಯ ಉದಾರವಾದಿಗಳು ದರ್ಮವಿರೋಧಿ, ಸಾಮಾಜಿಕ ಸಾಮರಸ್ಯ ಮತ್ತು ಶಿಸ್ತು ಹಾಳುಮಾಡುವವರು ಎಂಬ ಚರ್ಚಿನ ಒಂದು ವಿಭಾಗದ ಪ್ರಚಾರ ಸಹ ಲುಲಾ ಕೂಟಕ್ಕೆ ಮುಳುವಾದಂತಿದೆ. ಅದರಲ್ಲೂ ಬಡಜನರಲ್ಲಿ ಬಲವಾಗಿರುವ ಇವೆಂಜಲಿಸ್ಟ್ ಕ್ರಿಶ್ಚಿಯನ್ ಪಂಥಗಳು ಬೊಲ್ಸೆನಾರೊ ಪ್ರಚಾರಸಭೆಗಳಲ್ಲಿ ನೇರವಾಗಿ ಭಾಗವಹಿಸಿದ್ದು ವ್ಯಾಪಕವಾಗಿ ಕಂಡು ಬಂದಿದೆ. ಎಡ ಜನಪರ ನೀತಿಗಳನ್ನು, ಹೊಸ ಕಲ್ಯಾಣ ಯೋಜನೆಗಳನ್ನು ಚುನಾವಣಾ ವಿಷಯವಾಗಿ ಮುನ್ನೆಲೆಗೆ ತಂದಿದ್ದರೆ ಉಗ್ರಬಲಪಂಥವನ್ನು ಹಿಮ್ಮೆಟ್ಟಿಸಬಹುದಿತ್ತು. ಇವೆಲ್ಲ ಉಗ್ರ ಬಲಪಂಥ ವಿಶೇಷವಾಗಿ ಮತ್ತು ಬಲಪಂಥ ಸಾಮಾನ್ಯವಾಗಿ   ಪ್ರಬಲವಾಗಿ ಹೊಮ್ಮಿದ್ದಕ್ಕೆ ಕಾರಣ ಎಂದು ಹೇಳಲಾಗಿದೆ                                                                                            .

ಅಧ್ಯಕ್ಷೀಯ ಮತ್ತು ಗವರ್ನರ್‌ ಚುನಾವಣೆಗಳ ಎರಡನೆಯ ಸುತ್ತಿನಲ್ಲಿ ಇದನ್ನು ವಿಶೇಷವಾಗಿ ಗಮನಿಸಿ ಬೊಲ್ಸೆನಾರೊ ಉಗ್ರಬಲಪಂಥವನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಬೇಕಾಗಿದೆ. ಎರಡನೆಯ ಸುತ್ತಿನಲ್ಲಿ ಲುಲಾ ಗೆಲ್ಲುವ ಸಾಧ್ಯತೆಗಳು ಹೆಚ್ಚು. ಆದರೆ ಬೊಲ್ಸೆನಾರೊ ಉಗ್ರಬಲಪಂಥ ಬಲವಾದ ಪೈಪೋಟಿ ನೀಡುತ್ತದೆ. ಗೆಲ್ಲಲು ಏನೂ ಮಾಡುವುದಕ್ಕೆ ಹೇಸುವುದಿಲ್ಲ. ಮೊದಲ ಸುತ್ತಿನಲ್ಲೇ ಸಾಕಷ್ಟು ಹಿಂಸಾಚಾರ ನಡೆಸಿದೆ. ಮಿಲಿಟರಿ ಕ್ಷಿಪ್ರಕ್ರಾಂತಿಯ ಅಪಾಯವೂ ಇದೆ. ಒಂದೊಮ್ಮೆ ಗೆದ್ದರೂ ಲುಲಾ ಎಡ ಜನಪರ ನೀತಿಗಳು ಮತ್ತು ಹೊಸ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವುದು ಕಷ್ಟವಾಗಬಹುದು. ಇದು ಬಲಪಂಥ ಇನ್ನಷ್ಟು ಗಟ್ಟಿಗೊಳ್ಳುವ ಸಾಧ್ಯತೆಯನ್ನು ತೆರೆಯುತ್ತದೆ. ಹಾಗಾಗಿ ಎಡಶಕ್ತಿಗಳು ತಳ ಮಟ್ಟದಲ್ಲಿ ಜನತೆಯ ಚಳುವಳಿ ಕಟ್ಟುವ ಮೂಲಕ ಈ ರೀತಿಯ ನೀತಿಗಳು ಕ್ರಮಗಳಿಗೆ ಒತ್ತಾಯ ಹೇರಬೇಕಾಗಿದೆ. ಕಮ್ಯುನಿಸ್ಟ್ ಪಕ್ಷ ಇಂತಹ ಅಣಿನೆರೆಸುವಿಕೆಗೆ ಈಗಾಗಲೇ ಕರೆ ಕೊಟ್ಟಿದೆ. ಲುಲಾ ಗೆದ್ದರೆ ಲ್ಯಾಟಿನ್ ಅಮೆರಿಕದ ಎಳೆಗೆಂಪು ಅಲೆ ಪೂರ್ಣವಾಗಿವಾಗಿ ಅಂತರ್ರಾಷ್ಟ್ರೀಯವಾಗಿ ಪೂರಕ ವಾತಾವರಣವಂತೂ ಇರುತ್ತದೆ.

Donate Janashakthi Media

Leave a Reply

Your email address will not be published. Required fields are marked *