ಕರಡಿಯೊಂದಿಗೆ ಸೆಣಸಾಡಿ ರೈತರ ಜೀವ ಉಳಿಸಿದ ಸಬೀನಾ

ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು  ದಾಳಿ ಮಾಡಿದ್ದು, ಪತ್ನಿ ಮಚ್ಚಿನಿಂದ  ಕರಡಿಯನ್ನು ಹೊಡೆದು ಪತಿ ಹಾಗೂ ಸಹೋದರನನ್ನು ರಕ್ಷಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕರಡಿ ದಾಳಿಯಿಂದಾಗಿ ರೈತ ಬಸೀರಸಾಬ್ (45) ಹಾಗೂ ರಜಾಕ್ (30) ಗಾಯಗೊಂಡಿದ್ದಾರೆ. ಇವರಿಬ್ಬರೂ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ಮಾಡಿದೆ. ಕರಡಿ ಇಬ್ಬರ ಮೇಲೂ ದಾಳಿ ನಡೆಸಿದ್ದು, ಪತಿ ಬಸೀರಸಾಬ್ ಸವದತ್ತಿ ಜೀವ ಉಳಿಸುವ ಸಲುವಾಗಿ ಸಬೀನಾ ಮಚ್ಚಿನಿಂದ 3 ಬಾರಿ ಕರಡಿಯ ಮೇಲೆ ಹೊಡೆದು ಓಡಿಸಿದ್ದಾಳೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕರಡಿ ಹಾಗೂ ಕರಡಿ ಮರಿಯೊಂದಿಗೆ ಆಗಮಿಸಿದ್ದವು. ಅದರೆ ಕರಡಿಯ ಮರಿಗಳು ಓಡಿಹೋಗಿವೆ. ಮಚ್ಚಿನಿಂದ ಏಟು ತಿಂದ ಕರಡಿ ಬೇರೆ ಜಮೀನಿಗೆ ಹೋಗಿ ಪ್ರಾಣ ಬಿಟ್ಟಿದೆ. ಸಬೀನಾ ಪತಿ ಬಸೀರಸಾಬ್ ಮತ್ತು ರಜಾಕ್ ಪ್ರಾಣ ಕಾಪಾಡಿದ್ದಾಳೆ. ಅವಳಿಗೂ ಸಹ ಸಣ್ಣಪುಟ್ಟ ಗಾಯಗಳಾಗಿವೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ. ಕರಡಿ ಜೊತೆಗೆ ಹೋರಾಡಿ ಗಂಡ ಮತ್ತು ಸಹೋದರ ಜೀವ ಕಾಪಾಡಿದ ಮಹಿಳೆಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಡುಪ್ರಾಣಿಗಳು ಅಂದರೆ ಎಲ್ಲರಿಗೂ ಜೀವಭಯ ಇರುತ್ತೇ. ಆದರೆ ದಿಟ್ಟತನದಿಂದ ಕರಡಿಯ ಜೊತೆಗೆ ಹೋರಾಡಿ ಪತಿ ಮತ್ತು ಸಹೋದರ ಜೀವನ್ನ ರಕ್ಷಣೆ ಮಾಡಿದ ಮಹಿಳೆಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಒಂದು ವರ್ಷದಲ್ಲೇ ಶಿಗ್ಗಾಂವಿ ತಾಲೂಕಿನಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡಿರುವ ಪ್ರಕರಣಗಳು ಆಗಿವೆ. ಶಿಗ್ಗಾಂವಿ ತಾಲೂಕಿನ ಅರಣ್ಯದಲ್ಲಿ ಕರಡಿಗಳು ಹೆಚ್ಚಾಗಿದ್ದು, ಅವುಗಳು ರೈತರ ಜಮೀನುಗಳಿಗೆ ಬಂದು ರೈತರ ಮೇಲೆ ದಾಳಿ ಮಾಡುತ್ತಿವೆ. ಕರಡಿಗಳು ಜಮೀನಿಗೆ ಬಾರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಮೀನುಗಳಿಗೆ ಹೋಗಲು ರೈತರು ಭಯ ಪಡಬೇಕಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜನಶಕ್ತಿ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ 

Donate Janashakthi Media

Leave a Reply

Your email address will not be published. Required fields are marked *