ಬಿ.ಜೆ.ಪಿಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮತ್ತು ಅವರ ಮಗ ಮಾಡಾಳ್ ಪ್ರಶಾಂತ್ ಅವರ ಕಛೇರಿ ಹಾಗೂ ಮನೆ ಮೇಲೆ ನಡೆದ ಲೋಕಾಯುಕ್ತ ಪೋಲೀಸರ ಧಾಳಿಯಲ್ಲಿ ಸಿಕ್ಕಿರುವ ಅಕ್ರಮ, ಲಂಚದ ಹಣದ ಪ್ರಕರಣ ಸರಕಾರದ ಎಲ್ಲಾ ಹಂತಗಳಲ್ಲಿಯೂ ತಾಂಡವವಾಡುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರವನ್ನು ಮತ್ತೊಮ್ಮೆ ಬಯಲಿಗಿಟ್ಟಿದೆ. ಸಿಕ್ಕಿರುವುದು ಶಾಸಕರ ಮನೆಯಲ್ಲಾದರೂ ಚುನಾವಣೆಯ ಹೊಸ್ತಿಲಿನಲ್ಲಿ ಕಂತೆ, ಕಂತೆಗಳ ಈ ಹಣದ ಪಾಲಿನ ನಂಟಿನ ಕಳಂಕದಿಂದ ಬಿಜೆಪಿ ಪಕ್ಷ ಮತ್ತು ಸರ್ಕಾರ ತಪ್ಪಿಸಿಕೊಳ್ಳುವಂತಿಲ್ಲ.
ವಿಶೇಷವೆಂದರೆ ‘ನ ಕಾವುಂಗಾ, ಖಾನೇ ದೂಂಗಾ’ ಎಂದು ಡಂಗುರ ಹೊಡೆಯುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ‘ಉಕ್ಕಿನ ಮನುಷ್ಯ’ ಎಂದು ಹೇಳಿಕೊಳ್ಳುವ ಗೃಹ ಸಚಿವ’ ಅಮಿತ್ ಶಾ ರವರು ರಾಜ್ಯದಾದ್ಯಂತ ಪಾಳಿ ಯಂತೆ ರಾಜಕೀಯ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲಿಯೇ ಇದು ಬಯಲಾಗಿರುವುದು ವಿಶೇಷ. ಆದರೆ ಇವರನ್ನು ಒಳಗೊಂಡು ಬಿಜೆಪಿಯ ಯಾವ ನಾಯಕರು ಈ ಭ್ರಷ್ಟ ಹಗರಣದವನ್ನು ಖಂಡಿಸಿಲ್ಲ ಮತ್ತು ಭ್ರಷ್ಟಾಚಾರದ ಪ್ರಥಮ ಆರೋಪಿ ಶಾಸಕನ ಮೇಲೆ ಕ್ರಮವನ್ನೂ ಜರುಗಿಸಿಲ್ಲ ಎನ್ನುವುದೇ ಆತಂಕಕಾರಿ. ಯಾರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂತರ’ ಮಗ ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ?’ ಎಂದು ಹೇಳಿದರೆ, ಕಾನೂನು ಸಚಿವ ಮಾಧುಸ್ವಾಮಿ, ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದಗೌಡ ರವರು ಅದೇ ಧಾಟಿಯಲ್ಲಿ ಸಮರ್ಥಿಸಿರುವುದು ಹೇಸಿಗೆ ಹುಟ್ಟಿಸುತ್ತದೆ. ಈ ಶಾಸಕನನ್ನು ಸರಕಾರಿ ಸ್ವಾಮ್ಯದ ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮ ನಿಯಮಿತ ದ ಅದ್ಯಕ್ಷನ ಹುದ್ದೆಯಿಂದಲೂ ವಜಾ ಮಾಡಿಲ್ಲ. ಕಳಂಕಿತ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿಲ್ಲ. ಬಿಜೆಪಿಯೂ ಕ್ರಮ ಕೈಗೊಂಡಿಲ್ಲ. ಬದಲಾಗಿ, ನಿರೀಕ್ಷಣಾ ಜಾಮೀನು ಸಿಕ್ಕಿದೆಯೆಂದು ಲಜ್ಜೆಗೆಟ್ಟು ಮೆರವಣಿಗೆ ಮಾಡಿಸಿಕೊಂಡು ಬೀಗುತ್ತಾ ಬೀದಿಗಳಲ್ಲಿ ಸಾಗಿದ್ದು, ಮತ್ತು ಆ ಹಣ ಅಡಿಕೆ ಬೆಳೆಯಿಂದ ಬಂದಿದ್ದೆಂದು ಸಮರ್ಥಿಸಿಕೊಂಡಿದ್ದು ಭಂಡತನಕ್ಕೆ ಸಾಕ್ಷಿ.
ಇದನ್ನು ಓದಿ: ಹಲವು ಅನುಮಾನಗಳ ಸುತ್ತ ಶಾಸಕ ಮಾಡಾಳ್ ಪ್ರಕರಣ; ಇಬ್ಬರು ತನಿಖಾಧಿಕಾರಿಗಳ ದಿಢೀರ್ ವರ್ಗ
ಈಗ ದೊರೆತ ಸ್ಪಷ್ಟ ಸಾಕ್ಷಿಗಳಂತೆ ಬೆಂಗಳೂರು ಜಲ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಶಾಸಕರ ಮಗ ಪ್ರಶಾಂತ್ ಮಾಡಾಳ್ ಅವರ ಖಾಸಗಿ ಕಚೇರಿಯಲ್ಲಿ 40 ಲಕ್ಷ ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೆ ಶಾಸಕರ ನಿವಾಸದ ಮೇಲೆ ದಾಳಿ ಮಾಡಿದಾಗ 6.12 ಕೋಟಿ ರೂಪಾಯಿಗಳ ನಗದು ಸಿಕ್ಕಿತ್ತು. ಅಲ್ಲದೆ ಚನ್ನಗಿರಿ ಕ್ಷೇತ್ರದ ಶಾಸಕರ ಕಚೇರಿಯಲ್ಲಿಯೇ 1.62 ಕೋಟಿಗಳು ಹಾಗೂ ಕರ್ನಾಟಕ ಅರೋಮಾಸ್ ಕಂಪನಿಯ ನೌಕರರು ತಂದ 90 ಲಕ್ಷ ರೂಪಾಯಿಗಳನ್ನು ಪಡೆದದ್ದು ಒಟ್ಟು 8.28 ಕೋಟಿ ರೂಪಾಯಿಗಳ ನಗದು ಹಣವನ್ನು ವಶ ಪಡಿಸಿಕೊಳ್ಳಲಾಗಿದೆ. ಸೋಪ್ ಫ್ಯಾಕ್ಟರಿಗೆ ಕಚ್ಚಾವಸ್ತು ಖರೀದಿಯ ಟೆಂಡರ್ ಸಂಬಂಧ 40 ಲಕ್ಷ ರೂ.ಗಳ ಲಂಚ ಪಡೆಯುತ್ತಿರುವಾಗಲೇ ಮಾರ್ಚ್ 2, 2023 ರಂದು ಪ್ರಶಾಂತ್ ಮಾಡಾಳರನ್ನು ಬಂಧಿಸಲಾಗಿತ್ತು. ನಂತರ ನಡೆದ ದಾಳಿಯಲ್ಲಿ ಹಾಗೂ ತನಿಖೆ ನಡೆಯುತ್ತಿರುವಾಗಲೇ ತಂದ ಲಂಚದ ಹಣ ಸೇರಿ ಇಷ್ಟೆಲ್ಲಾ ಸಿಕ್ಕಿದೆ. ಶಾಸಕ ಮಾಡಾಳ್ ವಿರುಪಾಕ್ಷಪ್ಪನವರು ಹೇಳಿದಂತೆ ಕೃಷಿ ವ್ಯವಹಾರದ ವಹಿವಾಟುಗಳನ್ನು ಮೌಲ್ಯಮಾಪನ ಮಾಡಿದರೂ ಇಷ್ಟೊಂದು ಹಣ ಅದರಿಂದ ಗಳಿಸುವ ಸಾಧ್ಯತೆಗಳೇ ಇಲ್ಲ. ಅನೈತಿಕ, ಅಕ್ರಮ, ಭ್ರಷ್ಟಾಚಾರ ನಡೆಸಿರುವ ಶಾಸಕರು ತಮ್ಮ ಮುಖ ಉಳಿಸಿಕೊಳ್ಳಲು ನೀಡುತ್ತಿರುವ ಭಂಡ ಹೇಳಿಕೆಗಳು ಅವು ಎನ್ನುವುದು ಹೊರನೋಟದಲ್ಲೇ ಕಾಣುತ್ತದೆ.
ಇಷ್ಟೊಂದು ನಗದು ಹಣವನ್ನು ಒಬ್ಬೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಬಹುದು ಎನ್ನುವುದಾದರೆ ಮೋದಿಯವರ ಡಿಜಿಟಲ್ ಕರೆನ್ಸಿ ವ್ಯವಹಾರ ಕಥೆ ಏನಾಯಿತು? ಕಪ್ಪು ಹಣವನ್ನು ಮಟ್ಟ ಹಾಕಲೆಂದೆ ನೋಟ್ ಬ್ಯಾನ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದುದರ ಕಥೆ ಏನಾಯ್ತು? ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಬಿಜೆಪಿಯ ಈ ಸರ್ಕಾರ ಶೇ 40 ರ ಸರ್ಕಾರ ಎನ್ನುವ ಆರೋಪಕ್ಕೆ ಈ ಪ್ರಕರಣ ಮತ್ತೊಂದು ಪ್ರಬಲ ಸಾಕ್ಷಿ. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನ ಮಂತ್ರಿಯವರೆಗೂ ದೂರು ನೀಡಿದರೂ ಯಾವುದೇ ಕನಿಷ್ಠ ವಿಚಾರಣೆಯೂ ನಡೆಯಲಿಲ್ಲ. ಎಸ್.ಐ. ನೇಮಕಾತಿ ಹಗರಣ, ಡ್ರಗ್ಸ್ ಮಾಫಿಯಾ ಹಗರಣ, ಸಚಿವನ ಲೈಂಗಿಕ ಸಿ.ಡಿ.ಹಗರಣ, ಕ್ರಿಫ್ಟೋ ಕರೆನ್ಸಿ ಹಗರಣ, ಗುತ್ತಿಗೆದಾರರ ದೂರುಗಳು, ಮುಂತಾದ ಹಲವಾರು ಭ್ರಷ್ಟಾಚಾರದ ಪ್ರಕರಣಗಳು ಹೊರಬಂದ ಬಳಿಕ ನಡೆದಿರುವ ವಿಚಾರಣೆ ಆರಂಭದಲ್ಲಿ ಅಬ್ಬರದ ಸುದ್ದಿ ಮಾಡಿದ ಬಳಿಕ ಸೊರಗಿ ಹೋಗಿವೆ.
ಇದನ್ನು ಓದಿ: ಮಾಡಾಳ್‌ಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ವಕೀಲರ ಸಂಘ
ಇಂತಹ ಅನೇಕ ಪ್ರಕರಣಗಳನ್ನು ಸಾರ್ವಜನಿಕರು, ವಿರೋಧ ಪಕ್ಷಗಳು ಸರ್ಕಾರದ ಗಮನಕ್ಕೆ ತಂದಾಗ ಅದನ್ನು ಆರಂಭದಲ್ಲೇ ತಳ್ಳಿ ಹಾಕುವ ಮುಖ್ಯಮಂತ್ರಿಗಳು ಸಾಕ್ಷಿ ಇದ್ದರೆ ಕೊಡಿ ಎಂದು ಕೇಳುವುದೇ ವಾಡಿಕೆಯಾಗಿ ಹೋಗಿದೆ. ಮಾಡಾಳು ವಿರೂಪಾಕ್ಷಪ್ಪ ಅವರ ಪ್ರಕರಣದಲ್ಲಿ ಅನುಮಾನಕ್ಕೆ ಎಡೆಯೇ ಇಲ್ಲದಂತೆ ಸಾಕ್ಷಿ ಸಿಕ್ಕಿದ್ದಾಗಲೂ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಸಚಿವರು, ಕೇಂದ್ರದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಇವರ ಶಾಮೀಲುತನವನ್ನು ಬಯಲಿಗೆ ಇಟ್ಟಿದೆ. ಪ್ರತಿ ಭ್ರಷ್ಟಾಚಾರದ ಪ್ರಕರಣದ ಆರೋಪಗಳು ಬಂದಾಗ ಅವನ್ನು ಸಮರ್ಥಿಸಿಕೊಳ್ಳುವುದರಿಂದ ಭ್ರಷ್ಟರು, ಲಂಚಕೋರ ಲೂಟಿಕೋರರು ಮತ್ತು ಕ್ರಿಮಿನಲ್ ಅಪರಾಧಿಗಳು ತಮ್ಮ ಕೃತ್ಯಗಳನ್ನು ದಕ್ಕಿಸಿಕೊಳ್ಳಬಹುದು ಎನ್ನುವ ರಕ್ಷಣೆಯ ಗ್ಯಾರಂಟಿ ಹುಟ್ಟಿ ಭಂಡತನವನ್ನು ಗಟ್ಟಿಗೊಳಿಸುತ್ತಾ ರಕ್ಷಿಸುತ್ತಾ ಬಂದಿರುವುದು ಎದ್ದು ಕಾಣುತ್ತದೆ.
ಇಲ್ಲಿ ಇನ್ನೊಂದು ಗಹನವಾದ ವಿದ್ಯಮಾನವು ಕೂಡ ನಡೆದುಹೋಗಿದೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ ಮರುದಿನವೇ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿರುವುದು ನ್ಯಾಯಾಂಗ ಮತ್ತು ಸಾರ್ವಜನಿಕ ವಲಯದಲ್ಲೂ ತೀವ್ರತರ ಆಕ್ಷೇಪ ಮತ್ತು ತಾರತಮ್ಯದ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಸಾಮಾನ್ಯರು ನ್ಯಾಯಾಲಯದ ಮುಂದೆ ಅರ್ಜಿ ಹಾಕಿದಲ್ಲಿ ತಿಂಗಳು, ಎರಡು ತಿಂಗಳು ಕಾಯಬೇಕಾದ ವಾಸ್ತವ ಸ್ಥಿತಿ ಇರುವಾಗ ಇಂತಹ ವಿಐಪಿ ಗಳಿಗೆ ಕೇವಲ 24 ತಾಸುಗಳ ಒಳಗೇ ಜಾಮೀನು ಮಂಜೂರಾಗುವುದು ಹೇಗೆ ಎನ್ನುವ ಪ್ರಶ್ನೆಯನ್ನು ವಕೀಲರ ಸಂಘವೇ ಎತ್ತಿ ಪರಿಶೀಲಿಸುವಂತೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದೆ. ನ್ಯಾಯಾಲಯದ ನಡೆ ನ್ಯಾಯಾಂಗದ ಬಗೆಗಿನ ಸಾರ್ವಜನಿಕರ ನಂಬಿಕೆ ಮತ್ತು ಘನತೆಯನ್ನು ಕುಗ್ಗುವಂತೆ ಮಾಡಿದೆ. ನ್ಯಾಯಾಲಯದ ಸ್ಪಂದನ, ಪ್ರಕರಣದ ಬಗ್ಗೆ ಸರ್ಕಾರದ ಸಮರ್ಥನೆ, ಆರೋಪಿ ಶಾಸಕನ ಸಮಾಜಾಯಿಷಿಗಳು ಹಾಗೂ ಭಂಡತನಗಳು ಮತ್ತು ಬಿಜೆಪಿ ನಾಯಕರ ಸಮ್ಮತಿ ನ್ಯಾಯ ದೊರಕುವ ಆಶಾಭಾವನೆಯನ್ನು ಸಂಪೂರ್ಣವಾಗಿ ಕಮರಿಸುತ್ತಿವೆ. ಆರೋಪಿ ಶಾಸಕನನ್ನು ಪೊಲೀಸರು ತೀವ್ರ ಹುಡುಕುತ್ತಿರುವಾಗಲೇ ಜಾಮೀನು ಶಿಕ್ಕ ಕೆಲವೇ ನಿಮಿಷಗಳಲ್ಲಿ ತನ್ನದೇ ಸ್ವಂತ ಊರಿನಲ್ಲಿ ಮನೆಯ ಬಳಿ ಪ್ರತ್ಯಕ್ಷನಾಗಿದ್ದು ಆಶ್ವರ್ಯಕರ. ಆರೋಪಿ ಶಾಸಕ ವಿರೂಪಾಕ್ಷಪ್ಪನವರ ಬಂಧನಕ್ಕೆ ತೀವ್ರ ಹುಡುಕಾಟ ಆರಂಭಿದ್ದೇವೆ ಎಂದಿದ್ದ ಪೋಲೀಸರ ಹೇಳಿಕೆಯೇ ಢೋಂಗಿ ಎಂದಾಯಿತು. ಈ ಸಂಗತಿಗಳು ಸರ್ಕಾರದ ನಿಯಂತ್ರಣದಲ್ಲಿರುವ ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿಯೂ ನ್ಯಾಯವನ್ನು ಒದಗಿಸಬಹುದೇ ಎನ್ನುವ ಅನುಮಾನ ಕಾಡುತ್ತಿದೆ. ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪನವರ ಲಂಚದ ಪ್ರಕರಣದಲ್ಲಿ ಆತ್ಮಹತ್ಯೆಗೀಡಾದ ಗುತ್ತಿಗೆದಾರನ ಪ್ರಕರಣದಲ್ಲಿಯೂ ಇದೇ ಸರ್ಕಾರದ ತನಿಖಾ ಸಂಸ್ಥೆಗಳು ಕ್ಲೀನ್ ಚಿಟ್ ನೀಡಿದ್ದು ಸಾರ್ವಜನಿಕರ ನೆನಪಿನಿಂದ ಮರೆಯಾಗಿಲ್ಲ.
ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಅವರ ಮಗನ ಪ್ರಕರಣ ಭ್ರಷ್ಟಾಚಾರದ ಸ್ಪಷ್ಟ ಸಾಕ್ಷಿಗಳನ್ನು ಒಳಗೊಂಡಿದೆ. ಸರ್ಕಾರ ಈ ಕೂಡಲೇ ಕೆಎಸ್‌ಡಿಎಲ್. ನ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು. ಬಿಜೆಪಿ ಪಕ್ಷ ಶಾಸಕನನ್ನು ಉಚ್ಛಾಟಿಸಬೇಕು. ಮತ್ತು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಕಠಿಣ ಕ್ರಿಮಿನಲ್ ಕೃತ್ಯಗಳಿಗೆ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣದ ಸಾಕ್ಷಿಗಳನ್ನು ಬುಡಮೇಲು ಮಾಡದಂತೆ ನಿರ್ಭಂಧಿಸಬೇಕು.
ಸಾರ್ವಜನಿಕ ಹಣದ ಎಗ್ಗಿಲ್ಲದ ಲೂಟಿ, ವ್ಯಾಪಕ ಭ್ರಷ್ಟಾಚಾರ, ವಂಚನೆ, ಅನೈತಿಕತೆ ಹಗರಣಗಳಿಂದ ಮೈಯೆಲ್ಲಾ ಮೆತ್ತಿಕೊಂಡಿರುವ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರ ಇವೆಲ್ಲವುಗಳನ್ನು ಮರೆಮಾಚಿಕೊಳ್ಳಲು ಹಿಂದುತ್ವದ, ಹಿಂದೂ ಮತ ಧರ್ಮದ ರಕ್ಷಣೆಯ ಮತ್ತು ದೇಶಪ್ರೇಮದ ಸೋಗನ್ನು ಹಾಕುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮುಖೇಡಿತನದ ಎಲ್ಲವನ್ನೂ ಮರೆಸುವಂತೆ ಧಾರ್ಮಿಕತೆಯ ದುರ್ಬಳಕೆ ಹಾಗೂ ಮತೀಯ ವಿಭಜನೆಯನ್ನು ತರುವುದರ ಮೂಲಕ ಮತಧರ್ಮವನ್ನು ಕಿಂಚಿತ್ತೂ ಅಳುಕಿಲ್ಲದೇ ದುರುಪಯೋಗ ಮಾಡಿಕೊಳ್ಳುತ್ತಿದೆ. ಧರ್ಮದ್ರೋಹಿಗಳ ಕೃತ್ಯ ಇದು ಉಗ್ರ ಖಂಡನೀಯ. ಬಿಜೆಪಿ ಮತ್ತು ಸಂಘ ಪರಿವಾರದ ಈ ನಿಜ ಮುಖಗಳನ್ನು ಜನತೆ ಅರ್ಥಮಾಡಿಕೊಳ್ಳಬೇಕು, ತಕ್ಕ ಪಾಠ ಕಲಿಸಬೇಕು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ